ADVERTISEMENT

ಚುರುಮುರಿ: ಜಾತ್ರೆ ಜಂಜಾಟ

ಸಿ.ಎನ್.ರಾಜು
Published 24 ಮಾರ್ಚ್ 2021, 19:31 IST
Last Updated 24 ಮಾರ್ಚ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಟ್ನಿಹಳ್ಳಿಯಲ್ಲಿ ಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಿದ್ದರು. ಊರಿನ ಸೆಂಚುರಿ ಗೌಡ ತಿಮ್ಮಜ್ಜನನ್ನು ಇಬ್ಬರು ಎತ್ತಿಕೊಂಡು ಬಂದು ಮಂತ್ರಿ ಬಳಿ ಕೂರಿಸಿದರು.

‘ಏನಜ್ಜಾ ನಿನ್ನ ಅಹವಾಲು?’ ಮಂತ್ರಿ ಕೇಳಿದರು.

‘ಕೊರೊನಾ ಕಾಟ ಅಂತ ಹೋದ ವರ್ಷನೂ ಮಾರಮ್ಮನ ಜಾತ್ರೆ ಮಾಡಲಿಲ್ಲ, ಈ ವರ್ಷ ಮಾಡಿ’ ಅರ್ಜಿ ಕೊಟ್ಟ ತಿಮ್ಮಜ್ಜ.

ADVERTISEMENT

‘ಕೊರೊನಾ ಉಲ್ಬಣ ಆಗಿದೆ, ಜಾತ್ರೆಗಳಿಗೆ ಅನುಮತಿ ಕೊಡೋದಿಲ್ಲ. ಪರಿಸ್ಥಿತಿ ಸುಧಾರಿಸಿದ ಮೇಲೆ ಮಾಡ್ರೀ...’ ಅಂದರು.

‘ಅಲ್ಲೀತನಕ ನಾನು ಇರ್ತೀನೊ, ಸಾಯ್ತೀನೊ ಬದುಕಿದ್ದಾಗಲೇ ಮಾರಮ್ಮನ ತೇರಿನ ಮೇಲೆ ಧವನ-ಬಾಳೆಹಣ್ಣು ಎಸೆದು ತಾಯಿಗೆ ಕೈ ಮುಗಿಬೇಕು’ ತಿಮ್ಮಜ್ಜ ಕೊನೆ ಆಸೆ ಹೇಳಿಕೊಂಡ.

‘ನೀನು ಸಾಯ್ತಿ ಅಂತ ಜಾತ್ರೆ ಮಾಡಿದ್ರೆ ಕೊರೊನಾ ನುಗ್ಗಿ ಊರಿನವರನ್ನೆಲ್ಲಾ ಸಾಯಿಸ್ತದೆ...’ ಮಂತ್ರಿ ಬೆಂಬಲಿಗ ಪಂಚಾಯಿತಿ ಮೆಂಬರ್ ಶಿವಲಿಂಗ ಸಿಡುಕಿದ.

‘ಹಾಗಂತ ಊರಿಗೆ ಬೇಲಿ ಹಾಕ್ಕೊಂಡು ಬಾಳಕ್ಕಾಗುತ್ತಾ, ದೇವರ ಕಾರ್ಯ ಮಾಡೋದು ಬೇಡ್ವಾ, ಮಾರಮ್ಮ ಮುನಿಸಿಕೊಂಡ್ರೆ ಊರು ಉಳೀತದೇನ್ಲಾ?’ ತಿಮ್ಮಜ್ಜ ರೇಗಿದ.

‘ದೇವರ ಕಾರ್ಯ ಮಾಡಲೇಬೇಕು ಸಾರ್, ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಹಾಕ್ಕೊಂಡು, ಸ್ಯಾನಿಟೈಸರ್‍ನಲ್ಲಿ ಕೈ ತೊಳೆದುಕೊಂಡು ತೇರು ಎಳಿತೀವಿ...’ ಅಂದ ಜಾತ್ರಾ ಸಮಿತಿ ಸದಸ್ಯ ಪರಮೇಶಿ.

‘ಪರ್ಮಿಷನ್ ಕೊಡಕ್ಕಾಗಲ್ಲರೀ...’ ಮಂತ್ರಿ ಖಡಕ್ಕಾಗಿ ಹೇಳಿದ್ರು.

‘ತಿಮ್ಮಜ್ಜ ಸತ್ತರೆ ಸರ್ಕಾರವೇ ಹೊಣೆ. ಮುಂದಿನ ಜಾತ್ರೆವರೆಗೂ ಅಜ್ಜನನ್ನು ಬದುಕಿಸಿ, ವೃದ್ಧಾಪ್ಯ ವೇತನ ಪಡೆಯುವಂತೆ ಕಾಪಾಡೋದು ನಿಮ್ಮ ಜವಾಬ್ದಾರಿ’ ಅಂತ ಜನ ಕೂಗಾಡಿದರು.

‘ಇನ್ಮೇಲೆ ತಿಮ್ಮಜ್ಜನ ಯೋಗಕ್ಷೇಮವನ್ನು ಸರ್ಕಾರ ನೋಡಿಕೊಳ್ಳುತ್ತದೆ’ ಎಂದ ಮಂತ್ರಿ, ‘ಪ್ರತಿದಿನ ತಿಮ್ಮಜ್ಜನ ಆರೋಗ್ಯ ತಪಾಸಣೆ ಮಾಡಿ ನನಗೆ ರಿಪೋರ್ಟ್ ಕೊಡಿ’ ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಲಸಿಕೆ ಹಾಕಿಸಲು ತಿಮ್ಮಜ್ಜನನ್ನು ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.