ADVERTISEMENT

ಕಳವಳಕಾರಿ ಪ್ರವೃತ್ತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST

ಗೃಹಿಣಿಯರಲ್ಲಿ ಆತ್ಮಹತ್ಯಾ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ರಾಷ್ಟ್ರದಲ್ಲಿ ಇಂದು ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವ ಐವರಲ್ಲಿ ಒಬ್ಬರು ಗೃಹಿಣಿಯಾಗಿರುತ್ತಾರೆ ಎನ್ನುವ ಸಂಗತಿ ನಿಜಕ್ಕೂ ಆಘಾತಕಾರಿ.
 
`2011ರಲ್ಲಿ ಭಾರತದಲ್ಲಿ ಆಕಸ್ಮಿಕ ಸಾವುಗಳು ಹಾಗೂ ಆತ್ಮಹತ್ಯೆಗಳು~ ಎಂಬಂತಹ ಸರ್ಕಾರದ ಇತ್ತೀಚಿನ ವರದಿಯಲ್ಲಿ  ಬಹಿರಂಗಗೊಂಡಿರುವ ಈ ಅಂಕಿಅಂಶಗಳು ಸಮಾಜ ಸಾಗುತ್ತಿರುವ ದಿಕ್ಕಿನೆಡೆಗೆ ದಿಕ್ಸೂಚಿ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಆತ್ಮಹತ್ಯೆ ಪ್ರಕರಣಗಳು ಗಾಬರಿಯಾಗುವಷ್ಟು ಹೆಚ್ಚಿವೆ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಆತ್ಮಹತ್ಯೆ ಪ್ರಕರಣಗಳು ದಾಖಲೆಯಾಗಿವೆ.
 
ಕರ್ನಾಟಕ ಸೇರಿದಂತೆ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶಗಳ್ಲ್ಲಲೂ ಅಧಿಕ ಪ್ರಮಾಣದಲ್ಲಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ರಾಷ್ಟ್ರದಲ್ಲಿ ವರದಿಯಾಗುವ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಶೇಕಡ 56ರಷ್ಟು ಪ್ರಕರಣಗಳು ಈ ಐದು ರಾಜ್ಯಗಳಿಗೆ ಸಂಬಂಧಿಸಿರುತ್ತವೆ ಎಂಬುದು ಸಮಾಜವಿಜ್ಞಾನಿಗಳ ವಿಶ್ಲೇಷಣೆಗೆ ಒಳಪಡಬಹುದಾದ ವಿಷಯ.

53 ಮಹಾನಗರಗಳ ಪೈಕಿ ಬೆಂಗಳೂರು ಕೂಡಾ ಅಧಿಕ ಪ್ರಮಾಣದ ಆತ್ಮಹತ್ಯೆ ಪ್ರಕರಣಗಳ ನಗರವಾಗಿ ಕಾಣಿಸಿಕೊಂಡಿದೆ. ಈ ಹಿಂದಿನ ವರದಿಗಳಲ್ಲೂ ಬೆಂಗಳೂರಿಗೆ ಆತ್ಮಹತ್ಯೆಗಳ ನಗರ ಎಂಬಂತಹ ಕಳಂಕ ಇದ್ದೇ ಇತ್ತು.

    ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಕಾರಣಗಳಿಗಾಗಿ ಪುರುಷರು ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಭಾವನಾತ್ಮಕ ಹಾಗೂ ವೈಯಕ್ತಿಕ ಸಂಗತಿಗಳು ಮುಖ್ಯ ಕಾರಣಗಳಾಗುತ್ತವೆ ಎಂಬುದನ್ನು  ಈ ವರದಿ ಎತ್ತಿಹೇಳಿದೆ.  ಇದು  ಕೂಲಂಕಷವಾಗಿ ವಿಶ್ಲೇಷಿಸಬೇಕಾದ ವಿಚಾರ.

ಇತ್ತೀಚಿನ ದಶಕಗಳಲ್ಲಿ ಸಾಮಾಜಿಕ ಬದುಕಿನಲ್ಲಿ ತೀವ್ರತರ ಬದಲಾವಣೆಗಳಾಗುತ್ತಿವೆ. ಈ ಪ್ರಕ್ರಿಯೆ ವೈಯಕ್ತಿಕ ಹಾಗೂ ಕೌಟುಂಬಿಕ ನೆಲೆಯಲ್ಲೂ ಬಿಂಬಿತವಾಗುತ್ತಿದೆ. ವಿವಾಹ ವಿಚ್ಛೇದನ, ಅಕ್ರಮ ಬಸಿರು, ವೈಯಕ್ತಿಕ ಹಾಗೂ ವೃತ್ತಿ ಸಂಬಂಧಿ ಸಮಸ್ಯೆಗಳು  ಜನರನ್ನು ಆತ್ಮಹತ್ಯೆಯತ್ತ ದೂಡುತ್ತಿವೆ.

ರೋಗರುಜಿನಗಳಿಂದ ಉಂಟಾಗುವ ಖಿನ್ನತೆಯೂ ಆತ್ಮಹತ್ಯೆಗಳಿಗೆ ಮತ್ತೊಂದು ಪ್ರಮುಖ ಕಾರಣವಾಗಿ ಹೊರಹೊಮ್ಮಿದೆ. ಕಾಯಂ ಅಥವಾ ಸರ್ಕಾರಿ ಉದ್ಯೋಗ ಹೊಂದಿದವರಿಗಿಂತ ಸ್ವಂತ ಉದ್ಯೋಗ ನಡೆಸುವವರಲ್ಲಿ ಆತ್ಮಹತ್ಯೆ ಪ್ರಮಾಣ  ಹೆಚ್ಚಿರುವುದನ್ನೂ ಈ ವರದಿ ಬೆಳಕಿಗೆ ತಂದಿದೆ.

ವಿವಿಧ ರಾಜ್ಯಗಳಲ್ಲಿನ ರೈತರ ಆತ್ಮಹತ್ಯೆ, ನೇಕಾರರ ಆತ್ಮಹತ್ಯೆ ಪ್ರಕರಣಗಳು ರಾಷ್ಟ್ರದಲ್ಲಿ ಈ ಹಿಂದೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದ್ದುದನ್ನು ಇಲ್ಲಿ ಸ್ಮರಿಸಬಹುದು. ವಿಶ್ವದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳಾಗುತ್ತಿರುವ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗುತ್ತಿರುವುದು  ರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಲಕ್ಷಣವಲ್ಲ.

ಆತ್ಮಹತ್ಯೆ ಪ್ರವೃತ್ತಿಯ ಕಾರಣಗಳನ್ನು ವಿಶ್ಲೇಷಿಸಿ ಇದರ ತಡೆಗಾಗಿ ನೀತಿಗಳನ್ನು ರೂಪಿಸಬೇಕಾದುದು ಸರ್ಕಾರದ ಹೊಣೆಗಾರಿಕೆ. ಸಂಬಂಧಗಳ ಕ್ಲಿಷ್ಟತೆ, ಖಿನ್ನತೆ ಮತ್ತಿತರ ಭಾವನಾತ್ಮಕ ಅಥವಾ ಮಾನಸಿಕ ಸಮಸ್ಯೆಗಳನ್ನು ಆಪ್ತಸಲಹೆ ಅಥವಾ ಚಿಕಿತ್ಸೆಗಳಿಂದ ಸರಿಪಡಿಸಿಕೊಳ್ಳಬಹುದು ಎಂಬ ಬಗ್ಗೆ ನಮ್ಮಲ್ಲಿ ಇನ್ನೂ ಜಾಗೃತಿ ಮೂಡಿಲ್ಲ.  ಈ ನಿಟ್ಟಿನಲ್ಲಿ ಸರ್ಕಾರ  ಕ್ರಮಗಳನ್ನು ಕೈಗೊಳ್ಳುವ ಮೂಲಕವೂ ಆತ್ಮಹತ್ಯೆ ಪ್ರವೃತ್ತಿ ಪಿಡುಗಾಗಿ ಬೆಳೆಯುವುದನ್ನು ಒಂದಿಷ್ಟಾದರೂ  ತಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.