ADVERTISEMENT

ಚುರುಮುರಿ: ಗೀತಾ ಎಕನಾಮಿಕ್ಸ್ !

ಗುರು ಪಿ.ಎಸ್‌
Published 10 ಡಿಸೆಂಬರ್ 2025, 23:34 IST
Last Updated 10 ಡಿಸೆಂಬರ್ 2025, 23:34 IST
   

ಕುರ್ತಾ- ಪೈಜಾಮದ ಮೇಲೊಂದು ಜಾಕೆಟ್ ಹಾಕ್ಕೊಂಡು ಮಿಂಚುತ್ತಿದ್ದ ಎಕನಾಮಿಕ್ಸ್ ಲೆಕ್ಚರರ್ ಕ್ಲಾಸ್ ರೂಂ ಪ್ರವೇಶಿಸಿದರು.

‘ಇವತ್ತು ನಾವು ರೂಪಾಯಿ ಮೌಲ್ಯ ಕುಸಿತ ಕುರಿತು ತಿಳಿದುಕೊಳ್ಳೋಣ. ಹೀಗಂದ್ರೆ ಏನಂತ ಯಾರ್ ಹೇಳ್ತೀರಿ’ ಕೇಳಿದರು ಲೆಕ್ಚರರ್. 

ಉತ್ಸಾಹದಿಂದ ಕೈ ಎತ್ತಿದ ಸ್ಟೂಡೆಂಟ್ ವಿಜಿ, ‘ಅಮೆರಿಕದ ಡಾಲರ್ ಎದುರು ಮೌಲ್ಯ ಕಳೆದುಕೊಳ್ಳೋದನ್ನ ರೂಪಾಯಿ ಮೌಲ್ಯ ಕುಸಿತ ಅಂತಾರೆ ಸರ್. ಉದಾಹರಣೆಗೆ, ಈಗ ರೂಪಾಯಿ ಮೌಲ್ಯ ರಪ್ ಅಂತ ಕೆಳಗೆ ಬಿದ್ದಿದೆ.
1 ಡಾಲರ್‌ಗೆ 90 ರೂಪಾಯಿ ಕೊಡಬೇಕು ನಾವೀಗ...’

ADVERTISEMENT

‘ಕಮಲ’ಪ್ರಿಯ ಲೆಕ್ಚರರ್‌ಗೆ ಈ ಉತ್ತರ ರುಚಿಸಲಿಲ್ಲ. ಇವತ್ತು ಈ ಪಾಠ ಬೇಡ. ಮೊನಾಪಲಿ ಅಂದ್ರೆ ಏಕಸ್ವಾಮ್ಯದ ಬಗ್ಗೆ ತಿಳಿದುಕೊಳ್ಳೋಣ. ಹೀಗಂದ್ರೆ ಏನಂತ ಗೊತ್ತಾ?’ 

ಮತ್ತೆ ಎದ್ದ ವಿಜಿ, ‘ಗೊತ್ತು ಸರ್, ಮೊನಾಪಲಿ ಅಂದ್ರೆ, ಒಬ್ಬರ ಕೈಯಲ್ಲೇ ಎಲ್ಲ ಇರೋದು. ಏಕಸ್ವಾಮ್ಯ ಹೊಂದಿದೋರು ಕೆಳಗೆ ಬಿದ್ದರೆ ಇಡೀ ವ್ಯವಸ್ಥೆಯೇ ಏರುಪೇರಾಗುತ್ತೆ. ಉದಾಹರಣೆಗೆ ಇಂಡಿಗೊ...’ ಎನ್ನುತ್ತಿದ್ದಂತೆ ಮಾತು ತುಂಡರಿಸಿದ ಉಪನ್ಯಾಸಕರು, ‘ನಿನಗೆ ಉತ್ತರ ಕೊಡು ಅಂತ ಮಾತ್ರ ಹೇಳಿದ್ದು, ಉದಾಹರಣೆ ಗಳನ್ನಲ್ಲ. ಈ ತಪ್ಪಿಗೆ 111 ಸಲ ಜವಾಹರಲಾಲ್ ನೆಹರೂ ಅವರ ಹೆಸರು ಬರಿ’ ಎಂದು ಆಜ್ಞಾಪಿಸಿದರು. 

‘ಸರ್, ಎಕನಾಮಿಕ್ಸ್‌ನಲ್ಲಿ ತಪ್ಪಾದಾಗಲೆಲ್ಲ ನೀವು ಹಿಸ್ಟರಿ ಗ್ಯಾಕ್ ಹೋಗ್ತೀರಿ’ ಹೆದರುತ್ತಲೇ ಎದುರುತ್ತರಿಸಿದ ವಿಜಿ. 

‘ವಿಶ್ವಗುರು’ ಆರಾಧಕ ಲೆಕ್ಚರರ್‌ಗೆ ಪಿತ್ತ ನೆತ್ತಿಗೇರಿತು. ‘ಓಕೆ, ನೆಹರೂ ಅವರ ಹೆಸರು ಬೇಡ. ವಂದೇ ಮಾತರಂ ಗೀತೆಯನ್ನ ಪೂರ್ತಿಯಾಗಿ 100 ಸಲ ಬರಿ’

‘ಚಿಕ್ಕಂದಿನಿಂದಲೂ ನಮಗೆ ಹೇಳಿಕೊಟ್ಟಷ್ಟು ಬರೀತಿನಿ ಸಾರ್. ಪೂರ್ತಿ ಬರಲ್ಲ’ 

‘ನೀನು ಸ್ಟೂಡೆಂಟ್ ಅಲ್ಲ, ದೇಶದ್ರೋಹಿ ಅನಿಸುತ್ತೆ. ವಂದೇ ಮಾತರಂ ಬಗ್ಗೆ ಇಷ್ಟೊಂದು ಅಗೌರವವೇ ನಿನಗೆ’ 

‘ಗೀತೆ-ಭಗವದ್ಗೀತೆ ಎರಡರ ಬಗ್ಗೆಯೂ ಗೌರವವಿದೆ ಸಾರ್. ಆದರೆ, ಇದಕ್ಕೂ ಎಕನಾಮಿಕ್ಸ್‌ಗೂ ಏನು ಸಂಬಂಧ ಅಂತ ಅರ್ಥವಾಗ್ತಿಲ್ಲ’ ಎಂದ. ಲೆಕ್ಚರರ್ ಕೈಲಿದ್ದ ಡಸ್ಟರ್ ವಿಜಿ ಕಡೆ ತೂರಿಬಂತು.