ADVERTISEMENT

ಚುರುಮುರಿ: ನಾನೂ ಸಿಎಂ ಆಕಾಂಕ್ಷಿ!

ಮಣ್ಣೆ ರಾಜು
Published 25 ನವೆಂಬರ್ 2025, 19:05 IST
Last Updated 25 ನವೆಂಬರ್ 2025, 19:05 IST
<div class="paragraphs"><p>ಚುರುಮುರಿ: ನಾನೂ ಸಿಎಂ ಆಕಾಂಕ್ಷಿ</p></div>

ಚುರುಮುರಿ: ನಾನೂ ಸಿಎಂ ಆಕಾಂಕ್ಷಿ

   

‘ಪಕ್ಷದ ನಾಯಕರು ‘ನಾನೂ ಸಿಎಂ ಆಕಾಂಕ್ಷಿ’ ಅಭಿಯಾನ ಆರಂಭಿಸಿ ಸಿಎಂ ಕುರ್ಚಿ ಮೇಲೆ ಟವೆಲ್ ಹಾಕ್ತಿದ್ದಾರೆ, ನಾನೂ ಒಂದು ಟವೆಲ್ ಹಾಕಿದ್ದೇನೆ...’ ಬೆಳಿಗ್ಗೆ ಉಪಾಹಾರ ಸೇವಿಸುತ್ತಾ ಪತ್ನಿಗೆ ಮಂತ್ರಿ ಹೇಳಿದರು.

‘ಟವೆಲ್ ಹಾಕಿದವರೆಲ್ಲಾ ಸಿಎಂ ಆಗಲ್ಲ. ಹೈಕಮಾಂಡ್ ಕೃಪೆ, ಶಾಸಕರ ಬೆಂಬಲ ಇರಬೇಕು. ನಿಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ, ಇಲಾಖೆಯ ಸೌಲಭ್ಯ ಹಂಚುತ್ತಿಲ್ಲ ಅಂತ ಶಾಸಕರು ನಿಮ್ಮ ವಿರುದ್ಧ ತಿರುಗಿಬಿದ್ದಿದ್ದಾರೆ, ಮೊದಲು ಮಂತ್ರಿ ಸ್ಥಾನ ಉಳಿಸಿಕೊಳ್ಳಿ’ ಅಂದರು ಪತ್ನಿ.

ADVERTISEMENT

‘ಕೊಡಬೇಕಾದ್ದನ್ನು ಕೊಟ್ಟು ಶಾಸಕರನ್ನು ಬುಟ್ಟಿಗೆ ಹಾಕಿಕೊಂಡು, ಅವರ ಸಹಿ ಸಂಗ್ರಹಿಸಿ, ಹೈಕಮಾಂಡ್ ಎದುರು ಶಾಸಕರ ಬೆಂಬಲ ತೋರಿಸ್ತೀನಿ. ಅದೃಷ್ಟ ಮತ್ತು ಹೈಕಮಾಂಡ್ ಕೃಪೆ ಇದ್ದರೆ ಶಾಸಕರ ಬೆಂಬಲವಿಲ್ಲದಿದ್ದರೂ ಸಿಎಂ ಆಗಿಬಿಡಬಹುದು!’

‘ಅದೃಷ್ಟದ ಜೊತೆ ಅರ್ಹತೆಯೂ ಇರಬೇಕು’.

‘ಪಕ್ಷದಲ್ಲಿ ನನಗೆ ಸೀನಿಯಾರಿಟಿ, ಸಿನ್ಸಿಯಾರಿಟಿ ಎರಡೂ ಇದೆ. ಪಕ್ಷಕ್ಕೆ, ಸಂಸಾರಕ್ಕೆ ಸಾಕಷ್ಟು ದುಡಿದಿದ್ದೇನೆ. ಸಿಎಂ ಆಗಲು ಇಷ್ಟು ಅರ್ಹತೆ ಸಾಲದೆ?’ ಎಂದರು ಮಂತ್ರಿ.

‘ನಿಮಗೆ ಮೈತುಂಬಾ ಕಾಯಿಲೆ. ಕಾರು ಹತ್ತಲು, ಇಳಿಯಲು, ವೇದಿಕೆ ಹತ್ತಿಹೋಗಿ ಭಾಷಣ ಮಾಡಲು ಇನ್ನೊಬ್ಬರ ಸಹಾಯಬೇಕು...’

‘ನಮ್ಮ ಫ್ಯಾಮಿಲಿ ಡಾಕ್ಟರರಿಂದ ಹೆಲ್ತ್ ಸರ್ಟಿಫಿಕೆಟ್, ಫಿಟ್‌ನೆಸ್ ಸರ್ಟಿಫಿಕೆಟ್ ಕೊಟ್ಟರಾಯಿತು’.

‘ಹಾಗಲ್ಲ ರೀ, ಸಿಎಂ ಕುರ್ಚಿ ಮೇಲೆ ಕೆಮ್ಮಿಕೊಂಡು, ಜೂಗರಿಸಿಕೊಂಡು ಬೆಡ್‌ಶೀಟ್ ಹೊದ್ದು ಕುಳಿತು ರಾಜ್ಯಭಾರ ಮಾಡಲಾಗುತ್ತಾ? ಸಿಎಂ ಆಸೆ ಬಿಟ್ಟುಬಿಡಿ...’

‘ಹೋಗಲಿ, ನಿನ್ನ ಆಸೆ ಏನು?’

‘ಪಿತ್ರಾರ್ಜಿತ ಆಸ್ತಿ ಸಾಕಷ್ಟಿದೆ. ಪುತ್ರಾರ್ಜಿತ ಆಸ್ತಿ ಬಗ್ಗೆ ನೀವು ಗಮನ ಹರಿಸಿಲ್ಲ...’

‘ಅಂದರೆ?’

‘ಮಗನಿಗೊಂದು ಕ್ಷೇತ್ರ ಹುಡುಕಿಕೊಡಿ, ಇಲ್ಲವೇ ನಿಮ್ಮ ಕ್ಷೇತ್ರವನ್ನೇ ಬಿಟ್ಟುಕೊಡಿ, ಮುಂದಿನ ಚುನಾವಣೆ ಗೆದ್ದು ಮಗ ಅಸೆಂಬ್ಲಿಗೆ ಹೋಗಲೇಬೇಕು...’ ಖಡಕ್ಕಾಗಿ ಹೇಳಿದ ಪತ್ನಿಯ ಮಾತಿಗೆ, ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡಂತೆ ಚಡಪಡಿಸತೊಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.