ADVERTISEMENT

ಅಸಮರ್ಥನೀಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST

ಅಕ್ರಮ ಗಣಿಗಾರಿಕೆ, ಗಣಿ ಗಡಿ ಒತ್ತುವರಿ, ಅಕ್ರಮ ಅದಿರು ಸಾಗಣೆ, ತೆರಿಗೆ ವಂಚನೆ, ಹಫ್ತಾ ವಸೂಲಿ, ಅರಣ್ಯ ಕಾಯ್ದೆ ಉಲ್ಲಂಘನೆ, ದಬ್ಬಾಳಿಕೆ, ವಂಚನೆ, ಅಧಿಕಾರ ದುರುಪಯೋಗ ಸೇರಿದಂತೆ ಹಲವು ಆರೋಪಗಳ ಮೇಲೆ ಕೇಂದ್ರ ತನಿಖಾ ದಳದ (ಸಿಬಿಐ) ಬಂಧನಕ್ಕೆ ಒಳಗಾಗಿರುವ ಬಳ್ಳಾರಿ `ಗಣಿ ಧಣಿ~ ಗಾಲಿ ಜನಾರ್ದನ ರೆಡ್ಡಿ ಪ್ರಕರಣವನ್ನು ರಾಜ್ಯದ ಆಡಳಿತಾರೂಢ ಬಿಜೆಪಿ ರಾಜಕೀಯ ದೃಷ್ಟಿಯಿಂದ ನೋಡುತ್ತಿರುವುದು ಆ ಪಕ್ಷದ ಸಮಯಸಾಧಕ ಪ್ರವೃತ್ತಿಯನ್ನು ತೋರುತ್ತಿದೆ.
 
ಇದಕ್ಕೆ, ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿಷಯದಲ್ಲಿ ಒಂದು ಮತ್ತು ತನ್ನದೇ ಪಕ್ಷದ ಅಧಿಕಾರ ಇರುವ ರಾಜ್ಯಗಳಲ್ಲಿ ಇನ್ನೊಂದು ರೀತಿಯ ಧೋರಣೆ ಅನುಸರಿಸುತ್ತಿರುವ ಆ ಪಕ್ಷದ ವರಿಷ್ಠರ ಇಬ್ಬಗೆ ನೀತಿಯೇ ಕಾರಣ. 

ಸಿಬಿಐ ತನಿಖೆಯಿಂದಾಗಿಯೇ 2ಜಿ ತರಂಗಾಂತರ ಹಂಚಿಕೆ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ಸಚಿವ ಎ.ರಾಜಾ, ರಾಜ್ಯಸಭೆ ಸದಸ್ಯೆ ಕನಿಮೊಳಿ, ಕಾಂಗ್ರೆಸ್ ಮುಖಂಡ ಸುರೇಶ್ ಕಲ್ಮಾಡಿ ಮತ್ತು ಕಾರ್ಪೊರೇಟ್ ಜಗತ್ತಿನ ಕೆಲವು ವರಿಷ್ಠ ಅಧಿಕಾರಿಗಳು ಜೈಲು ಸೇರಿದ್ದಾರೆ.

ಇದನ್ನು ಒಪ್ಪಿಕೊಳ್ಳುವ ಬಿಜೆಪಿ, ಅದೇ ಬಗೆಯ ಕಾರ್ಯಾಚರಣೆ `ಗಣಿಧಣಿ~ಯ ವಿರುದ್ಧ ನಡೆದಾಗ ರಾಜಕೀಯ ಪ್ರೇರಿತವೆಂದು ಹುಯ್ಯಲಿಡುತ್ತದೆ. ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ಇರಬೇಕಾದ ಬಿಜೆಪಿಯ ಇಂಥ ಪಕ್ಷಪಾತದ ನಡವಳಿಕೆ ಖಂಡನೀಯ.

ಅಕ್ರಮ ಗಣಿಗಾರಿಕೆ ಮತ್ತು ಭ್ರಷ್ಟಾಚಾರದ ಆರೋಪಗಳ ಕಾರಣವಾಗಿಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ನೇತೃತ್ವ ಬದಲಾಗಿದೆ. ಆದರೆ ಈ ಕುರಿತಂತೆ ಬಿಜೆಪಿಯ ಯಾವ ಮುಖಂಡರಲ್ಲಿಯೂ ಜವಾಬ್ದಾರಿಯುತ ವರ್ತನೆ ಪ್ರಕಟವಾಗುತ್ತಿಲ್ಲ.

`ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಬಂಧಿಸಿದ ಮಾತ್ರಕ್ಕೆ ಅವರು ತಪ್ಪು ಮಾಡಿದ್ದಾರೆ ಎಂದು ತೀರ್ಮಾನಿಸಲಾಗದು; ಅವರು ಪ್ರಾಮಾಣಿಕವಾಗಿ ಗಣಿಗಾರಿಕೆ ಮಾಡಿಕೊಂಡು ಬಂದಿದ್ದಾರೆ~ ಎಂಬ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ತಮ್ಮ ಸ್ಥಾನದ ಔಚಿತ್ಯವನ್ನು ಮೀರಿದ್ದಾರೆ.

ಇದು ನ್ಯಾಯಾಂಗದ ನಿಷ್ಪಕ್ಷಪಾತ ಸ್ವರೂಪವನ್ನು ಪ್ರಶ್ನಿಸುವಂಥ ಹೇಳಿಕೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿ ಇರುವಾಗ ಆರೋಪಿಯ ಕುರಿತಾಗಿ ಪ್ರಾಮಾಣಿಕತೆಯ ಪ್ರಮಾಣ ಪತ್ರ ನೀಡುವ ಅಧಿಕಾರವಾಗಲೀ ಅರ್ಹತೆಯಾಗಲೀ ಮುಖ್ಯಮಂತ್ರಿಗೆ ಇರುವುದಿಲ್ಲ.

ಅಕ್ರಮಗಳ ಕುರಿತಾಗಿ ಲೋಕಾಯುಕ್ತ ವರದಿಯೇ ಸರ್ಕಾರದ ಮುಂದೆ ಇರುವಾಗ ಅಮಾಯಕರಂತೆ  ಪ್ರತಿಕ್ರಿಯೆ ನೀಡುವ ಚಪಲಕ್ಕೆ ಮುಖ್ಯಮಂತ್ರಿ ಒಳಗಾಗಿದ್ದು ಉದ್ದೇಶಪೂರ್ವಕವೋ ಆಕಸ್ಮಿಕವೋ ಎಂಬುದು ಸ್ಪಷ್ಟವಾಗುತ್ತಿಲ್ಲ.
 
`ಆರೋಪಿಯ ಬೆಂಬಲಕ್ಕೆ ಪಕ್ಷ ನಿಲ್ಲುತ್ತದೆ~ ಎಂದು ಹೇಳುವ ಮೂಲಕ ಬಿಜೆಪಿಯ ಮುಖಂಡರು ತಮ್ಮ ಪಕ್ಷದ ನಿಜವಾದ ಬಣ್ಣವನ್ನು ಬಯಲು ಮಾಡಿದ್ದಾರೆ. `ಗಣಿಧಣಿ~ಗಳ ದಬ್ಬಾಳಿಕೆಯಿಂದ ಬಳ್ಳಾರಿಯೇ ಪ್ರತ್ಯೇಕ ಸಂಸ್ಥಾನದಂತೆ ಪರಿವರ್ತನೆಯಾಗಿದೆ ಎಂದು ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿಗೆ ನಿಮಿತ್ತವಾದ ಪರಿಸ್ಥಿತಿ `ಗಣಿಧಣಿ~ಗಳು ಸರ್ಕಾರದಿಂದ ಅಧಿಕಾರವಂಚಿತರಾದ ಮೇಲೆಯೂ ಉಳಿದುಕೊಂಡಿದೆ ಎಂಬುದಕ್ಕೆ ಜನಾರ್ದನ ರೆಡ್ಡಿ ಬಂಧನ ಪ್ರತಿಭಟಿಸಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ಮೇಲೆ ಬೆಂಬಲಿಗರು ನಡೆಸಿದ ದಾಳಿ ಸಾಕ್ಷಿಯಾಗಿದೆ.
 
ಇದು ರಾಜ್ಯದಲ್ಲಿ ಸಂವಿಧಾನ ವ್ಯವಸ್ಥೆಯನ್ನು ಪಾಲಿಸುವಂಥ ಸರ್ಕಾರ ಇದೆಯೇ ಎಂಬ ಸಂಶಯ ಮೂಡಲು ಕಾರಣವಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.