ADVERTISEMENT

ಚರ್ಚೆ | ತ್ವರಿತ ನ್ಯಾಯದಾನಕ್ಕಾಗಿ ನೇಮಕಾತಿ ಅನಿವಾರ್ಯ-ನ್ಯಾ. ಕೃಷ್ಣ S ದೀಕ್ಷಿತ್‌

ಹೈಕೋರ್ಟ್‌ಗಳ ನ್ಯಾಯಮೂರ್ತಿ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿಗಳ ನೇಮಕ ನಿರ್ಣಯ ಸರಿಯೇ?

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 23:35 IST
Last Updated 7 ಫೆಬ್ರುವರಿ 2025, 23:35 IST
   
ತ್ವರಿತ ನ್ಯಾಯದಾನವನ್ನು, ನಮ್ಮ ಸಂವಿಧಾನದ ಮೂಲ ಸ್ವರೂಪದ ಲಕ್ಷಣವಾಗಿ ಅಂದರೆ, basic feature ಆಗಿ ಪರಿಗಣಿಸಬೇಕಾಗಿದೆ. ಹಾಗಾದರೆ, ಇದಕ್ಕೆಲ್ಲಾ ಏನು ಮಾಡಬೇಕೆಂಬ ಪ್ರಶ್ನೆ ಕರಗುವುದೇ ಇಲ್ಲ. ಈ ದಿಸೆಯಲ್ಲಿ ಡಾ.ಉಪೇಂದ್ರ ಬಕ್ಷಿ, ಎನ್‌.ಆರ್‌.ಮಾಧವ ಮೆನನ್‌, ತೆಹಮತನ್‌ ಆರ್‌.ಅಂಧ್ಯಾರುಜಿನ, ಪ್ರೊ.ಪಿ.ಕೆ.ತ್ರಿಪಾಠಿ ಅವರಂತಹ ಕಾನೂನು ಪ್ರಭೃತಿಗಳು ಕೊಟ್ಟ ಸಲಹೆಗಳು ಅನೂಚಾನವಾಗಿ ಜಾರಿಯಾಗಿಲ್ಲ. ಜಾರಿ ಮಾಡುವ ಇಚ್ಛಾಶಕ್ತಿ ಸಾಂಸ್ಥಿಕವಾಗಿ ಕ್ಷೀಣಿಸುತ್ತಿದೆ. ಇದು ವಿಷಾದನೀಯ

ಶೀಘ್ರ ನ್ಯಾಯದಾನ ಶಿಷ್ಟ ಸಮಾಜದ ಸಾತ್ವಿಕ ಅಭಿಲಾಷೆ. ನ್ಯಾಯಿಕ ಪ್ರಕ್ರಿಯೆ ವಿಳಂಬವಾಗಬಾರದು ಎಂಬ ಕೂಗು ಇತಿಹಾಸದುದ್ದಕ್ಕೂ ಎಲ್ಲ ರಾಷ್ಟ್ರಗಳಲ್ಲಿ ಇದ್ದದ್ದೇ.

ಕ್ರಿ.ಶ 1215ರ ಮೊದಲನೇ ಮ್ಯಾಗ್ನಕಾರ್ಟದ ಒಂದು ಉಕ್ತಿ ಹೀಗಿದೆ:– ‘ನಾವು ಯಾರಿಗೂ ನ್ಯಾಯದಾನವನ್ನು ನಿರಾಕರಿಸುವುದಿಲ್ಲ, ಮಾರುವುದಿಲ್ಲ ಮತ್ತು ವಿಳಂಬಿಸುವುದೂ ಇಲ್ಲ’. ಇದು 800 ವರ್ಷಕ್ಕೂ ಹಿಂದೆ ಪ್ರತಿಷ್ಠಿತ ಜಹಗೀರುದಾರರು ಅಂದಿನ ಇಂಗ್ಲಿಷ್‌ ರಾಜನಿಗೆ ಹೆದರಿಸಿ ಪಡೆದ ವಾಗ್ದಾನ. ಅಂದು ಕೂಡಾ ನ್ಯಾಯ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿತ್ತು, ಜನರು ಬೇಸತ್ತಿದ್ದರು ಎಂಬುದಕ್ಕೆ ಇದು ಮುಕ್ತ ಸಾಕ್ಷಿ. ತದನಂತರದಲ್ಲಿ Royal Commission on Legal Reforms ಆಯೋಗಗಳೂ ನ್ಯಾಯಿಕ ಪ್ರಕ್ರಿಯೆಯಲ್ಲಿ ಉಂಟಾಗುವ ವಿಳಂಬದ ಬಗ್ಗೆ ಬೆಳಕು ಚೆಲ್ಲಿವೆ.

ಫ್ರೆಂಚ್‌ ರಾಜಕೀಯ ವ್ಯವಸ್ಥೆಯಲ್ಲಿ ನ್ಯಾಯದಾನ ವಿಳಂಬಿತವಾಗದಂತೆ ನೆಪೋಲಿಯನ್‌ ಅನೇಕ ನಿಯಮಗಳನ್ನು ರೂಪಿಸಿದ್ದ. ಇದೇ ತರಹ ಯುರೋಪಿನ ಇತರ ದೇಶಗಳೂ ಕಾನೂನು ಮಾಡಿದ್ದವು. ವಿಳಂಬಿತ ಹಾಗೂ ಸಂಕೀರ್ಣ ನ್ಯಾಯ ಪ್ರಕ್ರಿಯೆ ಅಮೆರಿಕ ಮತ್ತು ಆಸ್ಟ್ರೇಲಿಯಾದಂತಹ ರಾಷ್ಟ್ರಗಳಿಗೂ ತಲೆನೋವಾಗಿತ್ತು. ಆಸ್ಟ್ರೇಲಿಯ ಸುಪ್ರೀಂ ಕೋರ್ಟ್‌ನ ನ್ಯಾ.ಮೈಕೆಲ್‌ ಕರ್ಬಿ ಕರ್ನಾಟಕ ಹೈಕೋರ್ಟ್‌ಗೆ ಬಂದಿದ್ದರು. ನಾನು ಅವರಿಗೆ, ‘ನಿಮ್ಮ ನ್ಯಾಯ ವ್ಯವಸ್ಥೆಯಲ್ಲಿ ಶೀಘ್ರ ನ್ಯಾಯದಾನವಾಗುತ್ತದೆಯೇ’ ಎಂದು ಕೇಳಿದ್ದೆ. ಅದಕ್ಕವರು, ‘ಅದು ಹೇಗೆ ಸಾಧ್ಯ’ ಎಂದು ನಗು ಚೆಲ್ಲಿದ್ದರು.

ADVERTISEMENT

ಅಮೆರಿಕದ ಸುಪ್ರೀಂ ಕೋರ್ಟ್‌ ಬಾರ್ಕರ್‌ ವಿಂಗೋ ಎಂಬ ಪ್ರಕರಣದಲ್ಲಿ, ‘ಶೀಘ್ರ ನ್ಯಾಯ ಸಾಂವಿಧಾನಿಕ ಹಕ್ಕು’ ಎಂದು ಘೋಷಿಸಿತು. ಈ ಹಿನ್ನೆಲೆಯಲ್ಲೇ Speedy Trail Act-1974 ಜಾರಿಯಾಗುವ ಮೂಲಕ ಅಪರಾಧಿಕ ಪ್ರಕರಣಗಳಲ್ಲಿ ಶೀಘ್ರ ವಿಲೇವಾರಿಗೆ ಅನುವಾಯಿತು. ಡೊನಾಲ್ಡ್‌ ಟ್ರಂಪ್‌ ಅವರ ನಿಕಟಪೂರ್ವ ಚುನಾವಣಾ ಮೊಕದ್ದಮೆಯಲ್ಲಿ ಉಂಟಾದ ವಿಳಂಬಕ್ಕೆ ಅಲ್ಲಿಯ ವಕೀಲರ ಸಂಘಗಳು ಮುನಿಸಿಕೊಂಡಿದ್ದವು. 

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2024ರ ಸೆಪ್ಟೆಂಬರ್‌ನಲ್ಲಿ ಬಹಿರಂಗವಾಗಿ ನೀಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಎಲ್ಲಾ ಹೈಕೋರ್ಟ್‌ಗಳಲ್ಲಿ ಒಟ್ಟಾಗಿ 30 ವರ್ಷಗಳಿಂದ ಬಾಕಿ ಇರುವ ಮೊಕದ್ದಮೆಗಳ ಸಂಖ್ಯೆ 62 ಸಾವಿರ. ಜಮಾವಣೆಗೊಂಡು ಬಾಕಿ ಇರುವ ಮೊಕದ್ದಮೆಗಳ ಸಂಖ್ಯೆ 60 ಲಕ್ಷ. ಅವುಗಳಲ್ಲಿ ಸುಮಾರು 42.5 ಲಕ್ಷ ದಿವಾಣಿ (ಸಿವಿಲ್‌) ಸ್ವರೂಪದವು. ಉಳಿದವು ಅಪರಾಧಿಕ. ‘ನ್ಯಾಷನಲ್‌ ಜ್ಯುಡಿಷಿಯಲ್‌ ಗ್ರಿಡ್‌‘ ನೀಡಿರುವ ಅಂಕಿ ಅಂಶಗಳ ಪ್ರಕಾರ, 20 ವರ್ಷಗಳಿಗಿಂತ ಹಳೆಯ ಪ್ರಕರಣಗಳ ಸಂಖ್ಯೆ 2.45 ಲಕ್ಷ. ಹೈಕೋರ್ಟ್‌ಗಳಲ್ಲಿ 1,114 ಮಂಜೂರಾದ ನ್ಯಾಯಮೂರ್ತಿಗಳ ಹುದ್ದೆಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ 327. ಅಂದರೆ ಶೇ 34ರಷ್ಟು ನ್ಯಾಯಮೂರ್ತಿಗಳು ನೇಮಕಗೊಂಡಿಲ್ಲ. ‘ನ್ಯಾಯಾಲಯಗಳಲ್ಲಿ ನ್ಯಾಯ ಪಡೆಯಲು ಬ್ರಹ್ಮನಷ್ಟು ಆಯುಸ್ಸು ಮತ್ತು ಕುಬೇರನಷ್ಟು ಐಶ್ವರ್ಯ ಬೇಕು’ ಎಂಬ ಮಾತಿದೆ. ಇದು ನ್ಯಾಯಾಲಯಗಳ ಕ್ಷಮತಾಹೀನತೆಗೆ ಹಿಡಿವ ಕನ್ನಡಿ. 

ವಿಳಂಬದ ಸಮಸ್ಯೆಯನ್ನು ತೊಡೆದುಹಾಕಲು ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಆಯೋಗಗಳು ಕೆಲವು ಶಿಫಾರಸುಗಳನ್ನು ಮಾಡಿವೆ. ನ್ಯಾಯಮೂರ್ತಿಗಳ ತ್ವರಿತ ನೇಮಕಾತಿಗಾಗಿ ಸುಪ್ರೀಂ ಕೋರ್ಟ್‌ ಒಂದು ಡಜನ್‌ ತೀರ್ಪುಗಳನ್ನು ನೀಡಿದೆ. ಹಲವು ಸಾಂವಿಧಾನಿಕ ಸಂಸ್ಥೆಗಳು ಜೊತೆಗೂಡಿ ಈ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗುವುದರಿಂದ ವಿಳಂಬವನ್ನು ತಗ್ಗಿಸುವುದು ಕಷ್ಟಸಾಧ್ಯ. ನ್ಯಾಯಾಲಯಗಳು ಸಮಾಜದ ನಿರೀಕ್ಷೆಗೆ ಸಮನಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದ್ದರಿಂದ ಪರ್ಯಾಯ ನ್ಯಾಯಿಕ ಸಂಸ್ಥೆಗಳಾದ ಸಂಧಾನ ಮತ್ತು ಮಧ್ಯಸ್ಥಿಕೆ ಕಡೆ ಕಕ್ಷಿದಾರರು ದೌಡಾಯಿಸುತ್ತಿದ್ದಾರೆ. ಆದರೆ, ಆ ಸೌಲಭ್ಯ ಅಪರಾಧಿಕ ಪ್ರಕರಣಗಳಿಗೆ ಪೂರ್ಣವಾಗಿ ಲಭ್ಯವಿಲ್ಲ. ಹಾಗಾಗಿ, ವಿಚಾರಣಾಧೀನ ಆರೋಪಿಗಳು ಹಾಗೂ ಅಪೀಲು ಮಾಡಿರುವ ಕೈದಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಜೈಲು ಪಾಲಾಗಿದ್ದಾರೆ. ತ್ವರಿತ ನ್ಯಾಯದ ನಿರೀಕ್ಷೆ ಅವರ ಪಾಲಿಗೆ ಮರೀಚಿಕೆಯಾಗಿದೆ. ಇದು ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಲ್ಲ. 

ನಮ್ಮ ಸಂವಿಧಾನದ 224ಎ ವಿಧಿಯಡಿ ನಿವೃತ್ತ ನ್ಯಾಯಮೂರ್ತಿಗಳನ್ನು ಪುನರ್ ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಈ ವಿಧಿ 1963ರ ತಿದ್ದುಪಡಿ. ಈ ತಿದ್ದುಪಡಿಯಾಗಿ 62 ವರ್ಷಗಳೇ ಕಳೆದಿವೆ. ಅದೇ ರೀತಿ, 124 (3)ನೇ ವಿಧಿಯ ಅಡಿ ಸುಪ್ರೀಂ ಕೋರ್ಟ್‌ಗೆ ‘ಜ್ಯೂರಿಸ್ಟ್‌’ ಅನ್ನು ನೇರವಾಗಿ ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಈತನಕ ಈ ಎರಡೂ ವಿಧಿಗಳನ್ವಯ ಯಾವೊಬ್ಬರನ್ನೂ ನೇಮಕ ಮಾಡಿಲ್ಲ. ಈ ಹಿಂದೆ ಪ್ರೊ.ಉಪೇಂದ್ರ ಭಕ್ಷಿ ಹಾಗೂ ಡಾ.ನಾಗೇಂದ್ರ ಸಿಂಗ್‌ ಅವರನ್ನು ಜ್ಯೂರಿಸ್ಟ್‌ಗಳಾಗಿ ನೇಮಿಸುವ ಬಗ್ಗೆ ಸ್ವಲ್ಪ ಚರ್ಚೆಯಾಗಿತ್ತು. ಆದರೆ, ಅದು ಫಲ ಕೊಡಲಿಲ್ಲ. ಇದನ್ನು ನೋಡಿದರೆ, ಭರತಭೂಮಿಯಲ್ಲಿ ಅಂತಹ ಯಾವ ಅಭ್ಯರ್ಥಿಯೂ ಇಲ್ಲವೇ ಎಂಬ ಅಚ್ಚರಿ ಕಾಡುತ್ತದೆ.

ತ್ವರಿತ ನ್ಯಾಯದಾನವನ್ನು, ನಮ್ಮ ಸಂವಿಧಾನದ ಮೂಲ ಸ್ವರೂಪದ ಲಕ್ಷಣವಾಗಿ ಅಂದರೆ, basic feature  ಆಗಿ ಪರಿಗಣಿಸಬೇಕಾಗಿದೆ. ಹಾಗಾದರೆ, ಇದಕ್ಕೆಲ್ಲಾ ಏನು ಮಾಡಬೇಕೆಂಬ ಪ್ರಶ್ನೆ ಕರಗುವುದೇ ಇಲ್ಲ. ಈ ದಿಸೆಯಲ್ಲಿ ಡಾ.ಉಪೇಂದ್ರ ಭಕ್ಷಿ, ಎನ್‌.ಆರ್‌.ಮಾಧವ ಮೆನನ್‌, ತೆಹಮತನ್‌ ಆರ್‌.ಅಂಧ್ಯಾರುಜಿನ, ಪ್ರೊ.ಪಿ.ಕೆ.ತ್ರಿಪಾಠಿ ಅವರಂತಹ ಕಾನೂನು ಪ್ರಭೃತಿಗಳು ಕೊಟ್ಟ ಸಲಹೆಗಳು ಅನೂಚಾನವಾಗಿ ಜಾರಿಯಾಗಿಲ್ಲ. ಜಾರಿ ಮಾಡುವ ಇಚ್ಛಾಶಕ್ತಿ ಸಾಂಸ್ಥಿಕವಾಗಿ ಕ್ಷೀಣಿಸುತ್ತಿದೆ. ಇದು ವಿಷಾದನೀಯ. 

ಈ ಹಿನ್ನೆಲೆಯಲ್ಲೇ ಇತ್ತೀಚಿನ ಲೋಕ ಪ್ರಹರಿ ಮೊಕದ್ದಮೆಯಲ್ಲಿ ಆದ ನಿರ್ಣಯ ನಿಜಕ್ಕೂ ಸ್ವಾಗತಾರ್ಹ. ನಿವೃತ್ತ ನ್ಯಾಯಮೂರ್ತಿಗಳನ್ನು ಅಪರಾಧಿಕ ಪ್ರಕರಣಗಳ ವಿಲೇವಾರಿಗಾಗಿ ನೇಮಿಸುವುದು ಅನಿವಾರ್ಯ. ಇಂತಹ ನೇಮಕಾತಿ ಮಾಡುವಾಗ ಅಭ್ಯರ್ಥಿಯ ಪೂರ್ವಾಪರ, ಸಾಮರ್ಥ್ಯ ಹಾಗೂ ಆರೋಗ್ಯವನ್ನು ಗಮನಿಸುವುದು ಸಂಸ್ಥೆಗೆ ಹಿತಕರ. ಈ ಪ್ರಕ್ರಿಯೆ ಹಲವು ಷರತ್ತುಗಳಿಗೆ ಒಳಪಟ್ಟು ಪ್ರಾಯೋಗಿಕವಾಗಿಯಾದರೂ ಶೀಘ್ರ ಕಾರ್ಯಗತ ಆಗಬೇಕು. ಕಾಲಕ್ರಮೇಣ ಅದರ ಸಾಧಕ –ಬಾಧಕಗಳನ್ನು ಪರಿಗಣಿಸಲು ಆಗುತ್ತದೆ.

ಲೇಖಕರು: ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.