ADVERTISEMENT

ಚುರುಮುರಿ: ಬಟ್ಟೆ ಪಾಡು

ಮಣ್ಣೆ ರಾಜು
Published 23 ಮಾರ್ಚ್ 2021, 19:31 IST
Last Updated 23 ಮಾರ್ಚ್ 2021, 19:31 IST
   

ತಿಂಗಳ ಸಾಮಾನು ಪಟ್ಟಿಯಲ್ಲಿ ಕೊನೇ ಐಟಂ ಗಂಡನ ಶೇವಿಂಗ್ ಬ್ಲೇಡ್. ಹಾಗೇ, ಬಟ್ಟೆ ಖರೀದಿ ವೇಳೆ ಕೊನೆಯ ಖರೀದಿ ಗಂಡನ ಪಂಚೆ!

ಸೀರೆ ಆಯ್ಕೆ ಮುಗಿಸಿ ನಿರಾಳಗೊಂಡ ಸುಮಿ, ‘ದೇವೇಗೌಡರ ಬ್ರ್ಯಾಂಡ್, ಸಿದ್ದರಾಮಯ್ಯನವರ ಬ್ರ್ಯಾಂಡಿನ ಪಂಚೆಗಳನ್ನು ತೋರಿಸಿ’ ಎಂದಳು. ಅಂಗಡಿಯವನು ನಕ್ಕು, ಪಂಚೆ ಕಟ್ಟುಗಳನ್ನು ಹರಡಿ, ‘ಡಜನ್ ಪಂಚೆ ಕೊಳ್ಳಿ ಸಾರ್ ಹಬ್ಬಕ್ಕೆ ಬೇಕಾಗುತ್ತೆ, ಸಿದ್ದರಾಮಯ್ಯ 90 ಜೊತೆ ಬಟ್ಟೆಗಳನ್ನು ಕೊಂಡಿದ್ದಾರಂತೆ’ ಅಂದ.

‘ಸಿದ್ದರಾಮಯ್ಯ, ಮಾಧುಸ್ವಾಮಿ, ರೇವಣ್ಣ ಅವರಂಥಾ ಪಂಚೆಪಟುಗಳಿಗೆ ದಿನಾ ಹಬ್ಬ, ನಮಗೆ ಮಾತ್ರ ಕ್ಯಾಲೆಂಡರ್‌ನ ಕೆಂಪು ಡೇಟಿನಲ್ಲಷ್ಟೇ ಹಬ್ಬ’ ಅಂದ ಶಂಕ್ರಿ.

ADVERTISEMENT

‘ಸದನದಲ್ಲಿ ಎದುರಾಳಿಗಳನ್ನು ಎದುರಿಸಲು ನಾಯಕರು ಪಂಚೆಯನ್ನು ಎತ್ತಿ ಕಟ್ಟಿಕೊಳ್ಳು
ತ್ತಾರಂತೆ. ಅದು ಪಂಚೆಯ ಪವರ್ ಸಾರ್...’

‘ಸದನದಲ್ಲಿ ಅಂಗಿ ಬಿಚ್ಚಿ ತಾಕತ್ತು ಪ್ರದರ್ಶಿಸುವ ಪ್ರಕರಣಗಳು ಜಾಸ್ತಿಯಾಗ್ತಿವೆ’.

‘ಸದನದ ವಿಚಾರ ಬೇಡಬಿಡಿ, ನಮ್ಮ ಸುತ್ತಮುತ್ತ ಪಂಚೆ ಎಳೆಯೋರು ಜಾಸ್ತಿ ಇದ್ದಾರಂತೆ’ ಎಂದಳು ಸುಮಿ.

‘ಕಾಲು ಎಳೆಯಬಹುದು, ಪಂಚೆ ಎಳೆಯುವಂತಿಲ್ಲ ಅಂತ ಕಾನೂನು
ಮಾಡಿದರಾಯ್ತು ಬಿಡಿ, ಹಹ್ಹಹ್ಹ...’

‘ದ್ರೌಪದಿಯ ಸೀರೆ ಎಳೆದಾಗ ಶ್ರೀಕೃಷ್ಣ ಮಾನ ಕಾಪಾಡಿದ್ದ, ಈ ಕಾಲಘಟ್ಟದಲ್ಲಿ ಪಂಚೆ ಎಳೆದರೆ ಮಾನ ಕಳೆಯಲು ಜಾಲತಾಣ, ಟಿ.ವಿ ಕ್ಯಾಮೆರಾ ಕಣ್ಣುಗಳು ಕಾದಿರ್ತವೆ’.

‘ಮಾನ ಮುಚ್ಚಲು ಬಟ್ಟೆಗಳು ಬೇಕು. ಹಾಗಂತ, ಹೊಟ್ಟೆಪಾಡಿಗಿಂಥ ಬಟ್ಟೆಪಾಡು ಮುಖ್ಯ ಆಗಬಾರದು’ ಅಂದ ಶಂಕ್ರಿ.

‘ಬಟ್ಟೆಗಳು ಧರಿಸುವವರ ಅಭಿರುಚಿ, ಪರಿಸ್ಥಿತಿಯನ್ನು ಬಿಂಬಿಸುತ್ತವೆ. ಬಟ್ಟೆ ನೋಡಿ ಮಣೆ ಹಾಕುವ ಕಾಲ ಇದು ಸಾರ್’ ಎಂದ ಅಂಗಡಿಯವ.

‘ಸಾಧಾರಣ ಪಂಚೆಯಲ್ಲೇ ಫಾರಿನ್‍ಗೂ ಹೋಗುವ, ದೇವಸ್ಥಾನಕ್ಕೂ ಹೋಗುವ ದೇವೇ ಗೌಡರ ವ್ಯಕ್ತಿತ್ವಕ್ಕೆ ಬಟ್ಟೆಯಿಂದ ಧಕ್ಕೆ ಆಗಿಲ್ಲ...ಪ್ಯಾಂಟು, ಪಂಚೆಗಿಂಥ ಪಂಚೇಂದ್ರಿಯಗಳನ್ನು ಪರಿಶುದ್ಧವಾಗಿಟ್ಟುಕೊಂಡು ಘನತೆ ಕಾಪಾಡಿ ಕೊಳ್ಳಬೇಕಷ್ಟೇ...’ ಎಂದು ಸುಮಿ ಕೊಂಡ ಬಟ್ಟೆಗಳನ್ನು ಜೋಡಿಸಿಕೊಂಡಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.