ADVERTISEMENT

ಕಾನೂನು ಎಲ್ಲರಿಗೂ ಒಂದೇ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ ವಿರುದ್ಧ­ದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸುಪ್ರೀಂಕೋರ್ಟ್‌­ನಿಂದ ಮತ್ತೊಮ್ಮೆ ತನಿಖೆ ಮಾಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಗಂಗೂಲಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಎರಡು ಪತ್ರಗಳನ್ನು ಬರೆದ ನಂತರ ಈ ವಿಚಾರ­­ದಲ್ಲಿ ಕ್ರಮ ಕೈಗೊಳ್ಳುವ ಒತ್ತಡಕ್ಕೆ ಕೇಂದ್ರ ಸರ್ಕಾರ ಸಿಲುಕಿದೆ.

ಕಾನೂನು ತರಬೇತಿ ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ ತೋರಿದ್ದಾರೆಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಈಗಾಗಲೇ ಈ ಆರೋಪ ತನಿಖೆಗೆ ನೇಮಕಗೊಂಡಿದ್ದ ಸುಪ್ರೀಂಕೋರ್ಟ್‌ನ ಮೂವರು ನ್ಯಾಯಾಧೀಶರ ಸಮಿತಿ ಹೇಳಿದೆ. ಆದರೆ ಈ ಘಟನೆ ನಡೆದಾಗ ನ್ಯಾ. ಗಂಗೂಲಿ ಸೇವೆಯಿಂದ ನಿವೃತ್ತರಾಗಿದ್ದರಿಂದ ಅವರ ವಿರುದ್ಧ ಸುಪ್ರೀಂ ಕೋರ್ಟ್ ಕ್ರಮ ಕೈಗೊಳ್ಳ­ಲಾಗು­ವುದಿಲ್ಲವೆಂದು ಸಮಿತಿ ಹೇಳಿತ್ತು.

ಈಗ, ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಮುಂದುವರಿದುಕೊಂಡೇ ಬಂದಿರುವ ನ್ಯಾ. ಗಂಗೂಲಿ ವಿರುದ್ಧ ಗಟ್ಟಿಯಾದ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾ­ಗು­ತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಎದ್ದುಕಾಣುತ್ತಿರುವ ಸಂಗತಿ. ಯುವ ವಿದ್ಯಾರ್ಥಿ­ನಿಗೆ ಲೈಂಗಿಕ ಕಿರುಕುಳ ನೀಡಲು ತಮ್ಮ ಅಧಿಕಾರದ ಸ್ಥಾನಮಾನ­ವನ್ನು ಬಳಸಿಕೊಂಡಂತಹ ವ್ಯಕ್ತಿ ಮಾನವ ಹಕ್ಕುಗಳ ಸಂಸ್ಥೆಯ ನೇತೃತ್ವ ವಹಿಸುವುದು ಎಷ್ಟು ಸಮಂಜಸ ಎಂಬುದು ಪ್ರಶ್ನೆ. ಯುವ ಮಹಿಳೆಯ ಹಕ್ಕುಗಳನ್ನು ಉಲ್ಲಂಘಿಸಿದ ವ್ಯಕ್ತಿ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧದ ತೀರ್ಪುಗಳನ್ನು ನೀಡುವಂತಹ ಸ್ಥಾನದಲ್ಲಿ ಕುಳಿತಿರುವುದೇ ವಿಪರ್ಯಾಸ.

ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂಬಂತಹ ಮಾತು ಗಂಗೂಲಿ ಪ್ರಕರಣದಲ್ಲಿ ತದ್ವಿರುದ್ಧವಾಗಿರುವಂತೆ ಕಾಣಿಸುತ್ತದೆ. ಇದೇ ರೀತಿಯ ಪ್ರಕರಣ­ದಲ್ಲಿ ‘ತೆಹೆಲ್ಕಾ’ ಸಂಸ್ಥಾಪಕ ಸಂಪಾದಕ ತರುಣ್ ತೇಜ್‌ಪಾಲ್ ಅವರ ವಿರುದ್ಧ ತನಿಖೆಗೆ ಚಾಲನೆ ನೀಡಲಾಗಿದೆ. ತೇಜ್‌ಪಾಲ್ ಪ್ರಕರಣದಲ್ಲಿ  ಅನ್ವಯಿಸಲಾದ ಕಾನೂನು ಪ್ರಕ್ರಿಯೆ ಈ ಪ್ರಕರಣದಲ್ಲಿ ಯಾಕೆ ಅನ್ವಯ­ವಾಗುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರ ಮನಸ್ಸುಗಳಲ್ಲಿ ಏಳುವುದು ಸಹಜ.

ಹೆಸರು ಗಳಿಸಿದ ಬಲಾಢ್ಯ ವ್ಯಕ್ತಿಗಳನ್ನೊಳಗೊಂಡ ಈ ಎರಡು ಪ್ರಕರಣಗಳ ನಿರ್ವಹಣೆಯಲ್ಲಿ ದ್ವಿಮುಖ ಧೋರಣೆ ಎದ್ದು ಕಾಣಿಸುತ್ತದೆ. 2ಜಿ ತರಂಗಾಂತರ ಹಗರಣ ಸೇರಿದಂತೆ ಅನೇಕ  ಪ್ರಕರಣಗಳಲ್ಲಿ ನ್ಯಾಯಮೂರ್ತಿ ಗಂಗೂಲಿ ಅವರು ಪ್ರಮುಖ ತೀರ್ಪುಗಳನ್ನು ನೀಡಿದ್ದಾರೆ. ಹೀಗೆಂದು ಇದನ್ನು ಅವರ ವಿರುದ್ಧದ ಕಾನೂನು ಕ್ರಮಕ್ಕೆ ರಿಯಾಯಿತಿ ನೀಡಲು ನೆಪ ಮಾಡಿ­ಕೊಳ್ಳಲಾಗದು. ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೊಣೆ ಹೊತ್ತಿರುವ ನ್ಯಾಯಾಂಗ, ಆಂತರಿಕವಾಗಿ ತಮ್ಮಲ್ಲೇ ನಡೆದ ಲೈಂಗಿಕ ಕಿರುಕುಳ ಪ್ರಕರಣ­ವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬುದು ದುರಂತದ ಸಂಗತಿ.

ಲಿಂಗಾ­ಧಾರಿತ ಹಿಂಸೆ ನಮ್ಮ ಸಮಾಜದಲ್ಲಿ ಎಷ್ಟು ಸಹಜವಾಗಿ ಆಳಕ್ಕಿಳಿದಿದೆ ಎಂದರೆ  ಕಾನೂನಿನ ಪ್ರಕಾರ ಅದು ತಪ್ಪು ಎಂಬುದನ್ನು ಒಪ್ಪಿಕೊಳ್ಳಲು ಅಥವಾ ಅರ್ಥೈಸಿಕೊಳ್ಳಲೂ ಸಾಧ್ಯವಾಗದ ಮನಸ್ಥಿತಿಗಳಿಗೆ ಕಾರಣ­ವಾಗಿದೆ.ನ್ಯಾಯದ ತಕ್ಕಡಿಯಲ್ಲಿ ಸರಿ ತಪ್ಪುಗಳ ವಿಶ್ಲೇಷಣೆಗಾಗಿ ಕಾನೂನಿನ ಪ್ರಕ್ರಿಯೆಗೆ ನ್ಯಾಯಮೂರ್ತಿ ಗಂಗೂಲಿ ಅವರು ಒಳಪಡುವುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.