ಬೆಕ್ಕಣ್ಣ ಮಡಿ ಪಂಚೆಯುಟ್ಟು, ಹಣೆಗೆ ಕುಂಕುಮವಿಟ್ಟು, ಪಂಚಾಂಗದ ಕಟ್ಟು ಹಿಡಿದು ಕೂತಿತ್ತು.
‘ಏನಲೇ ಇದು ನಿನ್ನ ಅವತಾರ? ನೀ ಯಾವಾಗಿಂದ ಯುಗಾದಿ ಪಂಚಾಂಗ ಹೇಳಾಕೆ ಶುರು ಮಾಡಿದೆ?’ ಎಂದೆ ಗಾಬರಿಯಿಂದ.
‘ಹಾಕಿದ್ಯಾ ಅಡ್ಡಬಾಯಿ’ ಎಂದು ರೇಗಿದ ಬೆಕ್ಕಣ್ಣ, ‘ಯುಟ್ಯೂಬ್‌ಗೆ ಅಪ್‌ಲೋಡ್ ಮಾಡೂಣು ಅಂತ ರಿಹರ್ಸಲ್ ಮಾಡಾಕ್ಹತ್ತೀನಿ’ ಎಂದುತ್ತರಿಸಿ ಗಂಟಲು ಸರಿಪಡಿಸಿಕೊಂಡಿತು.
‘ಹೊಸ ವಿಶ್ವಾವಸು ಸಂವತ್ಸರದೊಳು ಕರುನಾಡಿಗರಿಗೆ ಕ್ಷೀರ, ಧಾನ್ಯ, ಫಲ, ತರಕಾರಿ ಬಲು ತುಟ್ಟಿಯಾಗುವುದು. ವಿದ್ಯುತ್ ತಂತಿಗಿಂತಲೂ ವಿದ್ಯುತ್ ಬಿಲ್ ಹೆಚ್ಚು ಶಾಕ್ ಹೊಡೆಯುವುದು’.
‘ಅದನ್ನು ಹೇಳಾಕೆ ನಿನ್ನ ಪಂಚಾಂಗ ಎದಕ್ಕೆ ಬೇಕಲೇ? ಹಳೇ ಸಂವತ್ಸರ ಹೋಗುವಾಗ ಬೆಲೆ ಏರಿಕೆ ಉಡುಗೊರೆ ಕೊಟ್ಟು ಹೋಗೈತಿ. ಹೊಸ ಸಂವತ್ಸರನೂ ಬೆಲೆ ಏರಿಕೆ ಉಡುಗೊರೆ ಹಿಡಕೊಂಡೇ ಬಂದೈತಿ’ ಎಂದೆ.
‘ನೀ ಸುಮ್ಮನೆ ಕೇಳು. ವಿಶ್ವಾವಸು ಅಂದರೆ ವಿಶ್ವಾಸ, ನಂಬಿಕೆ ವೃದ್ಧಿ. ಮೋದಿಮಾಮ, ಟ್ರಂಪ್, ಪುಟಿನ್ ತ್ರಿಮೂರ್ತಿಗಳ ಮೇಲೆ ವಿಶ್ವದೆಲ್ಲೆಡೆಯ ಜನರ ವಿಶ್ವಾಸ ವೃದ್ಧಿಯಾಗುವುದು. ಈ ಜನನಾಯಕರಿಗೆ ದೊಡ್ಡ ಕಾರ್ಪೊರೇಟ್ ಕುಳಗಳ ಮೇಲೆ ನಂಬಿಕೆ ಇನ್ನಷ್ಟು ಹೆಚ್ಚುವುದು’.
‘ಅಂಗೈ ಹುಣ್ಣಿಗೆ ಕನ್ನಡಿ ತೋರಿಸಿದಂತೆ ನೀ ಸಂವತ್ಸರ ಫಲ ಹೇಳಾಕೆ ಹತ್ತಿ! ನಿಮ್ಮ ಯತ್ನಾಳ ಅಂಕಲ್ಲು ಪಕ್ಷದಿಂದ ಉಚ್ಚಾಟನೆಯಾದ್ರೂ
2028ರಾಗೆ ನಾನೇ ಸಿಎಂ ಅಂದಾರೆ. ಹೊಸ ಸಂವತ್ಸರ ಏನು ಹೇಳತೈತೆ?’ ಎಂದು ಕೇಳಿದೆ.
‘2028ರ ಸಂವತ್ಸರ ಫಲದ ಮೇಲೆ ಅವರು ಸಿಎಂ ಆಗೂದು ಅವಲಂಬಿಸಿರತೈತಿ. ಮುಂದೆ ಕೇಳು. ವಿಶ್ವಾವಸು ಸಂವತ್ಸರದೊಳು ಎಲ್ಲಾ ರಾಶಿಯವರ ಸಂಪತ್ತು ಸಮೃದ್ಧಿಯಾಗುವುದು’ ಎಂದು ಖುಷಿಯಿಂದ ಹೇಳಿತು.
ನಾನು ಕಿಸಕ್ಕನೆ ನಕ್ಕೆ.
‘ಯಾರ ಸಂಪತ್ತು ವೃದ್ಧಿ? ಅದಾನಿ, ಅಂಬಾನಿಗಳಿದ್ದೋ ಅಥವಾ
ಶ್ರೀಸಾಮಾನ್ಯರಿದ್ದೋ?’
‘ಶ್ರೀಸಾಮಾನ್ಯರಿಗೆ ಸಂಪತ್ತು ಎದಕ್ಕೆ ಬೇಕು? ಅವರು ಚುನಾವಣೆವಳಗೆ ಮತ ಹಾಕಕ್ಕೆ ಜೀಂವಾ ಹಿಡಕ್ಕೊಂಡಿದ್ದರೆ ಸಾಕೇಳು!’ ಬೆಕ್ಕಣ್ಣ ಹಂಗಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.