ADVERTISEMENT

ಅರಾಜಕತೆಯ ಸಂಕೇತ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST

ಮಾಲೂರು ತಾಲ್ಲೂಕಿನ ಕಾವಲಗಿರಿಯನ (ಕೆ.ಜಿ. ಹಳ್ಳಿ)ಹಳ್ಳಿಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಆಗಿರುವ ಅಧ್ವಾನಗಳನ್ನು ನೋಡಿದರೆ ರಾಜ್ಯದಲ್ಲಿ ಸರ್ಕಾರ ಇದೆಯೇ ಎಂಬ ಅನುಮಾನ ಬರುತ್ತದೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಪರಿಸರಕ್ಕೆ ಆಗಿರುವ ಹಾನಿಗಳಿಂದ ಸರ್ಕಾರ ಪಾಠ ಕಲಿತಿಲ್ಲ. ಗಣಿ ಅಕ್ರಮಗಳನ್ನು ತಡೆಯುವ ವಿಷಯದಲ್ಲಿ ಹಿಂದಿನ ಸರ್ಕಾರದ ತೋರಿದ ನಿಷ್ಕ್ರಿಯತೆ ಮತ್ತು ಪಕ್ಷಪಾತದ ಧೋರಣೆಯನ್ನು ಸುಪ್ರೀಂಕೋರ್ಟ್ ಕಟುವಾಗಿ ಟೀಕಿಸಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅದಿರು, ಕಲ್ಲು,ಮಣ್ಣು, ಮರಳು, ಅರಣ್ಯ ಸಂಪತ್ತು ಹೀಗೆ ಎಲ್ಲವನ್ನೂ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಪ್ರಭಾವಿ ವ್ಯಕ್ತಿಗಳು ಲೂಟಿ ಹೊಡೆಯುತ್ತಿದ್ದಾರೆ. ನಿಸರ್ಗ ಸಂಪತ್ತಿನ ದುರ್ಬಳಕೆ ಮತ್ತು ನಿರಂತರ ಲೂಟಿಯನ್ನು ತಡೆಯುವ ಮೂಲ ಜವಾಬ್ದಾರಿಯನ್ನೇ ಸರ್ಕಾರ ಮರೆತಿದೆ. ಈ ಬೆಳವಣಿಗೆ ನಿಜಕ್ಕೂ ದುರದೃಷ್ಟಕರ. ಕೆ.ಜಿ. ಹಳ್ಳಿಯ ಕಲ್ಲು ಗಣಿಗಾರಿಕೆಯಲ್ಲಿ ಆಡಳಿತ ಪಕ್ಷದ ಮುಖಂಡರು ಶಾಮೀಲಾಗಿರುವ ಸಾಧ್ಯತೆಗಳಿವೆ. ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ಸುತ್ತಲಿನ ಹದಿನೈದು ಹಳ್ಳಿಗಳ ಜನರ ಗೋಳನ್ನು ಕೇಳುವವರಿಲ್ಲ. ಸ್ಥಳೀಯ ಜನ ಪ್ರತಿನಿಧಿಗಳ ನಿರಾಸಕ್ತಿ ನಾಚಿಕೆಗೇಡಿನ ಪರಮಾವಧಿ. ವಿರೋಧ ಪಕ್ಷಗಳೂ ಈ ಅಕ್ರಮದ ವಿರುದ್ಧ ಧ್ವನಿ ಎತ್ತುವ ಶಕ್ತಿಯನ್ನೇ ಕಳೆದುಕೊಂಡಿವೆ. ಈ ಬೆಳವಣಿಗೆ ಮಾಲೂರು ತಾಲ್ಲೂಕಿನ ದುರಂತವಷ್ಟೇ ಅಲ್ಲ ರಾಜ್ಯದಲ್ಲಿರುವ ಅರಾಜಕ ಪರಿಸ್ಥಿತಿಯ ಸಂಕೇತ. ಈ ಅಕ್ರಮಗಳನ್ನು ತಡೆಯಬೇಕಾದ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳ ಬೇಜವಾಬ್ದಾರಿತನ ಖಂಡನೀಯ.

ಎರಡು ವರ್ಷಗಳಿಂದ ಇಲ್ಲಿ ಅಕ್ರಮ ಕಲ್ಲು ಸಾಗಣೆ ರಾಜಾರೋಷವಾಗಿ ನಡೆಯುತ್ತಿದೆ. ಸ್ಫೋಟಕಗಳನ್ನು ಬಳಸಿ ಬಂಡೆಗಳನ್ನು ಒಡೆದು ಮಾರಿಕೊಳ್ಳುವ ದುರಾಸೆಗೆ ದೊಡ್ಡ ಗುಡ್ಡವೊಂದರ ಭಾಗವೇ ಕಣ್ಮರೆಯಾಗಿದೆ.  ಹದಿನೈದಕ್ಕೂ ಹೆಚ್ಚು ಗ್ರಾಮಗಳಲ್ಲಿ ಮನೆಗಳು ಬಿರುಕು ಬಿಟ್ಟಿವೆ. ದಿನವಿಡೀ ಭೂಮಿ ಕಂಪಿಸಿದ ಅನುಭವ ಆಗುತ್ತಿದೆ. ಹಗಲು ರಾತ್ರಿ ನಡೆಯುವ ಗಣಿಗಾರಿಕೆ ಮತ್ತು ಕಲ್ಲು ಸಾಗಿಸುವ ಲಾರಿಗಳ ಓಡಾಟ, ಶಬ್ದ ಹಾಗೂ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ರಸ್ತೆಗಳು ಹಾಳಾಗಿವೆ. ನಿರಂತರ ಧೂಳಿನಿಂದ ಜನರ ಆರೋಗ್ಯ ಕೆಡುತ್ತಿದೆ. ಈ ಪ್ರದೇಶದಲ್ಲಿ ಬೇಸಾಯಕ್ಕೆ ಕುತ್ತು ಬಂದಿದೆ ಎಂದು ರೈತರು ಆರೋಪಿಸುತ್ತಾರೆ. ಆದರೂ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಈ ಅಕ್ರಮವನ್ನು ತಡೆಯಬೇಕು ಎಂದು ಅನ್ನಿಸಿಯೇ ಇಲ್ಲ. ಕಲ್ಲು ಸಾಗಣೆ ಲಾರಿಗಳಿಂದ ಮತ್ತು ಜಲ್ಲಿ ತಯಾರಿಸುವ ಕ್ರಷರ್‌ಗಳಿಂದ ಶುಲ್ಕ ವಸೂಲಾತಿ ಮಾಡುತ್ತಿರುವ ಕೆ.ಜಿ. ಗ್ರಾಮ ಪಂಚಾಯ್ತಿ ಉಳಿದೆಲ್ಲ ಬೆಳವಣಿಗೆಗಳನ್ನು ಉಪೇಕ್ಷಿಸಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯ್ತಿಗಳು ಸ್ಥಳೀಯ ಸರ್ಕಾರಗಳಂತೆ  ಕಾರ್ಯ ನಿರ್ವಹಿಸಬೇಕು ಎಂಬ ಆಶಯವೇ ಇಲ್ಲಿ ಮಣ್ಣುಪಾಲಾಗಿದೆ. ಸರ್ಕಾರ ತಕ್ಷಣವೇ ಈ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕು. ಗಣಿಗಾರಿಕೆಯಿಂದ ಜನರಿಗೆ ಆಗಿರುವ ನಷ್ಟಕ್ಕೆ ತಕ್ಕ ಪರಿಹಾರವನ್ನು ಗಣಿಗಾರಿಕೆ ನಡೆಸುತ್ತಿರುವ ವ್ಯಕ್ತಿಗಳಿಂದ ಕೊಡಿಸಬೇಕು. ಸಂತ್ರಸ್ತ ಜನರು ನ್ಯಾಯಾಲಯದ ಮೊರೆ ಹೋಗಿ ಅಕ್ರಮ ಗಣಿಗಾರಿಕೆ ತಡೆಯುವವರೆಗೆ ಸರ್ಕಾರ ಸುಮ್ಮನಿದ್ದರೆ ಕೆ.ಜಿ.ಹಳ್ಳಿಯ ಇಡೀ ಗುಡ್ಡವೇ ಕಣ್ಮರೆ ಆದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT