ADVERTISEMENT

ಕರ್ತವ್ಯನಿಷ್ಠರಿಗೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 15:25 IST
Last Updated 21 ಫೆಬ್ರುವರಿ 2011, 15:25 IST

ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥ ಯು.ವಿ.ಸಿಂಗ್ ಅವರ ಮೇಲೆ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ನಡೆಸಿದ ಹಲ್ಲೆ ಲಘುವಾಗಿ ಪರಿಗಣಿಸುವಂಥದ್ದಲ್ಲ. ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಬೆಂಗಳೂರಿನ ಕೆರೆಗಳಿಗೆ ಕಲುಷಿತ ತ್ಯಾಜ್ಯವನ್ನು ಬಿಡುತ್ತಿದ್ದ ದುಷ್ಕರ್ಮಿಗಳ ಜಾಲ ಅವರ ಮೇಲೆ ಹಲ್ಲೆ ನಡೆಸಿದೆ. ಕೈಗಾರಿಕೆಗಳಿಂದ ಹೊರಸೂಸುವ ವಿಷಯುಕ್ತ ತ್ಯಾಜ್ಯವನ್ನು ಕೆರೆಗಳಿಗೆ ಬಿಡುತ್ತಿರುವ ಕರಾಳದಂಧೆಯ ಸುಳಿವು ಅರಿತ ಸಿಂಗ್ ಅದನ್ನು ಸಾಕ್ಷ್ಯಸಹಿತ ಪತ್ತೆ ಮಾಡುವ ಯತ್ನದಲ್ಲಿದ್ದಾಗ ಅದನ್ನು ಬಲಪ್ರಯೋಗಿಸಿ ವಿಫಲಗೊಳಿಸಲಾಗಿದೆ.

ಸಂಗ್ರಹಿಸಿದ ಸಾಕ್ಷ್ಯವನ್ನೂ ದುಷ್ಕರ್ಮಿಗಳು ನಾಶಪಡಿಸಿದ್ದಾರೆ. ಇದು ವ್ಯವಸ್ಥಿತ ಜಾಲದ ಸಂಚು. ಕೆರೆಗಳಿಗೆ ವಿಷಯುಕ್ತ ತ್ಯಾಜ್ಯವನ್ನು ಬಿಡುತ್ತಿದ್ದ ಗುಂಪು, ಅದನ್ನು ತಡೆಯಲು ಬಂದ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದು ಶಿಕ್ಷಾರ್ಹ ಅಪರಾಧವಾಗಿದ್ದರೂ ಘಟನೆ ನಡೆದ ಪ್ರದೇಶದ ಪೊಲೀಸ್ ಅಧಿಕಾರಿ ಅದರ ಗಂಭೀರತೆಗೆ ತಕ್ಕಂತೆ ವರ್ತಿಸಿಲ್ಲ.ಅಧಿಕಾರಿಗೆ ದೈಹಿಕ ಹಿಂಸೆ ಮಾಡುವಷ್ಟು ಕ್ರೌರ್ಯ ಪ್ರದರ್ಶಿಸಿದ ದುಷ್ಕರ್ಮಿಗಳ ವಿರುದ್ಧ ಕೊಲೆ ಯತ್ನದ ಆರೋಪ ದಾಖಲು ಮಾಡಿಕೊಳ್ಳದ ಪೊಲೀಸ್ ಅಧಿಕಾರಿ, ದುಷ್ಕರ್ಮಿಗಳೊಂದಿಗೆ ಶಾಮೀಲಾಗಿರಬಹುದೆಂಬ ಶಂಕೆಗೆ ಆಸ್ಪದ ನೀಡಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳು ಸುಲಭದಲ್ಲಿ ತಪ್ಪಿಸಿಕೊಳ್ಳುವಂಥ ಆರೋಪಗಳನ್ನು ಹೊರಿಸಿರುವುದರಿಂದ ಇದು ಸ್ಪಷ್ಟವಾಗಿದೆ.

ದಕ್ಷತೆ ಮತ್ತು ಕರ್ತವ್ಯ ಪ್ರಜ್ಞೆ ಪ್ರದರ್ಶಿಸುತ್ತಲೇ ಬಂದಿರುವ ಸಿಂಗ್, ದೇಶದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತಿರುವ ಅಕ್ರಮ ಗಣಿಗಾರಿಕೆಯ ಜಾಲವನ್ನು ಬಯಲಿಗೆ ಎಳೆದ ನಿಷ್ಠಾವಂತ ಅಧಿಕಾರಿ. ಬಳ್ಳಾರಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ತನಿಖೆಗೆ ಏಕಾಂಗಿಯಾಗಿ ಧಾವಿಸಿದ ಶೌರ್ಯವಂತ. ಅಕ್ರಮ ಗಣಿಗಾರಿಕೆ ಕುರಿತ ತನಿಖೆಯನ್ನು ಬರುವ ಮಾರ್ಚ್ 31ರ ಮೊದಲೇ ಅಂತಿಮಗೊಳಿಸಲು ವಾರದ ದಿನಗಳಲ್ಲಿ ಶ್ರಮಿಸುತ್ತಿರುವ ಈ ಅಧಿಕಾರಿ, ಭಾನುವಾರದ ರಜೆಯ ದಿನವನ್ನು  ಕೆರೆ ಅಭಿವೃದ್ಧಿ ಪ್ರಾಧಿಕಾರದ ಕೆಲಸಕ್ಕಾಗಿ  ಮೀಸಲಿಟ್ಟವರು. ಎಂಥ ಪರಿಸ್ಥಿತಿಯಲ್ಲಿಯೂ ವೃತ್ತಿನಿಷ್ಠೆ ಬಿಡದ ಇಂಥ ಧೈರ್ಯಶಾಲಿ ಅಧಿಕಾರಿಗಳಿಗೆ ರಕ್ಷಣೆ ಕೊಡಬೇಕಾದುದು ನಾಗರಿಕ ಸರ್ಕಾರದ ಕರ್ತವ್ಯ. ಭ್ರಷ್ಟಾಚಾರವಿರಲಿ, ಅಕ್ರಮ ದಂಧೆ ಇರಲಿ, ಅದನ್ನು ತಡೆಯಲು ತಮ್ಮ ಜೀವದ ಹಂಗನ್ನೂ ಲೆಕ್ಕಿಸದೆ ಮುನ್ನುಗ್ಗುವವರಿಗೆ ರಕ್ಷಣೆ ಕೊಡದಿದ್ದರೆ ಅಕ್ರಮಗಳನ್ನು ತಡೆಯುವುದಕ್ಕೆ ಯಾರೂ ಮುಂದೆ ಬರುವುದಿಲ್ಲ.

ಜಾತಿ, ಆಯಕಟ್ಟಿನ ಸ್ಥಾನ, ಹಣ ಗಳಿಕೆಯ ಅವಕಾಶಗಳ ಕಾರಣದಿಂದ ನೌಕರಶಾಹಿ ಭ್ರಷ್ಟತೆಯಲ್ಲಿ ಮುಳುಗಿರುವಾಗ ಅವರಲ್ಲಿ ಪ್ರಾಮಾಣಿಕರ ಸಂಖ್ಯೆ ವಿರಳವಾಗಿದೆ. ರಾಜ್ಯ ಸರ್ಕಾರಕ್ಕೆ ಕಾನೂನು ಪಾಲನೆಯ ಬಗ್ಗೆ ಕಿಂಚಿತ್ತಾದರೂ ಬದ್ಧತೆ ಇದ್ದರೆ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಜೈಲಿಗೆ ಕಳುಹಿಸಿ ನಿಷ್ಠಾವಂತ ಅಧಿಕಾರಿಗಳ ರಕ್ಷಣೆಗೆ ಮುಂದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.