ADVERTISEMENT

ಚರ್ಚೆ: ಉಚಿತ ಕೊಡುಗೆಗಳ ಕುರಿತಾದ ಹೇಳಿಕೆ; ‘ಸುಪ್ರೀಂ’ ಕೇಳದ ಪ್ರಶ್ನೆಗಳು

ಉಚಿತ ಕೊಡುಗೆಗಳಿಂದ ಪರಾವಲಂಬಿಗಳ ವರ್ಗ ಸೃಷ್ಟಿ: ಸುಪ್ರೀಂ ಕೋರ್ಟ್‌ ಹೇಳಿಕೆ ಕುರಿತು ಪ್ರತಿಕ್ರಿಯೆ

ಎಂ.ಚಂದ್ರ ಪೂಜಾರಿ
Published 14 ಫೆಬ್ರುವರಿ 2025, 20:51 IST
Last Updated 14 ಫೆಬ್ರುವರಿ 2025, 20:51 IST
   
ಎಲ್ಲರಿಗೂ ಭೂಮಿ, ಬಂಡವಾಳ ಹಂಚಿ ಕೃಷಿ, ವ್ಯಾಪಾರ, ಉದ್ದಿಮೆಗಳನ್ನು ನಡೆಸುವಂತೆ ಮಾಡುವುದು ಕಷ್ಟದ ಕೆಲಸ. ಭೂಮಿ, ಬಂಡವಾಳ ಇಲ್ಲದವರು ಭೂಮಿ, ಬಂಡವಾಳ ಇದ್ದವರಲ್ಲಿ ದುಡಿದು ಗಳಿಸುವ ಮೂಲಕ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳಬಹುದು. ಇದು ಸಾಧ್ಯವಾಗಬೇಕಾದರೆ ಶಿಕ್ಷಣ, ಆರೋಗ್ಯ ಬೇಕು. ಇವನ್ನು ಕೊಡಲು ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಘೋಷಿಸುವಸವಲತ್ತುಗಳನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಇಂತಹ ಸವಲತ್ತುಗಳನ್ನು ಉಚಿತವಾಗಿ ನೀಡುವುದರಿಂದ ಅಭಿವೃದ್ಧಿಗೆ ಅಡ್ಡಿಯಾಗುವುದಿಲ್ಲವೇ? ಜನರು ಸೋಮಾರಿಗಳಾಗುವುದಿಲ್ಲವೇ? ಪರಾವಲಂಬಿಗಳಾಗುವುದಿಲ್ಲವೇ? ಇಂತಹ ಉಚಿತ ಸವಲತ್ತುಗಳನ್ನು ನೀಡುವ ಬದಲು ಜನರನ್ನು ಮುಖ್ಯವಾಹಿನಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವಂತೆ ಮಾಡುವುದು ಉತ್ತಮವಲ್ಲವೇ? ಇತ್ಯಾದಿ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಎತ್ತಿದೆ. ಸವಲತ್ತುಗಳು ಉಚಿತವೇ, ಸೋಮಾರಿಗಳನ್ನು ಸೃಷ್ಟಿಸುವುದಿಲ್ಲವೇ ಎನ್ನುವ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೂ ಸುಪ್ರೀಂ ಕೋರ್ಟ್ ಎತ್ತಿರುವ ಕೊನೇ ಪ್ರಶ್ನೆಯನ್ನು ಅಲ್ಲಗಳೆಯುವಂತಿಲ್ಲ.

‘ಸುಪ್ರೀಂ’ ಪ್ರಶ್ನೆಗೆ ಉತ್ತರಿಸುವ ಮುನ್ನ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕಾಗಿದೆ. ಅದೇನೆಂದರೆ, ಯಾವ ಸವಲತ್ತನ್ನು, ಯಾರಿಗೆ, ಎಷ್ಟು ಪ್ರಮಾಣದಲ್ಲಿ, ಹೇಗೆ ಕೊಡಬೇಕು ಇತ್ಯಾದಿ ಪ್ರಶ್ನೆಗಳು ಪ್ರಜಾಪ್ರಭುತ್ವದಲ್ಲಿ ಜನರು ಮತ್ತು ಪಕ್ಷಗಳಿಗೆ ಸಂಬಂಧಿಸಿದ ವಿಷಯಗಳು. ಅಷ್ಟು ಮಾತ್ರವಲ್ಲ; ಜನರು/ಪಕ್ಷಗಳು ‘ಉಚಿತ’ ಸವಲತ್ತುಗಳನ್ನು ಒಪ್ಪಿಕೊಂಡಿದ್ದಾರೆ. ನ್ಯಾಯಾಧೀಶರಿಗೆ ಅಥವಾ ಆರ್ಥಿಕ ಚಿಂತಕರಿಗೆ ಪಕ್ಷ/ಜನರ ನಿರ್ಣಯಗಳು ಸರಿ ಕಾಣದಿರಬಹುದು. ಹಾಗೆಂದು ಜನರು/ಪಕ್ಷಗಳ ಪರವಾಗಿ ಇತರರು ನಿರ್ಣಯ ತಳೆಯಲಾಗುವುದಿಲ್ಲ.ಪಕ್ಷ/ಜನರು ಇಂತಹ ನಿರ್ಣಯಕ್ಕೆ ಏಕೆ ಬರುತ್ತಿದ್ದಾರೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಂಡು ನಂತರ ಇತರರು ಪರಿಹಾರ ಸೂಚಿಸಬೇಕೆಂದು ವಾದಿಸುವ ಲೇಖನ ಇದು.

ಸಂವಿಧಾನ ಮತ್ತು ಅಭಿವೃದ್ಧಿ ಎರಡರ ಉದ್ದೇಶ ಕೂಡ, ಸಮಾಜದ ಎಲ್ಲರನ್ನೂ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳುವಂತೆ ಮಾಡುವುದೇ ಆಗಿದೆ. ಆದರೆ, ಆರ್ಥಿಕ ಪ್ರಗತಿಗೆ ಮಹತ್ವ ನೀಡುವ ಇಂದಿನ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪಾಲುಗೊಳ್ಳಬೇಕಾದರೆ ವ್ಯಕ್ತಿಗೆ ಒಂದೋ ಭೂಮಿ ಬೇಕು, ಇಲ್ಲವೇ ಬಂಡವಾಳ ಬೇಕು. ಇವೆರಡು ಇಲ್ಲವಾದರೆ ಕನಿಷ್ಠ ಶಿಕ್ಷಣ, ಆರೋಗ್ಯ ಆದರೂ ಬೇಕು. ಇವನ್ನು ಅಭಿವೃದ್ಧಿಯಲ್ಲಿ ಪಾಲುಗೊಳ್ಳಲು ಅವಶ್ಯವಿರುವ ಆರ್ಥಿಕ ಸಾಮರ್ಥ್ಯಗಳೆಂದು ಪರಿಗಣಿಸಲಾಗಿದೆ. ಆದರೆ, ಇಂದಿನ ಸರ್ಕಾರಗಳು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವ ಜನರ ಸಾಮರ್ಥ್ಯದ ಪ್ರಶ್ನೆಗಳನ್ನು ಬದಿಗೆ ಸರಿಸಿ ತಾವು ಜಾರಿಗೆ ತರುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಚಾರ ನೀಡುತ್ತಿವೆ. ಉದಾಹರಣೆಗೆ, ಕೃಷಿ ಅಭಿವೃದ್ಧಿಗೆ ಸರ್ಕಾರ ಮಾಡುವ ನೀರಾವರಿ ವ್ಯವಸ್ಥೆ ಬಗ್ಗೆ, ಕಡಿಮೆ ಬಡ್ಡಿಗೆ ನೀಡುವ ಸಾಲದ ಬಗ್ಗೆ, ಪೂರೈಕೆ ಮಾಡುವ ರಸಗೊಬ್ಬರದ ಬಗ್ಗೆ ಪ್ರಚಾರ ಇದೆ. ಆದರೆ, ಇವೆಲ್ಲದರ ಅನುಕೂಲ ಪಡೆಯಬೇಕಾದರೆ ಭೂಮಿ ಬೇಕು ಎನ್ನುವುದರ ಬಗ್ಗೆ ಎಲ್ಲೂ ಪ್ರಚಾರ ಇಲ್ಲ. ಇದರಿಂದಾಗಿ ದೊಡ್ಡ ಪ್ರಮಾಣದ ತೆರಿಗೆ ಹಣ ಭೂಮಿ ಇದ್ದವರ ಪಾಲಾಗುವುದು ಸಾರ್ವಜನಿಕರ ಗಮನಕ್ಕೆ ಬರುವುದಿಲ್ಲ. ಸುಪ್ರೀಂ ಕೋರ್ಟ್ ಕೂಡ ಇದನ್ನು ಪ್ರಶ್ನಿಸಿಲ್ಲ. 

ADVERTISEMENT

ವ್ಯಾಪಾರ, ಉದ್ದಿಮೆಗಳ ಅಭಿವೃದ್ಧಿಗೆ ಸರ್ಕಾರ ಕಡಿಮೆ ಬಡ್ಡಿಗೆ ನೀಡುವ ಸಾಲ, ಸಾಲ ಕಟ್ಟದಿದ್ದರೆ ಮಾಡುವ ಸಾಲ
ಮನ್ನಾ, ಕಡಿಮೆ ಬೆಲೆಗೆ ಭೂಮಿ, ನೀರು, ಕಚ್ಚಾ ಸಾಮಗ್ರಿಗಳನ್ನು ಪೂರೈಕೆ ಮಾಡುವುದರ ಬಗ್ಗೆ ಪ್ರಚಾರ ಇದೆ.
ಸರ್ಕಾರ ನೀಡುವ ಸವಲತ್ತುಗಳ ಲಾಭ ಪಡೆಯ ಬೇಕಾದರೆ ಬಂಡವಾಳ ಹೂಡುವ ಸಾಮರ್ಥ್ಯ ಬೇಕು ಎನ್ನುವುದು ಚರ್ಚೆಯಾಗುತ್ತಿಲ್ಲ. ಈ ಸಾಮರ್ಥ್ಯ ಕೆಲವರಲ್ಲೇ ಕ್ರೋಡೀಕರಣಗೊಂಡಿದೆ. ಇದೇ ಕಾರಣದಿಂದ ಸಾರ್ವಜನಿಕರ ತೆರಿಗೆ ಹಣದ ಹೆಚ್ಚಿನ ಲಾಭವನ್ನು ಕೆಲವರೇ ಪಡೆಯುತ್ತಿದ್ದಾರೆ. ಇದು ಕೂಡ ಸಾರ್ವಜನಿಕ ಚರ್ಚೆಯ ವಿಷಯವಾಗಿಲ್ಲ. ಸುಪ್ರೀಂ ಕೋರ್ಟ್ ಕೂಡ ಇದನ್ನು ಪ್ರಶ್ನಿಸಿಲ್ಲ.

ಎಲ್ಲರಿಗೂ ಭೂಮಿ, ಬಂಡವಾಳ ಹಂಚಿ ಕೃಷಿ, ವ್ಯಾಪಾರ, ಉದ್ದಿಮೆಗಳನ್ನು ನಡೆಸುವಂತೆ ಮಾಡುವುದು ಕಷ್ಟದ ಕೆಲಸ. ಭೂಮಿ, ಬಂಡವಾಳ ಇಲ್ಲದವರು ಭೂಮಿ, ಬಂಡವಾಳ ಇದ್ದವರಲ್ಲಿ ದುಡಿದು ಗಳಿಸುವ ಮೂಲಕ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳಬಹುದು. ಇದು ಸಾಧ್ಯವಾಗಬೇಕಾದರೆ ಶಿಕ್ಷಣ, ಆರೋಗ್ಯ ಬೇಕು. ಇವನ್ನು ಕೊಡಲು ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಇದರಿಂದಾಗಿ ಕೆಲವೇ ಸಾವಿರ ರೂಪಾಯಿ ದುಡಿಯುವವರು ಕೂಡ ತಾವು ದುಡಿದ ಬಹುಪಾಲನ್ನು ಶಿಕ್ಷಣ, ಆರೋಗ್ಯದ ಮೇಲೆ ಖರ್ಚು ಮಾಡುವ ಸ್ಥಿತಿ ಇದೆ. 

ಸಮಾಜದ ಎಲ್ಲರೂ ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳಬೇಕಾದರೆ ಮೇಲಿನ ಆರ್ಥಿಕ ಸಾಮರ್ಥ್ಯಗಳ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಸಾಮರ್ಥ್ಯಗಳೂ ಬೇಕು. ಜಾತಿ, ಲಿಂಗ, ಧರ್ಮ ಇವೆಲ್ಲವೂ ನಮ್ಮಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಕ್ತಿಯ ದುಡಿದು ಗಳಿಸುವ ಸಾಮರ್ಥ್ಯವನ್ನು ಪ್ರಭಾವಿಸುತ್ತಿವೆ. ನಮ್ಮಲ್ಲಿ ಉಡುಪಿ ಬ್ರಾಹ್ಮಣರ ಹೋಟೆಲ್, ಕಾಮತ್ ಕೆಫೆ, ಲಿಂಗಾಯತರ ಖಾನಾವಳಿ, ಒಕ್ಕಲಿಗರ ರಾಗಿ ಮುದ್ದೆ ಹೋಟೆಲ್ ಎಂದು ಬೋರ್ಡ್ ಹಾಕಿ ವ್ಯಾಪಾರ ಮಾಡುವುದನ್ನು ನೋಡಲು ಸಾಧ್ಯ. ಆದರೆ, ಇವತ್ತು ಕೂಡ– ಹಳ್ಳಿಯಿಂದ ದಿಲ್ಲಿಯ ತನಕ– ದಲಿತರ ಹೋಟೆಲ್ ಎನ್ನುವ ಬೋರ್ಡ್ ಹಾಕಿ ವ್ಯಾಪಾರ ಮಾಡಲು ಸಾಧ್ಯವೇ? ದಲಿತರ ಅಭಿವೃದ್ಧಿಯನ್ನು ಅಸ್ಪೃಶ್ಯತೆ ಕಾಡಿದಂತೆ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲುಗೊಳ್ಳುವಿಕೆಯನ್ನು ಲಿಂಗ ತಾರತಮ್ಯ ವಿಧವಿಧವಾಗಿ ಕಾಡುತ್ತಿದೆ. ಅವರು ತೊಡಗಿಸಿಕೊಳ್ಳಬಹುದಾದ ಉದ್ಯೋಗಗಳನ್ನು, ಕೆಲಸದ ಅವಧಿಯನ್ನು, ಸಂಬಳ ಇತ್ಯಾದಿಗಳನ್ನು ಲಿಂಗ ತಾರತಮ್ಯ ಗಣನೀಯವಾಗಿ ಪ್ರಭಾವಿಸುತ್ತಿದೆ. ಇವೆಲ್ಲವನ್ನು ನಿಷೇಧಿಸುವ ಕಾಯ್ದೆಗಳಿವೆ. ಆದರೆ, ಸಾಮಾಜಿಕ ಒಪ್ಪಿಗೆ ಇಲ್ಲದೇ ಅವೆಲ್ಲವೂ ಉದ್ದೇಶಿತ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ.

ಬಲಾಢ್ಯ ಪಕ್ಷ ದೇಶವ್ಯಾಪಿ ನಡೆಸುತ್ತಿರುವ ಕೋಮು ರಾಜಕೀಯವು ಅಲ್ಪಸಂಖ್ಯಾತರ, ಅದರಲ್ಲೂ ಮುಸ್ಲಿಮರ ಬದುಕನ್ನು ನರಕಸದೃಶಗೊಳಿಸಿದೆ. ಕೋಮು ರಾಜಕೀಯ ಮುಸ್ಲಿಮರ ಶಿಕ್ಷಣ, ಆರೋಗ್ಯ, ಉದ್ಯೋಗ ಎಲ್ಲವನ್ನೂ ಪ್ರಭಾವಿಸುತ್ತಿದೆ. ಇಂದು ಕಾರುಬಾರು ಮಾಡುತ್ತಿರುವ ಸಾಂಸ್ಕೃತಿಕ ರಾಜಕೀಯ ಜನರ ಊಟ ಉಪಚಾರ, ದೇವರು ದಿಂಡರು, ಪ್ರೀತಿ ಪ್ರೇಮಗಳ ಸುತ್ತಾ ಇದೆ. ಇದು ತಳಸ್ತರದವರ ಸಾಂಸ್ಕೃತಿಕ ನಿಕೃಷ್ಟೀಕರಣಕ್ಕೆ ಮತ್ತು ಮೇಲಿನವರ ಅಹಂಗೆ ಎಡೆಮಾಡಿಕೊಡುತ್ತಿದೆ. ಇಂತಹ ಸಾಂಸ್ಕೃತಿಕ ರಾಜಕೀಯ ವೈಜ್ಞಾನಿಕ ಮನೋಭಾವದ ಬೆಳವಣಿಗೆಗೆ ಅಡ್ಡಿಯಾಗಿದೆ. ವೈಜ್ಞಾನಿಕ ಮನೋಭಾವದ ಕೊರತೆ ಅಸಮಾನತೆಯನ್ನು ಒಪ್ಪುವ, ಅನ್ಯಾಯಗಳನ್ನು ಸಹಿಸುವ ಗುಣವನ್ನು ಬೆಳೆಸುತ್ತಿದೆ. ಇವೆಲ್ಲವೂ ಜನಸಾಮಾನ್ಯರ ಅಭಿವೃದ್ಧಿ ಪಾಲುಗೊಳ್ಳುವಿಕೆಯನ್ನು ಪ್ರಭಾವಿಸುತ್ತಿವೆ.

ಅಭಿವೃದ್ಧಿಯನ್ನು ಜೀರ್ಣಿಸಿಕೊಳ್ಳುವ ಜನರ ಸಾಮರ್ಥ್ಯ ವೃದ್ಧಿಸದೆ ಅಭಿವೃದ್ಧಿ ಮೇಲೆ ಸರ್ಕಾರ ಮಾಡುವ ಕೋಟಿಗಟ್ಟಲೆ ತೆರಿಗೆ ಹಣ ನಮ್ಮ ಸಮಾಜದ ಕೆಲವರಲ್ಲೇ ಕ್ರೋಡೀಕರಣ ಗೊಳ್ಳುತ್ತಿದೆ. ಇಂತಹ ಆರ್ಥಿಕ, ಸಾಮಾಜಿಕ ನೀತಿಗಳು ಹಾಗೂ ಅಧಿಕಾರದಲ್ಲಿರುವ ಪಕ್ಷದ ಸಾಂಸ್ಕೃತಿಕ ರಾಜಕೀಯ ಪರಾವಲಂಬಿಗಳನ್ನು ಉತ್ಪಾದಕರಂತೆ ಮತ್ತು ಉತ್ಪಾದಕರನ್ನು ಪರಾವಲಂಬಿಗಳಂತೆ ಬಿಂಬಿಸುತ್ತಿದೆ. ಮೇಲ್ನೋಟಕ್ಕೆ ಕಾಣುವ ಈ ಚಿತ್ರಣವನ್ನೇ ಸತ್ಯವೆಂದು ಬಗೆದು ಸುಪ್ರಿಂ ಕೋರ್ಟ್ ಬಡವರಿಗೆ ನೀಡುವ ಅಲ್ಪಸ್ವಲ್ಪ ಸವಲತ್ತುಗಳನ್ನು ಪ್ರಶ್ನಿಸುತ್ತಿದೆ. ಎಲ್ಲರೂ ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳಬೇಕೆನ್ನುವುದೇ ‘ಸುಪ್ರಿಂ’ನ ನಿಜವಾದ ಉದ್ದೇಶವಾಗಿದ್ದರೆ, ಅದು ಕೇಳಬೇಕಾದ ಪ್ರಶ್ನೆಗಳೇ ಬೇರೆ ಇವೆ. ಎಲ್ಲರಿಗೂ ಶಿಕ್ಷಣ, ಆರೋಗ್ಯವನ್ನು ಸರ್ಕಾರವೇ ಏಕೆ ಕೊಡಬಾರದು? ಬೃಹತ್ ಕೃಷಿ, ವ್ಯಾಪಾರ, ಉದ್ದಿಮೆಗಳ ಅಭಿವೃದ್ಧಿಗೆ ಸರ್ಕಾರ ಮಾಡುವ ಬೃಹತ್ ವಿನಿಯೋಜನೆ ಮತ್ತು ಉದ್ಯೋಗ ಸೃಷ್ಟಿ ನಡುವೆ ಸಂಬಂಧ ಏಕಿಲ್ಲ? ತಳಸ್ತರದ ಜನರ ಬದುಕನ್ನು ಇಂದು ಕೂಡ ಲಿಂಗ, ಜಾತಿ, ಧರ್ಮಗಳು ಏಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸುತ್ತಿವೆ? ತಳಸ್ತರದ ಜನರಲ್ಲಿ ಸಾಂಸ್ಕೃತಿಕ ಕೀಳರಿಮೆ ಸೃಷ್ಟಿಸುವ ಹಾಗು ಮೌಢ್ಯವನ್ನು ಬೆಳೆಸುವ ಸಾಂಸ್ಕೃತಿಕ ರಾಜಕೀಯವನ್ನು ಏಕೆ ನಿಷೇಧಿಸಬಾರದು? ಒಂದು ವೇಳೆ ಈ ಎಲ್ಲ ಪ್ರಶ್ನೆಗಳನ್ನು ‘ಸುಪ್ರೀಂ’ ಹಿಂದೆಯೇ ಕೇಳಿದ್ದರೆ ಇವತ್ತು ‘ಉಚಿತ’ ಸವಲತ್ತುಗಳನ್ನು ಪ್ರಶ್ನಿಸುವ ಸಂದರ್ಭವೇ ಹುಟ್ಟುತ್ತಿರಲಿಲ್ಲ.

ಲೇಖಕ: ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.