
ಚುರುಮುರಿ: ಬಡವಾದ ಶ್ರೀಸಾಮಾನ್ಯ
‘ಅಲ್ಲಾ... ಎರಡೂವರೆ ವರ್ಷ ತೆವಳಾಡಿಕೋತ ನಡೆದಿದ್ದಕ್ಕೇ ಇಷ್ಟು ಸಂಭ್ರಮಪಟ್ಟರೆ ಹೆಂಗೆ?’ ಬೆಕ್ಕಣ್ಣ ಕುಟುಕಿತು.
‘ಹಿಂದೆ ಜಗ್ಗೂ ಮಂದಿನೇ ಎಲ್ಲ ಕಡಿ ಇದ್ದಾಗ, ತೆವಳಾಡುತ್ತಲೇ ಆದ್ರೂ ನಡೆಯೂದೆ ಸಾಧನೆ ಅನ್ನಿಸಿಕೊಳ್ಳತೈತಿ’ ಎಂದು ನಾನು ಕುಟುಕಿದೆ.
‘ಹಂಗಾರೆ ದಶಕದಿಂದ ಖರೇಖರೇ ಮ್ಯಾರಾಥಾನ್ ಓಡುತಿರೋ ನಮ್ ಮೋದಿ ಮಾಮಾರು, ನಿತೀಶ್ ಅಂಕಲ್ಲು ಇನ್ನೆಷ್ಟು ಬೀಗಬೇಕು? ಅದು ಹೋಗಲಿ, ಈ ನಡಿಗೆಯ ನಡುವೆಯೇ ಕೈಕಿತ್ತಾಟ ನೋಡಿದ್ರೆ... ಆಹಾ!’ ಬೆಕ್ಕಣ್ಣ ತಲೆ ಚಚ್ಚಿಕೊಂಡಿತು.
‘ಇದು ಮ್ಯಾರಾಥಾನೂ ಅಲ್ಲ, ಐದು ವರ್ಷದ ನಡಿಗೇನೂ ಅಲ್ಲ, ಎರಡೂವರೆ ವರ್ಷದ ರಿಲೇ. ಹಿಂಗಾಗಿ ಈಗ ರಿಲೇ ಬ್ಯಾಟನ್ನು ತನಗ ಕೊಡಬಕು ಅಂತ ಡಿಕೇಶಂಕಲ್ಲು ವಾದ’ ಎಂದೆ.
‘ಯಾರಿಗೆ, ಯಾವಾಗ ರಿಲೇ ಬ್ಯಾಟನ್ನು ಒಪ್ಪಿಸಬಕು ಅಂತ ಸ್ಟಾಂಪ್ ಪೇಪರಿನಲ್ಲಿ ಆವಾಗಲೇ ಬರೆದು ಅಫಿಡವಿಟ್ ಮಾಡಿಸಿದ್ದರೆ ಇಷ್ಟೆಲ್ಲ ಮುಸುಕಿನ ಗುದ್ದಾಟವೇ ಇರತಿರಲಿಲ್ಲ’ ಎಂದಿತು ಬೆಕ್ಕಣ್ಣ.
‘ಗಾಳ ಹಾಕಿ ಮೀನು ಹಿಡಿಯೂ ಕಲೆ ತನಗ ಗೊತ್ತು ಅಂತ ಡಿಕೇಶಂಕಲ್ಲು ಹೇಳ್ಯಾರೆ. ನೋಡುತಿರು... ಅವರು ಹೆಂಗ ಮೀನು ಹಿಡಿದು ತಮ್ಮ ಬುಟ್ಟಿವಳಗೆ ಹಾಕಿಕೋತಾರ ಅಂತ!’
‘ಹಿಂಗ ಅವರವರೇ ಮೀನು ಹಿಡಿದು ತಮ್ಮ ಬುಟ್ಟಿಗೆ ಹಾಕಿಕೊಳ್ಳಾಕ ಶುರುಮಾಡಿದರೆ ಕರುನಾಡೂ ಇವರ ಕೈತಪ್ಪಿ ಹೋಗತೈತಿ ಅಷ್ಟೇ!’ ಬೆಕ್ಕಣ್ಣ ನಕ್ಕಿತು.
‘ಏನೇ ಆದರೂ ಕೈಗಳು ಬುದ್ದಿ ಕಲಿಯಂಗಿಲ್ಲ ಬಿಡು! ಪರಸ್ಪರ ಕಾಲೆಳೆಯೋದು, ಕೆಸರೆರಚಿಕೊಳ್ಳದ್ರಲ್ಲೇ ಕೈಗಳಿಗೆ ಸಂತೃಪ್ತಿ ಇದ್ದಂಗೆ ಕಾಣತದೆ. ಕಮಲ–ತೆನೆಯನ್ನು ಹಿಡಿಯೋ ಬಯಕೆ ಒಳಗೊಳಗೇ ಕೈಗಳಿಗೆ ಇದ್ದಂಗೆ ಕಾಣತದೆ’ ಎಂದು ನಾನೂ ನಕ್ಕೆ.
‘ಕೈಗಳ ಜಗಳದಲ್ಲಿ, ಕಮಲದಳಗಳ ಗುದ್ದಾಟದಲ್ಲಿ ಶ್ರೀಸಾಮಾನ್ಯ ಬಡವಾದ! ಎಲ್ಲಾರೂ ಅವರವರ ಬೇಳೆ ಬೇಯಿಸಿಕೊಂಡು ತಿಂದುಂಡು, ಶ್ರೀಸಾಮಾನ್ಯರ ಕೈಗೆ ಖಾಲಿ ತಪ್ಪಲೆ ಕೊಡತಾರೆ ತಿಳಕೋರಿ!’ ಎಂದು ಬೆಕ್ಕಣ್ಣ ನನ್ನ ಮೂತಿಗೆ ತಿವಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.