‘ಭಾರತೀಯ ಭಾಷಾ ದಿವಸ್’ ಪ್ರಯುಕ್ತ, ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಹಾಗೂ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠವು ಇತ್ತೀಚೆಗೆ ಪ್ರಕರಣವೊಂದರ ತೀರ್ಪನ್ನು ಕನ್ನಡ ದಲ್ಲಿಯೇ ನೀಡಿರುವುದು ಒಂದು ಐತಿಹಾಸಿಕ ಸಂಗತಿ ಎಂದು ಸಿ.ಸೋಮಶೇಖರ ಹೇಳಿದ್ದಾರೆ (ವಾ.ವಾ., ಡಿ. 14).
ನ್ಯಾಯಾಲಯಗಳ ತೀರ್ಪುಗಳು ಕನ್ನಡದಲ್ಲಿ ಇರುವಂತೆ ಸರ್ಕಾರವು ಸಂವಿಧಾನಾತ್ಮಕವಾಗಿ ಕ್ರಮ ಕೈಗೊಳ್ಳಲಿ ಎಂದು ಸಹ ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ. ಆದರೆ, ‘ತೀರ್ಪುಗಳ ಅನುವಾದ: ಇದೆ ಒಳಸುಳಿ’ ಎಂಬ ಪತ್ರದಲ್ಲಿ (ವಾ.ವಾ., ಡಿ. 21) ಕೆ.ಟಿ.ಕೃಷ್ಣಕಾಂತ್ ಈ ವಿಷಯದ ಬಗ್ಗೆ ನೇತ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಪತ್ರಗಳನ್ನು ಓದಿದಾಗ, ಕುವೆಂಪು
ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಆಗಿದ್ದ ಅನುಭವವೊಂದರ ಕುರಿತು ಓದಿದ್ದು ನೆನಪಾಯಿತು.
ಕುವೆಂಪು ಅವರು ತಮ್ಮ ಬರವಣಿಗೆಯ ಆರಂಭಿಕ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಕವನಗಳನ್ನು ರಚಿಸುತ್ತಿದ್ದರಂತೆ. ಅದನ್ನು ಮೆಚ್ಚಿದ್ದ ಅವರ ಅಧ್ಯಾಪಕರು, ಆಗ ಮೈಸೂರಿಗೆ ಬಂದಿದ್ದ ಪ್ರಸಿದ್ಧ ಐರಿಷ್ ಕವಿ ಕಸಿನ್ಸ್ ಅವರಿಗೆ ಅವರ ಕವನಗಳನ್ನು ತೋರಿಸುವಂತೆ ಸೂಚಿಸಿದರು. ಅಂತೆಯೇ ಕುವೆಂಪು ಅವರು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ್ದ ತಮ್ಮ ಕವನಗಳನ್ನು ಕಸಿನ್ಸ್ ಅವರಿಗೆ ತೋರಿಸಿದರು. ಅವರು ಅವುಗಳನ್ನು ಓದಿ, ‘ಈ ಕವನಗಳನ್ನು ನಿಮ್ಮ ಭಾಷೆಯಲ್ಲಿ ಯಾಕೆ ಬರೆಯಲಿಲ್ಲ?’ ಎಂದು ಪ್ರಶ್ನಿಸಿದರು. ಅದಕ್ಕೆ ಕುವೆಂಪು, ‘ಸೂಕ್ಷ್ಮ ಭಾವನೆಗಳನ್ನು ಮತ್ತು ಆಳವಾದ ಚಿಂತನೆಗಳನ್ನು ಇಂಗ್ಲಿಷ್ ಭಾಷೆಯಲ್ಲಿ
ವ್ಯಕ್ತಪಡಿಸಿದಂತೆ ಕನ್ನಡದಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಅದಕ್ಕಾಗಿ ಇಂಗ್ಲಿಷ್‌ನಲ್ಲಿ ಬರೆದಿದ್ದೇನೆ’ ಎಂದರಂತೆ. ಆಗ ಅವರು, ‘ಯಾವ ಭಾಷೆಯೂ ಭಾವನೆಯ ಅಭಿವ್ಯಕ್ತಿಗೆ ಅಸಮರ್ಥ ಎಂದು ಹೇಳಲಾಗದು’ ಎಂದು ಹೇಳಿ, ಇದಕ್ಕೆ ಪೂರಕವಾಗಿ ರವೀಂದ್ರನಾಥ ಟ್ಯಾಗೋರ್ ಅವರನ್ನು ಉದಾಹರಿಸಿದರಂತೆ.
‘ಟ್ಯಾಗೋರ್ ಅವರು ಬಂಗಾಳಿ ಭಾಷೆಯಲ್ಲಿ ಬರೆಯುವವರೆಗೆ ಬಂಗಾಳಿ ಭಾಷೆಯ ಬಗೆಗೂ ಅಂಥದ್ದೇ ಭಾವನೆ ಇತ್ತು. ಟ್ಯಾಗೋರ್ ಅವರು ಬಂಗಾಳಿ ಭಾಷೆಯನ್ನು ಜಗತ್ತಿನ ಮಟ್ಟಕ್ಕೆ ಮುಟ್ಟಿಸಿದರು. ಆದ್ದರಿಂದ ನೀವೂ ನಿಮ್ಮ ಭಾಷೆಯಲ್ಲಿ ಬರೆಯಿರಿ’ ಎಂದು ಹೇಳಿದ ಮೇಲೆ ಕುವೆಂಪು ಕನ್ನಡದಲ್ಲಿ ಬರೆಯಲು ಆರಂಭಿಸಿ ಮಹಾನ್ ಕವಿಯಾದರು.
ಹಾಗಾಗಿ, ಇಂಗ್ಲಿಷ್ ಭಾಷೆಯಲ್ಲಿರುವ ಜಟಿಲ ಕಾಯ್ದೆಗಳ ಅರ್ಥಜಿಜ್ಞಾಸೆ, ನಿರ್ದುಷ್ಟವಾದ ಅನುವಾದ ಕನ್ನಡದಲ್ಲಿ ಸಾಧ್ಯವಾಗಲಾರದು ಎಂಬ ಅನುಮಾನ ಅನಗತ್ಯ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಪ್ಪತ್ತನೆಯ ಶತಮಾನದಲ್ಲಿ ಅದು ಅದ್ಭುತವಾದ ವಿಕಾಸವನ್ನೂ ಪಡೆದಿದೆ. ಒಂದುವೇಳೆ ಎಲ್ಲಿಯಾದರೂ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಂದಿಗ್ಧ ತಲೆದೋರಿದರೆ, ಅಂತಹ ಇಂಗ್ಲಿಷ್ ಪದವನ್ನು ಆವರಣದಲ್ಲಿ ಸೂಚಿಸಿದರಾಯಿತು. ಅಪರೂಪಕ್ಕೆ ಎದುರುಗೊಳ್ಳಬಹುದಾದ ಬಿಕ್ಕಟ್ಟುಗಳನ್ನೇ ಮುಂದುಮಾಡಿ, ಬಹುಮಂದಿ ಕಕ್ಷಿದಾರರ ಪಾಲಿಗೆ ನ್ಯಾಯನಿರ್ಣಯ
ವನ್ನು, ‘ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ’ ಆಗಿಸುವುದು ಬೇಡ.
⇒ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು
‘ತೀರ್ಪುಗಳ ಅನುವಾದ ಬರೀ ಭಾವನಾತ್ಮಕ ವಿಷಯವಲ್ಲ. ಅದರಲ್ಲಿ ಒಳಸುಳಿಗಳು ಇರುವುದರಿಂದ ಮುಂದಡಿ ಇಡುವ ಮೊದಲು ಎಚ್ಚರ ವಹಿಸಬೇಕು’ ಎಂದು ಹೇಳಿರುವ ಕೆ.ಟಿ.ಕೃಷ್ಣಕಾಂತ್, ‘ಕರ್ನಾಟಕವು ಪ್ರತ್ಯೇಕ ದೇಶವಾಗಿ ತನ್ನದೇ ಕಾನೂನು ಹೊಂದಿದ್ದರೆ ಕನ್ನಡದಲ್ಲೇ ತೀರ್ಪು ಬರೆಯುವುದು ಸೂಕ್ತ ಎನಿಸುತ್ತಿತ್ತು’ ಎಂದಿದ್ದಾರೆ. ಆದರೆ ಅವರ ಈ ಹೇಳಿಕೆ ಸರಿಯಲ್ಲ.
ಭಾರತವು ರಾಜ್ಯಗಳ ಒಕ್ಕೂಟ. ಪ್ರತಿ ರಾಜ್ಯವೂ ತನ್ನದೇ ಆದ ಭಾಷೆ, ಸಂಸ್ಕೃತಿ, ಆಚಾರ- ವಿಚಾರ, ಸಂವಿಧಾನದ ಅಡಿಯಲ್ಲೇ ಹಲವು ಪ್ರತ್ಯೇಕ ಕಾನೂನುಗಳನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನೂ ಹೊಂದಿದೆ. ಅಲ್ಲದೆ ಆಯಾ ರಾಜ್ಯದಭಾಷೆಯಲ್ಲೇ ಕಾನೂನು ಹೋರಾಟ ನಡೆದು, ಕಾನೂನಿನ ಮಜಲುಗಳು, ತನಗೆ ದೊರೆತ ನ್ಯಾಯದ ಬಗ್ಗೆ ನೊಂದವರು ತಿಳಿದುಕೊಳ್ಳಬೇಕು. ಅಂದರೆ ದೂರುದಾರ ಸ್ವತಃ ತನ್ನ ದೂರು, ಹೇಳಿಕೆ, ಪ್ರತಿದೂರು ದಾರನ ದೂರು, ಹೇಳಿಕೆಯಂತಹವನ್ನು ತಿಳಿದು ನ್ಯಾಯಾಲಯದ ವ್ಯವಹಾರಗಳಲ್ಲಿ ಭಾಗಿಯಾಗಿ, ವಂಚನೆಗಳಿಗೆ ಒಳಗಾಗದೆ ನ್ಯಾಯ ಪಡೆಯಬೇಕು, ನ್ಯಾಯದ ಜ್ಞಾನ ಪಡೆಯಬೇಕು. ಹೀಗಾಗಿಯೇ ಸ್ಥಳೀಯ ಭಾಷೆಗಳಲ್ಲಿ ಕಾನೂನು, ನ್ಯಾಯಾಲಯದ ವ್ಯವಹಾರಗಳು ನಡೆಯಲು ಅವಕಾಶ ಕಲ್ಪಿಸಲಾಗಿದೆ. ಸುಪ್ರೀಂ ಕೋರ್ಟ್ ಸಹ ಸ್ಥಳೀಯ ಭಾಷೆಗಳಲ್ಲಿ ತೀರ್ಪುಗಳು ದೊರೆಯುವಂತಹ ವ್ಯವಸ್ಥೆಗೆ ಪ್ರೋತ್ಸಾಹ ನೀಡಿ ಕಾರ್ಯೋನ್ಮುಖವಾಗಿದೆ.
ಅನುವಾದ, ಅರ್ಥಜಿಜ್ಞಾಸೆ ನಡೆಸುವ ತಂತ್ರಜ್ಞಾನ ಬೆರಳತುದಿಯಲ್ಲೇ ಇರುವಾಗ ಇದರ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಇನ್ನು ಕಾಗುಣಿತ ಅರಿಯದ ಪದವೀಧರರು ನ್ಯಾಯಾಧೀಶರ ಹುದ್ದೆಯ ಕಠಿಣ ಪರೀಕ್ಷೆಯನ್ನು ಎದುರಿಸಿ ಆ ಹುದ್ದೆಗೆ ಬರಲಾರರು. ನಮ್ಮ ಊರಿನ ಎಲ್ಲಾ ನ್ಯಾಯಾಧೀಶರು ಅತ್ಯಂತ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ, ಡಿಕ್ಟೇಶನ್ ಕೊಡುತ್ತಾರೆ, ವಾದ ವಿವಾದಗಳನ್ನು ಆಲಿಸುತ್ತಾರೆ, ತೀರ್ಪುಗಳನ್ನೂ ಬರೆಯುತ್ತಿದ್ದಾರೆ. ಸ್ಥಳೀಯ ಭಾಷೆಗಳು ಬರೀ
ಭಾವನಾತ್ಮಕವಲ್ಲ. ಬದುಕು, ಬದುಕಿನ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವ ಹಕ್ಕು ಎಲ್ಲರಿಗೂ ಇದೆ.
⇒ಸರೋಜ ಎಂ.ಎಸ್., ಸಾಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.