ADVERTISEMENT

ಕಣ್ಣೊರೆಸುವ ತಂತ್ರ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST

ಐಪಿಎಲ್‌ಗೆ ಅಂಟಿದ ಕೊಳೆ ತೊಳೆಯುವ ಕೆಲಸ ಕಣ್ಣೊರೆಸುವ ತಂತ್ರದಂತಿದೆ. ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ಜನ ಕ್ರಿಕೆಟ್ ಬಗ್ಗೆಯೇ ನಂಬಿಕೆ ಕಳೆದುಕೊಳ್ಳುವಂತಹ ಸ್ಥಿತಿ ಉದ್ಭವಿಸಿರುವಾಗ ಕಠಿಣ ಕ್ರಮ ಕೈಗೊಂಡು ಬಿಸಿಸಿಐ ತನ್ನ ಹೆಚ್ಚುಗಾರಿಕೆ ತೋರಬಹುದು ಎಂದು ಕೊಂಡಿದ್ದವರಿಗೆ ನಿರಾಸೆ ಉಂಟಾಗಿದೆ. ಅದರ ಬದಲು ಜನರ ಗಮನವನ್ನು ಬೇರೆಡೆಗೆ ಹರಿಯುವಂತೆ ಬಿಸಿಸಿಐ ಕಾರ್ಯಕಾರಿ ಸಮಿತಿ ನಾಜೂಕುತನದಿಂದ ನಡೆದುಕೊಂಡಿರುವುದು ಎದ್ದು ಕಾಣುತ್ತದೆ.

ಚಿಯರ್ ಬೆಡಗಿಯರ ನೃತ್ಯಕ್ಕೆ ನಿಷೇಧ, ಕ್ರೀಡಾಂಗಣದೊಳಗೆ ಯಾರೂ ಮೊಬೈಲ್ ಫೋನ್‌ಗಳಲ್ಲಿ ಮಾತನಾಡದಂತೆ ಜಾಮರ್‌ಗಳನ್ನು ಅಳವಡಿಸುವುದು ಇತ್ಯಾದಿ ಕ್ರಮಗಳನ್ನು ಕೈಗೊಂಡಿರುವ ಕ್ರಿಕೆಟ್ ಆಡಳಿತಗಾರರ ನಡೆ ಸೋಗಲಾಡಿತನದ್ದಾಗಿದೆ. ಐಪಿಎಲ್ ಟೂರ್ನಿಯ ಒಡಲೊಳಗೇ ಭ್ರಷ್ಟಾಚಾರ, ಅವ್ಯವಹಾರಗಳ ವಿಷ ಕುದಿಯುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಐಪಿಎಲ್ ತಂಡಗಳ ಮಾಲೀಕರು ಯಾರು, ಅವರಿಗೆ ಕ್ರಿಕೆಟ್ ಕುರಿತ ಆಸಕ್ತಿಗೆ ಕಾರಣವೇನು, ಅವರಿಗೆ ಸಿಗುವ ಲಾಭ ನಷ್ಟದ ಲೆಕ್ಕಾಚಾರ ಎಂತಹದು ಇತ್ಯಾದಿಗಳಾವುದರ ಬಗ್ಗೆಯೂ ಪಾರದರ್ಶಕ ಮಾಹಿತಿ ಕಂಡು ಬರುತ್ತಿಲ್ಲ.

ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಐಪಿಎಲ್ ಆಟಗಾರರ ಜತೆಗೆ ದಾವೂದ್ ಇಬ್ರಾಹಿಂ ನಂಟು ಇದೆ ಎಂದು ಪೊಲೀಸರು ಕರಾರುವಾಕ್ಕಾಗಿ ಹೇಳಿರುವುದು ಗಂಭೀರ ಆರೋಪವೇ ಹೌದು. ಆದರೆ ಇದರ ಬಗ್ಗೆ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲವೆಂದಾದರೆ ಕ್ರಿಕೆಟ್ ಆಡಳಿತಗಾರರನ್ನು ಜನರು ಹೇಗೆ ನಂಬಲು ಸಾಧ್ಯ.

ಆದರೆ ಪಂದ್ಯಗಳ ನಂತರ ರಾತ್ರಿ ಔತಣ ಕೂಟ ನಡೆಸಬಾರದು, ಮೊಬೈಲ್ ಫೋನ್ ಬಳಸಬಾರದು ಇತ್ಯಾದಿ ನಿಯಮಗಳನ್ನು ರೂಪಿಸುವ ಮೂಲಕ ಕಳ್ಳಾಟವನ್ನು ತಡೆಯುತ್ತೇವೆಂದು ಬಿಸಿಸಿಐ ಕಾರ್ಯಕಾರಿ ಸಮಿತಿಯ ಮಂದಿ ತೀರ್ಮಾನಿಸಿರುವುದು ತೀರಾ ಬಾಲಿಶತನವೆನ್ನಬಹುದಷ್ಟೇ. ಇದು ಬಿಸಿಸಿಐ ತನ್ನ ಕಳಂಕ ತೊಳೆಯಲು ನಡೆಸಿರುವ ಯತ್ನ ಅಷ್ಟೆ.

ಸ್ಪಾಟ್ ಫಿಕ್ಸಿಂಗ್ ಕುರಿತು ತನಿಖೆ ನಡೆಸಿ ವರದಿ ನೀಡಲು ಬಿಸಿಸಿಐ ಭ್ರಷ್ಟಾಚಾರ ತಡೆ ಮತ್ತು ಭದ್ರತಾ ಘಟಕದ ಮುಖ್ಯಸ್ಥ ರವಿ ಸವಾನಿಯವರಿಗೆ ಈ ಹಿಂದೆ ಸೂಚಿಸಲಾಗಿತ್ತು. ಅವರು ನೀಡಿರುವ ವರದಿಯನ್ನು ಕಾರ್ಯಕಾರಿ ಸಮಿತಿಯು ಶಿಸ್ತು ಸಮಿತಿಗೆ ರವಾನಿಸಿದೆ. ಇದೊಂದು ಕಾಲಹರಣದ ತಂತ್ರವಲ್ಲದೆ ಬೇರೇನಲ್ಲ.  ಸ್ಪಾಟ್ ಫಿಕ್ಸಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಜ್ ಕುಂದ್ರಾ ಮತ್ತು ಗುರುನಾಥ್ ಮೇಯಪ್ಪನ್ ಅವರ ಪಾತ್ರಗಳ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿದ್ದರೂ ಆ ಸಮಿತಿಗೆ ತನಿಖೆ ಮುಗಿಸಿ ವರದಿ ನೀಡಲು ಯಾವುದೇ ಕಾಲಮಿತಿ ಹೇರದಿರುವುದೂ ಕಾಲಹರಣದ ತಂತ್ರ ಎನ್ನುವುದು ಸ್ಪಷ್ಟ.

ಶ್ರೀನಿವಾಸನ್ ಅಧ್ಯಕ್ಷರಾಗಿ ಈಗ ಕೆಲಸ ನಿರ್ವಹಿಸದಿದ್ದರೂ ತಾಂತ್ರಿಕವಾಗಿ ಈಗಲೂ ಅವರೇ ಬಿಸಿಸಿಐ ಅಧ್ಯಕ್ಷರು. ಅವರೇ ಈ ಹಿಂದೆ ನೇಮಕ ಮಾಡಿದ ಪದಾಧಿಕಾರಿಗಳು ತನಿಖೆಯನ್ನು ಎಷ್ಟು ನಿಷ್ಪಕ್ಷಪಾತವಾಗಿ ನಡೆಸಲು ಸಾಧ್ಯ? ಸ್ವತಃ ಆರೋಪಿ ಆಗಿರುವ ಬಿಸಿಸಿಐ, ಆರೋಪಗಳ ಬಗ್ಗೆ ತನಿಖೆಯನ್ನು ನಡೆಸಲು ತನ್ನದೇ ಉಪಸಮಿತಿಗಳನ್ನು ರಚಿಸುವುದು ಪ್ರಹಸನವಲ್ಲದೆ ಇನ್ನೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.