ಶಿರೂರು ಭೂಕುಸಿತ, ಜಿ.ಎಸ್.ಶ್ರೀನಿವಾಸ ರೆಡ್ಡಿ
ಭೂಕುಸಿತ ಉಂಟಾಗುವ ಪ್ರದೇಶಗಳು ಪರಿಸರ ಸೂಕ್ಷ್ಮ ಪ್ರದೇಶಗಳಾಗಿರುತ್ತವೆ. ನಮ್ಮ ರಾಜ್ಯದಲ್ಲಿ ವಾರ್ಷಿಕ ಸರಾಸರಿ 115 ಸೆಂ.ಮೀ. ಮಳೆ ಬಿದ್ದರೆ, ಈ ಪ್ರದೇಶಗಳಲ್ಲಿ ವಾರ್ಷಿಕವಾಗಿ 300–600 ಸೆಂ.ಮೀ ಮಳೆ ಬೀಳುತ್ತದೆ. ಇವು ಇಳಿಜಾರಿನ, ಕಡಿದಾದ ಪ್ರದೇಶಗಳಾಗಿರುತ್ತವೆ. ಇಂಥ ಪ್ರದೇಶಗಳಲ್ಲಿ ಯಾವುದೇ ರೀತಿಯ ಮಾನವ ಹಸ್ತಕ್ಷೇಪವು ಪ್ರಕೃತಿಗೆ, ತನ್ಮೂಲಕ ಮನುಷ್ಯನಿಗೆ ಮಾರಕವಾಗಬಲ್ಲುದು. ಶೇ 70ರಷ್ಟು ಭೂಕುಸಿತಗಳು ಸಂಭವಿಸಿರುವುದು ಅಭಿವೃದ್ಧಿ ಕಾರ್ಯಗಳು ನಡೆದ ಪ್ರದೇಶಗಳಲ್ಲಿಯೇ ಎನ್ನುವುದು ಗಮನಾರ್ಹ ವಿಚಾರ. ಅವೈಜ್ಞಾನಿಕ ಕಾಮಗಾರಿಗಳೇ ಅದಕ್ಕೆ ಕಾರಣ.
ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನ ನಾಲ್ಕು ಜಿಲ್ಲೆ, ಕರಾವಳಿಯ ಮೂರು ಜಿಲ್ಲೆ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳನ್ನು ಒಳಗೊಂಡಂತೆ ರಾಜ್ಯದ ಸುಮಾರು ಶೇ 15ರಷ್ಟು ಭೌಗೋಳಿಕ ಪ್ರದೇಶ ಭೂಕುಸಿತ ಅಪಾಯದ ವಲಯದಲ್ಲಿದೆ. ಈ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮುಂಚೆ ಅಲ್ಲಿನ ಭೂಬಳಕೆ, ಶಿಲಾರಚನೆ, ಮಣ್ಣಿನ ಗುಣಲಕ್ಷಣ, ಭೂಕುಸಿತದ ಹಿಂದಿನ ಘಟನೆಗಳು, ಹವಾಮಾನ ಮತ್ತು ಜಲಮೂಲಗಳ ದತ್ತಾಂಶವನ್ನು ಅಧ್ಯಯನ ಮಾಡಬೇಕಾಗುತ್ತದೆ. ಆ ದತ್ತಾಂಶ ಆಧರಿಸಿ ಭೂಕುಸಿತದ ಸಂಭವನೀಯತೆಯ ನಕ್ಷೆಯನ್ನು ತಯಾರು ಮಾಡಬೇಕಾಗುತ್ತದೆ.
ಭೂಕುಸಿತದ ಪ್ರದೇಶಗಳಲ್ಲಿ ನಡೆಯುವ ಪ್ರಮುಖ ಅಭಿವೃದ್ಧಿ ಕಾರ್ಯಗಳಲ್ಲಿ ರಸ್ತೆ, ರೈಲು ಮಾರ್ಗ, ವಿದ್ಯುತ್ ಕಂಬಗಳ ಅಳವಡಿಕೆ, ಅಣೆಕಟ್ಟಿನ ನೀರು ಹರಿಯಲು ಕಾಲುವೆ ನಿರ್ಮಾಣ ಮಾಡುವುದು ಪ್ರಮುಖವಾಗಿವೆ. ಸಾಮಾನ್ಯವಾಗಿ ಸಂಭವನೀಯ ಭೂಕುಸಿತ ಪ್ರದೇಶಗಳಲ್ಲಿ, ಮುಖ್ಯವಾಗಿ ಕಾಡು, ಘಟ್ಟ ಪ್ರದೇಶಗಳಲ್ಲಿ, ಕೈಗೊಳ್ಳುವ ಅಭಿವೃದ್ಧಿ ಚಟುವಟಿಕೆಗಳಿಗೆ ಇತರೆಡೆಗಳಿಗಿಂತ ಹೆಚ್ಚು ಹಣ ವೆಚ್ಚವಾಗುತ್ತದೆ, ಹೆಚ್ಚು ಭೂಪ್ರದೇಶವೂ ಬೇಕಾಗುತ್ತದೆ.
ಸಂಭವನೀಯ ಭೂಕುಸಿತದ ಪ್ರದೇಶಗಳನ್ನು ಮೂರು ವಿಭಾಗಗಳನ್ನಾಗಿ–ಅತಿ ಅಪಾಯ, ಮಧ್ಯಮ ಅಪಾಯ ಮತ್ತು ಕಡಿಮೆ ಅಪಾಯ– ಗುರುತಿಸಲಾಗುತ್ತದೆ. ಆ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಯನ್ನು ಕೈಗೆತ್ತಿಕೊಳ್ಳಬೇಕು ಎಂದರೂ, ಅದು ಯಾವ ವಿಭಾಗಕ್ಕೆ ಸೇರಿದೆ ಎನ್ನುವುದನ್ನು ಆಧರಿಸಿ, ಅಲ್ಲಿನ ಅಪಾಯದ ಮಟ್ಟವನ್ನು ತಿಳಿದು, ಅದಕ್ಕೆ ತಕ್ಕಂತೆ ಯೋಜಿಸಬೇಕಾಗುತ್ತದೆ. ಅಂದರೆ, ಭೂಕುಸಿತದ ನಕ್ಷೆಯೊಂದಿಗೆ ಯೋಜನೆಯನ್ನು ಜೋಡಿಸಬೇಕು.
ಮುನ್ನೆಚ್ಚರಿಕೆ, ಸಿದ್ಧತೆ ಅಗತ್ಯ: ಯಾವುದೇ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವ ಮುನ್ನ ಅದು ಯಾವ ವಿಭಾಗದಲ್ಲಿ ಬರುತ್ತದೆ ಎನ್ನುವುದನ್ನು ನಕ್ಷೆಯ ಮೂಲಕ ಅರಿಯಬೇಕು. ಅದು ಅತಿ ಅಪಾಯದ ಪ್ರದೇಶದ ವ್ಯಾಪ್ತಿಯಲ್ಲಿದ್ದರೆ, ಯಾವುದೇ ಕಾರಣಕ್ಕೂ ಅಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆ ನಡೆಸಬಾರದು. ಮಧ್ಯಮ ಅಪಾಯದ ಪ್ರದೇಶದಲ್ಲಿ, ತೀರಾ ಅನಿವಾರ್ಯವಾದರೆ ಕೆಲವು ಪೂರ್ವಸಿದ್ಧತೆಗಳೊಂದಿಗೆ ಕಾಮಗಾರಿ ಕೈಗೊಳ್ಳಬೇಕಾಗುತ್ತದೆ. ಕಡಿಮೆ ಅಪಾಯದ ಪ್ರದೇಶಗಳೂ ಇಳಿಜಾರು ಪ್ರದೇಶ, ಗುಡ್ಡಗಾಡು ಪ್ರದೇಶ, ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳೇ ಆಗಿರುವುದರಿಂದ ಯೋಜನೆ ರೂಪಿಸುವಾಗ ಎಲ್ಲ ರೀತಿಯ ಎಚ್ಚರಿಕೆ ವಹಿಸಬೇಕು. ಕಾಮಗಾರಿ ನಡೆಸುವ ಮುನ್ನ ಅಲ್ಲಿನ ಮಣ್ಣು, ಶಿಲಾ ರಚನೆ, ಅಲ್ಲಿನ ಜಲಮೂಲಗಳು, ಹವಾಮಾನ ಎಲ್ಲವನ್ನೂ ಪರಿಶೀಲಿಸಬೇಕು. ಕಾಮಗಾರಿ ಮಾಡುವಾಗ ಇಳಿಜಾರು ಪ್ರದೇಶವನ್ನು ಅಸ್ಥಿರಗೊಳಿಸಬಾರದು; ಯಾವುದೇ ಕಾರಣಕ್ಕೂ 45 ಡಿಗ್ರಿಗಿಂತ ಹೆಚ್ಚು ಭೂಮಿ ಕತ್ತರಿಸಬಾರದು. ಅನಿವಾರ್ಯವಾದರೆ ಹೆಚ್ಚು ಜಾಗ ತೆಗೆದುಕೊಂಡು ಕಾಮಗಾರಿ ನಡೆಸಬೇಕು.
ಭೂಕುಸಿತ ತಡೆಯುವ ದಿಸೆಯಲ್ಲಿ ಬಹಳ ಮುಖ್ಯ ಕಾರ್ಯ ಎಂದರೆ, ತಡೆಗೋಡೆ ನಿರ್ಮಾಣ ಮಾಡುವುದು. ಅಲ್ಲಿ ಎಷ್ಟು ಒತ್ತಡ ಇದೆ, ಮಣ್ಣು ಕುಸಿದರೆ ಎಷ್ಟು ಕುಸಿಯಬಹುದು ಎನ್ನುವುದನ್ನು ಅಧ್ಯಯನ ಮಾಡಿ ಅದನ್ನು ತಡೆಯುವ ರೀತಿಯಲ್ಲಿ ಗೋಡೆ ನಿರ್ಮಾಣ ಮಾಡಬೇಕು. ಇದು ಬಹಳ ಮುಖ್ಯವಾದ ಕ್ರಮವಾಗಿದೆ. ನಂತರದಲ್ಲಿ ಪಾಲಿಸಬೇಕಾದ ಮುಖ್ಯ ಕ್ರಮವೆಂದರೆ, ಅರಣ್ಯೀಕರಣ; ಭೂಕುಸಿತ ತಡೆಯಬಲ್ಲ ಗಿಡ, ಹುಲ್ಲು ಬೆಳೆಸುವುದು. ಇದಕ್ಕಾಗಿ ಹೆಚ್ಚು ಆಳಕ್ಕೆ ಹೋಗುವಂಥ, ಹೆಚ್ಚು ಬೇರು ಬಿಡುವಂಥ ಗಿಡ, ಸ್ಥಳೀಯವಾದ, ನಿರ್ದಿಷ್ಟವಾದ ಮರ, ಗಿಡಗಳನ್ನೇ ಆಯ್ದುಕೊಳ್ಳಬೇಕು. ಗಿಡ ಮರಗಳ ಬೇರುಗಳು ಮಣ್ಣಿನ ಆಳಕ್ಕೆ ಹೋದರೆ, ಮಣ್ಣಿನೊಂದಿಗೆ ಅವುಗಳಿಗೆ ಹೆಣಿಗೆ ಉಂಟಾಗಿ, ಮಣ್ಣು ಕುಸಿತ ತಡೆಯುತ್ತದೆ.
ಮತ್ತೊಂದು ಪ್ರಮುಖ ತಂತ್ರ ಎಂದರೆ, ಉಕ್ಕಿನ ತಂತಿಗಳ ಮೆಷ್ ಹಾಕುವುದು. ಅದು ಮಣ್ಣು ಜಾರದಂತೆ, ಗುಡ್ಡ ಕುಸಿಯದಂತೆ ರಕ್ಷಿಸುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಕಲ್ಲುಗಳು ಕೂಡ ಕುಸಿಯುತ್ತವೆ, ಜಾರುತ್ತವೆ. ಅದಕ್ಕೆ ರಾಕ್ ಬೋಲ್ಟಿಂಗ್ ತಂತ್ರಜ್ಞಾನದ ಮೂಲಕ ರಕ್ಷಣೆ ನೀಡಬೇಕು. ಕಲ್ಲನ್ನು ಎಷ್ಟು ಸಾಧ್ಯವೋ ಅಷ್ಟು ಕೊರೆದು, ಅಲ್ಲಿಗೆ ಬೋಲ್ಟ್ ಅಳವಡಿಸಬೇಕು. ಅದು ಕಲ್ಲು ಕುಸಿಯದಂತೆ, ಜಾರದಂತೆ ಹಿಡಿದು ನಿಲ್ಲಿಸುತ್ತದೆ.
ಅಂಥದೇ ಇನ್ನೊಂದು ಕ್ರಮ, ಮಡ್ ಸೋರ್ಸಿಂಗ್; ಬಸಿಗಾಲುವೆ ನಿರ್ಮಿಸಿ, ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವುದು. ಯಾವುದೇ ಪ್ರದೇಶದಲ್ಲಾಗಲಿ, ತೇವಾಂಶ ಹೆಚ್ಚು ಇದ್ದರೆ ಮಾತ್ರವೇ ಭೂಕುಸಿತ ಉಂಟಾಗುವುದು. ಹಾಗಾಗಿ ರಸ್ತೆ, ರೈಲ್ವೆ ಮಾರ್ಗ ಮಾಡುವಾಗ ಇಳಿಜಾರಿನ ಕಡೆ ಮಣ್ಣನ್ನು ಹೆಚ್ಚು ಅಗೆಯಬಾರದು; ಗುಡ್ಡದ ಕಡೆ ಹೆಚ್ಚು ಅಗೆಯಬೇಕು.
ಸ್ಥಳೀಯ ಸಂಸ್ಥೆ, ಜನಸಮುದಾಯಗಳ ಪಾತ್ರ: ಭೂಕುಸಿತವನ್ನು ತಡೆಯುವಲ್ಲಿ ಸರ್ಕಾರ/ಸ್ಥಳೀಯ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಆಯಾ ಪ್ರದೇಶದ ಭೂಬಳಕೆಗೆ ತಕ್ಕಂತೆ ನಿಯಮಗಳನ್ನು ಅವು ರೂಪಿಸಬೇಕು. ಸರ್ಕಾರಿ ಯೋಜನೆ ಇರಲಿ, ಖಾಸಗಿ ಯೋಜನೆ ಇರಲಿ, ಅನುಮತಿ ನೀಡುವುದಕ್ಕೆ ಮುಂಚೆ ಎಲ್ಲ ಅಂಶಗಳನ್ನು ಪರಿಶೀಲಿಸಬೇಕು; ತಜ್ಞರ ಸಲಹೆಯನ್ನೂ ಪಡೆಯಬೇಕು. ಬೃಹತ್ ಆದ ಯೋಜನೆ ಕೈಗೊಳ್ಳುವುದು ತೀರಾ ಅನಿವಾರ್ಯ ಎನ್ನಿಸಿದರೆ, ಅದಕ್ಕೆ ಪೂರ್ವಭಾವಿಯಾಗಿ ಅಗತ್ಯವಾದ ಅಧ್ಯಯನ, ತಯಾರಿ ನಡೆಸುವುದು ಕಡ್ಡಾಯವಾಗಬೇಕು.
ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಎಲ್ಲ ಪ್ರದೇಶಗಳಿಗೂ ಅನ್ವಯವಾಗುವಂತಹ ಒಂದು ಪ್ರಮಾಣಿತ ಕಾರ್ಯವಿಧಾನ ಇಲ್ಲ; ಪ್ರತಿಯೊಂದು ಯೋಜನೆಯನ್ನೂ ಸ್ಥಳ ನಿರ್ದಿಷ್ಟ ಚಟುವಟಿಕೆಯನ್ನಾಗಿಯೇ ರೂಪಿಸಬೇಕು. ಈ ಸ್ಥಳ ನಿರ್ದಿಷ್ಟ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ರೂಪಿಸಬೇಕಾಗುತ್ತದೆ. ಪರಿಸರ ಸೂಕ್ಷ್ಮ ಪ್ರದೇಶಗಳು ಯಾವ ಮಟ್ಟದ ಅಪಾಯದ ಸ್ಥಿತಿಯಲ್ಲಿವೆ, ಅವುಗಳನ್ನು ತಡೆಯಲು ಏನೇನು ಪೂರ್ವಸಿದ್ಧತೆಗಳನ್ನು ಮಾಡಬೇಕಾಗುತ್ತದೆ, ವಿಪತ್ತು ಉಂಟಾದರೆ ಅದನ್ನು ಹೇಗೆ ನಿರ್ವಹಣೆ ಮಾಡುವುದು ಎಲ್ಲವೂ ಅದರಲ್ಲಿ ಇರಬೇಕು. ಸಮುದಾಯವನ್ನು ಒಳಗೊಳ್ಳುವುದರಿಂದ ತಮ್ಮ ಗ್ರಾಮ ಎಂಥ ಅಪಾಯದ ಸ್ಥಿತಿಯಲ್ಲಿ ಇದೆ ಎನ್ನುವುದು ಅವರಿಗೆ ತಿಳಿಯುತ್ತದೆ. ವಿಪತ್ತು ನಿರ್ವಹಣೆಗೂ ಗ್ರಾಮ ಮಟ್ಟದಲ್ಲಿ, ಪಂಚಾಯಿತಿ ಮಟ್ಟದಲ್ಲಿಯೇ ಯೋಜನೆ ರೂಪಿಸಬೇಕು.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಸಂಭವನೀಯ ಪ್ರದೇಶಗಳ ಬಗ್ಗೆ, ಭೂಕುಸಿತ ಘಟನೆಗಳ ಬಗ್ಗೆ ಒಂದು ಹಂತದವರೆಗೆ ಅಧ್ಯಯನ ಮಾಡಿ ನಕ್ಷೆ ತಯಾರಿಸುತ್ತದೆ. ಅದರ ದತ್ತಾಂಶದ ಆಧಾರದಲ್ಲಿ ಮುನ್ನೆಚ್ಚರಿಕೆ ವ್ಯವಸ್ಥೆಯನ್ನೂ ರೂಪಿಸಬೇಕಾದದ್ದು ಸರ್ಕಾರದ, ಅದರಲ್ಲೂ ಮುಖ್ಯವಾಗಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕೆಲಸ. ಅಪಾಯವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗದಿದ್ದರೂ, ಮುನ್ನೆಚ್ಚರಿಕೆ ವಹಿಸಿದರೆ ಅದರ ತೀವ್ರತೆಯನ್ನಾದರೂ ತಡೆಗಟ್ಟಬಹುದು.
ಈಗಾಗಲೇ ರಾಜ್ಯದಲ್ಲಿ ಕೆಲವು ಕಡೆ ಮಳೆಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಳೆ ಅಳೆಯುವ ಜತೆಗೆ, ಅಲ್ಲಿನ ಮಣ್ಣು ಹೇಗಿದೆ, ಅದರಲ್ಲಿ ನೀರು ಎಷ್ಟು ಇಂಗಿದೆ ಎನ್ನುವುದನ್ನು ಅಳೆಯಲೂ ನಿರ್ದಿಷ್ಟ ಮಾಪಕಗಳು ಇವೆ. ಸ್ವಲ್ಪ ಮಣ್ಣು ಜರುಗಿದರೆ ಅದರ ಮುನ್ಸೂಚನೆ ನೀಡುವಂಥ ತಾಂತ್ರಿಕತೆಯೂ ಲಭ್ಯವಿದೆ. ಜತೆಗೆ, ಭೂಕುಸಿತದ ಬಗ್ಗೆ ಇನ್ನೂ ಹೆಚ್ಚಿನ ವೈಜ್ಞಾನಿಕ ಮಾಹಿತಿ ಅಭಿವೃದ್ಧಿಪಡಿಸಬೇಕು. ಅದಕ್ಕೆ ಪೂರಕವಾದ ಸಂಶೋಧನೆಗಳು ನಡೆಯಬೇಕು. ಈ ಎಲ್ಲವನ್ನೂ ಅಳವಡಿಸಿದರೆ ಅದೊಂದು ಉತ್ತಮ ಮುಂಜಾಗ್ರತಾ ವ್ಯವಸ್ಥೆ ಆಗುತ್ತದೆ.
ಇತ್ತೀಚಿನ ದಿನದಲ್ಲಿ ಹವಾಮಾನ ಬದಲಾವಣೆಯಿಂದ ಭಾರಿ ಮಳೆ, ಬಿಸಿಗಾಳಿ, ಪ್ರವಾಹ ಇಂಥವು ಹೆಚ್ಚಾಗಿವೆ. ಇವು ಮುಂದಿನ ದಿನಗಳಲ್ಲಿ ಇನ್ನೂ ಜಾಸ್ತಿಯಾಗಬಹುದು. ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಮುಂದಿನ ಯೋಜನೆಗಳನ್ನು ರೂಪಿಸುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. 2018ರಿಂದ ಭೂಕುಸಿತಗಳು ಹೆಚ್ಚಾದಾಗ 2019–20ರಲ್ಲಿ ರಾಜ್ಯ ಸರ್ಕಾರವು ಭೂಕುಸಿತ ತಡೆಗೆ ಅನಂತ ಹೆಗಡೆ ಅಶೀಸರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ನಾನೂ ಅದರ ಭಾಗವಾಗಿದ್ದೆ. ಆ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು. ಪಶ್ಚಿಮ ಘಟ್ಟಗಳಂಥ ಸೂಕ್ಷ್ಮ ಭೂಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಜೀವವೈವಿಧ್ಯವನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯವಶ್ಯಕ. ಸ್ಫೋಟಕಗಳನ್ನು ಸಿಡಿಸುವಾಗ, ಜೀವವೈವಿಧ್ಯಕ್ಕೆ ಧಕ್ಕೆ ಆಗದಂತೆ ಎಚ್ಚರಿಕೆ ವಹಿಸಬೇಕು. ಸೈಲೆನ್ಸ್ ಬ್ಲಾಸ್ಟಿಂಗ್‌ನಂತಹ ತಾಂತ್ರಿಕತೆಯನ್ನು ಅನುಸರಿಸಬೇಕು.
ಸುಸ್ಥಿರ ಅಭಿವೃದ್ಧಿ ಗುರಿಗಳು (13, 14 ಮತ್ತು 15) ಹವಾಮಾನ, ಜಲ ಜೀವರಾಶಿ, ಭೂಮಿಯ ಮಹತ್ವದ ಬಗ್ಗೆ ವಿವರಿಸುತ್ತವೆ. ಒಂದು ಭೂ ಪ್ರದೇಶದಲ್ಲಿರುವ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು, ಸುಸ್ಥಿರವಾದ ಬಳಕೆಯನ್ನು ಪ್ರೋತ್ಸಾಹಿಸುವುದು, ಮಣ್ಣಿನ ಸವಕಳಿಯನ್ನು ತಡೆಯುವುದು, ಜೀವವೈವಿಧ್ಯ ನಷ್ಟವನ್ನು ತಡೆಗಟ್ಟುವುದು ಅದರಲ್ಲಿ ಸೇರಿವೆ; ರಾಜ್ಯದ ಉನ್ನತಿಯ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳೂ ನಡೆಯಬೇಕು, ಪರಿಸರವೂ ಉಳಿಯಬೇಕು ಎನ್ನುವುದನ್ನು ಮರೆಯಬಾರದು.
ಲೇಖಕ: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ
ನಿರೂಪಣೆ: ಬಿ.ವಿ.ಶ್ರೀನಾಥ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.