ADVERTISEMENT

ವಿದ್ಯಾಗಮ ವಿರಾಮ

ಮಣ್ಣೆ ರಾಜು
Published 13 ಅಕ್ಟೋಬರ್ 2020, 19:31 IST
Last Updated 13 ಅಕ್ಟೋಬರ್ 2020, 19:31 IST
ಚುರುಮುರಿ
ಚುರುಮುರಿ   

ಬೇಸಿಗೆ ರಜೆಗೆ ಬಂದ ಮಕ್ಕಳು ದಸರಾ ರಜೆ ಬಂದರೂ ಸ್ಕೂಲ್ ಕಡೆ ಹೋಗಲಾಗುತ್ತಿಲ್ಲ. ಹಿಂಗಾದ್ರೆ ಮಕ್ಕಳ ಭವಿಷ್ಯ ಹೆಂಗೆ ಅಂತ ಚಟ್ನಿಹಳ್ಳಿ ಪೇರೆಂಟ್ಸ್ ಕಳವಳಗೊಂಡರು.

‘ವಯಸ್ಸಿಗೆ ತಕ್ಕಂತೆ ಮಕ್ಕಳು ವಿದ್ಯೆ ಕಲಿಯಬೇಕು, ಇಲ್ಲದಿದ್ದರೆ ಕಲಿಯಬಾರದ್ದನ್ನು ಕಲಿತುಬಿಡ್ತಾರೆ’ ಸಿದ್ಧನಂಜ ಆತಂಕಗೊಂಡ.

‘ಶಿಕ್ಷಕರು ಮಾಸ್ಕ್ ಹಾಕ್ಕೊಂಡು ಊರಿಗೆ ಬಂದು ಅರಳಿಕಟ್ಟೆ, ಜಗಲಿಕಟ್ಟೆ ಮೇಲೆ ಮಕ್ಕಳಿಗೆ ಪಾಠ ಹೇಳ್ತಿದ್ದರು. ಸರ್ಕಾರ ಈಗ ಆ ವಿದ್ಯಾಗಮಕ್ಕೂ ರಜೆ ಕೊಟ್ಟುಬಿಟ್ಟಿದೆ’ ಎಂದ ತಿಮ್ಮಣ್ಣ.

ADVERTISEMENT

‘ಕೊರೊನಾ ಕಾಟ ಮುಗಿಯುವವರೆಗೂ ಶಾಲೆಯ ಬೆಲ್ ಹೊಡೆಯುವುದಿಲ್ಲ, ಮಕ್ಕಳ ಆರೋಗ್ಯ, ಶಿಕ್ಷಣದ ಹೊಣೆ ಪೋಷಕರದ್ದು ಅಂತ ಸರ್ಕಾರ ಹೇಳಿಬಿಟ್ಟಿದೆ’- ಕೆಂಚಪ್ಪ.

‘ಮಕ್ಕಳ ವಿಚಾರಕ್ಕೆ ಸರ್ಕಾರ ಕೈ ಚೆಲ್ಲಬಾರದು. ಶಿಕ್ಷಕರೇ ಮಕ್ಕಳ ಮನೆಗೆ ಬಂದು ಹೋಂ ಟ್ಯೂಷನ್ ಹೇಳುವ ವ್ಯವಸ್ಥೆ ಮಾಡಲಿ’- ಶಿವರಾಮ.

‘ಅಲ್ವೋಲೇ, ಒಬ್ಬ ವಿದ್ಯಾರ್ಥಿಗೆ ಒಬ್ಬೊಬ್ಬ ಟೀಚರ್ ಅಂತ ಮಾಡಿದ್ರೆ ಅಷ್ಟೊಂದು ಮೇಷ್ಟ್ರುಗಳಿಗೆ ಸಂಬಳ ಕೊಡಲು ಸರ್ಕಾರದಲ್ಲಿ ದುಡ್ಡಿಲ್ಲ’- ಶಿವನಂಜ.

‘ಮನೆಯನ್ನೇ ಪಾಠಶಾಲೆ ಮಾಡಿ, ಅಪ್ಪ, ಅಮ್ಮನಿಗೆ ಟೀಚರ್ ಟ್ರೈನಿಂಗ್ ಕೊಟ್ಟು, ಸಂಬಳ ಕೊಟ್ಟು, ಅವರವರ ಮಕ್ಕಳಿಗೆ ಅವರೇ ಪಾಠ ಹೇಳಲು ಸರ್ಕಾರ ಕ್ರಮ ತಗೊಳ್ಳಬೇಕು’ ಎಂದ ರಂಗಪ್ಪ.

‘ಹೌದು, ಬಿಸಿಯೂಟ, ಯೂನಿಫಾರಂ, ಸೈಕಲ್‍ನ ದುಡ್ಡನ್ನು ಪೇರೆಂಟ್ಸ್ ಸಂಬಳಕ್ಕೆ ಬಳಸಿಕೊಳ್ಳಲಿ’ ಕಿಟ್ಟಪ್ಪನ ಸಲಹೆ.

‘ಎಲ್ಲಾ ಮನೆಯಲ್ಲೇ ಆಗಿಬಿಟ್ಟರೆ ಸ್ಕೂಲ್ ಬಿಲ್ಡಿಂಗ್ ಪಾಳು ಬೀಳುತ್ತದಲ್ಲ...’

‘ಹಬ್ಬ-ಹರಿದಿನ ಬಂದಂಗೆ ಆಗಾಗ ಚುನಾವಣೆಗಳು ಬರುತ್ತವೆ. ಸ್ಕೂಲ್‍ಗಳಿಗೆ ಬಣ್ಣ ಬಳಿಸಿ ಮತಕೇಂದ್ರ ಅಂತ ಬೋರ್ಡ್ ಹಾಕಿದರಾಯ್ತು’ ಎಂದ ತಿಮ್ಮಣ್ಣ.

ಅಷ್ಟೊತ್ತಿಗೆ, ಬೈ ಎಲೆಕ್ಷನ್ ಕ್ಯಾಂಡಿಡೇಟು ಪ್ರಚಾರಕ್ಕೆ ಬಂದ ವಿಚಾರ ಗೊತ್ತಾಗಿ ಎಲ್ಲರೂ ಅತ್ತ ಓಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.