ADVERTISEMENT

ಚುರುಮುರಿ | ಟಿಕೆಟ್ ಮಾತ್ರ ಫ್ರೀ!

ಗುರು ಪಿ.ಎಸ್‌
Published 1 ಜೂನ್ 2023, 21:25 IST
Last Updated 1 ಜೂನ್ 2023, 21:25 IST
   

‘ರೀ... ಹೇಗಿದ್ರೂ ನನಗೀಗ ಬಸ್ ಜರ್ನಿ ಫ್ರೀ ಆಗ್ತಾ ಇದೆ ಅಲ್ವಾ, ತವರೂರಿಗೆ ಹೋಗಿ ಬರ್ತೀನಿ’ ನಯವಾಗಿ ಅರ್ಜಿ ಹಾಕಿದಳು ಹೆಂಡತಿ.

ನನಗೂ ಒಳಗೊಳಗೆ ಖುಷಿ ಆಯ್ತು‌! ‘ಹೋಗ್ ಬಾ, ನೀನೂ ಅಪ್ಪ, ಅಮ್ಮನ್ನ ನೋಡಿ ತುಂಬಾ ದಿನ ಆಯ್ತಲ್ಲ’ ಕರುಣಾರಸದಲ್ಲಿ ಹೇಳಿದೆ.

‘ಓಕೆ, ದುಡ್ಡು ಕೊಡಿ’.

ADVERTISEMENT

‘ದುಡ್ಡೇತಕ್ಕೆ, ಫ್ರೀ ಅಲ್ವಾ?’

‘ಊರಿಂದ ಊರಿಗೆ ಹೋಗೋಕೆ ಫ್ರೀ... ಬಸ್‌ನಲ್ಲಿ ಏನಾದರೂ ತಿನ್ನಬೇಕಲ್ವ, ಜೊತೆಗೆ ಮಕ್ಕಳನ್ನೂ ಕರ್ಕೊಂಡು ಹೋಗ್ತೀನಿ, ಅವರಿಗೂ ಏನಾದರೂ ಕೊಡಿಸೋದು ಇರಲ್ವ...’ ಹೇಳತೊಡಗಿದಳು ಪತ್ನಿ.

ಪಟ್ಟಿ ಇನ್ನೂ ಉದ್ದ ಆಗುವ ಭಯದಲ್ಲಿ, ‘ಸಾಕ್ ಸಾಕು, ತಗೋ 500 ರೂಪಾಯಿ ಇಟ್ಕೊ’ ಎಂದೆ.

‘ಅಯ್ಯ, 500 ರೂಪಾಯಿ ಎಲ್ಲಿ ಸಾಕಾಗುತ್ತೆ, ತವರು ಮನೆಗೆ ಹೋಗುವಾಗ ಏನಾದರೂ ಸ್ವೀಟು, ಹಣ್ಣು ಹಂಪಲು ತಗೊಂಡು ಹೋಗೋದ್ ಬೇಡ್ವಾ?’

‘ಆಯ್ತು, ಇನ್ನೊಂದು 500 ಇಟ್ಕೊ’.

‘ನಮ್ಮ ಸಂಬಂಧಿಕರೆಲ್ಲ ಅಪ್ಪನ ಮನೆಗೆ ಬಂದಿರ್ತಾರೆ. ಅಲ್ಲಿ ಹಾಕ್ಕೊಳ್ಳೋಕೆ ಒಂದೊಳ್ಳೆ ಡ್ರೆಸ್ ಇಲ್ಲ ನಂಗೆ. ಹೊಸ ಡ್ರೆಸ್ ತಗೊಳ್ಳೋಕೆ ಎರಡು ಸಾವಿರ ರೂಪಾಯಿ ಆದ್ರೂ ಕೊಡ್ರೀ...’

300 ರೂಪಾಯಿ ಬಸ್ ಟಿಕೆಟ್ ಫ್ರೀ ಆಗಿ ತಗೊಂಡು 3 ಸಾವಿರ ರೂಪಾಯಿ ಟ್ಯಾಕ್ಸ್ ಹಾಕ್ತಿದಾಳಲ್ಲ ಎಂದು ಮನಸಲ್ಲೇ ಅಂದ್ಕೊಂಡು, ‘ನೀನು ಊರಿಗೆ ಹೋಗೋದೇನ್ ಬೇಡ ಬಿಡು. ಉಚಿತ ಸೌಲಭ್ಯ ಇದೆ ಅಂತ ದುರುಪಯೋಗ ಮಾಡ್ಕೊಬಾರದು’ ಎಂದು ಬೋಧಿಸಿದೆ.

‘ಸರ್ಕಾರವೇ ಕೊಟ್ರೂ, ನೀವ್ ಓಡಾಡೋಕೆ ಬಿಡಲ್ವಲ್ರೀ. ಆಯ್ತು ಬಿಡಿ, ನಮ್ಮಮ್ಮ, ಅಕ್ಕ, ತಂಗೀನ ಇಲ್ಲಿಗೇ ಬರೋಕೆ ಹೇಳ್ತೀನಿ’ ಬಾಣ ಬಿಟ್ಟಳು ಹೆಂಡತಿ.

‘ತಗೋ, ಈ ಐದು ಸಾವಿರ ರೂಪಾಯಿ ಇಟ್ಕೊ. ನೀನೇ ಹೋಗಿ ಬಂದ್ಬಿಡು’ ದುಡ್ಡು ಕೈಯಲ್ಲಿಟ್ಟು ಜಾಗ ಖಾಲಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.