ADVERTISEMENT

ಅಡಿಕೆ ಬೆಳೆಗಾರರ ರಕ್ಷಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST

ಗುಟ್ಕಾ, ಪಾನ್ ಮಸಾಲ ಉತ್ಪಾದನೆ, ಶೇಖರಣೆ ಮತ್ತು ಮಾರಾಟವನ್ನು ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಗುಟ್ಕಾ ನಿಷೇಧ ಮಾಡುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿತ್ತು. 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈಗಾಗಲೇ ಗುಟ್ಕಾ ನಿಷೇಧ ಮಾಡಲಾಗಿದೆ. ಸರ್ಕಾರದ ಈ ಕ್ರಮದಿಂದ ಸಹಜವಾಗಿಯೇ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಗುಟ್ಕಾ ನಿಷೇಧದಿಂದ ಅಡಿಕೆ ಬೆಲೆ ಕುಸಿತವಾಗಬಹುದು ಎನ್ನುವುದು ಬೆಳೆಗಾರರ ಆತಂಕ. ಅಡಿಕೆ ಬೆಳೆಗಾರರಲ್ಲಿ ಭರವಸೆ ಮೂಡಿಸುವ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಅಡಿಕೆ ಬೆಳೆಯುವ ರಾಜ್ಯ ಕರ್ನಾಟಕ.

ರಾಜ್ಯದ 16 ಜಿಲ್ಲೆಗಳ 1.84 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವರ್ಷಕ್ಕೆ ಸರಾಸರಿ 2.58 ಲಕ್ಷ ಟನ್ ಅಡಿಕೆ ಬೆಳೆಯಲಾಗುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಅಡಿಕೆ ಗುಟ್ಕಾ ಉತ್ಪಾದನೆಗೂ ಹೋಗುತ್ತದೆ. ಅಡಿಕೆಯಿಂದ ಬೇರೆ ಬೇರೆ ಪದಾರ್ಥಗಳನ್ನು ಉತ್ಪಾದಿಸಲು ರಾಜ್ಯ ಸರ್ಕಾರ ಉತ್ತೇಜನ ನೀಡಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಡಿಕೆ ಬೆಲೆ ಕುಸಿತವಾಗದಂತೆ ನೋಡಿಕೊಳ್ಳಬೇಕಾಗಿದೆ.

ಈ ಬೆಳೆಯನ್ನೇ ನಂಬಿಕೊಂಡು ರಾಜ್ಯದಲ್ಲಿ ಲಕ್ಷಾಂತರ ಮಂದಿ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುಟ್ಕಾ ನಿಷೇಧ ಮಾಡುವುದಕ್ಕೆ ಮೊದಲು ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಬೆಳೆಗಾರರ ಅಭಿಪ್ರಾಯವನ್ನೂ ತೆಗೆದುಕೊಳ್ಳಬೇಕಾಗಿತ್ತು ಎಂದು ಬಿಜೆಪಿಯ ಮುಖಂಡರು ಹೇಳುತ್ತಿದ್ದಾರೆ. ಅಡಿಕೆ ಮಾರಾಟಗಾರರ ಸಂಘಗಳೂ ಕೂಡ ಇದೇ ಮಾತನ್ನು ಹೇಳುತ್ತಿವೆ.

ಈ ವಿಷಯದಲ್ಲಿ ರಾಜಕೀಯ ಬೇಡ. ಈ ಸಂದರ್ಭವನ್ನೇ ಬಳಸಿಕೊಂಡು ಮಧ್ಯವರ್ತಿಗಳು ಅಡಿಕೆ ಬೆಲೆಯನ್ನು ಏರುಪೇರು ಮಾಡುವ ಸಾಧ್ಯತೆ ಕೂಡ ಇದೆ. ಈ ಹಿಂದೆ ಕೂಡ ಗುಟ್ಕಾ ನಿಷೇಧ ಮಾಡಲಾಗುತ್ತದೆ ಎಂದಾಗ ಅಡಿಕೆ ಬೆಲೆ ಪಾತಾಳಕ್ಕೆ ಇಳಿದಿತ್ತು. ಈ ಬಾರಿ ಕೂಡ ಗುಟ್ಕಾ ನಿಷೇಧದ ಆದೇಶ ಹೊರಬಿದ್ದ ತಕ್ಷಣವೇ ರಾಜ್ಯದ ಕೆಲವು ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕ್ವಿಂಟಲ್‌ಗೆ 2 ಸಾವಿರ ರೂಪಾಯಿಯಷ್ಟು ಕುಸಿತ ಕಂಡಿದೆ. ಇದು ಮಧ್ಯವರ್ತಿಗಳ ಹುನ್ನಾರ ಎನ್ನುವುದು ಈಗಾಗಲೇ ಸಾಬೀತಾಗಿದೆ. ಈಗಲೂ ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ.

ರಾಜ್ಯದ ಕೆಲವು ರಾಜಕಾರಣಿಗಳದ್ದೇ ಗುಟ್ಕಾ ಕಂಪೆನಿಗಳಿವೆ. ಗುಜರಾತ್, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶಗಳಲ್ಲಿ ಗುಟ್ಕಾ ನಿಷೇಧ ಮಾಡಿದ ನಂತರ ತುರಿ ಅಡಿಕೆ ಮಾರಾಟ ಗಣನೀಯವಾಗಿ ಹೆಚ್ಚಾಗಿದೆ. ಅಡಿಕೆಯಿಂದ ವೈನ್ ಉತ್ಪಾದಿಸಲಾಗುತ್ತದೆ. ಅಡಿಕೆ ಕಾಫಿ, ಅಡಿಕೆ ಚಾಕಲೇಟ್ ಮುಂತಾದ ಪದಾರ್ಥಗಳೂ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿವೆ.

ಇಂತಹ ಪರ್ಯಾಯ ಮಾರ್ಗಗಳನ್ನು ರಾಜ್ಯ ಸರ್ಕಾರ ಉತ್ತೇಜಿಸಬೇಕು. 2009ರಲ್ಲಿ ರಾಷ್ಟ್ರೀಯ ತೋಟಗಾರಿಕಾ ಆಯುಕ್ತ ಗೋರಖ್ ಸಿಂಗ್ ಸಮಿತಿ ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ನೀಡಿದ ಶಿಫಾರಸುಗಳನ್ನು ಜಾರಿಗೆ ತರುವ ಮೂಲಕ ಬೆಳೆಗಾರರಿಗೆ ಬೆಂಬಲ ನೀಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.