ಚುರುಮುರಿ.
ಟೀವಿ ಪತ್ರಕರ್ತ ತೆಪರೇಸಿಯನ್ನು ಆಸ್ಪತ್ರೆಗೆ ಸೇರ್ಸಿದ್ದಾರೆ ಅನ್ನೋ ಸುದ್ದಿ ಹರಟೆಕಟ್ಟೆಯಲ್ಲಿ ಬ್ರೇಕ್ ಆಗಿ ಸದಸ್ಯರೆಲ್ಲ ಒಂದೇ ಉಸಿರಿಗೆ ಆಸ್ಪತ್ರೆಗೆ ಧಾವಿಸಿದರು.
ವಾರ್ಡಲ್ಲಿ ತೆಪರೇಸಿ ಸ್ಥಿತಿ ನೋಡಿ ಗುಡ್ಡೆ, ದುಬ್ಬೀರ, ಪಮ್ಮಿ, ಮಂಜಮ್ಮಗೆಲ್ಲ ಗಾಬರಿಯಾಯಿತು. ‘ಯಾರೋ ಯಾರೋ ಗೀಚಿ ಹೋದ...’ ಹಾಡಿನಂತೆ ಎತ್ತೆತ್ತಲೋ ನೋಡುತ್ತ, ತಲೆ ಕೆರೆದುಕೊಳ್ಳುತ್ತ ಕೂತಿದ್ದ ತೆಪರೇಸಿ.
‘ಇಲ್ಲಿಗೆ ಬರೋ ಮೊದ್ಲು ತಲೆ, ಕೂದಲು ಎಲ್ಲ ಕಿತ್ಕಂಡು, ಪರಪರ ಕೆರ್ಕಂಡು ಬಂದಿದ್ರು. ಬಟ್ಟೆ ಹರ್ಕಳ್ಳೋದು ಒಂದು ಬಾಕಿ ಇತ್ತು’ ಎಂದರು ಡಾಕ್ಟರು.
‘ಯಾಕೆ? ಅಂಥದ್ದೇನಾತು?’ ಗುಡ್ಡೆ ಕೇಳಿದ.
‘ಇವ್ರು ಟೀವಿ ರಿಪೋಟ್ರಲ್ವಾ, ಬುರುಡೆ ಕೇಸ್ ರಿಪೋರ್ಟ್ ಮಾಡ್ತಿದ್ರಂತೆ. ಕೇಸಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬಂದ್ರೆ ಇನ್ನೇನಾಗುತ್ತೆ? ಸುಳ್ಳು, ಸತ್ಯ ಒಂದೂ ತಿಳೀದೆ ಗರಗರ ತಲೆ ತಿರುಗಿ, ದಿಕ್ ತಪ್ಪಿ ಬಿದ್ದಿದ್ರಂತೆ’ ಡಾಕ್ಟರು ವಿವರಿಸಿದರು.
‘ಅಯ್ಯೋ ರಾಮ, ಹಂಗೆಲ್ಲ ಆಗುತ್ತಾ?’ ಮಂಜಮ್ಮ ಕೇಳಿದಳು.
‘ಮತ್ತೆ ಆಗದೇ ಇರುತ್ತಾ? ಇಲ್ಲಿಗೆ ಬಂದಾಗ
ಬುರುಡೆ, ಷಡ್ಯಂತ್ರ, ಗ್ಯಾಂಗು ಅಂತೆಲ್ಲ ಏನೇನೋ ಬಡಬಡಿಸ್ತಿದ್ರು...’
‘ಎಲ್ಲ ಸುಳ್ಳು’ ಎಂದು ಒಮ್ಮೆಲೇ ಕೂಗಿದ ತೆಪರೇಸಿ. ನಂತರ ನಿಧಾನಕ್ಕೆ ಪಮ್ಮಿ ಮುಖ ನೋಡುತ್ತ ‘ಹಾ... ಇವಳೇ ನನ್ನ ಮಗಳು...’ ಎಂದ.
‘ಲೇಯ್, ಇವಳು ನಿನ್ನೆಂಡ್ತಿ ಕಣೋ... ಪಮ್ಮಿ’ ಎಂದಳು ಮಂಜಮ್ಮ. ಹೆಂಡ್ತಿ ಅಂತಿದ್ದಂಗೆ ತೆಪರೇಸಿಗೆ ಶಾಕ್! ಮೂರ್ಛೆ ಹೋದ.
‘ಇದಕ್ಕೆ ಬುರುಡೆ ಅಂಡ್ ಬುರುಡೆ ಸಿಂಡ್ರೋಮ್ ಅಂತಾರೆ...’ ಡಾಕ್ಟರು ಹೇಳಿದರು.
‘ಬುರುಡೆ ಅಂಡ್ ಬುರುಡೆನಾ? ಅಲ್ಲಿ ಸಿಕ್ಕಿದ್ದು
ಒಂದೇ ಬುರುಡೆ ಅಲ್ವಾ? ಇನ್ನೊಂದು ಯಾವುದು?’ ಗುಡ್ಡೆ ಕೇಳಿದ.
‘ಒಂದು ಒರಿಜಿನಲ್ ಬುರುಡೆ, ಇನ್ನೊಂದು ಈ ತೆಪರೇಸಿ ಟಿವೀಲಿ ಬಿಡ್ತಿದ್ದ ಬುರುಡೆ...’ ಎಂದರು ಡಾಕ್ಟರು. ಯಾರೂ ಪಿಟಿಕ್ಕನ್ನಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.