ADVERTISEMENT

ವೆಚ್ಚ ಕಡಿವಾಣ ಕ್ರಮ ಕಟ್ಟುನಿಟ್ಟಾಗಿ ಜಾರಿಯಾಗಲಿ

ಅನಗತ್ಯವಾದ ವೆಚ್ಚ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 8:51 IST
Last Updated 7 ಜೂನ್ 2018, 8:51 IST
   

ಅನಗತ್ಯವಾದ ವೆಚ್ಚಗಳಿಗೆ ಕಡಿವಾಣ ಹಾಕುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಲು ಹೊರಟಿರುವುದು ಸಂದರ್ಭೋಚಿತ ಕ್ರಮ. ಯಾವುದೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮಂತ್ರಿಗಳ ಬೇಡಿಕೆಗಳು ಬಹಳಷ್ಟಿರುತ್ತವೆ. ಅಧಿಕೃತ ಕಚೇರಿ, ಬಂಗಲೆಗಳ ನವೀಕರಣ, ಹೊಸ ಕಾರು, ಪೀಠೋಪಕರಣ, ನವನವೀನ ಟಿ.ವಿ., ಫ್ರಿಜ್‌ಗಳ ಖರೀದಿ... ಹೀಗೆ ಅಗತ್ಯಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ತಮಗೆ ಸಿಕ್ಕಿರುವ ಕಚೇರಿ, ಮನೆ ಯಾವಾಗ ನವೀಕರಣವಾಗಿತ್ತು ಎಂದು ಯಾರೂ ಚಿಂತಿಸುವುದಿಲ್ಲ.

ಹಾಗೆಯೇ, ಕಾರು ಖರೀದಿಯಾದುದು ಯಾವಾಗ, ಎಷ್ಟು ಕಿ.ಮೀ. ಓಡಿದೆ ಎಂದು ನೋಡುವ ಗೊಡವೆಗೂ ಹೋಗುವುದಿಲ್ಲ. ಅಧಿಕಾರ ಸಿಕ್ಕ ತಕ್ಷಣ ಹಳೆಯದನ್ನು ಬದಲಾಯಿಸುವ ಗೀಳು ನಮ್ಮ ಮಂತ್ರಿಗಳದ್ದು. ವಾಸ್ತು ಹೆಸರಿನಲ್ಲಿ ಕಚೇರಿ, ಬಂಗಲೆಯೊಳಗಿರುವ ಸೌಲಭ್ಯಗಳನ್ನು ಕೆಡವಿ, ಹೊಸದಾಗಿ ಕಟ್ಟುವ ಚಾಳಿ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ತಮ್ಮ ಸಚಿವಸಂಪುಟ ವಿಸ್ತರಣೆಗೆ ಮುನ್ನವೇ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ತೀರ್ಮಾನ ಮಾಡಿದ್ದಾರೆ. ಇದರಿಂದ ಒಂದಷ್ಟು ಹಣ ಉಳಿತಾಯವಾಗಿ, ಒಳ್ಳೆಯ ಉದ್ದೇಶಗಳಿಗೆ ಬಳಕೆಯಾಗಬಹುದು ಎಂದು ನಿರೀಕ್ಷಿಸೋಣ.

ರೈತರ ಸಾಲಮನ್ನಾ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಈಗಾಗಲೇ ನೀಡಿರುವುದರಿಂದ ಅದಕ್ಕೆ ಸಂಪನ್ಮೂಲ ಹೊಂದಿಸಲು ವೆಚ್ಚ ಕಡಿತ ಕ್ರಮ ಕೊಂಚ ನೆರವಾಗಬಹುದು. ಕೃಷಿ ಸಾಲ ಮನ್ನಾದಿಂದ ಬೊಕ್ಕಸಕ್ಕೆ ₹ 53 ಸಾವಿರ ಕೋಟಿ ಹೊರೆ ಬೀಳಲಿದೆ. ಇದೇನೂ ಸಣ್ಣ ಮೊತ್ತವಲ್ಲ. ಇಷ್ಟೊಂದು ಹಣವನ್ನು ಹೊಂದಿಸುವುದು ಸುಲಭವಲ್ಲ. ಹೀಗಾಗಿ ಆಡಳಿತದಲ್ಲಿ ಮಿತವ್ಯಯ ಕ್ರಮ ಅನಿವಾರ್ಯ. ಈ ಬಗ್ಗೆ ಮುಖ್ಯಮಂತ್ರಿಯವರು ನೀಡಿರುವ ಹೇಳಿಕೆಯಷ್ಟೇ ಸಾಲದು. ವಿಳಂಬ ಮಾಡದೆ ವೆಚ್ಚ ಕಡಿತ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಬೇಕು. ಯಾವ್ಯಾವ ವೆಚ್ಚಗಳಿಗೆ ಕಡಿವಾಣ ಹಾಕಬೇಕು ಎಂಬುದನ್ನು ನಿರ್ದಿಷ್ಟಪಡಿಸಬೇಕು. ಏಕೆಂದರೆ, ವಿಧಾನ ಪರಿಷತ್‌ ಸಚಿವಾಲಯ ಈಗಾಗಲೇ 10 ಹೊಸ ಕಾರುಗಳನ್ನು ಖರೀದಿಸಿದೆ. ‘ಹಳೆಯದಾಗಿದ್ದ 16 ಕಾರುಗಳನ್ನು ಮಾರಾಟ ಮಾಡಿ ಹೊಸ ಕಾರುಗಳನ್ನು ಖರೀದಿಸಲಾಗಿದೆ. ಇದಕ್ಕೆ ಮಾರ್ಚ್‌ ತಿಂಗಳಲ್ಲೇ ಒಪ್ಪಿಗೆ ಪಡೆಯಲಾಗಿದೆ’ ಎಂದು ಹೇಳಲಾಗುತ್ತಿದೆ. ಸರ್ಕಾರ ಜನಪ್ರತಿನಿಧಿಗಳ ವೆಚ್ಚಗಳಿಗೆ ಕಡಿವಾಣ ಹಾಕಿದರೆ ಸಾಲದು, ಅಧಿಕಾರಿಗಳ ದುಂದು ವೆಚ್ಚಗಳನ್ನೂ ನಿರ್ಬಂಧಿಸಬೇಕು. ಹಿಂದೆ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರವು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ನಿರ್ಧಾರವನ್ನು 2013ರ ಸೆಪ್ಟೆಂಬರ್‌ನಲ್ಲಿ ಪ್ರಕಟಿಸಿತ್ತು.

ADVERTISEMENT

ಆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವೂ ಅದನ್ನು ಮುಂದುವರಿಸಿತು. ಪಂಚತಾರಾ ಹೋಟೆಲ್‌ಗಳಲ್ಲಿ ಸಭೆ, ಸಮಾರಂಭ ಏರ್ಪಡಿಸುವುದನ್ನು ನಿಷೇಧಿಸಿತ್ತು. ಅಧಿಕಾರಿಗಳು ವಿಮಾನಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸದಂತೆ ತಾಕೀತು ಮಾಡಿತ್ತು. 2009ರಲ್ಲಿ ರಾಜ್ಯದ ಉತ್ತರ ಕರ್ನಾಟಕ ಪ್ರವಾಹಪೀಡಿತವಾಗಿದ್ದಾಗ ಆಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿದ್ದರು. ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯ ಆಶಯ. ಆದರೆ, ಇದು ಬರೀ ಬಾಯಿಮಾತಿಗೆ ಸೀಮಿತವಾಗದೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಜನಸಾಮಾನ್ಯರ ತೆರಿಗೆ ಹಣವನ್ನು ಸರಿಯಾಗಿ ವಿನಿಯೋಗಿಸಬೇಕು ಎನ್ನುವ ಕನಿಷ್ಠಪ್ರಜ್ಞೆ ಸರ್ಕಾರ ನಡೆಸುವವರಿಗೆ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.