ADVERTISEMENT

ದುರುದ್ದೇಶದ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಯಿಂದ ಹೊರಗಿಡುವ ಕೇಂದ್ರ ಸಚಿವ ಸಂಪುಟ ಸಭೆಯ ನಿರ್ಧಾರ ಜನತಂತ್ರ ವ್ಯವಸ್ಥೆಗೆ ಮಾಡಿದ ದೊಡ್ಡ ಅವಮಾನ. ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದ ಯುಪಿಎ ಸರ್ಕಾರವೇ ಅದರ ವ್ಯಾಪ್ತಿಯನ್ನು ಕುಗ್ಗಿಸುವ ಪ್ರಯತ್ನಕ್ಕೆ ಕೈಹಾಕಿರುವುದು ಅತ್ಯಂತ ದುರದೃಷ್ಟಕರ.

ಕಾಂಗ್ರೆಸ್, ಬಿಜೆಪಿ, ಎನ್‌ಸಿಪಿ, ಬಿಎಸ್‌ಪಿ ಹಾಗೂ ಎಡಪಕ್ಷಗಳು ಪರೋಕ್ಷವಾಗಿ ಸರ್ಕಾರದ ನೆರವು ಪಡೆಯುತ್ತಿರುವ ಕಾರಣ ಅವುಗಳ ಪ್ರತಿಯೊಂದು ಚಟುವಟಿಕೆ ಮಾಹಿತಿ ಕಾಯ್ದೆ ವ್ಯಾಪ್ತಿಗೆ ಬರುತ್ತದೆ ಎಂಬ ಕೇಂದ್ರ ಮಾಹಿತಿ ಆಯೋಗದ ಇತ್ತೀಚಿನ ನಿರ್ಧಾರ ಈ ಪಕ್ಷಗಳಿಗೆ ಅಪಥ್ಯವಾಗಿದೆ.

ಈ ವಿಚಾರದಲ್ಲಿ ಪಕ್ಷಭೇದ ಇಲ್ಲ. ಸರ್ಕಾರದ ನೆರವು ಹಾಗೂ ಖಾಸಗಿ ಮೂಲಗಳಿಂದ ಸಂಗ್ರಹಿಸುವ ಹಣಕಾಸಿನ ವಿವರಗಳು ಮತ್ತು ಪಡೆಯುವ ಇತರ ಸೌಲಭ್ಯಗಳು ದೇಶದ ಜನರಿಗೆ ಗೊತ್ತಾಗಬಾರದು. ಅದನ್ನು ಯಾರೂ ಪ್ರಶ್ನಿಸಬಾರದು ಎಂಬ ದುರುದ್ದೇಶ ತಿದ್ದುಪಡಿಯ ಹಿಂದಿದೆ. ಇದೇ ಕಾರಣಕ್ಕೆ, ಏನನ್ನೋ ಬಚ್ಚಿಡುವ ಪ್ರಯತ್ನ ನಡೆದಿದೆ ಎಂಬ ಗುಮಾನಿಯೂ ಮೂಡುತ್ತದೆ.

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರ ಸರ್ಕಾರದ ಲೋಪಗಳು ಒಂದೊಂದಾಗಿ ದೇಶದ ಗಮನಕ್ಕೆ ಬರುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ವ್ಯವಹಾರಗಳೂ ಪಾರದರ್ಶಕವಾಗಿರಬೇಕು ಎಂಬ ಆಶಯವನ್ನೇ ಮರೆತಿರುವ ಯುಪಿಎ ಸರ್ಕಾರ, ಸ್ವಹಿತ ಕಾಪಾಡಿಕೊಳ್ಳಲು ಮತ್ತು ಮಿತ್ರಪಕ್ಷಗಳನ್ನು ಓಲೈಸಲು ಮಹತ್ವದ ಕಾಯ್ದೆಯನ್ನು ದುರ್ಬಲಗೊಳಿಸಲು ಮುಂದಾಗಿದೆ.

ಅಭಿವೃದ್ಧಿಗೆ ಮೀಸಲಾದ ಹಣವನ್ನು ರಾಜಕೀಯ ಪಕ್ಷಗಳು ಮತ್ತು ಪ್ರಭಾವಿಗಳು ದುರುಪಯೋಗಪಡಿಸಿಕೊಳ್ಳುವುದಕ್ಕೆ ಅವಕಾಶ ಇರಬಾರದು. ಪಾರದರ್ಶಕ ವ್ಯವಸ್ಥೆಯೇ ಅಪಾಯಕಾರಿ ಎಂಬ ನಿಲುವಿಗೆ ಯುಪಿಎ ಸರ್ಕಾರ ಬಂದಂತಿದೆ. ಈ ಬಗೆಯ ಚಿಂತನೆಯೇ ದೇಶದ ಬೆಳವಣಿಗೆಗೆ ಅಪಾಯಕಾರಿ. ಮಾಹಿತಿ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕಾದ ಸರ್ಕಾರ, ದೇಶದ ಹಿತವನ್ನು ಕಡೆಗಣಿಸುತ್ತಿರುವುದು ಖಂಡನೀಯ.

ಕ್ರಿಮಿನಲ್ ಆರೋಪಗಳಿಗಾಗಿ ನ್ಯಾಯಾಲಯಗಳಿಂದ ಶಿಕ್ಷೆಗೆ ಒಳಗಾಗುವ ಜನಪ್ರತಿನಿಧಿಗಳ ಸದಸ್ಯತ್ವವನ್ನು ಕೋರ್ಟ್ ತೀರ್ಪು ಪ್ರಕಟವಾದ ಮರುಕ್ಷಣವೇ ರದ್ದುಗೊಳಿಸುವ ಹಾಗೂ ಜೈಲು ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅವಕಾಶ ನಿರಾಕರಿಸುವ ಸುಪ್ರೀಂ ಕೋರ್ಟಿನ ಮಹತ್ವದ ತೀರ್ಪು ಎಲ್ಲಾ ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ನ್ಯಾಯಾಲಯದ ತೀರ್ಪಿನಿಂದ ಸಂಸತ್ತಿನ ಸಾರ್ವಭೌಮಕ್ಕೆ ಭಂಗವಾಗಿದೆ ಎಂದು ಹುಯಿಲೆಬ್ಬಿಸುತ್ತಿವೆ

 ಈ ಬೆಳವಣಿಗೆ ದುರದೃಷ್ಟಕರ. ಜನತೆಯ ಎದುರು ಮಾಲ್ಯಾಧಾರಿತ ರಾಜಕಾರಣದ ಜಪ ಮಾಡುತ್ತಲೇ ರಾಜಕೀಯ ಅಪರಾಧಿಗಳಿಗೆ ರಕ್ಷಣೆ ನೀಡುವ ಪ್ರಯತ್ನಗಳನ್ನು ಎಲ್ಲ ಪಕ್ಷಗಳೂ ಮಾಡಿಕೊಂಡೇ ಬಂದಿವೆ. ಈಚೆಗೆ ದೆಹಲಿಯಲ್ಲಿ ನಡೆದ ಸರ್ವ ಪಕ್ಷಗಳ ಸಭೆ, ರಾಷ್ಟ್ರೀಯ ನ್ಯಾಯಾಂಗ ಮಸೂದೆಯನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಮಸೂದೆ ಜಾರಿಯಾದರೆ ನ್ಯಾಯಮೂರ್ತಿಗಳ ನೇಮಕಾತಿ ಅಧಿಕಾರ ಸರ್ಕಾರಕ್ಕೆ ಸಿಗುತ್ತದೆ. ಅದನ್ನು ಬಳಸಿಕೊಂಡು ರಾಜಕೀಯ ಕ್ರಿಮಿನಲ್‌ಗಳಿಗೆ ರಕ್ಷಣೆ ನೀಡಬಹುದು ಎನ್ನುವ ದುರುದ್ದೇಶವನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ನ್ಯಾಯಾಂಗ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ರಾಜಕೀಯ ಒತ್ತಡಗಳಿಗೆ ಸರ್ಕಾರ ಮಣಿಯಬಾರದು. ಅದನ್ನು ಜನರು ಸಹಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.