ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮಹಿಳೆ ಕುರಿತಾಗಿ ಆಣಿಮುತ್ತುಗಳನ್ನು ದುರಿಸಿದ್ದಾರೆ. ಮಹಿಳೆ ಮನೆಗೆಲಸಕ್ಕೆ ಬದ್ಧಳಾಗಿದ್ದು ಪತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆಗ ಪತಿ ಆಕೆಯ ಅಗತ್ಯಗಳನ್ನು ಪೂರೈಸಿ ಆಕೆಯನ್ನು ರಕ್ಷಿಸುತ್ತಾನೆ. `ಸಾಮಾಜಿಕ ಒಪ್ಪಂದದ ಸಿದ್ಧಾಂತ' ಇದು ಎಂಬಂತಹ ತರ್ಕವನ್ನೂ ಇದಕ್ಕೆ ಜೋಡಿಸಿದ್ದಾರೆ.
`ಮಹಿಳೆ ಸ್ವಾತಂತ್ರ್ಯಕ್ಕೆ ಎಂದೆಂದೂ ಅರ್ಹಳಲ್ಲ' ಎಂದು ಪ್ರತಿಪಾದಿಸಿದ ಮನುವಿನ ಸಿದ್ಧಾಂತವನ್ನೇ ಪುನರ್‌ಪ್ರತಿಪಾದಿಸುತ್ತಿರುವ ಭಾಗವತ್ ಮಾತುಗಳು ಆಘಾತಕಾರಿಯಾದವು. ಜಾತ್ಯತೀತ ಹಾಗೂ ಸಮಾನತೆಯ ತತ್ವಗಳ ತಳಹದಿಯಲ್ಲಿ ರೂಪಿತಗೊಂಡಿರುವ ಸಂವಿಧಾನ ನಮ್ಮದು ಎಂಬುದನ್ನು ಭಾಗವತ್ ಮರೆತಿದ್ದಾರೆ.
ಮಹಿಳೆಯ ಘನತೆಯನ್ನು ಕಸಿಯಲು ಯತ್ನಿಸುವಂತಹ ಇಂತಹ ಮಾತುಗಳಲ್ಲಿ ಸೂಕ್ಷ್ಮತೆಯೇ ಇಲ್ಲದ ಪುರುಷ ಅಹಂಕಾರ ವಿಜೃಂಭಿಸಿದೆ. ಭಾರತೀಯ ಸಂಸ್ಕಾರ, ಸಂಸ್ಕೃತಿ ಎಂಬ ಹೆಸರಿನಲ್ಲಿ ಪರಾಧೀನತೆಯೇ ಮಹಿಳೆಗೆ ಶ್ರೇಷ್ಠ ಮೌಲ್ಯ ಎಂಬುದನ್ನು ಪ್ರಚುರಪಡಿಸುವಂತಹ ಈ ಮಾತುಗಳು ರಾಷ್ಟ್ರವನ್ನು ಮಧ್ಯಯುಗಕ್ಕೆ ಒಯ್ಯುವಂತಹವು. ಪ್ರಜಾತಂತ್ರದ ಮೌಲ್ಯಗಳನ್ನು ಗಾಳಿಗೆ ತೂರುವ ಇಂತಹ `ಯಜಮಾನ ಸಂಸ್ಕೃತಿ', ರಾಷ್ಟ್ರದ ಅಭಿವೃದ್ಧಿಗೆ ಮಾರಕ.
ರಾಷ್ಟ್ರದಲ್ಲಿ ಪ್ರತಿ 20 ನಿಮಿಷಗಳಿಗೊಮ್ಮೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ ಎನ್ನುತ್ತದೆ ಒಂದು ವರದಿ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ದೆಹಲಿ ವಿದ್ಯಾರ್ಥಿನಿಯ ಸಾವಂತೂ ಇಡೀ ರಾಷ್ಟ್ರವನ್ನೇ ಅಲುಗಾಡಿಸಿದೆ. ರಾಷ್ಟ್ರದಾದ್ಯಂತ ವ್ಯಾಪಕ ಪ್ರತಿಭಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರ ಕಾನೂನು ತಿದ್ದುಪಡಿ ಸೇರಿದಂತೆ, ಮಹಿಳೆ ಸುರಕ್ಷತೆಗಾಗಿ ಕೈಗೊಳ್ಳಬಹುದಾದ ಅನೇಕ ಕ್ರಮಗಳ ಕುರಿತು ರಾಷ್ಟ್ರದಾದ್ಯಂತ ಚರ್ಚೆಗಳಾಗುತ್ತಿವೆ.
ಇಂತಹ ಸಂದರ್ಭದಲ್ಲಿ ಈ ಚರ್ಚೆಗಳ ದಿಕ್ಕು ತಪ್ಪಿಸುವಂತಹ ಭಾಗವತ್‌ರ ಮಾತುಗಳು ಅಸಂಬದ್ಧ. ಅಷ್ಟೇ ಅಲ್ಲ, ಅತ್ಯಾಚಾರಗಳು ನಡೆಯುವುದು `ಇಂಡಿಯಾ'ದಲ್ಲಿ, `ಭಾರತ'ದಲ್ಲಲ್ಲ ಎಂಬಂತಹ ವಿವಾದಾತ್ಮಕ ಹೇಳಿಕೆಯನ್ನೂ ಭಾಗವತ್ ಈ ಮೊದಲು ನೀಡಿದ್ದರು. ಲೈಂಗಿಕ ಹಿಂಸಾಚಾರ ಪ್ರಕರಣಗಳು ನಗರಗಳನ್ನು ಪ್ರತಿನಿಧಿಸುವ `ಇಂಡಿಯಾ'ದಲ್ಲಿ ಹೆಚ್ಚು ನಡೆಯಲು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವೇ ಕಾರಣ.
ಆದರೆ ಹಳ್ಳಿಗಳಿರುವ `ಭಾರತ'ದಲ್ಲಿ ಇವು ಹೆಚ್ಚು ನಡೆಯುವುದಿಲ್ಲ ಎಂಬಂತಹ ಅವಾಸ್ತವಿಕವಾದ ಅವೈಜ್ಞಾನಿಕ ವಿಶ್ಲೇಷಣೆಯನ್ನೂ ಭಾಗವತ್ ಮಂಡಿಸಿದ್ದರು. ಮಹಿಳೆಯರನ್ನು `ತಾಯಿ'ಯರಾಗಿ ಭಾವಿಸುವ ಭಾರತೀಯ ಮೌಲ್ಯಗಳು ಹಾಗೂ ಸಂಸ್ಕೃತಿಯನ್ನು ಸಮಾಜದ ಎಲ್ಲಾ ಸ್ತರಗಳಲ್ಲೂ ಸ್ಥಾಪಿಸಬೇಕೆಂಬುದು ಭಾಗವತ್ ವಾದ. ಮಹಿಳೆಯನ್ನು ಗೌರವಿಸುವಂತಹ ಈ ಮಾತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂದು ಬಿಜೆಪಿಯೂ ಈ ವಾದವನ್ನು ಸಮರ್ಥಿಸಿಕೊಂಡಿದೆ.
ಆದರೆ ಇದರಲ್ಲಿ ಹೊಸದೇನೂ ಇಲ್ಲ. ತಾಯಂದಿರೆಂದು ಪೂಜಿಸುತ್ತಾ `ಬೆಳ್ಳಿ ಸಂಕೋಲೆ'ಗಳಲ್ಲಿ ಮಹಿಳೆಯ ಸ್ವತಂತ್ರ ವ್ಯಕ್ತಿತ್ವವನ್ನು ಹತ್ತಿಕ್ಕುವ ಇಂತಹ ಮನಸ್ಥಿತಿಗಳ ಅಪಾಯಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ಆಧುನಿಕ ಕಾಲದ ಆತ್ಮವಿಶ್ವಾಸದ ಮಹಿಳೆಯನ್ನು, ಇಂತಹ ಮನಸ್ಥಿತಿಗಳು ಸೈರಿಸುವುದಿಲ್ಲ.
ಮಹಿಳೆ ವಿರುದ್ಧ ಹೆಚ್ಚುತ್ತಿರುವ ಹಿಂಸೆಗಳಿಗೆ ಇಂತಹ ಮನಸ್ಥಿತಿಗಳೂ ಮೂಲ ಕಾರಣ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಗಂಡನನ್ನು ನೋಡಿಕೊಂಡು ಗೃಹಕೃತ್ಯಗಳನ್ನು ಪಾಲಿಸಿಕೊಂಡಿರುವುದು ಮಹಿಳೆಗೆ ಭೂಷಣ ಎಂಬಂತಹ ಹೇಳಿಕೆಗೆ, ಅತ್ಯಂತ ವಾಚಾಳಿಗಳಾದ, ಕ್ರಿಯಾಶೀಲ ಸಾರ್ವಜನಿಕ ವ್ಯಕ್ತಿತ್ವ ಹೊಂದಿರುವ ಬಿಜೆಪಿ ನಾಯಕಿಯರಿಂದ ಖಂಡನೆ ವ್ಯಕ್ತವಾಗದಿರುವುದು ಅಚ್ಚರಿಯ ಸಂಗತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.