ADVERTISEMENT

ಚರ್ಚೆ | ಜನರ ಬಳಿಯ ಅಧಿಕಾರ ಕಿತ್ತು ಸರ್ಕಾರಕ್ಕೆ ನೀಡುವ ಪ್ರಯತ್ನ: ಕಾತ್ಯಾಯಿನಿ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಿಂದ ರಾಜಧಾನಿಗೆ ಅನುಕೂಲವೇ?

ಕಾತ್ಯಾಯಿನಿ ಚಾಮರಾಜ್
Published 29 ಮಾರ್ಚ್ 2025, 0:30 IST
Last Updated 29 ಮಾರ್ಚ್ 2025, 0:30 IST
<div class="paragraphs"><p>ಗ್ರೇಟರ್ ಬೆಂಗಳೂರು</p></div>

ಗ್ರೇಟರ್ ಬೆಂಗಳೂರು

   
ಜಿಬಿಜಿ ಮಸೂದೆಯು ಸಂವಿಧಾನದ 74ನೇ ತಿದ್ದುಪಡಿ ಕಾಯ್ದೆಯ ಆಶಯವನ್ನು ಸಂಪೂರ್ಣವಾಗಿ ಬುಡಮೇಲು ಮಾಡುತ್ತದೆ. ಹಾಗಾಗಿ, ಈ ಮಸೂದೆಯನ್ನು ಸರ್ಕಾರ ವಾಪಸ್‌ ಪಡೆಯಬೇಕು. ಜನರಿಂದ ವ್ಯಾಪಕವಾಗಿ ಅಭಿಪ್ರಾಯಗಳನ್ನು ಸಂಗ್ರಹಿಸಿ, ಮತ್ತೆ ಕರಡು ಮಸೂದೆ ರೂಪಿಸುವ ಪ್ರಕ್ರಿಯೆ ಆರಂಭಿಸಬೇಕು

ಸಂವಿಧಾನದ 74ನೇ ತಿದ್ದುಪಡಿ ಕಾಯ್ಥೆ ಅಥವಾ ನಗರಪಾಲಿಕೆ ಕಾಯ್ದೆ ಜಾರಿಗೆ ಬಂದು 31 ವರ್ಷಗಳು ಕಳೆದಿವೆ. ಇದರಂತೆ, ಬಿಬಿಎಂಪಿಯನ್ನು ನಿಜವಾದ ನಗರ ಸ್ಥಳೀಯ ಆಡಳಿತವನ್ನಾಗಿ ಮಾಡಲು ಮತ್ತು ಸಂವಿಧಾನದ 74ನೇ ತಿದ್ದುಪಡಿಯು ಅವಕಾಶ ನೀಡಿದಂತೆ ‘ಜನರಿಗೆ ಅಧಿಕಾರ ನೀಡಲು’ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜನರು ಆಶಿಸಿದ್ದರು. ಆದರೆ, ಈಗ ಆ ತಿದ್ದುಪಡಿಯನ್ನು ಸಂಪೂರ್ಣವಾಗಿ ಬುಡಮೇಲು ಮಾಡಲು ಮತ್ತು ಬಿಬಿಎಂಪಿಯ ನಿಯಂತ್ರಣವನ್ನು ಮತ್ತೆ ರಾಜ್ಯ ಸರ್ಕಾರಕ್ಕೆ ವಹಿಸಲು ಹಾಗೂ ಸ್ಥಳೀಯ ಆಡಳಿತವನ್ನು ದುರ್ಬಲಗೊಳಿಸಲು, ನಿಷ್ಪರಿಣಾಮಕಾರಿಯಾಗಿ ಮಾಡಲು ದೊಡ್ಡ ಪ್ರಯತ್ನವೇ ನಡೆಯುತ್ತದೆ ಎಂಬುದನ್ನು ಯಾರು ಯೋಚಿಸಿದ್ದರು? ಗ್ರೇಟರ್‌ ಬೆಂಗಳೂರು ಆಡಳಿತ (ಜಿಬಿಜಿ) ಮಸೂದೆಯು ಮಾಡಲು ಹೊರಟಿರುವುದು ಇದನ್ನೇ. ಉತ್ತಮ ಆಡಳಿತ ನೀಡಲು ಬಿಬಿಎಂಪಿ ವಿಫಲವಾಗಿದೆ. ಹಾಗಾಗಿ, ಮುಖ್ಯಮಂತ್ರಿ, ಹಲವು ಸಚಿವರು, ಶಾಸಕರು, ಸಂಸದರು ಮತ್ತು ಅಧಿಕಾರಿಗಳ ನೇತೃತ್ವದ ರಾಜ್ಯಮಟ್ಟದ ಸಂಸ್ಥೆಯಾದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಬಿಬಿಎಂಪಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳುತ್ತದೆ ಈ ಮಸೂದೆ.

ಬಿಬಿಎಂಪಿಯು ನಿಜವಾಗಿಯೂ ಆಡಳಿತ ನಡೆಸಲು ವಿಫಲವಾಯಿತೇ? ಅಥವಾ 74ನೇ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆಯೇ? ಈ ಮೂರು ದಶಕಗಳಲ್ಲಿ ಬಿಬಿಎಂಪಿಗೆ ನಿಯಮಿತವಾಗಿ ಚುನಾವಣೆ ನಡೆಸಲು ಸರ್ಕಾರವು ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರವನ್ನೇ ನೀಡಲಿಲ್ಲ. ವಾರ್ಡ್‌ಗಳ ಪುನರ್‌ವಿಂಗಡಣೆ ಮತ್ತು ಮೀಸಲು ನಿಗದಿ ಮಾಡುವ ಅಧಿಕಾರವನ್ನು ತನ್ನಲ್ಲೇ ಇರಿಸಿಕೊಳ್ಳುವ ಮೂಲಕ ಸಕಾಲದಲ್ಲಿ ಬಿಬಿಎಂಪಿ ಚುನಾವಣೆ ನಡೆಸುವುದನ್ನು ಸರ್ಕಾರ ತಡೆದಿತ್ತು. ಈಗಲೂ ನಾಲ್ಕೂವರೆ ವರ್ಷಗಳಿಂದ ಚುನಾವಣೆ ನಡೆದಿಲ್ಲ. ಚುನಾಯಿತ ಆಡಳಿತ ಕೌನ್ಸಿಲ್‌ನ ರಚನೆಯಲ್ಲಿ ವಿಳಂಬವಾದರೆ ಸ್ವಾಭಾವಿಕವಾಗಿ ಸ್ಥಳೀಯ ಆಡಳಿತ ಕಳಪೆಯಾಗುತ್ತದೆ. ಜಿಬಿಜಿ ಮಸೂದೆಯು ರಾಜ್ಯ ಚುನಾವಣಾ ಆಯೋಗದ ಅಧಿಕಾರ ಕಸಿದುಕೊಳ್ಳುವುದನ್ನು ಮುಂದುವರಿಸುವುದರ ಜತೆಗೆ ತಮ್ಮ ಅಗತ್ಯಗಳಿಗೆ ಸ್ಪಂದಿಸುವ ಸ್ಥಳೀಯ ಆಡಳಿತದಿಂದ ನಾಗರಿಕರು ವಂಚಿತರನ್ನಾಗುವಂತೆ ಮಾಡುತ್ತದೆ.

ADVERTISEMENT

ಬೆಂಗಳೂರು ವಿಸ್ತಾರವಾಗಿ ಬೆಳೆದಿರುವುದರಿಂದ ಬಿಬಿಎಂಪಿ ಮತ್ತು ಒಬ್ಬ ಕಮಿಷನರ್‌ ಅವರಿಂದ ಆಡಳಿತ ನಡೆಸಲು ಸಾಧ್ಯವಿಲ್ಲ. ಹಾಗಾಗಿ ನಗರವನ್ನು ಏಳು ಸಣ್ಣ ಪಾಲಿಕೆಗಳನ್ನಾಗಿ ವಿಭಜಿಸುವ ಅಗತ್ಯವಿದೆ ಎಂದು ಮಸೂದೆ ರೂಪಿಸಿದವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಹಲವು ಪಾಲಿಕೆಗಳನ್ನು ರಚಿಸಿದರೆ ಬೆಂಗಳೂರಿನ ಎಲ್ಲ ಪ್ರದೇಶಗಳಿಗೂ ವರಮಾನವನ್ನು ಸಮನಾಗಿ ಮರುಹಂಚಿಕೆ ಮಾಡುವುದು ಅಸಾಧ್ಯ ಎಂಬ ಸಂಗತಿಯನ್ನು ಅವರು ಕಡೆಗಣಿಸಿದ್ದಾರೆ. ಸಂಪನ್ಮೂಲಗಳನ್ನು ಸಮನಾಗಿ ಪುನರ್‌ಹಂಚಿಕೆ ಮಾಡಲು ಸಾಧ್ಯವಾಗದ್ದರಿಂದ ದೆಹಲಿಯಲ್ಲಿ ರಚಿಸಲಾಗಿದ್ದ ಮೂರು ಪಾಲಿಕೆಗಳನ್ನು ಮತ್ತೆ ವಿಲೀನ ಮಾಡಿದ ಉದಾಹರಣೆ ನಮ್ಮ ಮುಂದೆ ಇದ್ದಾಗ್ಯೂ, ಬಿಬಿಎಂಪಿಯನ್ನು ವಿಭಜಿಸಲಾಗುತ್ತಿದೆ. 

ಪಾಲಿಕೆಗಳ ಸಮಾನ ಅಭಿವೃದ್ಧಿಯನ್ನು ಖಚಿತಪಡಿಸುವುದಕ್ಕಾಗಿ ಸಂಪನ್ಮೂಲಗಳನ್ನು ಪುನರ್‌ಹಂಚಿಕೆ ಮಾಡುವುದಕ್ಕೆ ರಾಜ್ಯ ಹಣಕಾಸು ಆಯೋಗವನ್ನು ಕೋರಲಾಗುವುದು ಎಂದು ಮಸೂದೆ ನಿರೂಪಕರು ವಾದಿಸುತ್ತಿದ್ದಾರೆ. ಆದರೆ, ಪ್ರಾಯೋಗಿಕವಾಗಿ ಇದು ಕಾರ್ಯಸಾಧುವಲ್ಲ. ಯಾಕೆಂದರೆ, ರಾಜ್ಯ ಹಣಕಾಸು ಆಯೋಗವು ಕೇವಲ ಸಲಹೆಗಳನ್ನು ನೀಡುವ ಸಂಸ್ಥೆ. ಅದು ಮಾಡುವ ಶಿಫಾರಸುಗಳನ್ನು ರಾಜ್ಯ ಸರ್ಕಾರ ಪೂರ್ಣವಾಗಿ ಜಾರಿಗೆ ತಂದ ಉದಾಹರಣೆಗಳಿಲ್ಲ. ಈ ಸಮಸ್ಯೆಯನ್ನು ನಿಭಾಯಿಸುವುದಕ್ಕಾಗಿ ದೊಡ್ಡ ನಗರಗಳಲ್ಲಿ ಒಂದು ಮಹಾನಗರ ಪಾಲಿಕೆಯನ್ನು ಉಳಿಸಿಕೊಂಡು ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಲು ವಲಯವಾರು ಕೌನ್ಸಿಲ್‌ಗಳನ್ನು ಸ್ಥಾಪಿಸಬೇಕು ಎಂದು ಸಂವಿಧಾನದ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವ ರಾಷ್ಟ್ರೀಯ ಆಯೋಗವು ಶಿಫಾರಸು ಮಾಡಿದೆ. ಜಿಬಿಜಿ ಮಸೂದೆಯು ಈ ಅಂಶವನ್ನು ಪರಿಗಣಿಸಿಲ್ಲ. 2020ರ ಬಿಬಿಎಂಪಿ ಕಾಯ್ದೆಯಲ್ಲಿ ಈ ಅಂಶ ಇದ್ದರೂ, ಜಿಬಿಜಿ ಮಸೂದೆಯಲ್ಲಿ ಇದನ್ನು ಕೈಬಿಡಲಾಗಿದೆ.

ಸಾರಿಗೆ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಇತರ ಸರ್ಕಾರಿ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯ ಸಾಧಿಸುವುದಕ್ಕಾಗಿ ಮಹಾನಗರ ಯೋಜನಾ ಸಮಿತಿ (ಎಂಪಿಸಿ) ಅಧೀನದಲ್ಲಿ ತರಬೇಕಾಗಿರುವ ಎಲ್ಲ ಕಾರ್ಯ ಚಟುವಟಿಕೆಗಳನ್ನು ಸಂವಿಧಾನದ 12ನೇ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾಗಿಲ್ಲ ಎಂಬ ಕಾರಣಕ್ಕೆ ಜಿಬಿಎ ಸ್ಥಾಪನೆ ಅಗತ್ಯವಿದೆ ಎಂಬ ಬಹುದೊಡ್ಡ ವಾದವನ್ನು ಮಸೂದೆ ರೂಪಿಸಿದವರು ಮುಂದಿಡುತ್ತಿದ್ದಾರೆ. ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವುದಕ್ಕಾಗಿ ರಾಜ್ಯ ಸರ್ಕಾರದ ಅಧೀನದಲ್ಲಿ ಜಿಬಿಎನಂತಹ ಸಂಸ್ಥೆಯ ಅಗತ್ಯವಿದೆ ಎಂಬುದು ಅವರ ಪ್ರತಿಪಾದನೆ. ಆದರೆ, ಈ ಪ್ರಕ್ರಿಯೆಯಲ್ಲಿ ಅವರು 74ನೇ ಸಂವಿಧಾನ ತಿದ್ದುಪಡಿ ಕಾಯ್ದೆಯು ಕಡ್ಡಾಯಗೊಳಿಸಿದ್ದ ಎಂಪಿಸಿಯನ್ನು ಮೂಲ ಜಿಬಿಜಿ ಮಸೂದೆಯಲ್ಲಿ ಸಂಪೂರ್ಣವಾಗಿ ದೂರವಿಟ್ಟಿದ್ದರು. 12ನೇ ಶೆಡ್ಯೂಲ್‌ ಒಂದು ಸೂಚಕ ಪಟ್ಟಿಯಷ್ಟೇ. ನಗರ ಸ್ಥಳೀಯ ಆಡಳಿತದಲ್ಲಿ, ರಾಜ್ಯ ಸರ್ಕಾರ ಅಗತ್ಯ ಎಂದು ಭಾವಿಸುವ ಕಾರ್ಯಚಟುವಟಿಕೆಗಳನ್ನು ಸೇರ್ಪಡಿಸುವುದನ್ನು ನಿರ್ಬಂಧಿಸುವುದಿಲ್ಲ ಎಂಬ ಸಂಗತಿ ಮಸೂದೆ ರೂಪಿಸಿದವರಿಗೆ ಗೊತ್ತಿಲ್ಲದಂತೆ ಕಾಣುತ್ತದೆ.  

ಸಂವಿಧಾನಬದ್ಧವಾಗಿ ಇರಲೇಬೇಕಾಗಿದ್ದ ಎಂಪಿಸಿ ಸ್ಥಾಪನೆ ಪ್ರಸ್ತಾವವನ್ನು ಮೂಲ ಮಸೂದೆಯಲ್ಲಿ ಕೈಬಿಟ್ಟಿದ್ದಕ್ಕೆ ಟೀಕೆಗಳು ಬಂದಿದ್ದರಿಂದ ಜಂಟಿ ಸದನ ಸಮಿತಿಯು ಪರಿಷ್ಕೃತ ಜಿಬಿಜಿ ಮಸೂದೆಯಲ್ಲಿ ಎಂಪಿಸಿಯನ್ನು ಸೇರ್ಪಡೆಗೊಳಿಸಿತ್ತು. ಆದರೆ, ಅದನ್ನು ಜಿಬಿಎಗಿಂತಲೂ ಮೇಲ್ಮಟ್ಟದಲ್ಲಿ ಸ್ಥಾಪನೆ ಮಾಡುವ ಬಗ್ಗೆ ಪ್ರಸ್ತಾಪಿಸಿದೆ. ಈ ಎಂಪಿಸಿಗೂ ಮುಖ್ಯಮಂತ್ರಿಯೇ ಮುಖ್ಯಸ್ಥರು. ಮುಖ್ಯಮಂತ್ರಿ ನೇತೃತ್ವದಲ್ಲೇ ಇರುವ ಜಿಬಿಎ ರೂಪಿಸಿರುವ ಯೋಜನೆಗಳಿಗೆ ಎಂಪಿಸಿ ಅನುಮೋದನೆ ನೀಡಬೇಕಾಗುತ್ತದೆ. ಇದು ಹೇಗಿದೆ ಎಂದರೆ, ಮುಖ್ಯಮಂತ್ರಿ ನೇತೃತ್ವದ ಸಂಸ್ಥೆಯೊಂದು ರೂಪಿಸಿರುವ ಯೋಜನೆಗೆ ಒಪ್ಪಿಗೆ ಪಡೆಯುವುದಕ್ಕಾಗಿ ಅವರೇ ಮುಖ್ಯಸ್ಥರಾಗಿರುವ ಇನ್ನೊಂದು ಸಂಸ್ಥೆಗೆ ಕಳುಹಿಸಬೇಕು. ಇದರಲ್ಲಿ ಏನಾದರೂ ತರ್ಕವಿದೆಯೇ? ಇಂತಹ ಪರಿಸ್ಥಿತಿಯಲ್ಲಿ ಎಂಪಿಸಿ ಯಾವತ್ತೂ ಸಭೆಗಳನ್ನು ನಡೆಸದು ಮತ್ತು 31 ವರ್ಷಗಳಲ್ಲಿದ್ದಂತೆ ಮುಂದೆಯೂ ಅದು ಕಾಗದಲ್ಲಷ್ಟೇ ಉಳಿಯುವ ಸಂಸ್ಥೆಯಾಗಲಿದೆ. 

ಜನರಿಗೆ ಹೆಚ್ಚು ಅಧಿಕಾರ ಬೇಕು: ಬಿಬಿಎಂಪಿಯನ್ನು ಅಂಕೆಯಲ್ಲಿಇಡಲು ಸಾಧ್ಯವಾಗದಿರುವುದಕ್ಕೆ ಪ್ರಮುಖ ಕಾರಣ ಎಂದರೆ, ವಾರ್ಡ್‌ ಸಮಿತಿಗಳ ಮೂಲಕ ನಾಗರಿಕರಿಗೆ ಹೆಚ್ಚು ಅಧಿಕಾರ ನೀಡಲು ರಾಜ್ಯ ಸರ್ಕಾರ ವಿಫಲವಾಗಿರುವುದು. ಈ ಸಮಿತಿಗಳ ಸದಸ್ಯರನ್ನು ಜನರು ತಮ್ಮೊಳಗೇ ಆಯ್ಕೆ ಮಾಡಿಕೊಳ್ಳಬೇಕಿತ್ತು. ಆದರೆ, ರಾಜ್ಯ ಸರ್ಕಾರವು ನಾಮನಿರ್ದೇಶನದ ಮೂಲಕ ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ಆಯ್ಕೆ ಪ್ರಕ್ರಿಯೆಯನ್ನೇ ಹಾಳುಮಾಡಿತ್ತು. ಸರ್ಕಾರವು ಸಮಯಕ್ಕೆ ಸರಿಯಾಗಿ ವಾರ್ಡ್‌ ಸಮಿತಿಗಳನ್ನು ರಚಿಸುತ್ತಿರಲಿಲ್ಲ. ಅವುಗಳ ಸಭೆಯನ್ನೂ ನಿಯಮಿತವಾಗಿ ನಡೆಸುತ್ತಿರಲಿಲ್ಲ.  ವಾರ್ಡ್‌ ಸಮಿತಿಗಳಿಗೆ ಹೆಚ್ಚು ಅಧಿಕಾರ ನೀಡಿದ್ದರೆ, ಸಾವಿರಾರು ಜನರು ತಮ್ಮ ಪ್ರದೇಶದ ಆಡಳಿತದ ಮೇಲೆ ನಿಗಾ ಇಡುತ್ತಿದ್ದರು. ಇದು, ಭ್ರಷ್ಟಾಚಾರ, ದುರಾಡಳಿತಕ್ಕೆ ಕಡಿವಾಣ ಹಾಕುತ್ತಿತ್ತು. 

ಕೇಂದ್ರ ಸರ್ಕಾರವು ಏರಿಯಾ ಸಭಾಗಳನ್ನು ರಚಿಸುವಂತೆ 2011ರಲ್ಲಿ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ತಮ್ಮ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರ ಭಾಗವಹಿಸುವಿಕೆ ಬಲಪಡಿಸುವ ಉದ್ದೇಶ ಇದರಲ್ಲಿದೆ. ಆದರೆ, 14 ವರ್ಷಗಳಿಂದ ರಾಜ್ಯ ಸರ್ಕಾರವು ಏರಿಯಾ ಸಭಾಗಳನ್ನು ರಚಿಸಿ ಅಧಿಸೂಚನೆ ಹೊರಡಿಸಿಲ್ಲ.  ಏರಿಯಾ ಸಭಾಗಳ ಪರಿಕಲ್ಪನೆಯನ್ನೂ ಮಸೂದೆ ಕೈಬಿಟ್ಟಿದೆ. ವಾರ್ಡ್‌ ಸಮಿತಿಗಳ ನಿರ್ಧಾರಗಳನ್ನು ಸಲಹಾ ರೂಪದಲ್ಲಿರುವಂತೆ ಮಾಡಿ, ಕೌನ್ಸಿಲರ್‌ಗಳಿಗೆ ವಿಟೊ ಅಧಿಕಾರದ ನೀಡುವ ಮೂಲಕ ಈಗಿನ ಪರಿಸ್ಥಿತಿಯನ್ನು ಮತ್ತಷ್ಟು ವಿಷಮಗೊಳಿಸಿದೆ.

ಎಲ್ಲಕ್ಕಿಂತ ಮಿಗಿಲಾಗಿ, ನಗರ ಪ್ರದೇಶಗಳ ನಾಗರಿಕರಿಗಾಗಿ ಜಾರಿಗೆ ತಂದಿರುವ ಮೂರು ಪ್ರತ್ಯೇಕ ಕಾನೂನುಗಳನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್‌ ಅರ್ಜಿ (17766/2021) ಇತ್ಯರ್ಥಕ್ಕೆ ಬಾಕಿ ಇದೆ. ಪಟ್ಟಣ, ಸಣ್ಣ ನಗರ ಪ್ರದೇಶಗಳಿಗೆ ಮೀಸಲಾಗಿರುವ ಕರ್ನಾಟಕ ಪುರಸಭೆಗಳ ಕಾಯ್ದೆ, ನಗರ ಪಾಲಿಕೆಗಳಿಗೆ ಸಂಬಂಧಿಸಿದ ಕೆಎಂಸಿ ಕಾಯ್ದೆ ಮತ್ತು ಬೆಂಗಳೂರಿಗೆ ಸಂಬಂಧಿಸಿದಂತಹ ಪ್ರತ್ಯೇಕ ಕಾಯ್ದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಹೈಕೋರ್ಟ್‌ ಸರ್ಕಾರಕ್ಕೆ ನೋಟಿಸ್‌ ನೀಡಿದ್ದು, ಅದಕ್ಕೆ ಸರ್ಕಾರ ಪ್ರತಿಕ್ರಿಯಿಸಿಲ್ಲ. ಈ ಪ್ರಕರಣ ಹೈಕೋರ್ಟ್‌ನಲ್ಲಿ ಬಾಕಿ ಇರುವಾಗ ರಾಜ್ಯಪಾಲರು ಜಿಬಿಜಿ ಮಸೂದೆಗೆ ಒಪ್ಪಿಗೆ ನೀಡಬಾರದು. ಈ ಮಸೂದೆಯು 74ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಆಶಯವನ್ನು ಪೂರ್ಣವಾಗಿ ಉಲ್ಲಂಘಿಸುತ್ತದೆ. ಹಾಗಾಗಿ, ಈ ಮಸೂದೆಯನ್ನು ವಾಪಸ್‌ ಪಡೆಯಬೇಕು ಮತ್ತು ಕನಿಷ್ಠ ಮೂರು ತಿಂಗಳು ಸಾರ್ವಜನಿಕ ಅಭಿಪ್ರಾಯಗಳನ್ನು ವ್ಯಾಪಕವಾಗಿ ಸಂಗ್ರಹಿಸಿದ ಬಳಿಕ ಕರಡು ಮಸೂದೆಯನ್ನು ರೂಪಿಸುವ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಬೇಕು.   

ಕಾತ್ಯಾಯಿನಿ ಚಾಮರಾಜ್

ಲೇಖಕಿ: ಸಿವಿಕ್‌– ಬೆಂಗಳೂರು ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.