ADVERTISEMENT

ಚರ್ಚೆ | ಹುದ್ದೆಗಳ ಭರ್ತಿ: ನೇರ ನೇಮಕವೇ ಸಮಂಜಸ- ಅಶೋಕ ಹಾರನಹಳ್ಳಿ

ಹೈಕೋರ್ಟ್‌ಗಳ ನ್ಯಾಯಮೂರ್ತಿ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿಗಳ ನೇಮಕ ನಿರ್ಣಯ ಸರಿಯೇ?

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 23:40 IST
Last Updated 7 ಫೆಬ್ರುವರಿ 2025, 23:40 IST
   
ಹಂಗಾಮಿ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದರಿಂದ ನೇರ ನೇಮಕಾತಿ ವಿಳಂಬವಾಗುತ್ತದೆ. ಹಂಗಾಮಿ ನ್ಯಾಯಮೂರ್ತಿಗಳು ಕೇವಲ ವಿಭಾಗೀಯ ಪೀಠದಲ್ಲಿ ಕಾರ್ಯನಿರ್ವಹಿಸುವುದರಿಂದ ಮೊಕದ್ದಮೆಗಳನ್ನು ಶೀಘ್ರಗತಿಯಲ್ಲಿ ತೀರ್ಮಾನಿಸಲು ಸಾಧ್ಯವಿಲ್ಲ. ಒಬ್ಬ ಹಿರಿಯ ನ್ಯಾಯಮೂರ್ತಿ ನಿವೃತ್ತಿ ಹೊಂದಿದ ನಂತರ ಕಿರಿಯ ನ್ಯಾಯಮೂರ್ತಿಗಳ ಜೊತೆ ಕುಳಿತು ವಿಭಾಗೀಯ ಪೀಠದಲ್ಲಿ ಮೊಕದ್ದಮೆಗಳನ್ನು ತೀರ್ಮಾನ ಮಾಡಲು ಮುಂದೆ ಬರುವರೇ ಎನ್ನುವುದು ಪ್ರಶ್ನಾರ್ಹ

ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ, ಸಮಾಜದ ಅಭಿವೃದ್ಧಿಗೆ ಅತ್ಯಂತ ಅವಶ್ಯಕವಾದ ಸಂಸ್ಥೆಗಳು. ಶಾಸಕಾಂಗ ರಚನೆ ಮಾಡಿದ ಕಾನೂನುಗಳ ವಿಮರ್ಶೆಯ ಅಧಿಕಾರ ನ್ಯಾಯಾಂಗಕ್ಕಿದೆ. ಸಂವಿಧಾನದ ಆಶಯ ಪೂರೈಸುವಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಮಹತ್ವದ ಪಾತ್ರ ವಹಿಸುತ್ತವೆ. ಈ ನ್ಯಾಯಾಲಯಗಳು ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರ ವ್ಯಾಪ್ತಿಯ ನಿಷ್ಕರ್ಷೆ ಮಾಡಬಹುದು.

ಸಾರ್ವಜನಿಕರಿಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ಜನರು ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಳ್ಳದ ರೀತಿಯಲ್ಲಿ ನ್ಯಾಯ ವಿತರಣೆ ಮಾಡುವ ಅವಶ್ಯಕತೆ ಇದೆ. ನ್ಯಾಯಾಲಯಗಳಲ್ಲಿ ದಿನೇ ದಿನೇ ದಾಖಲಾಗುವ ಮೊಕದ್ದಮೆಗಳ ಸಂಖ್ಯೆ ಹೆಚ್ಚುತ್ತಿದೆ. ನ್ಯಾಯಾಲಯಗಳಲ್ಲಿ ತೀರ್ಮಾನವಾಗುವ ಮೊಕದ್ದಮೆಗಳ ಸಂಖ್ಯೆಗಿಂತ ದಾಖಲಾಗುವ ಸಂಖ್ಯೆಗಳೇ ಹೆಚ್ಚಿದೆ. ಕಳೆದ ವರ್ಷದ ಕಾನೂನು ಇಲಾಖೆಯ ಅಂಕಿಅಂಶಗಳ ಪ್ರಕಾರ, ವಿವಿಧ ನ್ಯಾಯಾಲಯಗಳಲ್ಲಿ ಸುಮಾರು ಐದು ಕೋಟಿಗೊ ಹೆಚ್ಚು ಮೊಕದ್ದಮೆಗಳು ಬಾಕಿ ಇವೆ. ಜನವರಿ 2024ರ ‘ನ್ಯೂಯಾರ್ಕ್ ಟೈಮ್ಸ್’ ವರದಿಯ ಪ್ರಕಾರ, ಈ 5 ಕೋಟಿ ಮೊಕದ್ದಮೆಗಳು ಈಗಿನ ಸರಾಸರಿಯ ವೇಗದಲ್ಲೇ ತೀರ್ಮಾನವಾದರೆ ಈಗ ಬಾಕಿ ಉಳಿದಿರುವ ಪ್ರಕರಣಗಳನ್ನು ವಿಲೇವಾರಿ ಮಾಡಲು 300 ವರ್ಷಗಳು ಬೇಕಾಗುತ್ತವೆ.

ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ತೀರ್ಮಾನ ಮಾಡಲು ಪರಿಹಾರ ಕಂಡು ಹಿಡಿಯಬೇಕಾಗಿದೆ. ಅದಕ್ಕಾಗಿ ಬಾಕಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕಾಗಿದೆ. 2025ರ ಫೆಬ್ರುವರಿ 1ರಂದು ಕೇಂದ್ರ ಕಾನೂನು ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಎಲ್ಲಾ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ತೆರವಾಗಿರುವ ನ್ಯಾಯಮೂರ್ತಿಗಳ ಸಂಖ್ಯೆ 327 ಇದೆ. ಅಲಹಾಬಾದ್ (ಪ್ರಯಾಗರಾಜ್‌) ಹೈಕೋರ್ಟ್‌ನಲ್ಲಿ 81 ಮತ್ತು ಕರ್ನಾಟಕದ ಹೈಕೋರ್ಟ್‌ನಲ್ಲಿ 13 ಹುದ್ದೆಗಳು ಖಾಲಿ ಇವೆ.

ADVERTISEMENT

ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿ ಮಾಡದೆ ಇರುವುದೇ ನ್ಯಾಯ ವಿತರಣೆ ವಿಳಂಬಕ್ಕೆ ಮುಖ್ಯ ಕಾರಣ ಎಂದರೆ ತಪ್ಪಲ್ಲ. ಆದ್ದರಿಂದ, ಈ ನೇಮಕಾತಿಗಳು ತ್ವರಿತಗತಿಯಲ್ಲಿ ಆಗಬೇಕು. ಆಗಮಾತ್ರವೇ ಮೊಕದ್ದಮೆಗಳನ್ನು ಶೀಘ್ರವಾಗಿ ತೀರ್ಮಾನ ಮಾಡಲು ಅನುಕೂಲವಾಗುತ್ತದೆ. ಸಂವಿಧಾನದ 224 (ಎ) ವಿಧಿಯ ಪ್ರಕಾರ ಹಂಗಾಮಿ ನ್ಯಾಯಮೂರ್ತಿಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶವೇನೋ ಇದೆ. ಆದರೆ, ಈ ಹಂಗಾಮಿ ನ್ಯಾಯಮೂರ್ತಿಗಳು ಉಳಿದ ಹಾಲಿ ನ್ಯಾಯಮೂರ್ತಿಗಳ ಹಾಗೆ ಅಧಿಕಾರ ಹೊಂದಿದ್ದರೂ ಹೈಕೋರ್ಟ್‌ನ ನ್ಯಾಯಮೂರ್ತಿಗಳೆಂದು ಪರಿಗಣಿಸಲು ಆಗುವುದಿಲ್ಲ.

ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ಹುದ್ದೆಗೆ ಬದಲಾಗಿ ಹಂಗಾಮಿ ನ್ಯಾಯಮೂರ್ತಿಗಳನ್ನು ನೇಮಕ ಮಾಡುತ್ತಿರುವುದು ಅನೇಕ ವಲಯಗಳಲ್ಲಿ ಪ್ರಶ್ನೆಗೆ ಗ್ರಾಸವಾಗಿದೆ. ಸುಪ್ರೀಂ ಕೋರ್ಟ್‌ 2025ರ ಜನವರಿ 30ರಂದು ಲೋಕ ಪ್ರಹರಿ ಮೊಕದ್ದಮೆಯಲ್ಲಿ ಈ ಕುರಿತಂತೆ ಆದೇಶಿಸಿದೆ. ಆದರೆ, ನೇರ ನೇಮಕಾತಿ ಮಾಡದೆ ಹಂಗಾಮಿ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದು ಎಷ್ಟರಮಟ್ಟಿಗೆ ಸರಿ? ಇದರಿಂದ ಮೊಕದ್ದಮೆಗಳನ್ನು ಶೀಘ್ರವಾಗಿ ತೀರ್ಮಾನ ಮಾಡಲು ಸಾಧ್ಯವೇ? ನೇರ ನೇಮಕಾತಿಗೆ ಅರ್ಹ ಯುವ ವಕೀಲರನ್ನು ಪರಿಗಣಿಸದೆ, ವಿಳಂಬವಾಗಿರುವ ನೇರ ನೇಮಕಾತಿ ಪ್ರಕ್ರಿಯೆಗೆ ಪರಿಹಾರ ಕಂಡುಕೊಳ್ಳದೆ ನಿವೃತ್ತ ನ್ಯಾಯಮೂರ್ತಿಗಳನ್ನು ಹಂಗಾಮಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವ ಅವಶ್ಯಕತೆ ಏನಿದೆ? ಈ ಹಂಗಾಮಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಿಕೊಳ್ಳಲು ಇರುವ ಮಾನದಂಡಗಳೇನು?

ಈ ಹಂಗಾಮಿ ನ್ಯಾಯಮೂರ್ತಿಗಳಿಗೆ ಯಾವುದೇ ಕೆಳ ನ್ಯಾಯಾಲಯಗಳ ಮೇಲೆ ಅಧಿಕಾರ ಇರುವುದಿಲ್ಲ ಮತ್ತು ಅವರು ಒಟ್ಟು ನ್ಯಾಯಮೂರ್ತಿಗಳ (ಫುಲ್‌ ಕೋರ್ಟ್‌ ಮೀಟಿಂಗ್‌) ಸಭೆಯಲ್ಲಿ ಭಾಗವಹಿಸುವಂತಿಲ್ಲ. ಒಬ್ಬ ಹಿರಿಯ ನ್ಯಾಯಮೂರ್ತಿ ನಿವೃತ್ತಿ ಹೊಂದಿದ ನಂತರ ಕಿರಿಯ ನ್ಯಾಯಮೂರ್ತಿಗಳ ಜೊತೆ ಕುಳಿತು ವಿಭಾಗೀಯ ಪೀಠದಲ್ಲಿ ಮೊಕದ್ದಮೆಗಳನ್ನು ತೀರ್ಮಾನ ಮಾಡಲು ಮುಂದೆ ಬರುವರೇ ಎನ್ನುವುದು ಪ್ರಶ್ನಾರ್ಹ.

ಹೈಕೋರ್ಟ್‌ಗಳು 2ರಿಂದ 5 ಹಂಗಾಮಿ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಅವಕಾಶ ಹೊಂದಿವೆ. ಈ ಹಂಗಾಮಿ ನ್ಯಾಯಮೂರ್ತಿಗಳು ವಿಭಾಗೀಯ ಪೀಠದಲ್ಲಿ ಹಿರಿಯ ನ್ಯಾಯಮೂರ್ತಿಗಳ ಜೊತೆ ಕುಳಿತು ಮೊಕದ್ದಮೆಗಳನ್ನು ತೀರ್ಮಾನಿಸಬಹುದು. ನೇರ ನೇಮಕಾತಿ ಪ್ರಕ್ರಿಯೆ ಮುಗಿಸಿ ಎಲ್ಲಾ ಹುದ್ದೆಗಳಿಗೆ ನೇಮಕಗೊಂಡ ನಂತರ ಅವಶ್ಯಕತೆ ಇದ್ದಲ್ಲಿ ಹಂಗಾಮಿ ನ್ಯಾಯಮೂರ್ತಿಗಳನ್ನು ಭರ್ತಿ ಮಾಡಿಕೊಳ್ಳುವುದು ಸಮಂಜಸವಾಗಿರುತ್ತದೆ.

ಅಲ್ಲದೆ, ಈ ಹಂಗಾಮಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಿಕೊಳ್ಳುವುದಕ್ಕೆ ಪ್ರಾಶಸ್ತ್ಯ ನೀಡುವುದರಿಂದ ನೇರ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತದೆ. ಇದಲ್ಲದೆ ಈ ಹಂಗಾಮಿ ನ್ಯಾಯಮೂರ್ತಿಗಳು ಕೇವಲ ವಿಭಾಗೀಯ ಪೀಠದಲ್ಲಿ ಕಾರ್ಯನಿರ್ವಹಿಸುವುದರಿಂದ ಮೊಕದ್ದಮೆಗಳನ್ನು ಶೀಘ್ರಗತಿಯಲ್ಲಿ ತೀರ್ಮಾನಿಸಲು ಸಾಧ್ಯವಿಲ್ಲ. ಹೆಚ್ಚಿನ ಮೊಕದ್ದಮೆಗಳು ಏಕಸದಸ್ಯ ನ್ಯಾಯಪೀಠದ ಮುಂದೆಯೇ ಬರುವುದರಿಂದ ಈ ಹಂಗಾಮಿ ನ್ಯಾಯಮೂರ್ತಿಗಳಿಗೆ ಆ ಮೊಕದ್ದಮೆಗಳನ್ನು ತೀರ್ಮಾನ ಮಾಡುವ ಅಧಿಕಾರ ಇರುವುದಿಲ್ಲ. ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುವ ನ್ಯಾಯಮೂರ್ತಿಗಳು ಈ ರೀತಿ ಹಂಗಾಮಿ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳಲು
ಇಚ್ಛಿಸುವುದೂ ಇಲ್ಲ.

ನೇರ ನೇಮಕಾತಿ ಮಾಡದೆ ಇರುವ ಕಾರಣ ಹಂಗಾಮಿ ನ್ಯಾಯಮೂರ್ತಿಗಳ ನೇಮಕಾತಿ ಮಾಡಬೇಕು ಎನ್ನುವ ವಾದದಲ್ಲಿ ಹುರುಳಿಲ್ಲ. ನೇರ ನೇಮಕಾತಿ ಮಾಡದೆ ಈ ರೀತಿ ಹಂಗಾಮಿ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದರಿಂದ ನ್ಯಾಯ ವಿತರಣೆಯಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಿಲ್ಲ. ಬದಲಾಗಿ, ಮಂಜೂರಾಗಿರುವ ನ್ಯಾಯಮೂರ್ತಿಗಳ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿ ಹಾಗೂ ಆ ಹುದ್ದೆಗಳಿಗೆ ಶೀಘ್ರವಾಗಿ ನೇಮಕಾತಿ ಮಾಡುವುದರಿಂದ ಬಾಕಿ ಇರುವ ಮೊಕದ್ದಮೆಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸಾಧ್ಯ.

ಲೇಖಕರು: ಕರ್ನಾಟಕ ಹೈಕೋರ್ಟ್‌ನ ಪದಾಂಕಿತ ಹಿರಿಯ ವಕೀಲ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.