ADVERTISEMENT

ಅಡಿಕೆ ಮಂಡಳಿ ಸ್ಥಾಪನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST

ಸಂಕಷ್ಟಕ್ಕೆ ಈಡಾಗಿರುವ ರಾಜ್ಯದ ಅಡಿಕೆ ಬೆಳೆಗಾರರು ಈಗ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಹಲವಾರು ವರ್ಷಗಳಿಂದ ಅಡಿಕೆಗೆ ಹಲವು ತೆರನ ರೋಗ ಕಾಡುತ್ತಿದೆ. ರಾಜ್ಯದಲ್ಲಿ ಅಡಿಕೆ ಬೆಳೆ ನಶಿಸುತ್ತಿರುವುದು ಆತಂಕದ ವಿಷಯ. ತಕ್ಷಣವೇ ಅಡಿಕೆ ಬೆಳೆಗಾರರ ರಕ್ಷಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗುವ ಅಗತ್ಯ ಇದೆ.

ರಾಜ್ಯದ 1,84,500 ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ ಸುಮಾರು 2,24,00 ಮೆಟ್ರಿಕ್ ಟನ್ ಅಡಿಕೆ ಬೆಳೆಯಲಾಗುತ್ತದೆ. ದೇಶದ ಒಟ್ಟು ಅಡಿಕೆ ಬೆಳೆಯುವ ಪ್ರದೇಶದಲ್ಲಿ ಶೇ 42 ರಷ್ಟು ಪ್ರದೇಶ ಕರ್ನಾಟಕದಲ್ಲಿದೆ. ಕೇರಳ ಶೇ 26 ಮತ್ತು ಅಸ್ಸಾಂ ಶೇ 28ರಷ್ಟು ಪ್ರದೇಶಗಳನ್ನು ಹೊಂದಿವೆ.  ಅಡಿಕೆ ಬೆಳೆಗಾರರ ಸಮಸ್ಯೆ ದೇಶವ್ಯಾಪಿಯಾಗಿದೆ. ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಅಡಿಕೆ ಬೆಳೆಯಲಾಗುತ್ತಿದ್ದರೂ ಅಡಿಕೆ ಬೆಳೆಗಾರರ ಸಮಸ್ಯೆ ಆಯಾ ಪ್ರದೇಶಕ್ಕೆ ಬೇರೆ ಬೇರೆಯಾಗಿದೆ. ಕೂಲಿ ಕಾರ್ಮಿಕರ ಕೊರತೆ, ವನ್ಯಜೀವಿಗಳ ಹಾವಳಿ, ಬೆಲೆ ಸ್ಥಿರವಾಗಿಲ್ಲದಿರುವುದು ಪ್ರಮುಖ ಸಮಸ್ಯೆಗಳು.

ವಿದೇಶಿ ಅಡಿಕೆ ಆಮದು ಕೂಡ ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಳದಿ ಚುಕ್ಕೆ ರೋಗ ಕಾಡುತ್ತಿದ್ದರೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಮುಂತಾದ ಪ್ರದೇಶಗಳಲ್ಲಿ ಕೊಳೆರೋಗ ವಿಪರೀತವಾಗಿದೆ. ಹಳದಿ ಚುಕ್ಕೆ ರೋಗ ವಿಪರೀತವಾದ ಹಿನ್ನೆಲೆಯಲ್ಲಿ 2008ರಲ್ಲಿ ಕೇಂದ್ರ ಸರ್ಕಾರ ಡಾ.ಗೋರಖ್‌ಸಿಂಗ್ ನೇತೃತ್ವದಲ್ಲಿ ಸಮಿತಿ ರಚಿಸಿತು. ಸಮಿತಿ ತನ್ನ ವರದಿಯನ್ನು 2009ರಲ್ಲೇ ನೀಡಿದ್ದರೂ  ಶಿಫಾರಸುಗಳನ್ನು ಕೇಂದ್ರ ಸರ್ಕಾರ ಇನ್ನೂ ಜಾರಿಗೆ ತಂದಿಲ್ಲ. ಸಮಿತಿ ವರದಿ ಅನುಷ್ಠಾನಕ್ಕೆ ಬಂದರೆ ಬೆಳೆಗಾರರು ಕೊಂಚ ಸುಧಾರಿಸಿಕೊಳ್ಳಬಹುದು. ರಾಜ್ಯದ ಸಂಸದರು  ಕೇಂದ್ರ ಸರ್ಕಾರದ ಮೇಲೆ ಈ ಬಗ್ಗೆ ಒತ್ತಡ ತರಬೇಕು.

ಅಡಿಕೆ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದರೂ ಇನ್ನೂ ಅಡಿಕೆ ಮಂಡಳಿ ಸ್ಥಾಪನೆಯಾಗಿಲ್ಲ. ಮಾರುಕಟ್ಟೆಯನ್ನು ನಿಯಂತ್ರಿಸುವ ಕ್ರಮ ಕೂಡ ಇಲ್ಲ. ತೀರ್ಥಹಳ್ಳಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಇದ್ದರೂ ಕೂಡ ಅದು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಅಡಿಕೆಗೆ ಬರುವ ರೋಗವನ್ನು ನಿಯಂತ್ರಿಸುವ ಕುರಿತ ಸಂಶೋಧನೆಗಳು ಗಣನೀಯವಾಗಿ ಆಗಿಲ್ಲ.  ರಾಜ್ಯದಲ್ಲಿ 1960ರಿಂದಲೇ ಹಳದಿ ಚುಕ್ಕೆ ರೋಗ ಇದೆ. 8 ಎಕರೆ ಅಡಿಕೆ ತೋಟ ಇದ್ದವರೂ ಕೂಡ ಈಗ ಕೂಲಿ ಮಾಡಬೇಕಾದ ಪರಿಸ್ಥಿತಿ ಇದೆ. ಆದರೂ ಅಡಿಕೆ ಬೆಳೆಗಾರರು ಪರ‌್ಯಾಯ ಬೆಳೆಯತ್ತ ಗಮನ ಹರಿಸುತ್ತಿಲ್ಲ. ಅಡಿಕೆ ತೋಟ ಎಂದರೆ ಅಲ್ಲಿ ಕೇವಲ ಅಡಿಕೆ ಮಾತ್ರ ಬೆಳೆಯುವುದಿಲ್ಲ. ಬಾಳೆ, ಏಲಕ್ಕಿ, ಕಾಳು ಮೆಣಸು ಮುಂತಾದ ಉಪ ಬೆಳೆಗಳನ್ನೂ ಬೆಳೆಯಲಾಗುತ್ತದೆ. ಆದರೆ ಈಗ ಎಲ್ಲವೂ ವಿನಾಶದ ಅಂಚಿಗೆ ಬಂದಿವೆ. ಸಾಂಪ್ರದಾಯಿಕ ಅಡಿಕೆ ತೋಟಗಳಲ್ಲದೆ ರಾಜ್ಯದ ಎಲ್ಲ ಕಡೆ ಈಗ ಅಡಿಕೆ ಬೆಳೆಯಲಾಗುತ್ತಿದೆ. ಆಹಾರ ಧಾನ್ಯದ ಭೂಮಿಯನ್ನೂ ಅಡಿಕೆ ಆಕ್ರಮಿಸಿಕೊಂಡಿದೆ. ಈ ಬಗ್ಗೆ ರೈತರೂ ಗಮನಿಸುವ ಅಗತ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.