ADVERTISEMENT

ಚರ್ಚೆ| ಕನ್ಹಯ್ಯ ಸೇರ್ಪಡೆ ಕಾಂಗ್ರೆಸ್‌ನಲ್ಲಿ ಬದಲಾವಣೆಗೆ ನಾಂದಿ ಹಾಡೀತೆ?

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 19:23 IST
Last Updated 2 ಅಕ್ಟೋಬರ್ 2021, 19:23 IST
ಕನ್ಹಯ್ಯ ಕುಮಾರ್‌
ಕನ್ಹಯ್ಯ ಕುಮಾರ್‌   

ಬೆಂಗಳೂರು: ಸಿಪಿಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದ ಯುವ ನಾಯಕ ಕನ್ಹಯ್ಯ ಕುಮಾರ್‌ ಕಾಂಗ್ರೆಸ್‌ ಸೇರಿರುವುದು ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆ ಕುರಿತು ‘ಕನ್ಹಯ್ಯ ಕುಮಾರ್ ಪಕ್ಷಾಂತರ: ಸಿದ್ಧಾಂತಕ್ಕೆ ಸಂದ ಸೋಲೇ?’ ಎನ್ನುವ ವಿಷಯದ ಮೇಲೆ ‘ಪ್ರಜಾವಾಣಿ’ ಶನಿವಾರ ನಡೆಸಿದ ಫೇಸ್‌ ಬುಕ್‌ ಲೈವ್‌ ಸಂವಾದದ ಸಂಕ್ಷಿಪ್ತ ರೂಪ ಇಲ್ಲಿದೆ.

‘ಮೊದಲು ನಾಯಕತ್ವದ ಪ್ರಶ್ನೆ ಇತ್ಯರ್ಥವಾಗಬೇಕು’

ಸಂದೀಪ್‌ ಶಾಸ್ತ್ರಿ

ಎಡ ಸಿದ್ಧಾಂತದ ನಾಯಕರು ಕಾಂಗ್ರೆಸ್‌ ಸೇರುವುದು ಹೊಸತಲ್ಲ. ಮೋಹನ ಕುಮಾರಮಂಗಲಂ ಅವರಿಂದ ಹಲವರು ಸೇರಿದ್ದಾರೆ. ಇದು ತತ್ವ, ಸಿದ್ಧಾಂತದ ಪ್ರಶ್ನೆ ಅಲ್ಲ. ಅಧಿಕಾರದ ಪ್ರಶ್ನೆ ಮಾತ್ರ. ತನ್ನ ರಾಜಕೀಯ ಭವಿಷ್ಯ ಯಾವ ಪಕ್ಷದಿಂದ ಗಟ್ಟಿಯಾಗಬಹುದು ಎಂಬುದನ್ನು ಆಧರಿಸಿ ನಿರ್ಧರಿಸುತ್ತಾರೆ. ಕನ್ಹಯ್ಯ ಕಾಂಗ್ರೆಸ್‌ ಸೇರುವ ಸಮಯದಲ್ಲೇ ಪಂಜಾಬ್‌, ಚತ್ತೀಸ್‌ಗಢ, ರಾಜಸ್ತಾನ ಕಾಂಗ್ರೆಸ್‌ನಲ್ಲಿ ಋಣಾತ್ಮಕ ಬೆಳವಣಿಗೆ ಆಗಿದೆ. ಜಿ–23 ನಾಯಕರೂ ಅಪಸ್ವರ ಎತ್ತಿದ್ದಾರೆ. ಇದೆಲ್ಲದರಿಂದಾಗಿ ಕನ್ಹಯ್ಯ ಸೇರ್ಪಡೆ ನಿರೀಕ್ಷೆಯಷ್ಟು ಸಂಚಲನ ಮೂಡಿಸಿಲ್ಲ.

ADVERTISEMENT

ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ನಾಯಕತ್ವದ ಸಮಸ್ಯೆ ಇದೆ. ಅದು ತೀರ್ಮಾನ ಆಗುವವರೆಗೂ ಉಳಿದ ಎಲ್ಲ ಸಮಸ್ಯೆಗಳೂ ಮುಂದುವರಿಯುತ್ತವೆ. ಪಕ್ಷದ ಹೈಕಮಾಂಡ್ ಸಾಮರ್ಥ್ಯದ ಕುರಿತೂ ಪ್ರಶ್ನೆ ಹುಟ್ಟಿದೆ. ಕಾಂಗ್ರೆಸ್‌ ಅನೇಕ ರಾಜ್ಯಗಳಲ್ಲಿ ಇದರಿಂದಾಗಿಯೇ ಅವಕಾಶ ಕಳೆದುಕೊಂಡಿದೆ.

ನಾಯಕರನ್ನು ಆಮದು ಮಾಡಿಕೊಳ್ಳಬೇಕೆ? ಪಕ್ಷದೊಳಗೆ ನಾಯಕತ್ವ ಸೃಷ್ಟಿ ಅಸಾಧ್ಯವೆ? ಆಂತರಿಕ ಸಂಘರ್ಷಕ್ಕೆ ಅಂತ್ಯ ಹಾಡಲು ಸಾಧ್ಯವಿಲ್ಲವೆ ಎಂಬ ಪ್ರಶ್ನೆಗಳಿಗೆ ಕಾಂಗ್ರೆಸ್‌ ಉತ್ತರ ಕಂಡುಕೊಳ್ಳಬೇಕಿದೆ.

ಸಂದೀಪ್‌ ಶಾಸ್ತ್ರಿ, ರಾಜಕೀಯ ವಿಶ್ಲೇಷಕ

---


‘ಕಾಂಗ್ರೆಸ್‌, ಕನ್ಹಯ್ಯ ಇಬ್ಬರಿಗೂ ನಷ್ಟವೆ’

ಮುನೀರ್‌ ಕಾಟಿಪಳ್ಳ

ಕನ್ಹಯ್ಯ ಕಾಂಗ್ರೆಸ್‌ ಸೇರಿರುವುದನ್ನು ಕಾಂಗ್ರೆಸ್‌ ಅಥವಾ ಬಿಜೆಪಿ ನಾಯಕರ ಪಕ್ಷಾಂತರದಂತೆ ಗುರುತಿಸಲು ಆಗುವುದಿಲ್ಲ. ಬಂಡವಾಳಶಾಹಿ ವಿರುದ್ಧ ಇದ್ದೇನೆ ಎಂದು ಗುರುತಿಸಿಕೊಂಡಿದ್ದವರು ಕನ್ಹಯ್ಯ. ಈಗ ಅವರು ಸೈದ್ಧಾಂತಿಕ ಬದ್ಧತೆಯಿಂದ ದೂರ ಸರಿದು ಕಾಂಗ್ರೆಸ್‌ ಎಂಬ ಅನುಕೂಲಕರ ಜಾಗಕ್ಕೆ ಹೋಗಿದ್ದಾರೆ.

ಕನ್ಹಯ್ಯ ಈಗ ಮಾತನಾಡುತ್ತಿರುವುದನ್ನು ನೋಡಿದರೆ ಅವರು ತನ್ನ ರಾಜಕೀಯ ಮಹತ್ವವನ್ನು ಕಳೆದುಕೊಳ್ಳುತ್ತಾರೆ. ಇಂತಹ ರಾಜಕೀಯ ಬೆಳವಣಿಗೆಗಳಿಂದ ಐಕ್ಯ ಹೋರಾಟಕ್ಕೆ ಹೊಡೆತ ಬೀಳುತ್ತದೆ. ಇದಕ್ಕೆ ರಾಹುಲ್‌ ಗಾಂಧಿ ಮತ್ತು ಕನ್ಹಯ್ಯ ಕುಮಾರ್‌ ಇಬ್ಬರೂ ಇದಕ್ಕೆ ಕಾರಣರಾಗುತ್ತಾರೆ. ಕನ್ಹಯ್ಯಗೆ ಬದ್ಧತೆ ಇದ್ದರೆ ರಾಹುಲ್‌ ಜತೆಗಿನ ಗೆಳೆತನ ಬಳಸಿಕೊಂಡು ಐಕ್ಯ ಹೋರಾಟವನ್ನು ಬಲಪಡಿಸಬಹುದಿತ್ತು. ಎಡ ಪಕ್ಷಗಳು ವಿಚಲಿತರಾಗುವುದಿಲ್ಲ. ಕನ್ಹಯ್ಯ ಮಾಡಿದ ತಪ್ಪಿಗೆ ಅವರೇ ಉತ್ತರಿಸಬೇಕಾದ ಕಾಲ ಬರಬಹುದು.

ಭ್ರಷ್ಟರು, ಜಾತಿವಾದಿಗಳು ಸಾಲು, ಸಾಲಾಗಿ ಬಿಜೆಪಿ ಸೇರುತ್ತಿದ್ದಾರೆ. ಅವರ ಜತೆಯಲ್ಲೇ ಕನ್ಹಯ್ಯ ಅವರಂತಹ ಯುವ ನಾಯಕರೂ ಸೇರಿದ್ದಾರೆ. ಇದರಿಂದ ಯಾವ ಲಾಭವೂ ಆಗುವುದಿಲ್ಲ. ಕಾಂಗ್ರೆಸ್‌ ಮತ್ತು ಕನ್ಹಯ್ಯ ಇಬ್ಬರಿಗೂ ನಷ್ಟವೇ ಆಗಲಿದೆ.

– ಮುನೀರ್‌ ಕಾಟಿಪಳ್ಳ,ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ

---

‘ಕಾಂಗ್ರೆಸ್‌ ಕೂಡ ಬದಲಾವಣೆಗೆ ಸಜ್ಜಾಗುತ್ತಿದೆ’

ಆರ್‌. ಮಂಜುಳಾ ನಾಯ್ಡು

ಕನ್ಹಯ್ಯ ಸಿದ್ಧಾಂತದ ಆಧಾರದ ಮೇಲೆಯೇ ಕಾಂಗ್ರೆಸ್‌ಗೆ ಬಂದಿದ್ದಾರೆ. ಕಾಂಗ್ರೆಸ್‌ ಯಾವತ್ತೂ ಬಂಡವಾಳಶಾಹಿಗಳ ಪರವಾಗಿ ಇರಲಿಲ್ಲ. ಬಡವರನ್ನು ಮೇಲೆತ್ತುವುದಕ್ಕೆ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದೆ. ಸಾಮಾಜಿಕ ನ್ಯಾಯದ ಪರ ಹೋರಾಡುತ್ತಿರುವುದ ಪಕ್ಷ. ನಮ್ಮ ಪಕ್ಷ ಈಗ ದೇಶಕ್ಕೆ ಅನಿವಾರ್ಯವಾಗಿದೆ.

ಎಲ್ಲ ಪಕ್ಷಗಳಲ್ಲೂ ಆಂತರಿಕವಾದ ಸಮಸ್ಯೆಗಳಿವೆ. ಯಾವ ಪಕ್ಷವೂ ಅದಕ್ಕೆ ಹೊರತಾಗಿಲ್ಲ. ಕಾಂಗ್ರೆಸ್‌ನಲ್ಲಿ ಕೆಲವು ನಾಯಕರು ಆರ್‌ಎಸ್‌ಎಸ್‌, ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿರಬಹುದು. ಆದರೆ, ಕಾಂಗ್ರೆಸ್‌ನಲ್ಲೂ ಒಂದು ಬದಲಾವಣೆ ಆಗಬಹುದು.

ಕಾಂಗ್ರೆಸ್‌ ತನ್ನ ಸಿದ್ಧಾಂತಕ್ಕೆ ಗಟ್ಟಿಯಾಗಿ ಅಂಟಿಕೊಂಡಿದೆ. ಕಾಂಗ್ರೆಸ್ ಈಗಲೂ ವಿರೋಧ ಪಕ್ಷಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ದೂರದಲ್ಲಿ ನಿಂತು ನೋಡುವುದೇ ಒಂದು ನಿಲುವು ಆಗಬಾರದು. ಕನ್ಹಯ್ಯ ಕಾಂಗ್ರೆಸ್‌ ತನ್ನ ಆಯ್ಕೆ ಎಂಬುದನ್ನು ನಿರ್ಧರಿಸಿದ್ದಾರೆ. ಅವರನ್ನು ಬಿಹಾರಕ್ಕೆ ಸೀಮಿತಗೊಳಿಸಿ ನೋಡುವುದು ಸರಿಯಲ್ಲ. ಕನ್ಹಯ್ಯ ಸೇರಿದಂತೆ ಯುವ ನಾಯಕರ ಸೇರ್ಪಡೆಯಿಂದ ಕಾಂಗ್ರೆಸ್‌ ಮತ್ತು ದೇಶ ಇಬ್ಬರಿಗೂ ಒಳಿತಾಗಲಿದೆ.

– ಆರ್‌. ಮಂಜುಳಾ ನಾಯ್ಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

---

‘ಮುಕ್ತವಾಗಿ ಕೆಲಸ ಮಾಡಲು ಸಾಧ್ಯವೆ?’

ಬಿ.ಆರ್‌. ಮಂಜುನಾಥ್‌

ಸೈದ್ಧಾಂತಿಕ ದೃಷ್ಟಿಯಿಂದ ಇದು ದೊಡ್ಡ ಬದಲಾ ವಣೆ. ಕಾಂಗ್ರೆಸ್‌ ಬಂಡವಾಳಶಾಹಿ ವರ್ಗಲಕ್ಷಣ ಹೊಂದಿರುವ ಪಕ್ಷ. ಸ್ವಾತಂತ್ರ್ಯಕ್ಕೂ ಮೊದಲೇ ಅದು ಬಂಡವಾಳಶಾಹಿ ಗಳ ಕೈವಶ ಆಗಿತ್ತು. ಕನ್ಹಯ್ಯ ವಿರೋಧಿಸಿಕೊಂಡು ಬಂದ ಉದಾರೀಕರಣ, ಖಾಸಗೀಕರಣದ ರೂವಾರಿಯೇ ಕಾಂಗ್ರೆಸ್‌. ಇದು ಸಿಪಿಐ ಅಥವಾ ಮಾರ್ಕ್ಸ್‌ವಾದದ ಸೋಲು ಎಂದು ವ್ಯಾಖ್ಯಾನಿಸಲಾಗದು. ಈಗ ಉತ್ಸಾಹ ದಲ್ಲಿ ಕನ್ಹಯ್ಯ ಕಾಂಗ್ರೆಸ್‌ ಸೇರಿದ್ದಾರೆ. ಅಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡಲು ಅವರಿಗೆ ಅವಕಾಶ ಸಿಗುತ್ತಾ? ಕಾಂಗ್ರೆಸ್‌ನ ಒಳಗಿರುವ ಗುಂಪುಗಳು ಮುಕ್ತವಾಗಿ ಕೆಲಸ ಮಾಡಲು ಅವರಿಗೆ ಅವಕಾಶ ನೀಡುತ್ತವೆಯೆ ಎಂಬ ಪ್ರಶ್ನೆ ಇದೆ.

ಸ್ವಾತಂತ್ರ್ಯದ ನಂತರದಲ್ಲಿ ಹೋರಾಟ ನಡೆಸಿದ ಅನುಭವ ಕಾಂಗ್ರೆಸ್‌ಗೆ ಇಲ್ಲ. ಬಿಜೆಪಿಯ ಜನವಿರೋಧಿ ನಿಲುವುಗಳನ್ನು ಬಿಡಿ, ಬಿಡಿ ಹೋರಾಟಗಾರರು, ರೈತ ಸಂಘಟನೆಗಳು ವಿರೋಧಿಸುತ್ತಿವೆ. ಕಾಂಗ್ರೆಸ್‌ ತನ್ನ ಕಾರ್ಯಸೂಚಿಯನ್ನು ಸ್ಪಷ್ಟವಾಗಿ ನಿರ್ಧರಿಸಿಕೊಳ್ಳಬೇಕು. ಸಂವಿಧಾನಾತ್ಮಕ ಸಂಸ್ಥೆಗಳ ಉಳಿವು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಲೇಬೇಕು. ಕಾಂಗ್ರೆಸ್‌ ತನ್ನ ಸಿದ್ಧ ಮಾದರಿಗಳನ್ನು ಬದಿಗಿರಿಸಿ ಮುನ್ನಡೆಯಬೇಕು. ಎರಡೂವರೆ ವರ್ಷದಲ್ಲಿ ಅಂತಹ ಹೋರಾಟ ಕಟ್ಟಬೇಕು.

– ಬಿ.ಆರ್‌. ಮಂಜುನಾಥ್‌, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.