ADVERTISEMENT

ಅಮೃತಮಹಲ್‌ ಉಳಿಸಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ನಮ್ಮ ರಾಜ್ಯದ ಹೆಮ್ಮೆಯ ‘ಅಮೃತಮಹಲ್‌’ ರಾಸುಗಳ ತಳಿ ಈಗ ಅಪಾಯದ ಅಂಚಿನಲ್ಲಿದೆ. ಸರ್ಕಾರದ ಉದಾಸೀನವೇ ಇದಕ್ಕೆ ಕಾರಣ ಎನ್ನುವುದಂತೂ ವಿಷಾದದ ಸಂಗತಿ.

ಮೈಸೂರು ಮಹಾರಾಜರು ಅತ್ಯಂತ ಕಾಳಜಿಯಿಂದ ಈ ತಳಿಗಳ ಸಂರಕ್ಷಣೆಗಾಗಿ ತರೀಕೆರೆ ತಾಲ್ಲೂಕು ಅಜ್ಜಂಪುರದಲ್ಲಿ ಸ್ಥಾಪಿಸಿದ ರಾಜ್ಯದ ಏಕೈಕ  ಕೇಂದ್ರ ಈಗ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ತಳಿ ಅಭಿವೃದ್ಧಿಯ ಮೂಲಾಧಾರವಾದ ಹೋರಿ ಮತ್ತು ಆಕಳುಗಳು ಇಲ್ಲಿ ಅತ್ಯಂತ ದಾರುಣ  ಸ್ಥಿತಿಯಲ್ಲಿವೆ. ಕಲುಷಿತ ಪರಿಸರ, ಅಸಮರ್ಪಕ ನಿರ್ವಹಣೆಯಿಂದ ಯಾತನೆ ಅನುಭವಿಸುತ್ತಿವೆ.

ಒಂದು ಅಂದಾಜಿನಂತೆ ಈಗ ತಳಿ ಸಂವರ್ಧನೆಗಾಗಿ ಈ ಕೇಂದ್ರದ ಮೇಲ್ವಿ­ಚಾರಣೆಯಲ್ಲಿ ಇರುವ ರಾಸುಗಳ ಸಂಖ್ಯೆ ಸುಮಾರು 1300. ಅವನ್ನೂ ಕಳೆದುಕೊಳ್ಳುವ ಹಾದಿಯಲ್ಲಿದ್ದೇವೆ. ಇದು ಇಷ್ಟಕ್ಕೇ ನಿಂತಿಲ್ಲ. ರಾಜ್ಯದ ವಿವಿಧೆಡೆ ಅದರಲ್ಲೂ ವಿಶೇಷವಾಗಿ ಹಳೆಯ ಮೈಸೂರು ಭಾಗದ ಜಿಲ್ಲೆಗಳಲ್ಲಿ ಈ ತಳಿಯ ರಾಸುಗಳು ಮೇಯಲು ಮೀಸಲಿಟ್ಟಿದ್ದ ಸುಮಾರು 70 ಸಾವಿರ ಎಕರೆಯಷ್ಟು ಅಮೃತಮಹಲ್‌ ಕಾವಲು ಹುಲ್ಲುಗಾವಲುಗಳು ಒತ್ತುವರಿಯಿಂದ ಕಿರಿದಾಗತೊಡಗಿವೆ.

ಜೀವ ವೈವಿಧ್ಯ ಅಧ್ಯಯನದ ಪ್ರಕಾರ ರಾಜ್ಯದ ವಿವಿಧೆಡೆ ಈ ತಳಿಯ 80 ಸಾವಿರದಷ್ಟು ದನಕರುಗಳಿವೆ. ಆದರೆ ಅವುಗಳಲ್ಲಿ ಹೆಚ್ಚಿನವು, ಸ್ಥಳೀಯ ತಳಿಗಳ ಸಂಕರಕ್ಕೆ ಒಳಗಾಗಿ ಪರಿಶುದ್ಧತೆ, ಮೂಲಗುಣ ಕಳೆದುಕೊಳ್ಳುತ್ತ ನಡೆದಿವೆ. ಆದ್ದರಿಂದಲೇ ತಳಿ ಶುದ್ಧತೆ ರಕ್ಷಣೆಯ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ.

ಸಹಸ್ರಾರು ವರ್ಷಗಳ ಇತಿಹಾಸ ಹೊಂದಿದ ಈ ತಳಿಯ ಎತ್ತುಗಳು ಶಕ್ತಿ, ಬಲ, ಅಪಾರ ಸಾಮರ್ಥ್ಯಕ್ಕೆ ಹೆಸರುವಾಸಿ. ಈ ಕಾರಣದಿಂದಲೇ ವಿಜಯನಗರ ಅರಸರ ಕಾಲದಲ್ಲೂ ಇವಕ್ಕೆ ರಾಜಾಶ್ರಯ ಸಿಕ್ಕಿತ್ತು. ನಂತರ ಮೈಸೂರು ಮಹಾರಾಜರು ಇವುಗಳ ಉಳಿವಿಗೆ ಜಮೀನು ಮೀಸಲಿಟ್ಟು, ಅಜ್ಜಂಪುರದಲ್ಲಿ ಸಂವರ್ಧನಾ ಕೇಂದ್ರ ಸ್ಥಾಪಿಸಿದರು.

ಇದು ವಿಶ್ವದಲ್ಲಿಯೇ, ಜಾನುವಾರು ತಳಿಯೊಂದರ ವ್ಯವಸ್ಥಿತ ಅಭಿವೃದ್ಧಿಯ ಮೊದಲ ಪ್ರಯತ್ನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.  ಬಿಜೆಪಿ  ಸರ್ಕಾರ ಬಜೆಟ್‌ನಲ್ಲಿ ₨ 10 ಕೋಟಿ ತೆಗೆದಿಟ್ಟಿತ್ತು. ಆ ಹಣ ಖರ್ಚಾದರೂ ಕೇಂದ್ರದ ಸ್ಥಿತಿಯೇನೂ ಸುಧಾರಿಸಿಲ್ಲ. ಈ ತಳಿಗಳನ್ನು ಉಳಿಸಿಕೊಂಡು ಬರುವ ಬಗ್ಗೆ ರಾಜ ಮಹಾರಾಜರಿಗಿದ್ದ ದೂರದೃಷ್ಟಿ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೂ ಬೇಕು. ಅನುಭವಿ ದನಗಾಹಿಗಳ ಪಾರಂಪರಿಕ ಜ್ಞಾನ ಬಳಸಿಕೊಂಡು ದಾಖಲೀಕರಣ ಮಾಡಬೇಕು. ಕಾವಲುಗಳ ಒತ್ತುವರಿಗೆ ಕಡಿವಾಣ ಹಾಕಬೇಕು.

ಈ ತಳಿಯ ರಾಸುಗಳನ್ನು ಪರಂಪರೆಯಂತೆ ಅಲೆಮಾರಿಗಳಾಗೇ ಬೆಳೆಸಬೇಕು. ಕೇಂದ್ರದಲ್ಲಿನ ಕಾವಲುಗಾರರಿಗೆ ಸೇವಾ ಭದ್ರತೆ ಜತೆ ಸೂಕ್ತ ತರಬೇತಿಯನ್ನೂ ಕೊಡಬೇಕು. ಆಗ ಮಾತ್ರ ಅಮೃತಮಹಲ್‌ ಕಾವಲೂ ಉಳಿಯುತ್ತವೆ, ಅಮೃತಮಹಲ್‌ ಗೋ ತಳಿಯೂ ಬದುಕಿಕೊಳ್ಳುತ್ತದೆ. ಹಳೆ ಮೈಸೂರು ಭಾಗದ ಹಳ್ಳಿಕಾರ, ಅಮೃತಮಹಲ್‌, ಉತ್ತರ ಕರ್ನಾಟಕದದ ಮೂಡಲ, ಕಗ್ಗ ಮುಂತಾದವು ನಮ್ಮ ನಾಡಿನ ಹೆಮ್ಮೆಯ ಮತ್ತು ಅಮೂಲ್ಯ ರಾಸು ತಳಿಗಳು. ಅವನ್ನು ಕಾಪಾಡಿಕೊಂಡು ಬರುವುದು ವ್ಯವಸಾಯದ ದೃಷ್ಟಿಯಿಂದ ಮಾತ್ರವಲ್ಲದೇ ಪ್ರಾಕೃತಿಕ ಸಮತೋಲನ, ಜೀವಸಂಕುಲ ರಕ್ಷಣೆ, ಪಶುಪಾಲನೆಯ ದೃಷ್ಟಿಯಿಂದಲೂ ಮುಖ್ಯ. ಅಪರೂಪದ ಪಶು ತಳಿಯೊಂದನ್ನು ಉಳಿಸಿಕೊಳ್ಳುವ ವಿಷಯದಲ್ಲಿ ಹಿಂದೆ ಬೀಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.