ADVERTISEMENT

ಚರ್ಚೆ: ರಾಜ್ಯ ಶಿಕ್ಷಣ ನೀತಿ ಯಾಕಾಗಿ?

ಹಂ.ಗು.ರಾಜೇಶ್‌
Published 11 ಜುಲೈ 2025, 23:30 IST
Last Updated 11 ಜುಲೈ 2025, 23:30 IST
<div class="paragraphs"><p>ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳು</p></div>

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳು

   
ವಿಷಯ: ಸಿಬಿಎಸ್‌ಇ ಪರೀಕ್ಷೆ ಮಾದರಿಯಲ್ಲಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವುದು ಅನುಕೂಲಕರವೇ?

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಶಿಕ್ಷಣವು ಸಮವರ್ತಿ ಪಟ್ಟಿಗೆ ಸೇರಿರುವುದರಿಂದ ಕೇಂದ್ರ ಮತ್ತು ರಾಜ್ಯಗಳಿಗೂ ಸಮಾನ ಅವಕಾಶವನ್ನು ಸಂವಿಧಾನದಲ್ಲಿ ಕಲ್ಪಿಸಲಾಗಿದೆ. ಏಕೆಂದರೆ, ಒಂದೊಂದು ರಾಜ್ಯವೂ ಪ್ರಾದೇಶಿಕವಾಗಿ ತನ್ನದೇ ಆದ ವಿಶೇಷಗಳನ್ನು ಹೊಂದಿರುತ್ತದೆ. ಆದ್ದರಿಂದ ಎಲ್ಲ ರಾಜ್ಯಗಳೂ ತಮ್ಮ ತಮ್ಮ ಪ್ರಾದೇಶಿಕ ಶೈಕ್ಷಣಿಕ ಸ್ವಾಯತ್ತೆಯನ್ನು ಕಾಪಾಡಿಕೊಳ್ಳಲು ಅರ್ಹವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್ಇಪಿ) ಪರ್ಯಾಯವಾಗಿ ರಾಜ್ಯ ಸರ್ಕಾರವು ಪ್ರೊ.ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ (ಎಸ್ಇಪಿ) ಸಮಿತಿ ರಚಿಸಿದೆ ಮತ್ತು ವರದಿಯ ನಿರೀಕ್ಷೆಯಲ್ಲಿದೆ. ಇಂತಹ ಸಂದರ್ಭದಲ್ಲಿ ಸಿಬಿಎಸ್ಇ ಪರೀಕ್ಷಾ ಮಾದರಿಯನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅಳವಡಿಸಿಕೊಳ್ಳುವ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿರುವುದು ಎಷ್ಟರಮಟ್ಟಿಗೆ ಸರಿ?

ಸಾಮಾನ್ಯವಾಗಿ ಸಿಬಿಎಸ್ಇ ಕಲಿಯುವ ಮಕ್ಕಳು ಮೇಲ್ಮಧ್ಯಮ ಹಾಗೂ ಮಧ್ಯಮ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಇಂತಹ ಶಾಲೆಗಳು ನಗರಕೇಂದ್ರಿತವಾಗಿರುತ್ತವೆ. ಆದರೆ, ರಾಜ್ಯ ಶಿಕ್ಷಣ ನೀತಿಯು ಕೇವಲ ನಗರಕೇಂದ್ರಿತವಾಗಿಲ್ಲ. ಬದಲಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಭಿನ್ನ ವಿಭಿನ್ನ ಸ್ತರಗಳ ಗ್ರಾಮೀಣ ಪ್ರದೇಶ, ಪಟ್ಟಣ ಪ್ರದೇಶ, ಕೊಳಚೆ ಪ್ರದೇಶ ಮೊದಲಾದ ಪ್ರದೇಶಗಳ ಮಕ್ಕಳು ರಾಜ್ಯ ಪಠ್ಯಕ್ರಮವನ್ನು ಅಭ್ಯಾಸ ಮಾಡುತ್ತಾರೆ. ಇವರೆಲ್ಲರನ್ನೂ ದೃಷ್ಟಿಯಲ್ಲಿರಿಸಿಕೊಂಡು ರಾಜ್ಯದ ಮಾದರಿಯನ್ನು ರೂಪಿಸುವ ನಿಟ್ಟಿನಲ್ಲಿ ಆಲೋಚಿಸಬೇಕಿದೆ.

ADVERTISEMENT

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಅಳವಡಿಸಿಕೊಳ್ಳಲು ಹೊರಟಿರುವ ಪರೀಕ್ಷಾ ಮಾದರಿಯಲ್ಲಿ ಕೆಲವು ಮೂಲಭೂತವಾದ ತಾತ್ವಿಕ ಹಾಗೂ ಪ್ರಾಯೋಗಿಕ ಸಮಸ್ಯೆಗಳೂ ಇವೆ. ಉದಾಹರಣೆಗೆ, ರಾಜ್ಯದಲ್ಲಿ ಕನ್ನಡ ಸೇರಿದಂತೆ ಪ್ರಥಮ ಭಾಷೆಯ ಪರೀಕ್ಷೆಯನ್ನು 125 ಅಂಕಗಳಿಗೆ ನಡೆಸುವುದರ ಹಿಂದೆ ಕನ್ನಡ ಚಳವಳಿಯ ಹೋರಾಟದ ತಾತ್ವಿಕತೆಯ ಹಿನ್ನೆಲೆ ಇದೆ. ಕನ್ನಡ ಅಸ್ಮಿತೆಯ ದ್ಯೋತಕವಾದ ‘ಗೋಕಾಕ್ ಚಳವಳಿ’ಯ ಪ್ರೇರಣೆ ಮತ್ತು ಪ್ರಭಾವವಿದೆ. ಇದನ್ನು ಅರಿಯದೆ ರಾಜ್ಯದಲ್ಲಿ ಪ್ರಥಮ ಭಾಷಾ ಪರೀಕ್ಷೆಯನ್ನು 125ರಿಂದ 100 ಅಂಕಗಳಿಗೆ ಇಳಿಸುವುದು ಕನ್ನಡದ ಹಿರಿಯ ಸಾಹಿತಿ, ಕಲಾವಿದರು, ಚಳವಳಿಗಾರರು ಮಾತ್ರವಲ್ಲ; ಕರ್ನಾಟಕದ ಸಾಂಸ್ಕೃತಿಕ ನಾಯಕ ಡಾ.ರಾಜಕುಮಾರ್ ಅವರ ಹೋರಾಟವನ್ನೂ ಅವಮಾನಿಸಿದಂತಾಗುತ್ತದೆ.

ಒಂದು ವೇಳೆ ಎನ್ಇಪಿ ಆಶಯಕ್ಕೆ ಪೂರಕವಾಗಿರುವ ಸಿಬಿಎಸ್ಇ ಪರೀಕ್ಷಾ ಮಾದರಿಯನ್ನು ಅಳವಡಿಸಿಕೊಂಡಲ್ಲಿ, ಮುಂದಿನ ದಿನಗಳಲ್ಲಿ ಭಿನ್ನ ಸ್ವರೂಪದ ಪಠ್ಯಗಳನ್ನು ತೊರೆದು ಎನ್ಇಪಿ ಪಠ್ಯಕ್ರಮಗಳನ್ನೇ ಅಳವಡಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಖಾತರಿ ಏನಿದೆ? ಮುಂದಿನ ದಿನಗಳಲ್ಲಿ ಅಂತಹ ತೀರ್ಮಾನಗಳನ್ನು ತೆಗೆದುಕೊಂಡರೂ ಯಾರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ, ಈ ಹಿಂದೆ ಸುರೇಶ್ ಕುಮಾರ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನೇ ರಾಜ್ಯದಲ್ಲಿಯೂ ಅನುಷ್ಠಾನಕ್ಕೆ ತರಲು ರಾಜ್ಯ ಪಠ್ಯಪುಸ್ತಕ ಸಂಘದ ಮೂಲಕ ತರಾತುರಿಯಲ್ಲಿ ಅನುವಾದ ಕಾರ್ಯವನ್ನು ನಡೆಸಲಾಗಿತ್ತು. ಆದರೆ, ಉತ್ತರ ಭಾರತ ಕೇಂದ್ರಿತವಾದ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ರಾಜ್ಯದ ಇತಿಹಾಸ, ಸಂಸ್ಕೃತಿ, ಭೌಗೋಳಿಕತೆಗೆ ಯಾವುದೇ ಸ್ಥಾನ ಇಲ್ಲ. ಅಂತಹ ಪಠ್ಯಗಳನ್ನು ನಮ್ಮ ಮಕ್ಕಳಿಗೆ ಕಲಿಸುವ ಅಗತ್ಯವಾದರೂ ಏನಿದೆ? ಇದು ನಾಡಿನ ಅಸ್ಮಿತೆಯನ್ನು ಕಡೆಗಣಿಸುವುದು ಮಾತ್ರವಲ್ಲ; ಮಕ್ಕಳಲ್ಲಿ ನಮ್ಮ ನಾಡಿಗೆ ಯಾವುದೇ ಇತಿಹಾಸ ಮತ್ತು ಸಂಸ್ಕೃತಿಯೂ ಇಲ್ಲವೆಂಬ ಕೀಳರಿಮೆಯನ್ನು ಮೂಡಿಸುತ್ತದೆಂಬ ವಿರೋಧ ವ್ಯಕ್ತವಾಯಿತು. ಇದನ್ನು ಅರಿತ ಸಚಿವರು ಕೂಡಲೇ ಎಚ್ಚೆತ್ತುಕೊಂಡು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಅನುವಾದ ಕಾರ್ಯವನ್ನು ಸ್ಥಗಿತಗೊಳಿಸಿ, ಪುನಃ ರಾಜ್ಯ ಪಠ್ಯಪುಸ್ತಕಗಳನ್ನೇ ಯಥಾವತ್ ಮುಂದುವರಿಸಿದ್ದನ್ನು ಇಲ್ಲಿ ನೆನೆಯಬಹುದು.

ಈಗ ತರಲು ಹೊರಟಿರುವ ಪರೀಕ್ಷಾ ಮಾದರಿಯಲ್ಲಿನ ಮತ್ತೊಂದು ಸಮಸ್ಯೆ ಎಂದರೆ, ಸಿಬಿಎಸ್ಇ ಮಾದರಿಯಲ್ಲಿ ಆಂತರಿಕ ಅಂಕಗಳು 20 ಮತ್ತು ಲಿಖಿತ ಪರೀಕ್ಷೆಯ ಅಂಕಗಳು 80. ವಿದ್ಯಾರ್ಥಿ ಉತ್ತೀರ್ಣನಾಗಲು ಒಟ್ಟು 100ಕ್ಕೆ ಒಟ್ಟು 33 ಅಂಕ ಪಡೆದರೆ ಸಾಕು. ಅಂತರಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿ ಲಿಖಿತ ಪರೀಕ್ಷೆಯಲ್ಲಿ 80ಕ್ಕೆ ಕೇವಲ 13 ಅಂಕ ಪಡೆದರೂ ಪಾಸು. ಆದರೆ, ಪ್ರಸ್ತುತ ಇರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ವಿದ್ಯಾರ್ಥಿಯು ಉತ್ತೀರ್ಣನಾಗಲು 35 ಅಂಕ ಪಡೆಯಬೇಕಿದ್ದು, ಈ 35 ಅಂಕಗಳಲ್ಲಿ ಲಿಖಿತ ಪರೀಕ್ಷೆಯ 80ಕ್ಕೆ ಕನಿಷ್ಠ 28 ಅಂಕ ಪಡೆದಿರಲೇಬೇಕು. ಒಟ್ಟಾರೆ, ಪರೀಕ್ಷಾ ಪಾವಿತ್ರ್ಯವನ್ನು ಗೌಣಗೊಳಿಸುವ ಸಿಬಿಎಸ್ಇ ಪರೀಕ್ಷಾ ಮಾದರಿಗಿಂತ ಗುಣಾತ್ಮಕತೆಯ ದೃಷ್ಟಿಯಿಂದ ಉನ್ನತವಾದ ನಮ್ಮ ಪರೀಕ್ಷಾ ಮಾದರಿಯೇ ಉತ್ತಮ ಮಾದರಿಯಲ್ಲವೇ? ಒಂದು ವೇಳೆ ಸಿಬಿಎಸ್ಇ ಮಾದರಿಯನ್ನೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಒಪ್ಪಿಕೊಳ್ಳುವುದಾದರೆ ಈವರೆಗೆ ‘ಕರ್ನಾಟಕ ಮಾದರಿ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಮೂರು ಪರೀಕ್ಷೆಗಳನ್ನು ಕೈಬಿಟ್ಟು, ಎರಡು ಪರೀಕ್ಷೆಗಳನ್ನೇ ನಡೆಸಬೇಕಾಗುತ್ತದೆ.

ಸುಧಾರಣಾತ್ಮಕ ದೃಷ್ಟಿಯಿಂದ ಮೂರು ಪರೀಕ್ಷೆಗಳ ಬದಲು ಎರಡು ಪರೀಕ್ಷಾ ಮಾದರಿ ಉತ್ತಮವಾದುದೇ ಸರಿ. ಏಕೆಂದರೆ, ಮೂರು ಪರೀಕ್ಷೆಗಳಿಂದಾಗಿ ವಿದ್ಯಾರ್ಥಿಗಳ ಜೊತೆಗೆ ಪೋಷಕರು ಮತ್ತು ಶಿಕ್ಷಕರು ಕೂಡ ಅನಗತ್ಯ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಶೈಕ್ಷಣಿಕ ವರ್ಷ ಆರಂಭವಾದರೂ ಹೊಸ ವಿದ್ಯಾರ್ಥಿಗಳಿಗೆ ಪಾಠ ಮಾಡುವುದನ್ನು ಬಿಟ್ಟು ಹಳೆಯ ವಿದ್ಯಾರ್ಥಿಗಳ ಪರೀಕ್ಷಾ ಹಾಗೂ ಮೌಲ್ಯಮಾಪನ ಕಾರ್ಯದಲ್ಲಿಯೇ ಶಿಕ್ಷಕರು ತೊಡಗಬೇಕಾಗುತ್ತದೆ. ಇದರಿಂದ ಹೊಸ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಆದರೆ, ಎರಡು ಪರೀಕ್ಷೆಗಳು ಸಾಕೆಂದ ಮಾತ್ರಕ್ಕೆ ರಾಜ್ಯ ಪರೀಕ್ಷಾ ಮಾದರಿಯನ್ನು ಸಾರಾಸಗಟಾಗಿ ನಿರಾಕರಿಸಬೇಕೆಂತೇನೂ ಅಲ್ಲ; ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಧಾರಣೆಯಾಗಬೇಕು. ಏಕೆಂದರೆ ನಿರಾಕರಣೆಯೇ ಬೇರೆ; ಸುಧಾರಣೆಯೇ ಬೇರೆ. ಈ ರೀತಿಯ ಯಾವುದೇ ಶೈಕ್ಷಣಿಕ ಸುಧಾರಣೆಗಳನ್ನು ತರುವ ಮುನ್ನ ಚಿಂತಕರು, ಶಿಕ್ಷಣ ತಜ್ಞರು ಹಾಗೂ ಶಿಕ್ಷಕ ಸಂಘಟನೆಗಳ ಪ್ರತಿನಿಧಿಗಳ ಜೊತೆಗೆ ಚರ್ಚೆ ಮತ್ತು ಸಮಾಲೋಚನೆ ನಡೆಸುವುದು ಉತ್ತಮ.

ಇನ್ನೊಂದು ವಿಚಾರದ ಕಡೆಗೆ ನಾವು ಗಮನ ಹರಿಸಲೇಬೇಕಿದೆ. ಸಿಬಿಎಸ್ಇ ಪರೀಕ್ಷಾ ಮಾದರಿಯಲ್ಲಿ ವಸ್ತುನಿಷ್ಠ ಪ್ರಶ್ನೋತ್ತರಗಳಿಗೆ ಹೆಚ್ಚಿನ ಆದ್ಯತೆ ನೀಡಿರುವಂತೆ ತೋರುತ್ತದೆ. ಇದು ವಿದ್ಯಾರ್ಥಿಗಳಲ್ಲಿನ ಬರವಣಿಗೆಯ ಕೌಶಲವನ್ನು ಕುಂಠಿತಗೊಳಿಸುತ್ತದೆ. ವಿಶೇಷವಾಗಿ ಭಾಷಾ ವಿಷಯಗಳಲ್ಲಿ ಈ ಸಮಸ್ಯೆ ಗಂಭಿರವಾಗಿ ಕಾಡುತ್ತದೆ.

ಕೊನೆಯದಾಗಿ ಹೇಳುವುದಿಷ್ಟೇ: ರಾಜ್ಯದಲ್ಲಿಯೂ ಕೂಡ ಸುಧಾರಣಾತ್ಮಕ ದೃಷ್ಟಿಯಿಂದ ಸಿಬಿಎಸ್ಇ ಮಾದರಿಯಂತೆ ಎಸ್‌ಎಸ್‌ಎಲ್‌ಸಿ ಹಂತದಲ್ಲಿ ಮೂರು ಭಾಷಾ ವಿಷಯಗಳ ಬದಲು ಎರಡು ಭಾಷಾ ವಿಷಯಗಳನ್ನು ಪರಿಚಯಿಸುವುದು ಉಚಿತವೆಂದು ತೋರುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿದರೆ ಮಕ್ಕಳ ಮೇಲಿನ ಅನಗತ್ಯ ಒತ್ತಡವನ್ನು ನಿವಾರಿಸಬಹುದು. ಇಂತಹ ಸೂಕ್ಷ್ಮ ಶೈಕ್ಷಣಿಕ ತೀರ್ಮಾನಗಳನ್ನು ಮೊದಲು ಕಾನೂನು ತಜ್ಞರು, ಶಿಕ್ಷಣ ತಜ್ಞರು, ಚಿಂತಕರು ಮತ್ತು ಶಿಕ್ಷಣ ಸಂಘಟನೆಗಳ ಜೊತೆಗೆ ಚರ್ಚಿಸಬೇಕು. ಇಲ್ಲವೇ ಇದಕ್ಕಾಗಿಯೇ ಒಂದು ಶಾಶ್ವತ ‘ಶೈಕ್ಷಣಿಕ ಪರಿಷತ್‌’ ಸ್ಥಾಪಿಸಬೇಕು. ಸದ್ಯಕ್ಕೆ ಇವೆಲ್ಲಕ್ಕೂ ಪ್ರೊ.ಸುಖದೇವ್ ಥೋರಟ್ ಅವರ ನೇತೃತ್ವದ ಎಸ್ಇಪಿ ಸಮಿತಿಯು ತನ್ನ ವರದಿಯಲ್ಲಿ ಪರಿಹಾರ ನೀಡಬಲ್ಲದೇ? ಕಾದು ನೋಡಬೇಕು.

ಭಾಷಾ ಕಲಿಕೆಯಲ್ಲಿ ಭಿನ್ನತೆ

ಸಿಬಿಎಸ್ಇಯಲ್ಲಿ 8ನೇ ತರಗತಿಯವರೆಗೂ ಕಡ್ಡಾಯವಾಗಿ ಹಿಂದಿಯನ್ನು ಒಳಗೊಂಡಂತೆ ಮೂರು ಭಾಷಾ ವಿಷಯಗಳನ್ನು ಕಲಿಸಲಾಗುತ್ತದೆ. ಆದರೆ, 9 ಹಾಗೂ 10ನೇ ತರಗತಿಯಲ್ಲಿ ಎರಡು ಭಾಷಾ ವಿಷಯಗಳನ್ನು ಕಲಿಸಲಾಗುತ್ತದೆ. ಆದರೆ ನಮ್ಮಲ್ಲಿ 10ನೇ ತರಗತಿಯವರೆಗೂ ಮೂರು ಭಾಷಾ ವಿಷಯಗಳನ್ನು ಕಲಿಸುವ ಪದ್ಧತಿ ಇದೆ. ಒಟ್ಟಾರೆ, ಎರಡೂ ಪಠ್ಯ ವಿಷಯಗಳ ಮಾದರಿಯಲ್ಲಿ ಭಿನ್ನತೆ ಇರುವುದರಿಂದ ಸಿಬಿಎಸ್ಇ ಮಾದರಿ ಪರೀಕ್ಷಾ ಮಾದರಿಯನ್ನೇ ರಾಜ್ಯದಲ್ಲಿಯೂ ಅಳವಡಿಸಿಕೊಳ್ಳುವುದರ ಕುರಿತು ಮರುಚಿಂತನೆ ನಡೆಸುವ
ಅಗತ್ಯವಿದೆ.

ಲೇಖಕ: ಬೆಂಗಳೂರಿನ ಕೆಂಗೇರಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.