ADVERTISEMENT

ಅಸಂಗತ, ಅರ್ಥಹೀನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 19:30 IST
Last Updated 9 ಜನವರಿ 2014, 19:30 IST

ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ. ಡಿಸೋಜ ಅವರು ಕೊಡವರ ಭಾವನೆಗೆ ನೋವು ಉಂಟುಮಾಡಿರು­ವುದರಿಂದ ಅವರು ಕ್ಷಮೆ ಯಾಚಿಸಬೇಕೆಂದು ಕೊಡಗಿನ ಇಬ್ಬರು ಶಾಸಕರು ಒತ್ತಾಯ ಮಾಡಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸ­ಬೇಕೆನ್ನುವ ಅರ್ಥದ ಮಾತುಗಳಿಗಾಗಿ ಡಿಸೋಜ ಅವರು ಬೇಷರತ್ ಕ್ಷಮೆ ಯಾಚಿಸದಿದ್ದರೆ ಹೋರಾಟ ಮಾಡಲಾಗುವುದು ಎಂಬಂತಹ ಶಾಸಕರುಗಳ ಬೇಡಿಕೆ ಹಾಗೂ ಬೆದರಿಕೆ ಅಸಂಗತ ಹಾಗೂ ಅರ್ಥಹೀನ. 

ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತ ಅಧ್ಯಯನಕ್ಕಾಗಿ ಕಸ್ತೂರಿ ರಂಗನ್ ಸಮಿತಿಯನ್ನು ಕೇಂದ್ರ ಸರ್ಕಾರ ಶಾಸನಾತ್ಮಕವಾಗಿ ರಚಿಸಿತ್ತು. ಈ ಸಮಿತಿ ನೀಡಿರುವಂತಹ ವರದಿ ಬಗ್ಗೆ ಪರ, ವಿರೋಧದ ಚರ್ಚೆ ಹಾಗೂ ವಾಗ್ವಾದಗಳಿಗೆ ಪ್ರಜಾತಂತ್ರದಲ್ಲಿ ಮುಕ್ತ ಅವಕಾಶವಿದೆ. ಆದರೆ ಇಂತಹ ಚರ್ಚೆ ಹಾಗೂ ವಾಗ್ವಾದಗಳನ್ನೇ ಹತ್ತಿಕ್ಕುವಂತಹ ರೀತಿಯಲ್ಲಿ ಒತ್ತಡಗಳನ್ನು ಹೇರುವ ವಿಧಾನಗಳು ಎಂದಿಗೂ ಆರೋಗ್ಯಕರವಲ್ಲ. ಪ್ರಜಾತಂತ್ರದ ಆಶಯಗಳಿಗೆ ಇದು ವಿರುದ್ಧವಾದದ್ದು ಎಂಬುದು ನಮ್ಮ ಶಾಸಕರಿಗೆ ಅರಿವಿರಬೇಕು. ಅದೂ ಇಂತಹದೊಂದು ಬೆಳವಣಿಗೆ, ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಾದಂತಹ ಸಾಹಿತ್ಯ ಸಮಾವೇಶದಲ್ಲಿ ನಡೆದಿರುವುದು ದೊಡ್ಡ ದುರಂತ. ಸಾರ್ವಜನಿಕ ಬದುಕಿನಲ್ಲಿ ಸಾರ್ವಜನಿಕ ವಿಚಾರಗಳ ಕುರಿತ ವಾಗ್ವಾದಗಳನ್ನು ಹತ್ತಿಕ್ಕುವ ಈ ಅಸಹನೆಯ ಸಂಸ್ಕೃತಿ ತೀವ್ರ ಮಾತುಗಳಲ್ಲಿ ಖಂಡನಾರ್ಹವಾದುದು.

ಹಾಗೆಯೇ, ದೆಹಲಿ ಬಳಿ ಗಾಜಿಯಾಬಾದ್‌ನಲ್ಲಿರುವ ಆಮ್ ಆದ್ಮಿ ಪಕ್ಷದ (ಆಪ್) ಕಚೇರಿಯ ಮೇಲೆ ಹಿಂದೂ ರಕ್ಷಾ ದಳ ನಡೆಸಿದ ದಾಳಿಯೂ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾದುದು. ಕಾಶ್ಮೀರದಲ್ಲಿ ಸೇನೆ ನಿಯೋಜನೆ ಕುರಿತಂತೆ ಜನಮತಸಂಗ್ರಹ ಬೇಕು ಎಂಬಂತಹ ‘ಆಪ್’ ಮುಖಂಡ ಪ್ರಶಾಂತ್ ಭೂಷಣ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಲು ಆಪ್ ಕಾರ್ಯಾ­ಲಯಕ್ಕೆ ನುಗ್ಗಿ ದಾಂದಲೆ ನಡೆಸಿರುವ ಕ್ರಮ ಆತಂಕಕಾರಿ.

 2011ರಲ್ಲಿ ಪ್ರಶಾಂತ್ ಭೂಷಣ್ ಅವರ ಕಚೇರಿಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸ­ಲಾಗಿದ್ದ ಘಟನೆಯನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಮುಕ್ತ ಹಾಗೂ ಪ್ರಾಮಾಣಿಕ ವಾಗ್ವಾದಗಳೇ ಪ್ರಜಾತಂತ್ರ ಆಡಳಿತ ವ್ಯವಸ್ಥೆಯ ಮೂಲದ್ರವ್ಯ ಎಂಬುದನ್ನು ಸಾರ್ವಜನಿಕ ಬದುಕಿನಲ್ಲಿರುವವರು ಮರೆಯಬಾರದು.

ವ್ಯಕ್ತಿಗಳು ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ವಿರೋಧ ಸೂಚಿಸಲು ಹಿಂಸಾ­ಚಾರಗಳಿಗೆ ಇಳಿಯುವುದರಲ್ಲಿ ಅರ್ಥವಿಲ್ಲ. ತರ್ಕಬದ್ಧವಾಗಿ ವಿಚಾರಗಳ ಮಂಡನೆಯ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ರೂಢಿಸಬೇಕೇ ವಿನಾ ತೋಳ್ಬಲ ಪ್ರದರ್ಶಿಸುವುದು ಸಲ್ಲದು.

ಆಪ್ ಕಚೇರಿಯ ಮೇಲಿನ ದಾಳಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿರುವುದರ ನಿದರ್ಶನ. ಸಾರ್ವಜನಿಕ ವಾಗ್ವಾದಗಳ ಘನತೆಯನ್ನು ಕಸಿಯುವ ಇಂತಹ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟುವುದು ತುರ್ತು ಅಗತ್ಯ. ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಾ ರಚನಾತ್ಮಕ ಚರ್ಚೆಗಳ ಮೂಲಕ ಪ್ರಜಾಪ್ರಭುತ್ವದ ಆಶಯ­ಗಳನ್ನು ಬಲಗೊಳಿಸುವ ಹೊಣೆಗಾರಿಕೆಯನ್ನು ರಾಜಕೀಯ ಪಕ್ಷಗಳು, ನೇತಾರರು, ಸಾಂಸ್ಕೃತಿಕ ಲೋಕದ ವ್ಯಕ್ತಿಗಳು ಸೇರಿದಂತೆ ಎಲ್ಲರೂ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.