ADVERTISEMENT

ಯಾರಿಗೆ ಬೇಕು ಈ ಪದವಿ?

ಗುಡಿಹಳ್ಳಿ ನಾಗರಾಜ
Published 18 ಡಿಸೆಂಬರ್ 2018, 19:36 IST
Last Updated 18 ಡಿಸೆಂಬರ್ 2018, 19:36 IST
   

ರಾಜ್ಯ ಕವನ ಅಕಾಡೆಮಿ ಅಧ್ಯಕ್ಷರು ಕವಿಗಳಿಗೆ ಪ್ರಶಸ್ತಿಗಳನ್ನು ಪ್ರಕಟಿಸಿದ್ದರು. ನಿಯೋಗವೊಂದು ಅಧ್ಯಕ್ಷರ ಬಳಿ ಬಂದು ‘ನಮ್ಮ ಜಿಲ್ಲೆಗೆ ಪ್ರಶಸ್ತಿಯನ್ನೇ ಕೊಟ್ಟಿಲ್ಲ...’ ಎಂದು ಆಕ್ಷೇಪಿಸಿತು.

‘ಹಾಗೆಲ್ಲ ಜಿಲ್ಲೆಗೊಂದು ಪ್ರಶಸ್ತಿ ಅಂತ ಕೊಡೋಕಾಗಲ್ಲ ರೀ... ಪ್ರಶಸ್ತಿ ಇರೋದೇ ಇಪ್ಪತ್ತು, ಜಿಲ್ಲೆಗಳಿರೋದು ಮೂವತ್ತು. ಜಿಲ್ಲೆ
ಗೊಂದು ಎಲ್ಲಿ ಸಾಧ್ಯ? ಪ್ರತಿಭೆ ಮತ್ತು ಸಾಧನೆಗೆ ಮಾತ್ರ ಪ್ರಶಸ್ತಿ ಕೊಡೋದು...’ ಎಂದು ಗುಟುರಿದರು. ಬಂದವರೆಲ್ಲ ನಿರಾಶೆಯಿಂದ ನಿರ್ಗಮಿಸಿದರು. ಮತ್ತೊಂದು ಗುಂಪು ಅಧ್ಯಕ್ಷರ ಬಳಿ ಬಂದು, ‘ನೀವು ನಮ್ಮ ಜಿಲ್ಲೆ ಕವಿಗೆ ಪ್ರಶಸ್ತಿ ಅಂತ ಪ್ರಕಟಿಸಿದ್ದೀರಿ. ಅವರು ನಮ್ಮ ಜಿಲ್ಲೆಯವರೇ ಅಲ್ಲ...’ ಎಂದು ಅಲವತ್ತುಕೊಂಡಿತು.

‘ಪ್ರಶಸ್ತಿ ಪಡೆದ ಕವಿ ಈಗ ಎಲ್ಲೇ ಇರಬಹುದು. ಆದರೆ ಅವರು ನಿಮ್ಮ ಜಿಲ್ಲೆಯ ನಾಮರಹಿತ ಅನ್ನೋ ಹಳ್ಳೀಲಿ ಜನಿಸಿದ್ದಾರೆ ರೀ... ಹಾಗಾಗಿ ನಿಮ್ಮ ಜಿಲ್ಲೆ ಹೆಸರು ಪ್ರಕಟಿಸಿದ್ದೀವಿ...’ ಎಂದಾಗ ಬಂದ ದಾರಿಗೆ ಸುಂಕವಿಲ್ಲ ಎಂದು ಗುಂಪು ಚದುರಿತು.

ADVERTISEMENT

ಮತ್ತೊಂದು ನಿಯೋಗ ಅಧ್ಯಕ್ಷರ ಬಳಿ ಧಾವಿಸಿ ಬಂದು ‘ನಮ್ಮ ಜಿಲ್ಲೆಯಲ್ಲಿ ಜನಿಸಿದ ಯಾವುದೇ ವ್ಯಕ್ತಿಗೆ ನೀವು ಪ್ರಶಸ್ತಿ ನೀಡಿಲ್ಲ...’ ಎಂದು ಆಕ್ಷೇಪ ಎತ್ತಿತು. ‘ಆ ಮಹಾಸ್ವಾಮಿ ಅನ್ನೋರಿಗೆ ಪ್ರಶಸ್ತಿ ಕೊಟ್ಟೀವಲ್ಲ. ಅವರು ಕವಿಗೋಷ್ಠಿ, ಕವಿತಾ ಸಂಕಲನಗಳ ಪ್ರಕಟಣೆಯಿಂದ ವಿಶ್ವಪ್ರಸಿದ್ಧಿ ಹೊಂದಿರೋದು ನಿಮ್ಮ ಜಿಲ್ಲೆಯಿಂದ. ಅವರು ಎಲ್ಲೇ ಜನಿಸಿರಲಿ, ನಿಮ್ಮ ಜಿಲ್ಲೆಗೆ ಪ್ರಶಸ್ತಿ ಕೊಟ್ಟ ಹಾಗಲ್ಲವೇನರಿ?’

ಒಡನೆಯೇ ಒಳನುಗ್ಗಿದ ಗುಂಪೊಂದು ‘ನಿಮ್ಮ ಅಕಾಡೆಮಿ ಸದಸ್ಯರಲ್ಲೇ ಒಬ್ಬ ಹೆಸರಾಂತ ಕವಿ ಇದ್ದಾರೆ. ಅವರನ್ನ ಹಾಗೂ ಅವರ ಕವಿತಾ ಸಂಕಲನವನ್ನ ಹಾಡಿ ಹೊಗಳಿ ಒಂದೇ ಕವಿತಾ ಸಂಕಲನ ಪ್ರಕಟಿಸಿದವನಿಗೆ ಪ್ರಶಸ್ತಿ ನೀಡಿದ್ದೀರಿ. ಕೇಳಿದರೆ ಬಂದವರಿಗೆಲ್ಲಾ ಒಂದೊಂದು ಕಾರಣ ಹೇಳ್ತೀರಿ...’ ಎಂದು ಬಲವಾಗಿ ಆಕ್ಷೇಪಿಸಿದಾಗ, ‘ಯಾರಿಗೆ ಬೇಕು ಹೋಗ್ರಿ ರೀ... ಈ ಅಧ್ಯಕ್ಷ ಪದವಿ. ನನಗೂ ಆಗಲೇ ಎಂಬತ್ತಾಯಿತು. ನನ್ನ ಅವಧಿ ಇನ್ನೊಂದು ತಿಂಗಳಿದೆ. ಆದ್ರೆ ನಾಳೆನೇ ನಾನು ರಾಜೀನಾಮೆ ಬಿಸಾಕ್ತೀನಿ...’ ಎಂದು ಅಧ್ಯಕ್ಷರು ಚೇಂಬರ್‌ನಿಂದ ಭರ‍್ರನೇ ಎದ್ದು ಹೋದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.