ADVERTISEMENT

ಯಾರಲ್ಲಿ, ಮಂತ್ರಿಗಳೆಲ್ಲಿ?

ಬಿ.ಎನ್.ಮಲ್ಲೇಶ್
Published 13 ಆಗಸ್ಟ್ 2019, 18:49 IST
Last Updated 13 ಆಗಸ್ಟ್ 2019, 18:49 IST
   

ಮಹಾರಾಜರು ಆಸ್ಥಾನ ಪ್ರವೇಶಿಸುತ್ತಿದ್ದಂತೆ ಬಹುಪರಾಕ್‍ಗಳು ಮೊಳಗಿದವು. ‘ರಾಜಾಧಿರಾಜ, ರಾಜ ಮಾರ್ತಾಂಡ, ಏಕ ಚಕ್ರಾಧೀಶ್ವರಾ, ಬೋಪರಾಕ್, ಬೋಪರಾಕ್...’ ಮಹಾರಾಜರು ಸಿಂಹಾಸನ ಏರಿ ಆಸ್ಥಾನವನ್ನೊಮ್ಮೆ ದಿಟ್ಟಿಸಿದರು. ಮರುಕ್ಷಣ ಚಪ್ಪಾಳೆ ತಟ್ಟಿ ಪ್ರಶ್ನಿಸಿದರು. ‘ಯಾರಲ್ಲಿ, ಎಲ್ಲಿ ಮಹಾಮಂತ್ರಿಗಳು, ಮಂತ್ರಿಗಳು, ಯಾರೂ ಕಾಣಿಸುತ್ತಿಲ್ಲ?’

‘ಕ್ಷಮಿಸಿ ಮಹಾಪ್ರಭು, ನೀವಿನ್ನೂ ಮಂತ್ರಿಗಳನ್ನು ನೇಮಕ ಮಾಡಿಲ್ಲ. ಮಂತ್ರಿ
ಮಂಡಲದಲ್ಲಿ ನೀವೊಬ್ಬರೇ ಇದ್ದೀರಿ...’

‘ಓ, ಮರೆತಿದ್ದೆ... ರಾಜ್ಯ ಸುಭಿಕ್ಷವಾಗಿ ಇದೆಯೇ ಎಂದು ವಿಚಾರಿಸುವುದು ನಮ್ಮ ಪದ್ಧತಿ. ಉತ್ತರಿಸಲು ಮಂತ್ರಿಗಳೇ ಇಲ್ಲದಂತಾಗಿದೆಯಲ್ಲ’.

ADVERTISEMENT

‘ಪ್ರವಾಹದಿಂದ ಅರ್ಧ ರಾಜ್ಯವೇ ಮುಳುಗಿದೆ ಮಹಾಸ್ವಾಮಿ. ತಾವು ರಾಜ್ಯ ಸಂಚಾರಕ್ಕೆ ಹೋಗಿದ್ದ ರಿಂದ ಮರೆತಿರಬಹುದು. ಮಂತ್ರಿಗಳಿಲ್ಲದಿದ್ದರೇನಂತೆ ಭಾವೀ ಮಂತ್ರಿಗಳಿದ್ದಾರೆ, ಕರೆಸಲೇ?’

‘ಭಾವೀ ಮಂತ್ರಿಗಳೆ? ಎಲ್ಲಿದ್ದಾರೆ ಅವರು?’

‘ಕೆಲವರು ನಿಮ್ಮ ಮನೆ ಬಾಗಿಲಲ್ಲಿ ಒಂಟಿ ಕಾಲಲ್ಲಿ ನಿಂತಿದ್ದಾರೆ. ಮತ್ತೆ ಕೆಲವರು ಕೋರ್ಟ್‌ ಬಾಗಿಲ ಬಳಿ ಚಾಪೆ ಹಾಸಿಕೊಂಡು ಕೂತಿದ್ದಾರೆ. ಯಾರನ್ನ ಕರೆಸಲಿ?’

‘ಯಾರೂ ಬೇಡ, ಸದ್ಯ ಅವರಿಂದ ಪ್ರಯೋಜನವಿಲ್ಲ. ಬೇರೆ ಏನಾದರೂ ಸಲಹೆ ಇದ್ದರೆ ಹೇಳಿ...’

‘ಭಾವೀ ಮಂತ್ರಿಗಳು ಬೇಡವೆಂದರೆ ಮೈತ್ರಿ ಸರ್ಕಾರದ ಮಾಜಿ ಮಂತ್ರಿಗಳಿದ್ದಾರೆ ಕರೆಸಲೇ?’

ಮಹಾರಾಜರು ಒಮ್ಮೆಗೇ ಕಿಡಿಕಿಡಿಯಾದರು. ‘ಏನೆಂದಿರಿ? ಭೋರ್ಗರೆದು ನುಗ್ಗುವ ಪ್ರವಾಹ
ವನ್ನು ಪ್ರತಿರೋಧಿಸಬಲ್ಲೆ, ಬರಸಿಡಿಲ ಬಡಿತವನ್ನು ಬರಿಯ ಮುಷ್ಟಿಯಲಿ ಹಿಡಿಯಬಲ್ಲೆ. ಪ್ರವಾಹದಲ್ಲಿ ಮುಳುಗಿರುವ ಊರು, ಕೇರಿ, ಮನೆ, ಮಠಗಳನ್ನು ಒಬ್ಬನೇ ನಿಂತು ಕಟ್ಟಿಸಬಲ್ಲೆ. ಆದರೆ... ಮೈತ್ರಿ ಸರ್ಕಾರದ ಮಾಜಿಗಳನ್ನು ಮಾತ್ರ ಸಹಿಸಲಾರೆ...’ ಎಂದು ಆರ್ಭಟಿಸಿದರು.

ಇತ್ತ ಮನೆಯಲ್ಲಿ ಮಲಗಿದ್ದ ತೆಪರೇಸಿಗೆ ಮೈಮೇಲೆ ಮಹಾಮಳೆ ಸುರಿದಂತಾಗಿ ಥಟ್ಟನೆ ಎಚ್ಚರವಾಯಿತು. ಹೆಂಡತಿ ಪಮ್ಮಿ ಅವನ ಮೈಮೇಲೆ ಕೊಡ ನೀರು ಸುರಿದು ‘ಎದ್ದೇಳ್ರಿ ಮೇಲೆ... ರಾತ್ರಿ ಕುಡ್ಕಂಡ್ ಬಂದು ಕನಸಲ್ಲಿ ಬಬ್ರುವಾಹನನ ಡೈಲಾಗ್ ಹೊಡೀತೀರಾ? ಗಂಟೆ ಹತ್ತಾದ್ರೂ ಬಿದ್ಕಂಡಿದೀರ...’ ಎಂದು ಆರ್ಭಟಿ
ಸಿದಳು. ಕಣ್ಣುಬಿಟ್ಟ ತೆಪರೇಸಿ ಕಕ್ಕಾಬಿಕ್ಕಿಯಾದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.