ADVERTISEMENT

ಕುಡಿಯುವ ನೀರಿಗೆ ಕೊರತೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಈ ವರ್ಷ ಬೇಸಿಗೆ ಆರಂಭದಲ್ಲೇ ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ ಕಾಣಿಸಿಕೊಂಡಿದೆ. ಹಾಗೆ ನೋಡಿದರೆ ಪ್ರತಿ ಬೇಸಿಗೆಯಲ್ಲೂ ಈ ಸಮಸ್ಯೆ ಇದ್ದದ್ದೇ. ಬರಗಾಲದ ಪರಿಸ್ಥಿತಿ ಇರುವ ನೂರಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಈ ವರ್ಷ ನೀರಿನ ಅಭಾವ ತೀವ್ರವಾಗಿದೆ. ಬೆಂಗಳೂರಿನಲ್ಲೂ ನೀರಿಗೆ ಕೊರತೆ ಇದೆ.

ಮೇ ತಿಂಗಳ ವೇಳೆಗೆ ಪರಿಸ್ಥಿತಿ ಗಂಭೀರವಾಗಲಿದೆ. ಈ ವರ್ಷ ಬಿಸಿಲಿನ ತೀವ್ರತೆ ಹೆಚ್ಚಾಗಿರುತ್ತದೆ ಎಂಬ ಮುನ್ಸೂಚನೆ ಇರುವುದರಿಂದ ನೀರು ಪೂರೈಕೆಗೆ ಸರ್ಕಾರ ವಿಶೇಷ ಗಮನ ಕೊಡದಿದ್ದರೆ ಜನ, ಜಾನುವಾರುಗಳಿಗೆ ತೊಂದರೆ ತಪ್ಪಿದ್ದಲ್ಲ.

ಇಡೀ ರಾಜ್ಯದಲ್ಲಿಯೇ ಅಂತರ್ಜಲ ಮಟ್ಟ ಕುಸಿದಿದೆ.  ಕೋಲಾರ, ಚಿತ್ರದುರ್ಗ, ತುಮಕೂರು ಮತ್ತಿತರ ಜಿಲ್ಲೆಗಳಲ್ಲಿ ಒಂದು ಸಾವಿರ ಅಡಿ ಆಳಕ್ಕೆ ಕೊರೆದರೂ ನೀರಿಲ್ಲ.

ಇನ್ನು ಕೆಲ ಜಿಲ್ಲೆಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರಿದ್ದರೂ ವಿದ್ಯುತ್ ಕೊರತೆಯಿಂದಾಗಿ ಅದನ್ನು ಎತ್ತಿ ಬಳಸಲು ಸಾಧ್ಯವಾಗುತ್ತಿಲ್ಲ. ಹೈದರಾಬಾದ್ ಕರ್ನಾಟಕದ ನಾಲ್ಕೂ ಜಿಲ್ಲೆಗಳಲ್ಲಿ ಈಗಲೇ ನೀರಿನ ಅಭಾವ ಕಾಣಿಸಿಕೊಂಡಿದೆ.
 
ಗದಗ ಪಟ್ಟಣದಲ್ಲಿ ಇಪ್ಪತ್ತು ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿದೆ. ಬಿಜಾಪುರ ಜಿಲ್ಲೆಯ ಸುಮಾರು 40 ಹಳ್ಳಿಗಳಿಗೆ ಟ್ಯಾಂಕರುಗಳ ಮೂಲಕ ನೀರು ಪೂರೈಕೆ ಆಗುತ್ತಿದೆ. ಬಿಜಾಪುರ ಪಟ್ಟಣದಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ. ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳ್ಲ್ಲಲೂ ಇಂಥದ್ದೇ ಪರಿಸ್ಥಿತಿ ಇದೆ. 

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ಕುರಿತು ಸರ್ಕಾರ ಮಾತನಾಡುತ್ತಿದೆಯೇ ಹೊರತು  ಕಾರ್ಯಯೋಜನೆ ರೂಪಿಸಿಲ್ಲ. ಬೆಂಗಳೂರಿನ ನೀರಿನ ಕೊರತೆ ನೀಗಿಸಲು ನೂರು ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
 
ಬರ ಪೀಡಿತ ತಾಲ್ಲೂಕುಗಳ ಜನರಿಗೆ ನೀರು ಪೂರೈಸಲು ಹಣ ಬಿಡುಗಡೆ ಮಾಡುವ ಬಗ್ಗೆ ಅವರು ಏನನ್ನೂ ಹೇಳಿಲ್ಲ. ಅಂತರ್ಜಲದ ಮಟ್ಟ ಗಣನೀಯವಾಗಿ ಕುಸಿದಿರುವ ಜಿಲ್ಲೆಗಳಲ್ಲಿ ಇನ್ನಷ್ಟು ಕೊಳವೆ ಬಾವಿಗಳನ್ನು ಕೊರೆಯುವುದರಿಂದ ಪ್ರಯೋಜನವಿಲ್ಲ.

ಅದರ ಬದಲು ಅಂತರ್ಜಲದ ಮಟ್ಟ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುವ ಬಗ್ಗೆ ಆಲೋಚಿಸಲು ಇದು ಸಕಾಲ. ಮಳೆಗಾಲ ಆರಂಭವಾಗುವವರೆಗೆ ಜನರಿಗೆ ಕುಡಿಯುವ ನೀರನ್ನು ಟ್ಯಾಂಕರುಗಳ ಮೂಲಕವೇ ಪೂರೈಸುವುದು ಕಷ್ಟ.
 
ಪ್ರತಿ ವರ್ಷ ಹೀಗೆ ಹಣ ಖರ್ಚು ಮಾಡುವ ಬದಲು ಶಾಶ್ವತ ಪರಿಹಾರ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವ ಬಗ್ಗೆ ಸರ್ಕಾರ ಇನ್ನಾದರೂ ಕಾರ್ಯೋನ್ಮುಖವಾಗಬೇಕು.

ರಾಜಕೀಯ ಕಾರಣಗಳಿಂದಾಗಿ ಸರ್ಕಾರ ದುರ್ಬಲವಾಗಿದೆ. ಗುಂಪುಗಾರಿಕೆ ಮತ್ತು ಭ್ರಷ್ಟಾಚಾರದ ಹಗರಣಗಳನ್ನು ಮುಚ್ಚಿ ಹಾಕುವುದಕ್ಕೆ ಸರ್ಕಾರ ಹೆಚ್ಚಿನ ಸಮಯ ನೀಡುತ್ತಿರುವುದರಿಂದ  ಕುಡಿಯುವ ನೀರು, ವಿದ್ಯುತ್ ಇತ್ಯಾದಿ ಸಮಸ್ಯೆಗಳ ಕಡೆಗೆ ಗಮನಹರಿಸಲು ಸಾಧ್ಯವಾಗಿಲ್ಲ ಎನಿಸುತ್ತದೆ.
 
ಇನ್ನಾದರೂ ಸರ್ಕಾರ ಇಂತಹ ಸಮಸ್ಯೆಗಳ ಕಡೆಗೆ ಗಮನ ಕೊಡಬೇಕು. ಸಾರ್ವಜನಿಕ ಸಹಭಾಗಿತ್ವದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯಕ್ರಮಗಳನ್ನು ತುರ್ತಾಗಿ ಜಾರಿಗೆ ತರದಿದ್ದರೆ ಈ ಸಮಸ್ಯೆಗೆ ಪರಿಹಾರ ಸಾಧ್ಯವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.