ADVERTISEMENT

ಇನ್ನಾದರೂ ಎಚ್ಚೆತ್ತುಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 19:30 IST
Last Updated 24 ಜುಲೈ 2014, 19:30 IST

ಕೇಂದ್ರ ಸರ್ಕಾರ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಮಾನ್ಯತೆ ನೀಡಿದರೂ ಇನ್ನೂ ಶಾಸ್ತ್ರೀಯವಾದ ಅಧ್ಯಯನ ಆರಂಭವಾಗಿಲ್ಲ. ತಮಿಳು ಭಾಷೆಗೆ ದಶಕದ ಹಿಂದೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಘೋಷಣೆ ಮಾಡಿದಾಗ ಕರ್ನಾಟಕದಾದ್ಯಂತ ಪ್ರತಿಭಟನೆಯ ಕಿಡಿ ಹೊತ್ತಿಕೊಂಡಿತು. ನಾಲ್ಕು ವರ್ಷ­ಗಳ ಹೋರಾಟದ ಫಲವಾಗಿ ಕನ್ನಡಕ್ಕೆ 2008ರಲ್ಲಿ ಶಾಸ್ತ್ರೀಯ ಭಾಷೆ ಗೌರವ ದೊರೆಯಿತು. ಆರು ವರ್ಷದಲ್ಲಿ ಕನ್ನಡದಲ್ಲಿ ನಡೆ­ದಿರುವ ಅಧ್ಯ­ಯನ– ಸಂಶೋಧನೆಗಳು ಶೂನ್ಯ.

ಯಾವುದೇ ಭಾಷೆ ತನ್ನಷ್ಟಕ್ಕೆ ಬೆಳೆಯು­ವು­ದಿಲ್ಲ. ಅದಕ್ಕೆ ಸಮಾಜವೂ ಕೈಜೋಡಿಸಬೇಕು. ಸರ್ಕಾ­ರವೂ ಒತ್ತಾಸೆಯಾಗಿ ನಿಲ್ಲ­ಬೇಕು. ಸಮಕಾಲೀನ ಅಗತ್ಯಗಳಿಗೆ ಅನು­ಗುಣ­ವಾಗಿ ಕನ್ನಡ ಭಾಷೆಯನ್ನು ಕಟ್ಟಿ, ಬೆಳೆಸುವ ವಿಷಯದಲ್ಲಿ ರಾಜ್ಯ ಸರ್ಕಾರ ಮುತು­ವರ್ಜಿ ತೋರುತ್ತಿಲ್ಲ. ಇದಕ್ಕೆ ಯಾವುದೋ ಒಂದು ಪಕ್ಷದ ಸರ್ಕಾರ­ವನ್ನು ದೂರು­ವಂತಿಲ್ಲ. ಎಲ್ಲ ಪಕ್ಷಗಳ ಪಾಲೂ ಇದೆ. ತಮಿಳುನಾಡು ಸರ್ಕಾರ, ತಮಿಳು ಭಾಷೆ ಬೆಳೆಸುವ ನಿಟ್ಟಿನಲ್ಲಿ ಮೆಚ್ಚು­ವಂಥ ಕೆಲಸಗಳನ್ನು ಮಾಡಿದೆ.

ಮೈಸೂರಿನ ಭಾರತೀಯ ಭಾಷಾ ಸಂಶೋಧನಾ ಸಂಸ್ಥೆಯ ಅಧೀನ­ದಲ್ಲಿದ್ದ ತಮಿಳು ಭಾಷಾ ಕೇಂದ್ರವನ್ನು ಸ್ವತಂತ್ರ­ಗೊಳಿಸಿ ಚೆನ್ನೈನಲ್ಲಿ ಪ್ರತ್ಯೇಕ ತಮಿಳು ಶಾಸ್ತ್ರೀಯ ಅಧ್ಯಯನ ಕೇಂದ್ರ­ವನ್ನು ತೆರೆಯಲಾಗಿದೆ. ಕಳೆದ ನಾಲ್ಕು ವರ್ಷ­ಗಳಲ್ಲಿ ಕೇಂದ್ರ ಸರ್ಕಾರವು ತಮಿಳು ಭಾಷೆಗೆ ₨ 50 ಕೋಟಿ ನಿಗದಿಪಡಿಸಿದೆ. ಇದರಲ್ಲಿ ₨ 28 ಕೋಟಿ ಬಳಕೆ ಮಾಡಿಕೊಳ್ಳಲಾಗಿದೆ. ಇದೇ ಅವಧಿಯಲ್ಲಿ ಕನ್ನಡಕ್ಕೆ ತೆಗೆದಿಟ್ಟ ಹಣ ₨ 6 ಕೋಟಿ. ಕರ್ನಾಟಕ ಈ ಅತ್ಯಲ್ಪ ಹಣವನ್ನೂ ಖರ್ಚು ಮಾಡದಿರುವುದು ದುರದ­ೃಷ್ಟಕರ.

ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಶೋಧನಾ ಸಂಸ್ಥೆ ನಿಯಂತ್ರ­ಣ­ದಿ­ಂದ ಶಾಸ್ತ್ರೀಯ ಕನ್ನಡ ಭಾಷಾ ಕೇಂದ್ರವನ್ನು ಬಿಡುಗಡೆಗೊಳಿಸಲು ರಾಜ್ಯ ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಬೆಂಗಳೂರಿನ ಕಲಾ ಗ್ರಾಮ­ದಲ್ಲಿ ಶಾಸ್ತ್ರೀಯ ಭಾಷೆ ಅಧ್ಯಯನ ಕೇಂದ್ರ ಸ್ಥಾಪನೆಗೆ ಮೂರು ಎಕರೆ ಗುರು­ತಿ­ಸಲಾಗಿದ್ದರೂ ಸಣ್ಣ ಹುಲ್ಲುಕಡ್ಡಿಯೂ ಅಲುಗಾಡಿಲ್ಲ. ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಬೇಕಾದ ಸರ್ಕಾರ ತೂಕಡಿಸುತ್ತಿದೆ ಎಂದು ಹೇಳದೆ ವಿಧಿಯಿಲ್ಲ.

ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಕಟ್ಟಡ ಕಟ್ಟುವ ಮಾತು ಒತ್ತ­­ಟ್ಟಿ­ಗಿರಲಿ, ಅಧ್ಯಯನ ಕೇಂದ್ರಕ್ಕೆ ಪೂರ್ಣ ಪ್ರಮಾಣದ ನಿರ್ದೇಶಕರನ್ನೇ ನೇಮಿ­ಸಿಲ್ಲ. ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಲು ತಜ್ಞರ ಸಮಿತಿ ರಚಿ­ಸ­­ಬೇಕು. ಇವೆಲ್ಲವೂ ಆಗಬೇಕಾದರೆ ಸಿಐಐಎಲ್‌ನಿಂದ ಶಾಸ್ತ್ರೀಯ ಕನ್ನಡ ಭಾಷಾ ಕೇಂದ್ರ ರಾಜಧಾನಿ ಬೆಂಗಳೂರಿಗೆ ಸ್ಥಳಾಂತರವಾಗಬೇಕು. ಈ ಸಂಗತಿ ಗೊತ್ತಿದ್ದರೂ ರಾಜ್ಯ ಸರ್ಕಾರ ಏಕೆ ಮೌನವಾಗಿದೆ ಎಂದು ಅರ್ಥವಾಗುತ್ತಿಲ್ಲ.

ಕನ್ನಡ ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕಾಗಿ ಬೊಬ್ಬೆ ಹಾಕಿದ ಹಿರಿಯ ಸಾಹಿತಿಗಳೂ ಈ ಬಗ್ಗೆ ಏಕೆ ದನಿ ಎತ್ತಿಲ್ಲ? ಭಾಷೆ ಬೆಳೆಸುವ ವಿಷಯದಲ್ಲಿ ತಮಿಳುನಾಡು ಸರ್ಕಾರಕ್ಕಿರುವ ಕಾಳಜಿ, ಬದ್ಧತೆ ಕರ್ನಾಟಕ ಸರ್ಕಾರಕ್ಕೆ ಯಾಕಿಲ್ಲ? ರಾಜ್ಯದ ಯೋಜನೆಗಳು, ಕಾರ್ಯಕ್ರಮಗಳ ಸಂಬಂಧವಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ, ನಿವಾಸಿ ಆಯುಕ್ತರು ಸೇರಿದಂತೆ ದೊಡ್ಡ ದಂಡೇ ಇದೆ. ಇದುವರೆಗೆ ಅವರೇನು ಮಾಡಿದ್ದಾರೆಂದು ಯಾರಾದರೂ ಕೇಳಿದರೆ ಸರ್ಕಾರದ ಬಳಿ ಉತ್ತರವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.