ADVERTISEMENT

ಚುರುಮುರಿ | ಪಾದಸಾಮುದ್ರಿಕೆ!

ಶಿವಪ್ರಕಾಶ್ ಭೋಗಣ್ಣ
Published 26 ಮೇ 2020, 20:00 IST
Last Updated 26 ಮೇ 2020, 20:00 IST
   

ಲಾಕ್‍ಡೌನ್‌ನಿಂದ ಮನೆಯಲ್ಲಿ ಕೂತುಂಡಿದ್ದರ ಫಲವಾಗಿ ಟೈಟ್ ಆಗಿದ್ದ ಶರ್ಟು, ಪ್ಯಾಂಟನ್ನು ಸ್ವಲ್ಪ ಸಡಿಲ ಮಾಡಿಕೊಳ್ಳೋಣ ಅಂತ ವಾಕ್ ಹೊರಟಿದ್ದೆ. ಪಂಚೆ ಮೇಲಕ್ಕೆ ಕಟ್ಟಿ, ಗಡಿಬಿಡಿಯಿಂದ ಹೊರಟಿದ್ದ, ಮಾಸ್ಕ್ ಹಾಕಿದ್ದ ಒಂದು ತಲೆ ಕಾಣಿಸ್ತು. ತಲೆಯ ಹೊಳಪಿನಿಂದ, ಹಸ್ತಸಾಮುದ್ರಿಕಾ ಪ್ರವೀಣರಾದ ರಂಗಣ್ಣನೇ ಅನ್ನೋದು ಹೊಳೆಯಿತು. ‘ನಮಸ್ಕಾರ ರಂಗಣ್ಣ, ಅವಸರವಾಗಿ ಎಲ್ಲೋ ಹೊರಟ ಹಾಗಿದೆ?’

‘ಏನು ಮಾಡೋದಪ್ಪಾ? ಈ ಕೊರೊನಾ ಬಂದಮೇಲೆ ನನ್ನ ಬಿಸಿನೆಸ್ಸೇ ಕೆಮ್ಮುತ್ತಾ ಇದೆ. ಅದಕ್ಕೇ ಬೇರೆ ಬಿಸಿನೆಸ್ ಮಾಡೋಣ ಅಂತ’.

‘ಕೊರೊನಾಗೂ ನಿಮ್ಮ ಹಸ್ತಸಾಮುದ್ರಿಕಾ ಬಿಸಿನೆಸ್ಸಿಗೂ ಏನು ಸಂಬಂಧ ರಂಗಣ್ಣ?’

ADVERTISEMENT

‘ಅಯ್ಯೋ ಏನು ಹೇಳೋದಪ್ಪ? ಮುಂಚೆ ಹಸ್ತ ತೋರಿಸುವವರ ಅಂಗೈಗಳಲ್ಲಿನ ಗೆರೆಗಳು ಒಳ್ಳೆ ರೈಲ್ವೆ ಟ್ರ್ಯಾಕ್ ಥರಾ ಎದ್ದು ಕಾಣಿಸ್ತಿದ್ದವು. ಈಗ ಸೋಪು, ಸ್ಯಾನಿಟೈಸರು ಹಾಕಿ ಕೈ ತೊಳೆದೂ ತೊಳೆದೂ ಗೆರೆಗಳೇ ಸವೆದುಹೋಗಿವೆ. ಭವಿಷ್ಯರೇಖೆ ಮಂಕಾಗಿಬಿಟ್ಟಿದೆ, ಬೆರಳಲ್ಲಿದ್ದ ಚಕ್ರಗಳೆಲ್ಲ ಪಂಚರ್ ಆಗಿಬಿಟ್ಟಿವೆ. ಹೀಗಿರುವಾಗ, ನಾನು ಹಸ್ತ ಓದೋದು ಹೇಗೆ?’

‘ಮತ್ತೆ, ಈಗ ಅದನ್ನು ಬಿಟ್ಟು ಇನ್ನೇನು ಬಿಸಿನೆಸ್ ಮಾಡ್ತೀರಾ?’

‘ನೋಡು, ಈಗ ಎಲ್ಲರೂ ಮನೇಲಿ
ಇರೋದ್ರಿಂದ ಓಡಾಡದೆ ಅವರ ಪಾದಗಳು ಕ್ಲೀನಾಗಿ, ಕೊಬ್ಬಿ ಪೊಗದಸ್ತಾಗಿ ಬಿಟ್ಟಿವೆ! ಪಾದದ ಗೆರೆಗಳು ಈಗ ಅಂಗೈ ಗೆರೆಗಳಿಗಿಂತ ಚೆನ್ನಾಗಿ ಕಾಣ್ತಿವೆ. ಅದಕ್ಕೇ ಇನ್ಮೇಲೆ ಪಾದಸಾಮುದ್ರಿಕಾ ಶುರು ಮಾಡೋಣ ಅಂತಿದ್ದೇನೆ’.

‘ಹೌದಾ, ಹಾಗಾದ್ರೆ ಬೋರ್ಡ್ ಬರೆಸುವಾಗ ಕೊರೋನಮ್ಮನ ಚಿತ್ರವನ್ನೂ ಹಾಕಿಸಿಬಿಡಿ’.

‘ಕೊರೋನಮ್ಮ ಹೇಗಿರ್ತಾಳಪ್ಪಾ?’

‘ನಮ್ಮ ಮಾರಮ್ಮ, ಪ್ಲೇಗಮ್ಮ ಥರಾನೇ. ಆದರೆ ಕಣ್ಣು ಚೈನೀಸ್ ರೀತಿ ಚಿಕ್ಕದಾಗಿರಲಿ. ಮುಖಕ್ಕೊಂದು ಮಾಸ್ಕ್ ಹಾಕಿಸಿಬಿಡಿ! ತಲೆ ಹತ್ತಿರ ಅವಳ ವಾಹನ ತೂಗಾಡ್ತಾ ಇರಲಿ’.

‘ಅವಳಿಗೆ ವಾಹನ ಬೇರೆ ಇದೆಯಾ? ಅದ್ಯಾವುದಪ್ಪಾ?’

‘ಬಾವಲಿ...!’

‘ಒಳ್ಳೆ ಐಡಿಯಾ ಕೊಟ್ಟೆ, ಬರ್ತೀನಪ್ಪಾ’ ಅಂದವರೇ ರಂಗಣ್ಣ ದೌಡಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.