ADVERTISEMENT

ಚುರುಮುರಿ | ಪಿಂಜರಾಪೋಲು ಗ್ಯಾರಂಟಿ

ಲಿಂಗರಾಜು ಡಿ.ಎಸ್
Published 29 ಮೇ 2023, 22:04 IST
Last Updated 29 ಮೇ 2023, 22:04 IST
   

‘ಕೆಲಸವಿಲ್ಲದ ಸಂಕಟಕ್ಕೆ ಅಸೋಕಣ್ಣ, ಕುಮಾರಣ್ಣ, ರೇಣುಕಣ್ಣ ‘ಟಿಕೇಟ್ ತಕ್ಕಬ್ಯಾಡಿ, ಬಿಲ್ ಕಟ್ಟಬ್ಯಾಡಿ’ ಅಂತ ಬಾಯಲ್ಲಿ ಬ್ಯಾಡ್ ವರ್ಡ್ಸ್‌ ಕಡಿಸ್ತಾ ಕೂತವರೆ, ಬ್ಯಾಡ್ ಬಾಯ್ಸ್’ ಅಂತಂದೆ.

‘ಕೈ ಪಕ್ಸದೋರು ಏನೂ ಕಮ್ಮಿ ಇಲ್ಲ. ‘ಕ್ಯಾತೆ ಮಾಡದ್ನೇ ಕ್ಯಾಮೆ ಮಾಡಿಕ್ಯಬ್ಯಾಡಿ. ಚಾಡಿ ಹೇಳಬ್ಯಾಡಿ, ನಮ್ಮ ಮಧ್ಯೆ ಬೆಂಕಿ ಹಾಕಬ್ಯಾಡಿ’ ಅಂತ ಡಿಕೆ ಇನ್ನಿಲ್ಲದಂಗೆ ಹೇಳ್ಯದೆ’ ಚಂದ್ರು ಬೇಜಾರಾದ.

‘ಅವ್ರಿಗೆ ಬ್ಯಾರೆ ಕೇಮೆ ಏನದೋ? ಕೈ ಟೀಮಲ್ಲೂ ಮಂತ್ರಿಯಾಗ್ನಿಲ್ಲ, ಒಳ್ಳೆ ಖಾತೆ ಸಿಗನಿಲ್ಲ ಅಂತ ಗುಮ್ಮಕೆ ನಿಂತಿರೋ ವಯಸ್ಸಾದ ವಯೋನಿಧಿ ಹೋರಿಗಳು ಜನದ ಕೆಲಸ ಬುಟ್ಟು ಬೇರೆ ಎಲ್ಲಾ ಮಾಡಿಕ್ಯಂಡು ತಿರುಗ್ತವೆ. ಇವುನ್ನ ಯಾವ ಸಂತೇಲಿ ಮಾರದು?’ ಯಂಟಪ್ಪಣ್ಣ ಸಿಟ್ಕಂದಿತ್ತು.

ADVERTISEMENT

‘ಗೆದ್ದೋರಿಗೆಲ್ಲಾ ಮಂತ್ರಿ ಗ್ಯಾರಂಟಿ ಅಂತ ಗ್ಯಾರಂಟಿ ಕಾರ್ಡು ಕೊಟ್ಟವುರಂತೆ ರಾವುಲಣ್ಣ, ಸೋನಿಯಕ್ಕ! ಇದೂ ಮೋದಿ ಮಾಮ ಹದಿನೈದು ಲಕ್ಸ ಕೊಟ್ಟ ಲೆಕ್ಕದಂಗೇಯೋ?’ ಅಂದ ಚಂದ್ರು.

‘ಸಾ, ನಾನೇಳದು 135 ಶಾಸಕರಿಗೂ ಮಂತ್ರಿ ಮಾಡಿದ್ರೆ ಆಗಕುಲ್ವೇ?’ ಅಂತಂದೆ.

‘ಲೇಯ್ ಹೈವಾನ್ ಅದೆಂಗಾದ್ಲಾ? ಇರೋವೆ 34 ಮಂತ್ರಿ ಖಾತೆಗಳು’ ಅಂದ್ರು ತುರೇಮಣೆ.

‘ಕ್ಯಾಬಿನೆಟ್ ಮಂತ್ರಿ, ಜಿಲ್ಲಾ ಮಂತ್ರಿ, ತಾಲ್ಲೋಕು ಮಂತ್ರಿ, ಹೋಬಳಿ ಮಂತ್ರಿ ಅಂತ ಎಲ್ಲಾ ಖಾತೆಗೂ ನಾಕುನಾಕು ಮಂತ್ರಿ ಪೋಸ್ಟು, ಒಂದೊಂದು ಗೂಟದ ಕಾರು ಕೊಟ್ರೆ 135ರ ಲೆಕ್ಕ ಸರೋಯ್ತದೆ!’ ನನ್ನ ಘನಂದಾರಿ ವಿಚಾರ ಬಿಚ್ಚಿಟ್ಟೆ.

‘ಇವುಗಳಲ್ಲಿ ವಯಸ್ಸಾಗಿ ಗೆಯ್ಯಕ್ಕಾಗದೇ ಗೊಡ್ಡು ಬಿದ್ದಿರವೇ ಜಾಸ್ತಿ ಅವೆ ಕನೋ! ಒಂದೊಂದೂವೆ ಕೊಂಬಿಗೆ ತಲಾ ಹತ್ತತ್ತು ಕ್ರಿಮಿನಲ್ ಕೇಸುಗಳ ನೇತಾಕ್ಕ್ಯಂದವೆ. ಜನ ಚುನಾವಣೇಲಿ ಬಾಲ ಕಟ್ ಮಾಡಿರೋ ಉಮ್ಮೇದುವಾರರು ಎಲ್ಲಾ ಪಕ್ಸದೇಲೂ ಅವ್ರೆ. ಇವರುನ್ನೆಲ್ಲಾ ತಕ್ಕೋಗಿ ಯಾವುದನ್ನಾ ಪಿಂಜರಾಪೋಲಿಗೆ ದಬ್ಬಿದ್ರೆ ಜನ ನೆಮ್ಮದಿಯಾಗಿರಬೈದು’ ಅಂತ ತುರೇಮಣೆ ದಿವಿನಾದ ಐಡಿಯಾ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.