ADVERTISEMENT

ಲೇಟ್ ಸಾಹೇಬ್ರ ರೋಷಾವೇಷ

ಗುರು ಪಿ.ಎಸ್‌
Published 22 ಮೇ 2019, 18:30 IST
Last Updated 22 ಮೇ 2019, 18:30 IST
   

ಜಪ, ತಪ, ಧ್ಯಾನ ಕೊಡುವ ‘ರಿಸಲ್ಟ್‌’ನಿಂದ ಪ್ರೇರೇಪಿತರಾದ ‘ಲೇಟ್’ (ಬೇಗ್ ಅಲ್ಲ) ಸಾಹೇಬ್ರು ಇತಿಹಾಸದಲ್ಲೇ ಮೊದಲ ಬಾರಿಗೆ ಜ್ಯೋತಿಷಿ ಬಳಿ ಹೋದ್ರು. ‘ನಮ್ದೂಕೆ ಹಾಥ್ ನೋಡಿ, ನಿಮ್ದೂಕೆ ಭವಿಷ್ಯ ಹೇಳಿ’ ಅಂದ್ರು.

‘ಏನ್ ಸಾಹೇಬ್ರೆ‌‌... ನೀವೂ ಇದನ್ನೆಲ್ಲ ನಂಬ್ತೀರಾ’ ಆಶ್ಚರ್ಯದಿಂದ ಕೇಳಿದ್ರು ಜ್ಯೋತಿಷಿ.

‘ಗಾಳಿದು ನೋಡ್ತಿರಬೇಕು ಗುರುಗಳೇ... ಅದು ಬೀಸಿದ ದಿಕ್ಕಿನಲ್ಲಿ ಹೋಗ್ತಿರಬೇಕು’ ಎಂದು ನಕ್ಕು, ‘ಗ್ರಹಚಾರ ಕೆಟ್ಟಿದೆ. ಸರಿಹೋಗೋಕೆ ಏನ್ ಮಾಡಬೇಕು ಹೇಳಿ’ ಎಂದು ಕೈ ಮುಂದಿಟ್ಟರು.

ADVERTISEMENT

‘ಇದೇನ್ ಅಚ್ಚರಿ ರೀ! ನಿಮ್ಮ ಕೈಯಲ್ಲಿ ಕಮಲ ಅರಳ್ತಿರೋ ಗುರುತು ಕಾಣ್ತಿದೆ. ನೀವು ಹಾಕುತ್ತಿದ್ದ ಟೋಪಿ ಬದಲಾಗುವ ಲಕ್ಷಣ ಗೋಚರಿಸ್ತಾ ಇದೆ’.

‘ಏನ್ ಗುರುದುಜೀ... ನಾನ್ಯಾವಾಗ, ಯಾವ್ ಆದ್ಮಿಗೆ ಟೋಪಿ ಹಾಕಿದ್ದೆ’ ರೋಷದಿಂದ ಕೇಳಿದ್ರು ಸಾಹೇಬ್ರು‌.

‘ಅಪಾರ್ಥ ಮಾಡ್ಕೊಬೇಡಿ. ಇಷ್ಟರಲ್ಲೇ ನಿಮ್ಮ ವೇಷ-ಭೂಷಣ, ನಡೆ-ನುಡಿ ಬದಲು ಮಾಡ್ಕೋಬೇಕಾಗುತ್ತೆ ಅಂದೆ. ಅಂದ್ರೆ, ನಿಮ್ಮ ನಾಲಿಗೆಯನ್ನ ತಿರುಗಿಸಬೇಕು ಅಂತಾ ಹೇಳ್ದೆ’ ಸಮಾಧಾನಪಡಿಸಿದ್ರು ಗುರೂಜಿ.

‘ನಾಲಗೇದು ಟರ್ನ್ ಮಾಡೋದಾ, ಅದ್ಹೆಂಗೆ?’

‘ಸಿಂಪಲ್. ಇಷ್ಟ್ ದಿನ ನೀವು ಯಾರನ್ನ ಬೈತಿದ್ರೋ ಅವರನ್ನು ಹೊಗಳಬೇಕು. ಯಾರನ್ನು ಹೊಗಳ್ತಿದ್ರೋ ಅವರಿಗೆ ಬೈಯಬೇಕು?’

‘ಅದು ನಮ್ದುಕೆ ಬಹೂತ್ ಸುಲಭ ಬಿಡಿ. ಮತ್ತೇನ್ ಕಾಣ್ತಿದೆ’ ಮತ್ತೆ ಕೈ ಚಾಚಿದ್ರು ಸಾಹೇಬ್ರು.

‘ಇವಿಎಂಗಳು ಕಾಣ್ತಿವೆ. ಹಸಿರು ಬಣ್ಣಕ್ಕಿಂತ ಕೇಸರಿ ಲೈಟ್‌ಗಳೇ ಹೆಚ್ಚಿವೆ’.

‘ಮಾಲೂಮ್ ಹೋಗಯಾ... ಅದಕ್ಕೇ ನಿಮ್ಮ ಹತ್ರ ಬಂದಿದ್ದು ಗುರುಗಳೇ ನಾನು’ ನಕ್ರು ಸಾಹೇಬ್ರು.

‘ಅಂದ್ರೆ... ಕೇಸರಿ ಮಹಿಮೆ ಗೊತ್ತಿತ್ತಾ? ರಿಸಲ್ಟ್ ಉಲ್ಟಾ ಆದ್ರೆ ಏನ್ಮಾಡ್ತೀರಾ?’ ಕೇಳಿದ್ರು ಜ್ಯೋತಿಷಿ.

‘ಮತ್ತೆ ನಾಲಿಗೆ ಹೊರಳಿಸ್ತೀನಿ ಅಷ್ಟೆ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.