ADVERTISEMENT

ಚುರುಮುರಿ | ಇ- ಕೈಲಾಸ

ಸುಮಂಗಲಾ
Published 30 ಆಗಸ್ಟ್ 2020, 20:15 IST
Last Updated 30 ಆಗಸ್ಟ್ 2020, 20:15 IST
   

ಅಟ್ಟದ ಮೇಲಿಂದ ಹಾಡು ಕೇಳಿಸಿತು... ‘ದೇವರ ಆಟ ಬಲ್ಲವರಾರು... ಕೇಳದೆ ಕೊರೊನಾ ಕೊಡುವಾ... ಆರ್ಥಿಕ ಹೊಡೆತಾ ಕೊಡುವಾ... ತನ್ನ ಮನದಂತೆ ಕುಣಿಸಿ ಆಡುವಾ...’

ಅರೆ, ಕೆಟ್ಟುಹೋಗಿದೆಯೆಂದು ಅಟ್ಟಕ್ಕೆ ಬಿಸಾಕಿದ ರೇಡಿಯೊಗೆ ಜೀವ ಬಂದು ಹಾಡುತ್ತಿದೆಯೇ ಎಂದು ಅಚ್ಚರಿಯಾಯಿತು. ನೋಡಿದರೆ, ಬೆಕ್ಕಣ್ಣ ಮೇಲೆ ಕುಳಿತು ಅರೆಗಣ್ಣು ಮಾಡಿ ಹಾಡುತ್ತಿತ್ತು.

‘ಅಲ್ಲಲೇ... ನೀ ಯಾವಾಗ ಇಷ್ಟ್ ಛಂದ ಹಾಡೂದು ಕಲಿತೆ’ ಮೂಗಿನ ಮೇಲೆ ಬೆರಳಿಟ್ಟೆ.

ADVERTISEMENT

‘ನಿರ್ಮಲಕ್ಕ ಹೇಳಿಕೊಟ್ಟಾಳ’ ಎಂದು ಹೆಮ್ಮೆಯಿಂದ ಉಲಿಯಿತು. ಅಟ್ಟದಿಂದ ಇಳಿದು ಬಂದಿದ್ದೇ ಹಳೆಯ ಪೇಪರುಗಳನ್ನು ಓದಿತು.

‘ದುಬ್ಬೀರಣ್ಣ ಕೈಲಾಸಕ್ಕೆ ಹೊಂಟಾನಂತ, ನನ್ನೂ ಕಳಿಸು’ ಎಂದು ದುಂಬಾಲು ಬಿದ್ದಿತು.

‘ಕೈಲಾಸ ಪರ್ವತ ಹತ್ತೂದು ಅಂದ್ರ ಅಟ್ಟ ಹತ್ತಿದ ಹಂಗೇನು... ಅಂವಾ ಚಾರಣಕ್ಕೆ ಹೊಂಟಿರಬೇಕು. ನಿನಗ ಅಷ್ಟ್ ಎತ್ತರ ಹತ್ತೂದು ಆಗಂಗಿಲ್ಲೇಳು’ ಸಮಾಧಾನಿಸಲು ಯತ್ನಿಸಿದೆ.

‘ನಿನಗೇನ್ ಸಾಮಾನ್ಯ ಜ್ಞಾನನೇ ಇಲ್ಲ. ಕೈಲಾಸ ಪರ್ವತ ಅಲ್ಲ, ನಿತ್ಯಾನಂದ ಮಾಮನ ಕೈಲಾಸ ರಾಷ್ಟ್ರ ಐತಲ್ಲ, ಅದು. ನೋಡು... ಎಷ್ಟ್ ಆತ್ಮನಿರ್ಭರ ಇದ್ದಾನಂವ... ತನ್ನದೇ ರಾಷ್ಟ್ರ, ಸಂಸತ್ತು, ರಿಸರ್ವ್ ಬ್ಯಾಂಕ್, ಡಾಲರ್ ಎಲ್ಲ ಮಾಡಿಕೊಂಡಾನ’ ಎಂದು ಕೊಂಡಾಡಿತು.

‘ನಿನಗೆ ಅಲ್ಲೇನು ಕೆಲಸ ಇರ್ತದಲೇ... ನೀ ಏನ್ ಧ್ಯಾನ ಮಾಡಾಂವ ಏನು’.

‘ಅಲ್ಲಿ ದೇವರ ಆಟ ಹೆಂಗದ ನೋಡಿಕೆಂಡು ಬಂದು ನಿರ್ಮಲಕ್ಕಂಗ ಹೇಳ್ತೀನಂತ. ಅಂವ ರಿಸರ್ವ್ ಬ್ಯಾಂಕ್ ಮಾಡ್ಯಾನ ಅಂದ್ರ ಅಲ್ಲೂ ಹೆಗ್ಗಣಗಳು ಇದ್ದೇ ಇರತಾವ... ಹೆಗ್ಗಣ ಹಿಡಿಲಾಕ ಅವಂಗ ಹೆಲ್ಪ ಮಾಡ್ತೀನಿ’ ಬೆಕ್ಕಣ್ಣನ ಪಟ್ಟಿ ಬೆಳೆಯುತ್ತಲೇ ಇತ್ತು.

‘ಕೈಲಾಸ ರಾಷ್ಟ್ರದಾಗ ಕೊರೊನಾ ಬಂದ್ರ ಏನ್ ಮಾಡ್ತಾರಂತ... ಮ್ಯಾಗಿನ ಕೈಲಾಸಕ್ಕೇ ಕಳಿಸ್ತಾರಂತೇನು? ಮೊದ್ಲು ಲಸಿಕೆ ಕಂಡು ಹಿಡಿಯಾಕೆ ಹೇಳಲೇ ನಿಮ್ಮ ಮಾಮಾಗ’ ಅಂದೆ.

‘ಅದು ಇ-ಕೈಲಾಸ... ಅಂದ್ರ ಎಲ್ಲಾ ಆನ್‌ಲೈನ್‌, ಕೊರೊನಾ ಹೆಂಗ ಬರತದ’ ಎಂದು ಜಾಣನಗು ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.