ADVERTISEMENT

ಸೆಕ್ಯುಲರ್ ಕಮಲ!

ಸುಮಂಗಲಾ
Published 14 ಜುಲೈ 2019, 20:15 IST
Last Updated 14 ಜುಲೈ 2019, 20:15 IST
   

ಗೆಳತಿಯ ಮಗಳು ಭಾರಿ ಅವಸರದಲ್ಲಿದ್ದಳು. ‘ಏನವ್ವಾ... ಮತ್ತೇನ್ ಕಾರುಬಾರು ನಡೆಸೀ...’ ಕೇಳಿದೆ.

‘ಪುರಸೊತ್ತೇ ಇಲ್ರೀ ಆಂಟಿ... ದಿನಾ ಬೆಳಗಾದ್ರೆ ಎಷ್ಟ್‌ ಮಂದಿ ಶಾಸಕರು ಬಲಕಡಿಗಿ ಎದ್ದೇಳಕ ಹತ್ಯಾರ ಅಂದ್ರ, ನಮ್ಮ ಡೇಟಾಬೇಸ್‍ ತುಂಬಿ ತುಳಕಾಕ ಹತ್ತೇದ. ನಮ್ಮ ರಾಜ್ಯ ಅಷ್ಟೇ ಅಲ್ರೀ, ರಾಷ್ಟ್ರ ಮಟ್ಟದಾಗ ಎಷ್ಟ್ ಅತೃಪ್ತಾತ್ಮಗಳು ಅದಾವು, ಎಷ್ಟ್ ಮಂದಿ ಒಂದ್ ಕಾಲಿನ ಮ್ಯಾಗೆ ನಿಂತಾರ, ಎಷ್ಟ್ ಮಂದಿನ ಒಂಟಿ ಕಾಲಿನ ಮ್ಯಾಗ ನಿಂದ್ರಸಬಕು, ಯಾರ್‍ಯಾರದು ಏನೇನ್ ಹಕೀಕತ್ತ್ ಅದ, ಇದೇ ಅನಾಲಿಸಿಸ್ ಮಾಡಾಕ ಹತ್ತೇವ್ರಿ. ಮತ್ತ್ ನೀವು ಎಲ್ಲಾನೂ ಒಕ್ಕಣ್ಣಿಂದ ನೋಡೂದು ಬಿಟ್ಟು, ಜರಾ ಪಾಸಿಟಿವ್ ಕಣ್ಣಿಂದ ನೋಡೂದು ಕಲೀರಿ ಆಂಟಿ’ ಒಂದೇ ಉಸಿರಿನಲ್ಲಿ ಹೇಳಿದಳು.

ನಾನು ಪೆಚ್ಚಾಗಿ ಕಣ್‌ಕಣ್ ಬಿಟ್ಟೆ!

ADVERTISEMENT

‘ಹೌದ್ರಿ ಮತ್ತ... ಕೇಸರೀಕರಣದ ಗದ್ದಲದಾಗ ಸೆಕ್ಯುಲರ್ ಪಕ್ಷ ನೆಲ ಕಚ್ಚಿದ್ವು ಅಂತ ನೀವ್ ಬುದ್ಧಿಜೀವಿಗೋಳು ಗೋಳಾಡೂದು ಬಿಡ್ರಿ. ಗೋವಾದಾಗ ಹತ್ತು ಮಂದಿ ‘ಕೈ’ ಬಿಟ್ಟು ಕಮಲ ಹಿಡಿದಾರ, ಪಶ್ಚಿಮ ಬಂಗಾಳದಾಗ ಟಿಎಂಸಿ, ಕಾಂಗ್ರೆಸ್, ಸಿಪಿಎಂನಿಂದ ನೂರಕ್ಕೂ ಮ್ಯಾಗ ಶಾಸಕರು ಬಲಕ್ಕ ಹೊಳ್ಯಾರ. ಅಂದ್ರ ಹೀಂಗ ಎಡಕ್ಕಿದ್ದ ಮಂದಿ ನಮ್ಮ ಕಡಿ ಬಂದಾರಂದ್ರ, ಮತ್ ನಮ್ಮದೇ ಖರೇ ಸೆಕ್ಯುಲರ್ ಪಕ್ಷ ಆತಿಲ್ರಿ. ಅಂದ್ಹಂಗ ಸುದ್ದಿ ಕೇಳೀರಿಲ್ಲೋ... ನಮ್ಮ ಖ್ಯಾತ ಜ್ಞಾನಪೀಠಿ
ಗಳೊಬ್ಬರು ಎಬಿವಿಪಿ ವಿಭೂತಿ ಹಚಗೊಂಡಾರ. ಕೈಯಾಗ ಮಹಮೂದ್ ಗಾವಾನ್ ನಾಟಕ, ಎದಿಯಾಗ ಕಮಲ... ಅವ್ರು ಖರೇ ಎಷ್ಟ್ ಸೆಕ್ಯುಲರ್ ಅದಾರ‍್ರಿ ನೋಡ್ರಿ’ ಎಂದು ಹೆಮ್ಮೆಯಿಂದ ಉಲಿದಳು.

‘ಆದ್ರೂ ಹಿಂಗ್ ಮಾಡೂದು ಪ್ರಜಾತಂತ್ರದಾಗ ತಪ್ ಅಲ್ಲೇನವ್ವ’ ಅಳುಕುತ್ತಲೇ ಕೇಳಿದೆ.

‘ಆಂಟಿರಿ... ನೀವ್ ಇನ್ನಾ ಕೃತಯುಗದಾಗ ಅದೀರೇನ್ರಿ. ಇದ್ ಕಲಿಯುಗ ರೀ... ಧರ್ಮ ಒಂದ್ ಕಾಲಿನ ಮ್ಯಾಗ ನಿಂತದರೀ. ಅಂತಾದ್ರಾಗ ಅತೃಪ್ತಾತ್ಮಗಳು ಒಂದ್ ಕಾಲಿನ್ ಮ್ಯಾಗ ನಿಂತು ಎತ್ತಾಗ ಹಾರಬಕು ಅಂತ ನೋಡೂದ್ರಾಗ ತಪ್ಪೇನದರೀ...’ ಜಬರಿಸಿದಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.