ADVERTISEMENT

ಈಜಿಪ್ಟ್‌: ಉಗ್ರರ ದಮನಕ್ಕೆ ಸಂಘಟಿತ ಯತ್ನ ಬೇಕು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 19:30 IST
Last Updated 28 ನವೆಂಬರ್ 2017, 19:30 IST
ಈಜಿಪ್ಟ್‌: ಉಗ್ರರ ದಮನಕ್ಕೆ ಸಂಘಟಿತ ಯತ್ನ ಬೇಕು
ಈಜಿಪ್ಟ್‌: ಉಗ್ರರ ದಮನಕ್ಕೆ ಸಂಘಟಿತ ಯತ್ನ ಬೇಕು   

ಈಜಿಪ್ಟ್‌ನ ಸಿನಾಯ್‌ ಪ್ರಾಂತ್ಯದ ಬಿರ್‌ ಅಲ್‌ ಅಬಿದ್‌ನಲ್ಲಿ ಸೂಫಿ ಪಂಥದ ಮಸೀದಿಯೊಂದರ ಮೇಲೆ ಶುಕ್ರವಾರ ಬಾಂಬು ದಾಳಿ ನಡೆಸಿ 27 ಮಕ್ಕಳ ಸಹಿತ 305 ಜನರನ್ನು ಕೊಂದು ಹಾಕಿರುವ ಭಯೋತ್ಪಾದಕರ ಕೃತ್ಯ ಅತ್ಯುಗ್ರ ಶಬ್ದಗಳ ಖಂಡನೆಗೆ ಅರ್ಹವಾದದ್ದು. ಬಾಂಬ್‌ ಸ್ಫೋಟಿಸಿದಾಗ ಮಸೀದಿಯಿಂದ ಹೊರಕ್ಕೆ ಓಡಿಬಂದ ನಿರಾಯುಧರ ಮೇಲೆ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಂಬುಲೆನ್ಸ್‌ಗಳ ಮೇಲೂ ಗುಂಡಿನ ಮಳೆಗರೆಯಲಾಗಿದೆ.

ಈ ಕೃತ್ಯದ ಹೊಣೆಯನ್ನು ಬಹಿರಂಗವಾಗಿ ಯಾರೂ ಹೊತ್ತುಕೊಂಡಿಲ್ಲವಾದರೂ, ಈಜಿಪ್ಟ್‌ನಲ್ಲಿ ಸಕ್ರಿಯವಾಗಿರುವ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರ ಸ್ಥಳೀಯ ಘಟಕವೇ ಇದಕ್ಕೆ ಹೊಣೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಾಳಿ ನಡೆಸಲು ಹಲವು ವಾಹನಗಳಲ್ಲಿ ಮಿಲಿಟರಿ ವೇಷಧಾರಿಗಳಾಗಿ ಬಂದ 20ಕ್ಕೂ ಹೆಚ್ಚು ಉಗ್ರರು, ಐಎಸ್‌ನ ಕಪ್ಪು ಧ್ವಜವನ್ನು ಹೊಂದಿದ್ದರು. ಹಾಗಾಗಿ ಇದನ್ನು ಐಎಸ್‌ ಉಗ್ರರ ಕೃತ್ಯವೆಂದೇ ಭಾವಿಸಲಾಗಿದೆ. ಮಧ್ಯಾಹ್ನದ ಸಾಮೂಹಿಕ ನಮಾಜ್‌ನ ಸಮಯಕ್ಕೆ ಸರಿಯಾಗಿ ಸ್ವಯಂಚಾಲಿತ ಗನ್‌ಗಳೊಂದಿಗೆ ಮಸೀದಿಗೆ ನುಗ್ಗಿ ಮಾನವೀಯತೆ ಮರೆತು ಗುಂಡು ಹಾರಿಸಿರುವುದನ್ನು ನೋಡಿದರೆ, ಈಜಿಪ್ಟ್‌ನಲ್ಲಿ ಆಡಳಿತದ ಹಿಡಿತ ಅಷ್ಟು ಬಿಗಿಯಾಗಿಲ್ಲ ಎಂದೇ ಹೇಳಬೇಕಾಗಿದೆ. ನಿರಾಯುಧರಾದ ಜನಸಾಮಾನ್ಯರ ಮೇಲೆ ನಡೆದ ಈ ದಾಳಿ ಇರಾಕ್‌ ಮತ್ತು ಸಿರಿಯಾಗಳಲ್ಲಿ ನಡೆದ ಐಎಸ್‌ ದಾಳಿಗಳನ್ನೇ ಹೋಲುವಂತಿದೆ. ಸೂಫಿ ಎನ್ನುವುದು ಇಸ್ಲಾಮಿನ ಉದಾರವಾದಿ ಪಂಥವಾಗಿದ್ದು, ಸೂಫಿ ಸಂತರೊಬ್ಬರು ಹುಟ್ಟಿದ ಸ್ಥಳವಾದ ಮಸೀದಿಯ ಮೇಲೆಯೇ ದಾಳಿ ನಡೆಸುವ ಮೂಲಕ ಐಎಸ್‌ ಭಯೋತ್ಪಾದಕರು ತಮ್ಮ ಧಾರ್ಮಿಕ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಪ್ರದೇಶದಲ್ಲಿ ಸರ್ಕಾರಕ್ಕೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವ ಸವಾರ್‌ಖಾ ಬುಡಕಟ್ಟು ಜನರ ಮೇಲೆಯೂ ಸೇಡು ತೀರಿಸುವ ದುರುದ್ದೇಶ ಈ ದಾಳಿಗೆ ಇರುವಂತಿದೆ.

ಆಧುನಿಕ ಈಜಿಪ್ಟ್‌ನ ಇತಿಹಾಸದಲ್ಲೇ ಇದೊಂದು ಅತ್ಯಂತ ಕ್ರೂರ ದಾಳಿ ಎಂದು ಗುರುತಿಸಲಾಗಿದೆ. 2013ರಲ್ಲಿ ಸೇನಾ ಕ್ರಾಂತಿಯ ಮೂಲಕ ಅಧಿಕಾರಕ್ಕೆ ಬಂದಿರುವ ರಾಷ್ಟ್ರದ ಅಧ್ಯಕ್ಷ ಅಬ್ದುಲ್‌ ಫತಾಹ್‌ ಅಲ್‌ ಸಿಸ್ಸಿ ಅವರು ಭಯೋತ್ಪಾದಕರನ್ನು ಸಂಘಟಿತವಾಗಿ, ಹೆಚ್ಚು ದಕ್ಷತೆ ಮತ್ತು ಚಾಣಾಕ್ಷತೆಯಿಂದ ಮಟ್ಟ ಹಾಕುವ ಅಗತ್ಯವಿದೆ ಎಂಬುದನ್ನು ಈ ಹತ್ಯಾಕಾಂಡ ಎತ್ತಿ ತೋರಿದೆ. ಬ್ರದರ್‌ಹುಡ್‌ನ ಮುಖ್ಯಸ್ಥ ಮೊಹಮ್ಮದ್‌ ಮುರ್ಸಿ ನೇತೃತ್ವದ ಸರ್ಕಾರವನ್ನು ಪತನಗೊಳಿಸಿ, ಜನರಲ್‌ ಸಿಸ್ಸಿ ಅಧಿಕಾರಕ್ಕೆ ಬಂದ ಬಳಿಕ ಈಜಿಪ್ಟ್‌ನಲ್ಲಿ ಮಸೀದಿ ಮತ್ತು ಚರ್ಚ್‌ಗಳ ಮೇಲೆ ಭಯೋತ್ಪಾದಕರ ದಾಳಿ ಅವ್ಯಾಹತವಾಗಿ ನಡೆದಿದೆ. ನಾಲ್ಕು ವರ್ಷಗಳಲ್ಲಿ 1000ಕ್ಕೂ ಹೆಚ್ಚು ಸೈನಿಕರೇ ಬಲಿಯಾಗಿದ್ದಾರೆ. ಲಿಬಿಯಾ ಸಹಿತ ಸುತ್ತಮುತ್ತಲ ದೇಶಗಳಲ್ಲಿ ಇರುವ ರಾಜಕೀಯ ಅಸ್ಥಿರತೆಯೂ ಈಜಿಪ್ಟ್‌ನಲ್ಲಿ ಭಯೋತ್ಪಾದಕರ ಉಪಟಳ ಹೆಚ್ಚಲು ಕಾರಣವಾಗಿದೆ.

ADVERTISEMENT

ಇರಾಕ್‌ ಮತ್ತು ಸಿರಿಯಾಗಳಲ್ಲಿ ಐಎಸ್‌ ಭಯೋತ್ಪಾದಕರ ಮೇಲೆ ಅಲ್ಲಿನ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳುತ್ತಿರುವುದರಿಂದ ಉಗ್ರರು ಈಜಿಪ್ಟ್‌ನಲ್ಲಿ ತಮ್ಮ ಕುಕೃತ್ಯಗಳನ್ನು ಹೆಚ್ಚಿಸಿದಂತಿದೆ. ಜತೆಗೆ ಗಡಿಪ್ರದೇಶಗಳಲ್ಲಿ ಈ ಉಗ್ರರಿಗೆ ಕಾಳಸಂತೆಯಲ್ಲಿ ಯಥೇಚ್ಛ ಶಸ್ತ್ರಾಸ್ತ್ರಗಳೂ ಸುಲಭವಾಗಿ ಸಿಗುತ್ತಿವೆ. ಸಿಸ್ಸಿ ನೇತೃತ್ವದ ಸರ್ಕಾರ ಬರೀ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಿದರೆ ಸಾಲದು; ಸಿನಾಯ್‌ ಪರ್ವತ ಪ್ರದೇಶದಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರಗಳು ಪೂರೈಕೆಯಾಗದಂತೆಯೂ ನೋಡಿಕೊಳ್ಳಬೇಕು. ಸೇನೆ ಕೂಡ ನಾಗರಿಕರ ಹಕ್ಕುಗಳನ್ನು ರಕ್ಷಿಸುತ್ತಲೇ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಬೇಕು. ಆ ಮೂಲಕ, ಸಾರ್ವಜನಿಕರ ಬೆಂಬಲವನ್ನು ಗಟ್ಟಿಗೊಳಿಸುವ ತಂತ್ರವನ್ನೂ ಹೂಡಬೇಕಿದೆ. ಭಯೋತ್ಪಾದಕರ ದಮನಕ್ಕೆ ಜಾಗತಿಕ ಮಟ್ಟದಲ್ಲಿ ಸಂಘಟಿತ ಯತ್ನಗಳನ್ನು ರೂಪಿಸುವ ಅಗತ್ಯವಿದೆ ಎನ್ನುವುದನ್ನೂ ಭಯೋತ್ಪಾದಕರ ಈ ಕೃತ್ಯ ಖಚಿತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.