
ಅಖಿಲ ಭಾರತ ಬೀದಿನಾಯಿ ಸಮ್ಮೇಳನದಲ್ಲಿ ಊರೊಟ್ಟಿನ ನಾಯಿಗಳೆಲ್ಲಾ ಭಾಗಿಯಾಗಿದ್ದೋ. ನಾಯಿಸಂಘದ ಅಧ್ಯಕ್ಷರು ಜೋರಾಗಿ ಶುನಕನಾದ ಮಾಡಿ ತಮ್ಮ ಮಾತು ಸುರು ಮಾಡಿದರು.
‘ನನ್ನ ಪ್ರೀತಿಯ ನಾಯ–ಕರುಗಳೇ. ಜನ ಬೀದಿನಾಯಿ ಕಂಡೇಟಿಗೆ ಕಚ್ತವೆ ಅಂತ ಎದ್ದುಬಿದ್ದು ಓಡೋಯ್ತಾವ್ರೆ. ಹಿಂದೆ ನಾವು ರಾತ್ರೆಲ್ಲಾ ಎಚ್ಚರಾಗಿ ಊರು ಕಾಯ್ತಿದ್ದೋ. ಯಂಗುಸ್ರು ಕುರೋ ಕುರೋ ಅಂತ ಕರೆದೇಟಿಗೆ ಓಡೋಗಿ ಎಲ್ಲಾ ಸುದ್ದ ಮಾಡಿ ಬತ್ತಿದ್ದೋ. ನಮ್ಮ ನಿಯತ್ತಿಗೀಗ ಬೆಲೆಯೇ ಇಲ್ಲ. ಕಂತ್ರಿನಾಯಿ ಅಂತ ಕಲ್ಲು ಹೊಡೀತಾರೆ’ ಅಂತ ವಿಷಯ ಮಂಡನೆ ಮಾಡಿದರು.
‘ನೀವಂದದ್ದು ದಿಟ. ಮನೆಗಳಲ್ಲಿರೋ ಜಾತಿನಾಯಿಗಳಿಗೆ ಕಂಬ ಕಂಡೇಟಿಗೆ ಕಾಲೆತ್ತಿ ವಂದ ಮಾಡಬಕು ಅನ್ನೋ ಕಾಮನ್‌ಸೆನ್ಸ್ ಇಲ್ಲ ಕನ್ರಿ’ ಎಂದು ಮುದಿನಾಯಿ ನೊಂದುಕೊಂಡು ಹೇಳಿತು.
‘ನಮ್ಗೆ ಉಣ್ಣಕ್ಕೆ ಅನ್ನಿಲ್ಲ, ಕಿಸಿಯಕೆ ಕ್ಯಾಮೆ ಇಲ್ಲ. ಪಾರಿನ್ ನಾಯಿಗಳಿಗೆ ಪೆಡಿಗ್ರಿ ಹಾಕ್ತಾವ್ರೆ ಅನ್ನೋ ಸಿಟ್ಟಿಗೆ ಜನವ ಕಂಡಾಬಟ್ಟೆ ಕಚ್ತಿರವು ನಮ್ಮ ನೇಟಿವ್ ಜೆನ್–ಜೀ ರೆಬೆಲ್ ಯುವನಾಯಿಗಳು’ ಅಂತು ಎಜುಕೇಟೆಡ್ ನಾಯಿ.
‘ನಮ್ಮುನ್ನ ಏರಿಯಾದ ಸೆಕ್ಯೂರಿಟಿಯಾಗಿ ಅಪಾಯಿಂಟ್ ಮಾಡಿ ಸಂಬಳ ಕೊಡಬಕು. ನಮ್ಮನ್ನೂ ಪರಪ್ಪನ ಅಗ್ರಾರದೇಲಿ ಇಟ್ಟು ಕೊಲೆಗಡುಕರಿಗೆ, ಉಗ್ರರಿಗೆ ಕೊಟ್ಟಂಗೆ ಮೊಬೈಲು, ಫ್ರೀ ಇಂಟರ‍್ನೆಟ್ಟು, ವಾರಕ್ಕೆ ಮೂರು ದಿನ ಬಿರಿಯಾನಿ ಸೇರಿದಂತೆ ಎಲ್ಲ ಸೌಲತ್ತು ಕೊಡಬಕು’ ಅಂತು ಸುದ್ದಿಜೀವಿನಾಯಿ.
‘ಆಯ್ತು. ಶುನಕಭಾಗ್ಯ, ಶುನಕಶಕ್ತಿ, ಶುನಕಲಕ್ಷ್ಮಿ, ಶುನಕಜ್ಯೋತಿ, ಶುನಕನಿಧಿ ಗ್ಯಾರಂಟಿ ಯೋಜನೆಗಳನ್ನ ನಮಗೂ ಜಾರಿಗೆ ತರಬೇಕು. ನಮಗೂ ನಾಯಿನಿಗಮ ಮಾಡಬಕು ಅನ್ನೋದು ಸಂಘದ ತೀರ್ಮಾನ’ ಅಂದ ಅಧ್ಯಕ್ಷರು ನಿರ್ಣಯಗಳನ್ನ ಪ್ರಕಟಿಸಿದರು.
‘ನಾವೆಲ್ಲಾ ಡಿಸೆಂಬರ್ ಎಂಟಕ್ಕೆ ಸುವರ್ಣ ವಿಧಾನಸೌಧದ ಮುಂದೆ ದೊಡ್ಡ ಸಂಖ್ಯೆಯಲ್ಲಿ ಸೇರಿ ನಮ್ಮ ಬೇಡಿಕೆಗಳಿಗಾಗಿ ನಾಯಿಯುತವಾಗಿ ಹೋರಾಟ ಮಾಡಮು’ ಅಂದಾಗ ಎಲ್ಲಾ ನಾಯಿಗಳೂ ಒಟ್ಟಾಗಿ ಖುಷಿಯಿಂದ ಊಳಿಟ್ಟವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.