ADVERTISEMENT

ಚುರುಮುರಿ: ಪ್ರಾಣಿ ಪ್ರೀತಿ

ಮಣ್ಣೆ ರಾಜು
Published 7 ಡಿಸೆಂಬರ್ 2022, 20:55 IST
Last Updated 7 ಡಿಸೆಂಬರ್ 2022, 20:55 IST
ಚುರುಮುರಿ
ಚುರುಮುರಿ   

‘ಕಾಡು- ನಾಡಿನ ಗಡಿ ವಿವಾದವನ್ನು ಬಗೆಹರಿಸಿ, ಕಾಡುಪ್ರಾಣಿಗಳು ಗಡಿ ದಾಟದಂತೆ ಮಾಡಿ ಎಂದು ಪ್ರಾಣಿ ಭಯ ಸಂಘದವರು ಸರ್ಕಾರವನ್ನು ಒತ್ತಾಯಿಸಿದ್ದಾರೆ ಕಣ್ರೀ...’ ಅಂದಳು ಸುಮಿ.

‘ಹಾಗಂತ, ಊರಿನ ಸುತ್ತ ಕೋಟೆ ಕಟ್ಟಿ ಕಾಡುಪ್ರಾಣಿಗಳನ್ನು ತಡೆಯಲಾಗುತ್ತಾ? ಮನುಷ್ಯರು ಕಾಡಿಗೆ ಹೋಗಿ ಪ್ರಾಣಿಗಳಿಗೆ ಕೆಡುಕು ಮಾಡದಂತೆ ಕಾಡಿಗೆ ಬೇಲಿ ಹಾಕಬೇಕಾಗುತ್ತದೆ’ ಅಂದ ಶಂಕ್ರಿ.

‘ಕಾಡಿನಲ್ಲಿರಬೇಕಾದ ಪ್ರಾಣಿಗಳು ಗಡಿ ಮೀರಿ ಊರಿಗೆ ನುಗ್ಗುವುದು ನಿಸರ್ಗ ನಿಯಮದ ಉಲ್ಲಂಘನೆ ಅಲ್ವೇನ್ರೀ?’

ADVERTISEMENT

‘ಗಡಿ ಮೀರಿರುವುದು ಪ್ರಾಣಿಗಳಲ್ಲ, ನಾವು. ಗಡಿಯ ಗೆರೆ ಎಳೆದರೆ ಅರ್ಧ ಊರು ಕಾಡು ಪಾಲಾಗುತ್ತದೆ. ಕಾಡಿನ ಜಾಗವನ್ನು ತಮ್ಮ ಹೆಸರಿಗೆ ಖಾತೆ, ಪಹಣಿ ಮಾಡಿಕೊಡಿ ಎಂದು ಪ್ರಾಣಿಗಳು ಪಟ್ಟು ಹಿಡಿದರೆ, ಬಂಗಲೆ ಕಟ್ಟಲು ಜಾಗವಿಲ್ಲದೆ ನಾವು ಬೋನು ಕಟ್ಟಿಕೊಂಡು ಬಾಳಬೇಕಾಗುತ್ತದೆ’.

‘ಕಾಡಿನಲ್ಲಿ ಗೆಡ್ಡೆಗೆಣಸು, ಹಸಿ ಮಾಂಸ ತಿಂದು ಬಾಯಿ ಕೆಟ್ಟು, ಉಪ್ಪು ಖಾರದ ರುಚಿ ಬಯಸಿ, ನಮ್ಮ ಒಗ್ಗರಣೆ ಊಟದ ವಾಸನೆಗೆ ಮರುಳಾಗಿ ಪ್ರಾಣಿಗಳು ಊರಿನ ಕಡೆ ಬರುತ್ತಿವೆ ಅನಿಸುತ್ತೆ...’

‘ಕಾಡಿನಲ್ಲಿ ರೆಸಾರ್ಟ್, ಹೋಂಸ್ಟೇಗಳನ್ನು ಕಟ್ಟಿಕೊಂಡು ನಾವು ಕಾಡು ಕಬಳಿಸಿರುವಾಗ ಕಾಡುಪ್ರಾಣಿಗಳು ನಾಡಿಗೆ ಬರಬಾರದೆ?’

‘ವನ್ಯಪ್ರಾಣಿಗಳನ್ನು ನಾಡಿಗೆ ಬಿಟ್ಟುಕೊಂಡು ನಾವು ಬಾಳಲಾಗುತ್ತಾ? ಸಾಧು ಸ್ವಭಾವ ರೂಢಿಸಿಕೊಂಡರೆ ಕಾಡುಪ್ರಾಣಿಗಳೂ ಊರಿನಲ್ಲಿ ಬೀದಿನಾಯಿಗಳಂತೆ ನಮ್ಮ ಜೊತೆ ಬಾಳಬಹುದು’.

‘ಕಾಡನ್ನು ನಾವು ಆಕ್ರಮಿಸಿಕೊಂಡಿರು
ವುದರಿಂದ ಪ್ರಾಣಿಗಳಿಗೂ ಜಾಗ ಕೊಡಬೇಕು. ಪ್ರಾಣಿಗಳ ಜೊತೆ ಬಾಳಿ ಬದುಕುವುದನ್ನು ನಾವು ಕಲಿಯಬೇಕು...’ ಅಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.