ADVERTISEMENT

ಕಂಕಣ ಗ್ರಹಣ!

ಬಿ.ಎನ್.ಮಲ್ಲೇಶ್
Published 26 ಡಿಸೆಂಬರ್ 2019, 20:15 IST
Last Updated 26 ಡಿಸೆಂಬರ್ 2019, 20:15 IST
   

ಹರಟೆಕಟ್ಟೆಯಲ್ಲಿ ಗ್ರಹಣದ ಬಗ್ಗೆ ಚರ್ಚೆ ಜೋರು ನಡೆದಿತ್ತು. ‘ಸೊರಕ್’ ಅಂತ ಬಿಸಿ ಚಾ ಹೀರಿದ ಗುಡ್ಡೆ ‘ಏನ್ರಲೆ ಎಲ್ರು ಗ್ರಹಣ ನೋಡಿದ್ರಾ?’ ಎಂದ.

‘ನೋಡಿದ್ವಿ ಬಿಡಲೆ, ಅದಿರ‍್ಲಿ ಈ ಕಂಕಣ ಗ್ರಹಣ ಅಂದ್ರೇನು?’ ದುಬ್ಬೀರ ಕೇಳಿದ.

‘ನಿನ್ತೆಲಿ, ಕಂಕಣ ಗ್ರಹಣ ಅಂದ್ರೆ ಗೊತ್ತಿಲ್ವ? ಮದುವೆ ಟೈಮಲ್ಲಿ ಹಿಡಿಯೋ ಹೆಂಡ್ತಿ ಅನ್ನೋ ಗ್ರಹಣ. ಯಾವ ಗ್ರಹಣ ಬಿಟ್ರೂ ಈ ಗ್ರಹಣ ಬಿಡಲ್ವಂತೆ’ ಗುಡ್ಡೆ ನಕ್ಕ.

ADVERTISEMENT

‘ಆಹಾ... ಅನುಭವದ ಮಾತು’ ಎಂದ ಪರ್ಮೇಶಿ, ‘ನಿನ್ನೆ ಗ್ರಹಣ ನೋಡಿದ ಮೇಲೆ ಯಾಕೋ ನನ್ ಗ್ರಾಚಾರನೇ ಸರಿ ಇಲ್ಲಪ್ಪ. ನನ್ ಹೆಂಡ್ತಿ ಕಡೆಯ ಆರು ಗ್ರಹಗಳು ರಾತ್ರಿ ನಮ್ಮನೆಗೆ ಬಂದು ಒಕ್ಕರಿಸಿಕೊಂಡ್ವು. ಮೋಕ್ಷ ಯಾವಾಗೋ ಗೊತ್ತಿಲ್ಲ’ ಎಂದ.

‘ಸುಧಾರಿಸ್ಕಾ ಮಗಾ, ಹದಿನೈದು ಎಮ್ಮೆಲ್ಲೆಗಳ ಮಂತ್ರಿ ಸ್ಥಾನಕ್ಕೆ ಗ್ರಹಣ ಹಿಡ್ಕಂಡು ಎಷ್ಟು ದಿನ ಆತು. ಅವರು ಸುಧಾರಿಸ್ಕಂಡಿಲ್ವ? ಇವತ್ತಿಲ್ಲ ನಾಳೆ ಗ್ರಹಣ ಬಿಡುತ್ತೆ ಸುಧಾರಿಸ್ಕಾ’ ದುಬ್ಬೀರ ಸಮಾಧಾನಪಡಿಸಿದ.

‘ಅಲ್ಲ, ಗ್ರಹಣದ ಎಫೆಕ್ಟು ಮೊದ್ಲೂ ಇರುತ್ತಂತೆ ಹೌದಾ? ಅವತ್ತು ನಮೋ ಸಾಹೇಬ್ರು ಮುಗ್ಗರಿಸಿದ್ದಕ್ಕೂ ಅವರ ಪಕ್ಷ ಜಾರ್ಖಂಡ್‍ನಲ್ಲಿ ಜಾರಿ ಬಿದ್ದಿದ್ದಕ್ಕೂ ಗ್ರಹಣನೇ ಕಾರಣ ಅಂತೆ’ ಗುಡ್ಡೆ ಪ್ರಶ್ನಿಸಿದ.

‘ಇರಬೋದೇನಪ್ಪ, ದೊಡ್ ದೊಡ್ಡೋರಿಗೆ ಗ್ರಹಣದ ಎಫೆಕ್ಟ್ ಜಾಸ್ತಿ ಇರುತ್ತಂತೆ...’
ಪರ್ಮೇಶಿ ಮಾತು ಮುಗಿಸೋ ಅಷ್ಟರಲ್ಲಿ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡ ತೆಪರೇಸಿ ಹರಟೆಕಟ್ಟೆ ಪ್ರವೇಶಿಸಿದ.

‘ಏನೋ ಇದು ತೆಪರೇಸಿ ಕೈಗೆ ಬ್ಯಾಂಡೇಜು? ಎಲ್ಲಾದ್ರು ಬಿದ್ಯಾ ಅಥವಾ ಇದೂ ಗ್ರಹಣದ ಎಫೆಕ್ಟಾ?’ ಗುಡ್ಡೆ ಕಿಚಾಯಿಸಿದ.

ತಕ್ಷಣ ದುಬ್ಬೀರ ‘ಇದು ಗ್ರಹಣದ ಎಫೆಕ್ಟಲ್ಲ ಕಣ್ರಲೆ, ಗೃಹಿಣಿ ಎಫೆಕ್ಟು. ಗ್ರಹಣದ ಹೊತ್ತಲ್ಲಿ ಕತ್ತಲಾತು ಅಂತ ಬೆಳಬೆಳಗ್ಗೇನೇ ಗುಂಡು ಹಾಕಿದ್ದಕ್ಕೆ ತೆಪರೇಸಿ ಹೆಂಡ್ತಿ ಹಿಂಗೆ ಕೈ ಮುರಿಯೋ ಹಂಗೆ ಬಾರಿಸಿದ್ಲಂತೆ ಪಾಪ...’ ಎಂದಾಗ ಎಲ್ಲರೂ ಗೊಳ್ಳೆಂದು ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.