ADVERTISEMENT

ಚುರುಮುರಿ | ಒಳಾರ್ಥ–ಗೂಢಾರ್ಥ!

ಬಿ.ಎನ್.ಮಲ್ಲೇಶ್
Published 4 ಜುಲೈ 2025, 1:13 IST
Last Updated 4 ಜುಲೈ 2025, 1:13 IST
   

‘ಲೇ ತೆಪರ, ಐದು ವರ್ಷ ನಾನೇ ಸಿಎಂ ಅಂದ್ರೆ ಏನರ್ಥಲೆ?’ ಹರಟೆಕಟ್ಟೆಯಲ್ಲಿ ಗುಡ್ಡೆ ಕೇಳಿದ.

‘ನಿನ್ತೆಲಿ, ಅದ್ರಲ್ಲಿ ಬೇರೆ ಅರ್ಥ ಏನೈತಲೆ? ಅದೇ ಅರ್ಥ...’ ಎಂದ ತೆಪರೇಸಿ.

‘ನಂಗೇನೋ ಅನುಮಾನ, ಅದ್ರಲ್ಲಿ ಒಳಾರ್ಥ, ಗೂಢಾರ್ಥ ಏನರೆ ಇರಬೋದೇನೋ ಅಂತ.‌..’

ADVERTISEMENT

‘ಕರೆಕ್ಟ್, ನಮ್ ಸರ್ಕಾರ ಐದು ವರ್ಷ ಬಂಡೆ ತರ ಸುಭದ್ರ ಅಂದ್ರಲ್ಲ, ಈ ‘ಬಂಡೆ’ ಅಂತ ಅಂದಿದ್ರಲ್ಲಿ ಏನಾದ್ರು ಒಳಾರ್ಥ ಇರಬೋದಾ?’

‘ಏನೋಪ್ಪ, ಈ ರಾಜಕಾರಣಿಗಳ ಮಾತಿನ ಒಳಾರ್ಥ ಹುಡುಕೋದು ಬಾಳ ಕಷ್ಟ... ಏನೋ ಹೇಳಿರ್ತಾರೆ, ಆಮೇಲೆ ನಾನು ಆ ಅರ್ಥದಲ್ಲಿ ಹೇಳಿಲ್ಲ ಅಂದುಬಿಡ್ತಾರೆ...’ ದುಬ್ಬೀರ ತಲೆ ಕೊಡವಿದ.

‘ಗೂಗಲ್‌ನಲ್ಲಿ ಅವರ ಮಾತಿನ ಅರ್ಥ ಹುಡುಕಿದ್ರೆ ಹೆಂಗೆ?’

‘ಅದೂ ಎಷ್ಟೋ ಸಲ ದಾರಿ ತಪ್ಪಿದೆ ಬಿಡಲೆ...’

‘ನಮ್ ವಿಮಾನದ ಭವಿಷ್ಯ ಹೇಳಿದ್ರಲ್ಲ, ಆ ಸ್ವಾಮಿಗೋಳ್ನ ಕೇಳಿದ್ರೆ ಹೆಂಗೆ?’

‘ಅವ್ರು ಭವಿಷ್ಯ ಹೇಳೋರು, ಅರ್ಥ ಗಿರ್ಥ ಹೇಳೋರಲ್ಲ...’

‘ನಮ್ ಕಮಲ ಪಕ್ಷದೋರೂ ಭವಿಷ್ಯ ಹೇಳಾಕೆ ಶುರು ಮಾಡಿದಾರಂತೆ? ದಸರಾ ಒಳಗೆ ಸಿಎಂ ಚೇಂಜ್ ಆಗ್ತಾರಂತೆ?’ ಮಂಜಮ್ಮ ಕೇಳಿದಳು.

‘ಹೌದು, ಆದ್ರೆ ಯಾವ ದಸರಾ ಅಂತ ಹೇಳಿದಾರಾ? ಎರಡು ವರ್ಷ ಮುಂದಿನ ದಸರಾ ಇರಬೋದು.‌..’ ಕೊಟ್ರೇಶಿ ಕೊಕ್ಕೆ.

‘ಕರೆಕ್ಟ್, ನಮ್ ಕೈ ಪಕ್ಷದ ರಾಜಣ್ಣ ಸೆಪ್ಟೆಂಬರ್
ಕ್ರಾಂತಿ ಅಂದ್ರು. ಆಮೇಲೆ ನಾನೇಳಿದ್ದು ಕುರ್ಚಿ ಕ್ರಾಂತಿ
ಅಲ್ಲ, ಕೃಷಿ ಕ್ರಾಂತಿ ಅಂದ್ರು...’ ಗುಡ್ಡೆ ನಕ್ಕ.

‘ಒಟ್ಟಾರೆ ಕುರ್ಚಿ ಅಲುಗಾಡ್ತಾ ಐತೆ...’ ತೆಪರೇಸಿ ತಲೆದೂಗುತ್ತ ಹೇಳಿದ.  

‘ನಾನು ಹಂಗೇಳಿದ್ನಾ? ಈ ಮಂಜಮ್ಮನ ಹೋಟ್ಲು ಕುರ್ಚಿ ಅಲ್ಲಾಡ್ತಾ ಐತೆ ಅಂದೆ...’

ತೆಪರೇಸಿ ಮಾತಿಗೆ ಎಲ್ಲರೂ ಗೊಳ್ಳಂತ
ನಕ್ಕರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.