ADVERTISEMENT

ದೋಷಪೂರ್ಣ ತನಿಖೆ ಭೇದಿಸಲಾಗದ ನಿಗೂಢತೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST
ದೋಷಪೂರ್ಣ ತನಿಖೆ ಭೇದಿಸಲಾಗದ ನಿಗೂಢತೆ
ದೋಷಪೂರ್ಣ ತನಿಖೆ ಭೇದಿಸಲಾಗದ ನಿಗೂಢತೆ   

2008ರ ಮೇ ತಿಂಗಳಲ್ಲಿ ನಡೆದ ಆರುಷಿ ತಲ್ವಾರ್ ಹಾಗೂ ಹೇಮರಾಜ್ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರುಷಿ ಪೋಷಕರಾದ ರಾಜೇಶ್ ಹಾಗೂ ನೂಪುರ್ ತಲ್ವಾರ್ ಅವರನ್ನು ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿದೆ. ಜೋಡಿ ಕೊಲೆಯಲ್ಲಿ ತಮ್ಮದೇನೂ ಪಾತ್ರವಿಲ್ಲ ಎಂದು ಈ ದಂತವೈದ್ಯ ದಂಪತಿ ಹೇಳುತ್ತಲೇ ಬಂದಿದ್ದಾರೆ. ಯಾವುದೇ ಖಚಿತ ಸಾಕ್ಷ್ಯಾಧಾರ ಇಲ್ಲದ ಕಾರಣ ಸಂಶಯದ ಲಾಭವನ್ನು ಈಗ ಕೋರ್ಟ್ ನೀಡಿದೆ. ಅನುಮಾನದ ಆಧಾರದ ಮೇಲಷ್ಟೇ ತಲ್ವಾರ್ ದಂಪತಿಗೆ ಶಿಕ್ಷೆ ವಿಧಿಸಲಾಗದು ಎಂದು ಕೋರ್ಟ್ ಹೇಳಿರುವುದು ಸರಿಯಾದುದು.

ಆರುಷಿ– ಹೇಮರಾಜ್ ಜೋಡಿ ಕೊಲೆಗೆ ಸಂಬಂಧಿಸಿದಂತೆ ಅತಿರಂಜಿತ ಕಲ್ಪನೆಗಳನ್ನು ಹರಿಯಬಿಡಲಾಗಿತ್ತು. ಇದು ತನಿಖೆ ಮೇಲೆ ಬೀರಿದ ಪರಿಣಾಮ, ನ್ಯಾಯದಾನದ ಪ್ರಕ್ರಿಯೆಗೆ ಅಡ್ಡಿಯಾಗಿದ್ದು ವಿಷಾದನೀಯ. 14 ವರ್ಷ ತುಂಬಲು ಇನ್ನೂ ಎಂಟು ದಿನಗಳು ಇವೆ ಎನ್ನುವಾಗ ಆರುಷಿ ತಲ್ವಾರ್, ದೆಹಲಿ ಬಳಿಯ ನೊಯಿಡಾದ ತನ್ನ ಕೋಣೆಯಲ್ಲೇ ಕೊಲೆಯಾಗುತ್ತಾಳೆ. ಮರುದಿನ ಅದೇ ಮನೆಯ ತಾರಸಿಯಲ್ಲಿ ಮನೆಯ ಸೇವಕ ಹೇಮರಾಜ್‌ನ ಮೃತದೇಹ ಪತ್ತೆಯಾಗುತ್ತದೆ. 45 ವರ್ಷದ ಹೇಮರಾಜ್ ಹಾಗೂ ಈ ಹದಿಹರೆಯದ ಬಾಲೆಯ ಮಧ್ಯದ ಲೈಂಗಿಕ ಸಂಬಂಧದ ಊಹಾಪೋಹ ಸಾರ್ವಜನಿಕ ಪ್ರಜ್ಞೆಯನ್ನು ಅಲುಗಾಡಿಸುತ್ತದೆ.

ಒಂದೇ ವಾರದಲ್ಲಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲಾಯಿತೆಂದು ಪ್ರತಿಪಾದಿಸಿಕೊಂಡ ಉತ್ತರ ಪ್ರದೇಶ ಪೊಲೀಸರು, ಆರುಷಿಯ ತಂದೆ ರಾಜೇಶ್ ತಲ್ವಾರ್‌ನನ್ನು ಬಂಧಿಸುತ್ತಾರೆ. ಇದು ಸೃಷ್ಟಿಸಿದ ವಿವಾದದಿಂದಾಗಿ ಈ ಪ್ರಕರಣ ಸಿಬಿಐಗೆ ಹಸ್ತಾಂತರವಾಗುತ್ತದೆ. ಸಿಬಿಐ, ವಿವಿಧ ರೀತಿಯ ತನಿಖಾ ವಿಧಾನ ಅನುಸರಿಸುತ್ತದೆ. ಹೇಮರಾಜ್‌ಗೆ ಪರಿಚಿತರಾಗಿದ್ದ ಮೂವರು ನೇಪಾಳಿ ಹುಡುಗರತ್ತ ಅದು ಗಮನ ಕೇಂದ್ರೀಕರಿಸುತ್ತದೆ. ತನಿಖೆಯಲ್ಲಿ ಒಳಗೊಂಡ ಸಿಬಿಐನ ಎರಡು ತಂಡಗಳು ಎರಡು ವಿಭಿನ್ನ ಶಂಕಿತರು ಹಾಗೂ ಸಿದ್ಧಾಂತಗಳನ್ನು ಮಂಡಿಸಿದ್ದು ವಿಚಿತ್ರ. ಪ್ರಕರಣ ನಡೆದ ಮೊದಲ ದಿನದಿಂದಲೂ ನೊಯಿಡಾ ಪೊಲೀಸರು ಹಾಗೂ ನಂತರ ಸಿಬಿಐ ಅನುಸರಿಸಿದ ದೋಷಪೂರ್ಣ ತನಿಖಾ ವಿಧಾನಗಳು ತೀವ್ರ ಟೀಕೆಗೊಳಗಾಗಿವೆ. ಸಂಕೀರ್ಣವಾದ ಅಪರಾಧ ತನಿಖೆಗಳನ್ನು ನಿರ್ವಹಿಸುವಷ್ಟು ಪ್ರಬುದ್ಧತೆಯ ಕೊರತೆ ವ್ಯವಸ್ಥೆಯಲ್ಲಿರುವುದು ವಿಷಾದನೀಯ. ಅಪರಾಧ ನ್ಯಾಯ ವ್ಯವಸ್ಥೆ ಎಷ್ಟು ದೋಷಪೂರ್ಣವಾಗಿದೆ ಎಂಬುದನ್ನು ಈ ಪ್ರಕರಣ ಸಾರಿ ಹೇಳುತ್ತದೆ. ಅಪರಾಧ ತನಿಖೆ ಹಾಗೂ ನ್ಯಾಯಾಂಗ ವ್ಯವಸ್ಥೆಯ ಲೋಪಗಳತ್ತಲೂ ಇದು ಬೆರಳು ತೋರುತ್ತದೆ.

ADVERTISEMENT

ಅಪರಾಧ ಸ್ಥಳವನ್ನು ಸರಿಯಾಗಿ ಪರಿಶೀಲಿಸದ ಕಳಪೆ ತನಿಖೆ ವಿಧಾನಕ್ಕೆ ಈ ಪ್ರಕರಣ ಸಾಕ್ಷಿಯಾಯಿತು ಎಂಬುದು ದುರದೃಷ್ಟಕರ. ಈ ಪ್ರಕರಣದಲ್ಲಿ ಇವರೇ ಕೊಲೆಗಾರರಿರಬಹುದು ಎಂದು ಆತುರಾತುರವಾಗಿ ಊಹಿಸಿದ್ದು, ಸಾಕ್ಷ್ಯ ನಾಶ ಮಾಡಲು ಆರೋಪಿಗೆ ಸಮಯಾವಕಾಶ ನೀಡಿದಂತಾಯಿತು. ಹೀಗಾಗಿ ಒಂಬತ್ತು ವರ್ಷಗಳ ಬಳಿಕವೂ ಆರುಷಿಯ ಹಂತಕರು ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಒಬ್ಬನೇ ಮುಗ್ಧ ವ್ಯಕ್ತಿಗೆ ಶಿಕ್ಷೆಯಾದರೂ ನ್ಯಾಯ ವ್ಯವಸ್ಥೆಯ ಪರಿಕಲ್ಪನೆಗೆ ಅಪಚಾರ ಎಸಗಿದಂತೆ ಎನ್ನುತ್ತದೆ ನ್ಯಾಯಶಾಸ್ತ್ರ. ಇನ್ನೂ ಪೂರ್ಣ ಪ್ರಮಾಣದಲ್ಲಿ ತಲ್ವಾರ್ ದಂಪತಿಯನ್ನು ಆರೋಪಮುಕ್ತಗೊಳಿಸಲಾಗಿಲ್ಲ ಎಂಬುದು ನಿಜ. ಹೀಗಿದ್ದೂ ಮಗಳನ್ನು ಕಳೆದುಕೊಂಡಿದ್ದಲ್ಲದೆ ಸಮಾಜದಲ್ಲಿ ಕೊಲೆಗಾರ ಪಟ್ಟ ಹೊತ್ತುಕೊಂಡು ಅನುಭವಿಸಬೇಕಾದ ಯಾತನೆ ಇನ್ನೂ ತೀವ್ರವಾದದ್ದು. ಇದರ ಜೊತೆಗೆ ಕೊಲೆಯಾದ ಆರುಷಿ ಹಾಗೂ ಹೇಮರಾಜ್‌ಗೂ ಇನ್ನೂ ನ್ಯಾಯ ಸಿಕ್ಕಿಲ್ಲ. ಕಾನೂನುಬದ್ಧ ಸಾಮಾಜಿಕ ವ್ಯವಸ್ಥೆಗೆ, ಇಂತಹ ಪ್ರಕರಣಗಳು ದೊಡ್ಡ ಕಪ್ಪು ಚುಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.