ADVERTISEMENT

ತಿಂಗಳಿಗೊಂದು ಖಾತೆ!

ಬಿ.ಎನ್.ಮಲ್ಲೇಶ್
Published 6 ಫೆಬ್ರುವರಿ 2020, 19:30 IST
Last Updated 6 ಫೆಬ್ರುವರಿ 2020, 19:30 IST
   

ರಾಜಾಹುಲಿ ಕನಸಿನಲ್ಲಿ ವೃದ್ಧರೊಬ್ಬರು ಕೋಲೂರಿಕೊಂಡು ಬಂದು ‘ನಮಸ್ಕಾರ, ಹೇಗಿದ್ದೀರಿ’ ಎಂದು ಪ್ರಶ್ನಿಸಿದರು.

‘ನೋಡಿದ್ರೆ ಗೊತ್ತಾಗಲ್ವ? ತಲೆ ಕೆಡಿಸ್ಕಂಡ್ ಕೂತಿದೀನಿ. ಹದಿನೈದು ದಿನ ಆಯ್ತು ನಿದ್ದೆ ಮಾಡಿ...’ ರಾಜಾಹುಲಿ ರೇಗಿದರು.

‘ಸಮಾಧಾನ ಮಾಡ್ಕೊಳ್ಳಿ. ಸಂಪುಟ ಸಂಕಟ ನಿವಾರಣೆ ಆಯ್ತಲ್ಲ? ಮತ್ತೇನು?’

ADVERTISEMENT

‘ಎಲ್ಲಿ ನಿವಾರಣೆ ಆಗಿದೆ? ಮೂಲ ಬಿಜೆಪಿಗರು ಕೊತಕೊತ ಅಂತಿದಾರೆ. ಜೊತೆಗೆ ಖಾತೆ ಕ್ಯಾತೆ ಬೇರೆ ಶುರುವಾಗಿದೆ. ನನಗೆ ನೆಮ್ಮದಿ ಬೇಡ್ವಾ?’

‘ಬೇಕು, ಆದ್ರೆ ಅದು ಹೊರಗಡೆ ಸಿಗೋದಲ್ಲ. ನೀವು ಕಂಡುಕೋಬೇಕು. ಎಲ್ಲ ಭಾರ ವರಿಷ್ಠರ ಮೇಲೆ ಹಾಕಿ. ಇಲ್ಲ, ತಿಂಗಳಿಗೊಂದ್ಸಲ ಖಾತೆ ಚೇಂಜ್ ಮಾಡಿ. ಎಲ್ಲರೂ ಎಲ್ಲ ಖಾತೆನೂ ಅನುಭವಿಸಲಿ...’

‘ಏನು? ತಿಂಗಳಿಗೊಂದ್ಸಲ ಖಾತೆ ಚೇಂಜ್ ಮಾಡೋಕಾಗುತ್ತಾ? ನೀವೊಳ್ಳೆ...’

‘ಇಲ್ಲಾಂದ್ರೆ ಮೂರು ತಿಂಗಳಿಗೊಂದ್ಸಲ ಮಂತ್ರಿಗಳನ್ನೇ ಚೇಂಜ್ ಮಾಡಿ. ಮೂಲ, ವಲಸಿಗ ಎಲ್ಲರೂ ಮಂತ್ರಿಗಳಾಗ್ಲಿ. ನಿಮಗೆ ತಲೆನೋವು ತಪ್ಪುತ್ತೆ...’

‘ಯಾಕೆ? ಆರು ತಿಂಗಳಿಗೊಂದ್ಸಲ ಮುಖ್ಯಮಂತ್ರಿನೇ ಚೇಂಜ್ ಮಾಡಿದ್ರೆ ಹೆಂಗೆ?’

‘ಅದೂ ಆಗಬಹುದು. ಎಲ್ಲವನ್ನೂ ವರಿಷ್ಠರೇ ನಿರ್ಧರಿಸೋದ್ರಿಂದ ಮುಖ್ಯಮಂತ್ರಿ ಯಾರಾದ್ರೇನು? ಮುಖ್ಯಮಂತ್ರಿ ಸ್ಥಾನ ಸಿಗುತ್ತೆ ಅಂದ್ರೆ ನಿಮ್ಮ ಮಾನಸಪುತ್ರ ಹೊನ್ನಾಳಿ ಸ್ಟಾರ್ ಕೂಡ ಒಂದು ಕೈ ನೋಡೇ ಬಿಡ್ತಾರೇನೋ...’

‘ಅವರ ಹೆಸರೆತ್ತಬೇಡಿ ನನ್ನ ಮುಂದೆ. ಏನ್ ತಮಾಷೆ ಮಾಡ್ತಿದೀರಾ? ಅಷ್ಟಕ್ಕೂ ಯಾರು ನೀವು? ಏನಾಗಬೇಕು ನಿಮಗೆ?’ ರಾಜಾಹುಲಿ ಕಿಡಿಕಿಡಿಯಾದರು.

‘ಕೋಪ ಬೇಡ, ನನ್ನ ಬಗ್ಗೆ ನಿಮ್ಮ ಪಕ್ಷದ ನಾಯಕರೊಬ್ಬರು ಬಾಯಿಗೆ ಬಂದ ಹಾಗೆ ಮಾತಾಡ್ತಿದಾರೆ. ಅವರನ್ನ ಹದ್ದುಬಸ್ತಿನಲ್ಲಿಡಿ ಅಂತ ಹೇಳೋಕೆ ಬಂದಿದ್ದೆ. ಪರವಾಗಿಲ್ಲ, ನಾನು ಬರ್ತೀನಿ...’ ವೃದ್ಧರು ಹೊರಡಲು ಮುಂದಾದರು.

‘ನಿಲ್ಲಿ, ಯಾರು ನೀವು? ನಿಮ್ಮ ಹೆಸರೇನು?’

‘ನಾನು ಮೋಹನದಾಸ ಕರಮಚಂದ ಗಾಂಧಿ. ಎಲ್ರೂ ನನ್ನ ಮಹಾತ್ಮ ಗಾಂಧಿ ಅಂತ ಕರೀತಾರೆ!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.