ADVERTISEMENT

ಚುರುಮುರಿ | ಕೆಟ್ಟ ಸುದ್ದಿ!

ಬಿ.ಎನ್.ಮಲ್ಲೇಶ್
Published 25 ಏಪ್ರಿಲ್ 2024, 20:09 IST
Last Updated 25 ಏಪ್ರಿಲ್ 2024, 20:09 IST
   

‘ಏನ್ರಲೆ ಹೊಸ ಸುದ್ದಿ? ಎಷ್ಟಾತು ಎಲೆಕ್ಷನ್ ಕಮಾಯಿ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.

‘ಈ ಗುಡ್ಡೆ ಸಖತ್ ರೊಕ್ಕ ಮಾಡ್ತದಾನೆ ಕಣ್ರಲೆ, ಚೊಂಬು-ಚಿಪ್ಪು ಎರಡೂ ಕಡೆಗೆ ಪ್ರಚಾರಕ್ಕೆ ಜನರನ್ನ ಕರ್ಕಂಡ್ ಹೋಗ್ತದಾನಂತೆ’ ಎಂದ ತೆಪರೇಸಿ.

‘ಹೌದೇನೋ? ಮತ್ತೆ ನನ್ ಹೋಟ್ಲು ಬಾಕಿ ತೀರ್ಸು’ ಎಂದಳು ಮಂಜಮ್ಮ.

ADVERTISEMENT

‘ಎಲೆಕ್ಷನ್ ಮುಗೀಲಿ ತಡಿ, ತೀರುಸ್ತೀನಿ’ ಎಂದ ಗುಡ್ಡೆ, ‘ಅಲ್ರಲೆ, ಈ ಚೊಂಬಿಗೂ ಚಿಪ್ಪಿಗೂ ಏನ್ ವ್ಯತ್ಯಾಸ?’ ಎಂದ.

‘ಚೊಂಬನ್ನ ಸ್ನಾನಕ್ಕೂ ಸಂಡಾಸಿಗೂ ಎರಡಕ್ಕೂ ಬಳಸಬೋದು, ಆದ್ರೆ ಚಿಪ್ಪು ಹಂಗೆ ಮಾಡಕ್ಕೆ ಬರಲ್ಲ’ ದುಬ್ಬೀರ ನಕ್ಕ.

‘ಮತ್ತೆ ಈ ಪೆನ್‌ಡ್ರೈವ್ ಕತಿ ಏನು?’ ಕೊಟ್ರೇಶಿ ಕೊಕ್ಕೆ.

‘ಅಯ್ಯಪ್ಪ, ಸದ್ಯ ಅದರ ಸುದ್ದಿ ಬ್ಯಾಡ’ ತೆಪರೇಸಿ ತೆಲಿ ಒಗೆದ.

‘ಆಮೇಲೆ ಈ ಕೈನೋರು ಅಧಿಕಾರಕ್ಕೆ ಬಂದ್ರೆ ಅರ್ಧ ಆಸ್ತಿ ಕಿತ್ಕಂತಾರಂತಲ್ಲೋ ಗುಡ್ಡೆ... ಹುಷಾರು’ ಎಂದಳು ಮಂಜಮ್ಮ.

‘ಕಿತ್ಕಳ್ಳಲಿ ತಗಾ, ನನ್ ಹತ್ರ ಇರೋದೇ ಎರಡು ಪುಟುಗೋಸಿ’ ಗುಡ್ಡೆ ಕಿಸಕ್ಕೆಂದ.

‘ಅಷ್ಟರಲ್ಲಿ ತೆಪರೇಸಿ ಮೊಬೈಲ್ ರಿಂಗಾಯಿತು. ಕಾಲ್ ರಿಸೀವ್ ಮಾಡಿದ ತೆಪರೇಸಿ ‘ಏನು? ಹೌದಾ? ಯಾವಾಗ? ಥೋ ಎಂಥ ಕೆಟ್ ಸುದ್ದಿ ಹೇಳಿದ್ಯೋ ಮಾರಾಯ’ ಎನ್ನುತ್ತ ತೆಲಿ ಮೇಲೆ ಕೈ ಹೊತ್ತು ಕೂತ.

‘ದುಬ್ಬೀರನಿಗೆ ಗಾಬರಿ. ‘ಏನಾತೋ, ಏನಂತೆ, ಯಾರರೆ ಸತ್ರಾ?’ ಎಂದ. ಮಂಜಮ್ಮ, ಗುಡ್ಡೆ ಎಲ್ಲರಿಗೂ ಆತಂಕ.

‘ಕೆಟ್ ಸುದ್ದಿ ಕಣ್ರಲೆ, ಎಲೆಕ್ಷನ್‌ಗೆ ಮೂರು ದಿನ ಎಣ್ಣಿ ಅಂಗಡಿ ಬಂದ್ ಅಂತೆ’ ಎಂದ.

‘ಅಯ್ಯೋ ನಿನ್ ಮುಖ ಮುಚ್ಚ’ ಎನ್ನುತ್ತ ಸಿಟ್ಟಿಗೆದ್ದ ಮಂಜಮ್ಮ, ತೆಪರೇಸಿ ಮೇಲೆ ಒಂದು ಕಾಫಿ ಕಪ್ ಬೀಸಿ ಒಗೆದಳು. ಅದರಿಂದ ತಪ್ಪಿಸಿಕೊಂಡ ತೆಪರೇಸಿ, ‘ಸಾರಿ ಸಾರಿ’ ಎಂದ. ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.