ADVERTISEMENT

ಚುರುಮುರಿ: ಎಲೆಕ್ಷನ್ ಎಕ್ಸಿಬಿಷನ್

ಮಣ್ಣೆ ರಾಜು
Published 3 ಏಪ್ರಿಲ್ 2024, 0:07 IST
Last Updated 3 ಏಪ್ರಿಲ್ 2024, 0:07 IST
   

ಶಂಕ್ರಿ, ಸುಮಿ ಎಲೆಕ್ಷನ್ ಎಕ್ಸಿಬಿಷನ್‍ಗೆ ಬಂದಿದ್ದರು.

‘ಬನ್ನಿ ಮೇಡಂ... ನಮ್ಮದು ಅನ್ನಭಾಗ್ಯ ಮಳಿಗೆ, ಐದು ಕೆ.ಜಿ ಅಕ್ಕಿ ಉಚಿತವಾಗಿ ಕೊಡ್ತೀವಿ’ ಅಂದ ಮಳಿಗೆಯವ.

‘ಹತ್ತು ಕೆ.ಜಿ ಕೊಡ್ತೀವಿ ಅಂತ ಹೇಳಿದ್ರಿ...’ ಅಂದ ಶಂಕ್ರಿ.

ADVERTISEMENT

‘ಖರೀದಿಸಲು ಅಕ್ಕಿ ಸಿಗದಂತೆ ಮಾಡಿದ್ದಾರೆ ಇವ್ರು’ ಎಂದು ಪಕ್ಕದ ಮಳಿಗೆಯವನನ್ನು ದೂರಿ, ‘ಅಕ್ಕಿ ಬದಲು ದುಡ್ಡು ಕೊಡ್ತಿದ್ದೀವಲ್ಲ’ ಅಂದ.

‘ನಿಮ್ಮ ಅಕ್ಕಿ ದುಡ್ಡು ಉಪ್ಪು, ಮೆಣಸಿನಕಾಯಿಗೂ ಸಾಕಾಗಲ್ಲ’ ಪಕ್ಕದವನು ಕಿಚಾಯಿಸಿದ.

‘ನಾವು ಎಷ್ಟೊಂದು ಫ್ರೀ ಕೊಡ್ತಿದ್ದೀವಿ, ನೀವು ಯಾವುದನ್ನಾದ್ರೂ ಫ್ರೀ
ಕೊಟ್ಟಿದ್ದೀರೇನ್ರೀ?’ ಅಂದ. ಇಬ್ಬರೂ ಜಗಳಕ್ಕೆ ಬಿದ್ದರು.

ಶಂಕ್ರಿ, ಸುಮಿ ಇನ್ನೊಂದು ಮಳಿಗೆಗೆ ಬಂದರು. ‘ಎಲೆಕ್ಷನ್ ಟಿಕೆಟ್ ಸಿಗದೆ ನೊಂದವರಿಗೆ ಸಾಂತ್ವನ ಹೇಳುವ ಪರಿಣಾಮಕಾರಿ ಪುಸ್ತಕಗಳು ನಮ್ಮಲ್ಲಿವೆ. ಪುಸ್ತಕ ಓದಿಯೂ ನೋವು ನಿವಾರಣೆ ಆಗದಿದ್ದರೆ, ತಜ್ಞರಿಂದ ಚಿಕಿತ್ಸೆ ಕೊಡುಸ್ತೀವಿ’ ಎಂದ.

‘ಮೇಕೆ ಮಳಿಗೆ’ಗೆ ಬಂದರು. ‘ಇದು ಮಟನ್ ಸ್ಟಾಲಾ?’ ಸುಮಿ ಕೇಳಿದಳು.

‘ಅಲ್ಲ ಮೇಡಂ, ನಮ್ಮಲ್ಲಿ ಕಾವೇರಿ ನದಿ ದಾಟಬಲ್ಲ ಮೇಕೆಗಳಿವೆ. ಎಲೆಕ್ಷನ್‍ನಲ್ಲಿ ಗೆದ್ದರೆ ನಾವು ಮೇಕೆಯನ್ನು ನದಿ ದಾಟಿಸುತ್ತೇವೆ’ ಅಂದ.

ಭಾಗ್ಯ, ಸೌಭಾಗ್ಯದ ಮಳಿಗೆಗಳನ್ನು ಸುತ್ತಾಡಿ ಶಂಕ್ರಿ, ಸುಮಿ ದಣಿದು ಬಾಯಾರಿದರು.

‘ನೀರಿನ ಮಳಿಗೆ ಎಲ್ಲಿದೆ?’ ಶಂಕ್ರಿ ಕೇಳಿದ.

‘ನೀರು ಮಾತ್ರ ಕೇಳಬೇಡಿ ಸಾರ್, ನಾವೇ ದುಡ್ಡು ಕೊಟ್ಟು ಟ್ಯಾಂಕರ್‌ನಲ್ಲಿ ನೀರು
ತರಿಸಿಕೊಳ್ತಿದ್ದೀವಿ, ಎಲೆಕ್ಷನ್ ಎಕ್ಸಿಬಿಷನ್‍ನಲ್ಲಿ ನೀರಿನ ಮಳಿಗೆ ಇಲ್ಲ...’ ಅಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.