‘ಏನ್ ಮಂಜಮ್ಮ, ಬಸವ ಜಯಂತಿ, ಅಕ್ಷಯ ತೃತೀಯ ಹೆಂಗಾತು? ಚಿನ್ನ ಗಿನ್ನ ಖರೀದಿ ಮಾಡಿದ್ಯೋ ಹೆಂಗೆ?’ ಗುಡ್ಡೆ ಕೇಳಿದ.
‘ಉಳ್ಳವರು ಚಿನ್ನ ಖರೀದಿಸುವರು, ನಾನೇನು ಮಾಡಲಿ ಬಡವಳಯ್ಯಾ...’ ಎಂದಳು ಮಂಜಮ್ಮ.
‘ಅಲೆಲೆ, ವಚನ ಹೇಳಾಕೂ ಬರುತ್ತೆ ನಿಂಗೆ’ ದುಬ್ಬೀರ ನಕ್ಕ.
‘ವಚನ ಹೇಳೋರು ಊರು ತುಂಬಾ ಅದಾರೆ ಬಿಡ್ರಪ್ಪ, ಅದ್ರಲ್ಲೂ ರಾಜಕಾರಣಿಗಳು ಎತ್ತಿದ ಕೈ. ಕಳಬೇಡ ಅಂತಾರೆ, ಕದೀತಾರೆ. ಹುಸಿಯ ನುಡಿಯಲು ಬೇಡ ಅಂತಾರೆ, ಬಾಯಿ ಬಿಟ್ರೆ ಬರೀ ಸುಳ್ಳೇ. ನುಡಿದರೆ ಮುತ್ತಿನ ಹಾರದಂತಿರಬೇಕು ಅಂತಾರೆ, ಕೆಟ್ಟಾ ಕೊಳಕ ಮಾತಾಡ್ತಾರೆ’ ಮಂಜಮ್ಮಗೆ ಕೋಪ.
‘ಅದ್ರಲ್ಲೂ ಇವತ್ತೇಳಿದ್ದನ್ನ ನಾಳೆ ಹಂಗೆ ಹೇಳೇ ಇಲ್ಲ ಅಂತಾರೆ ಮಂಜಮ್ಮ, ಟೀವೀಲಿ ಬಂತಲ್ಲ ಅಂದ್ರೆ, ಅವರು ತಿರುಚಿ ಹಾಕಿದಾರೆ ಅಂತಾರೆ’ ತೆಪರೇಸಿಯೂ ಆಕ್ಷೇಪಿಸಿದ.
‘ಇನ್ನೂ ತೆಲಿ ಕೆಟ್ರೆ ‘ನಾನು ನಾನೇ ಅಲ್ಲ’ ಅಂದುಬಿಡ್ತಾರೆ ಹುಷಾರು’ ಗುಡ್ಡೆ ನಕ್ಕ.
‘ಅಲ್ಲ, ಅಕ್ಷಯ ತೃತೀಯದ ದಿನ ಚಿನ್ನ ತಗಂಡ್ರೆ ಅದು ಡಬಲ್ ಆಗುತ್ತಂತೆ ಹೌದಾ?’ ದುಬ್ಬೀರ ಕೇಳಿದ.
‘ಚಿನ್ನ ಒಂದೇನಾ ಅಥ್ವ ಏನ್ ತಗಂಡ್ರೂ ಡಬಲ್ ಆಗುತ್ತಾ?’ ಕೊಟ್ರೇಶಿ ಕೊಕ್ಕೆ.
‘ಲೇಯ್ ತಗಡು, ಡಬ್ಬಲ್ ತ್ರಿಬ್ಬಲ್ ಆಗಾಕೆ ಅದು ರಾಜಕಾರಣಿಗಳ ಆಸ್ತಿ ಅಲ್ಲ, ಏನೋ ಒಂದು ನಂಬಿಕೆ ಅಷ್ಟೆ’ ತೆಪರೇಸಿ ಹೇಳಿದ.
‘ಏನು, ತಗಡಾ? ನುಡಿದರೆ ಮುತ್ತಿನ ಹಾರ ಅಷ್ಟೇ ಅಲ್ಲ, ಹೆಂಗಿರಬೇಕು ಗೊತ್ತಾ?’
‘ಹೆಂಗಿರಬೇಕು?’
‘ನುಡಿದರೆ ಚಿನ್ನದ ತೂಕದಂತಿರಬೇಕು. ನುಡಿದರೆ ‘ಏಯ್, ಯಾವನೋ ಅಲ್ಲಿ, ಬಾರಯ್ಯ ಇಲ್ಲಿ’ ಎನ್ನದಂತಿರಬೇಕು. ನುಡಿದರೆ ಯೂ ಟರ್ನ್ ಹೊಡೆಯದಂತಿರಬೇಕು. ನುಡಿದರೆ ವಿರೋಧ ಪಕ್ಷದವರೂ ಮೆಚ್ಚಿ ಅಹುದಹುದೆನುವಂತಿರಬೇಕು... ಹೆಂಗೆ?’ ಎಂದ ಕೊಟ್ರೇಶಿ.
‘ಬೊಂಬಾಟ್ ಕೊಟ್ರ, ಇವತ್ತು ನಿಂಗೆ ಡಬಲ್ ಚಾ!’ ಎಂದ ಗುಡ್ಡೆ. ಎಲ್ಲರೂ ‘ಹೋ...’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.