ADVERTISEMENT

ಪಕ್ಷಪಾತದ ನಿರ್ಧಾರ ಬದಲಾಗಲಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 15:25 IST
Last Updated 20 ಫೆಬ್ರುವರಿ 2011, 15:25 IST

ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತಂದು ಅದರ ವ್ಯಾಪ್ತಿಗೆ ಬೌದ್ಧ, ಜೈನ ಮತ್ತು ಸಿಖ್ ಧಾರ್ಮಿಕ ಸಂಸ್ಥೆಗಳನ್ನು ಸೇರಿಸುವ ರಾಜ್ಯ ಸಚಿವ ಸಂಪುಟದ ‘ರಹಸ್ಯ ಕಾರ್ಯಸೂಚಿ’ಯ (ಹಿಡನ್ ಅಜೆಂಡಾ) ನಿರ್ಧಾರಕ್ಕೆ ಈ ಧರ್ಮಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಈ ಕಾಯ್ದೆ ವ್ಯಾಪ್ತಿಗೆ ಹಿಂದೂ ಮಠಗಳು ಮತ್ತು ಅವುಗಳು ನಡೆಸುವ ಧಾರ್ಮಿಕ ಸಂಸ್ಥೆಗಳನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರದ ಷಡ್ಯಂತ್ರ ಏನೆಂಬುದು ರಹಸ್ಯವಾಗಿಯೇ ಉಳಿದಿರುವುದು ಬೇರೆ ಧರ್ಮಗಳು ಬಿಜೆಪಿ ಆಡಳಿತವನ್ನು ಸಂಶಯದ ಕಣ್ಣಿನಿಂದ ನೋಡುವಂತೆ ಮಾಡಿದೆ. ಜನರಲ್ಲಿ ಉಂಟಾಗಿರುವ ಈ ಸಂಶಯವನ್ನು ಸರ್ಕಾರ ನಿವಾರಿಸಬೇಕು. ಜನತಂತ್ರ ವ್ಯವಸ್ಥೆಯಲ್ಲಿ ಸರ್ಕಾರವಿರಲಿ ಅಥವಾ ಜನಸೇವೆಯ ಹೆಸರಿನಲ್ಲಿ ನಡೆಯುವ ಯಾವುದೇ ಆಡಳಿತವಿರಲಿ ಅವುಗಳ ಉದ್ದೇಶ ಮತ್ತು ಆಡಳಿತ ವ್ಯವಹಾರ ಪಾರದರ್ಶಕ ಮತ್ತು ಉತ್ತರದಾಯಿ ಆಗಿರಬೇಕು.

ಈ ಘನ ಉದ್ದೇಶದಿಂದ ತಿದ್ದುಪಡಿ ತಂದು ಎಲ್ಲ ಧರ್ಮಗಳ ಮಠ ಮತ್ತು ಅವುಗಳ ಧಾರ್ಮಿಕ ಸಂಸ್ಥೆಗಳನ್ನು ಸಂಬಂಧಿಸಿದ ಕಾಯ್ದೆ ವ್ಯಾಪ್ತಿಗೆ ತರುವುದಾದರೆ ಅಷ್ಟಾಗಿ ವಿರೋಧ ಕಂಡುಬರದು. ಆದರೆ ಸರ್ಕಾರ ಕೈಗೊಂಡ ಕಾಯ್ದೆಯ ತಿದ್ದುಪಡಿ ನಿರ್ಧಾರದಲ್ಲಿ ಹಿಂದೂ ಧಾರ್ಮಿಕ ಮಠಗಳನ್ನು ಮತ್ತು ಅವುಗಳ ಧಾರ್ಮಿಕ ಸಂಸ್ಥೆಗಳನ್ನು ಮಾತ್ರ ಕೈಬಿಟ್ಟಿರುವುದು ಸುತಾರಾಂ ಒಪ್ಪುವಂತಹದ್ದಲ್ಲ.

ವಾಸ್ತವವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಅನುದಾನ ಮತ್ತು ಇತರೆ ಸೌಲಭ್ಯಗಳನ್ನು ಪಡೆಯುವಲ್ಲಿ ಹಿಂದೂ ಮಠಗಳೇ ಮುಂದು. ಮಠಗಳು ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದಿಂದ ಕೆಲವು ಕೋರ್ಸ್‌ಗಳಿಗೆ, ಆಟದ ಮೈದಾನ ಮತ್ತು ರಂಗ ಮಂದಿರ ನಿರ್ಮಾಣಕ್ಕಾಗಿ ಅನುದಾನ ಪಡೆಯುತ್ತಿವೆ. ಹಾಗೆಯೇ ಬಹುತೇಕ ಮಠಗಳು ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಮತ್ತು ದಾಸೋಹಕ್ಕೆ ರಾಜ್ಯ ಸರ್ಕಾರದಿಂದ ಪ್ರತಿಯೊಬ್ಬ ವಿದ್ಯಾರ್ಥಿಗೆ ಇಂತಿಷ್ಟು ಎಂದು ಹಣ ಪಡೆಯುತ್ತವೆ.
ಆದರೆ ಈ ಮಾಹಿತಿಯನ್ನು ಇದುವರೆಗೆ ಯಾವುದೇ ಮಠ ಬಹಿರಂಗಗೊಳಿಸುವ ಪ್ರಾಮಾಣಿಕತೆಯನ್ನು ಮೆರೆದಿರುವ ಉದಾಹರಣೆ ಇಲ್ಲ. ಇದು ನಿಜಕ್ಕೂ ಮಠಗಳ ಆತ್ಮಘಾತುಕತನವನ್ನು ತೋರಿಸುತ್ತದೆ. ಮಠಗಳು ಪಡೆಯುವ ಅನುದಾನ ಸರ್ಕಾರ ಜನರಿಂದ ವಸೂಲು ಮಾಡುವ ತೆರಿಗೆ ಹಣದಿಂದ ಬರುವಂತಹದ್ದು. ಆ ಕಾರಣಕ್ಕಾಗಿ ಸರ್ಕಾರದ ಆರ್ಥಿಕ ನೆರವು ಪಡೆಯುವ ಮಠಗಳು ಸಮಾಜಕ್ಕೆ ಹೆಚ್ಚು ಉತ್ತರದಾಯಿಯಾಗಿರಬೇಕು. ಆದ್ದರಿಂದ ಹಿಂದೂ ಮಠಗಳು ಮತ್ತು ಅವುಗಳು ನಡೆಸುವ ಧಾರ್ಮಿಕ ಸಂಸ್ಥೆಗಳಿಗೆ ನೀಡಿರುವ ವಿನಾಯಿತಿಗೆ ಕಾರಣವೇನೆಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು.
 
ಯಾವುದೇ ಧಾರ್ಮಿಕ ಸಂಸ್ಥೆಗಳು ಸರ್ಕಾರ ಮತ್ತು ಇತರೆ ಮೂಲಗಳಿಂದ ಪಡೆಯುವ ಆರ್ಥಿಕ ನೆರವು ಪಾರದರ್ಶಕವಾಗಿರಬೇಕು. ಆದರೆ ಬಹುತೇಕ ಧಾರ್ಮಿಕ ಸಂಸ್ಥೆಗಳ ಆಡಳಿತ ವ್ಯವಹಾರಗಳೆಲ್ಲ ಗೋಪ್ಯವಾಗಿ ನಡೆಯುವುದು ವಿಪರ್ಯಾಸ. ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಜನರು ಸಂಶಯದಿಂದ ನೋಡುವಂತಿರಬಾರದು. ಸರ್ಕಾರದ ಈಗಿನ ನಿರ್ಧಾರ ಪಕ್ಷಪಾತಿಯಾಗಿರುವುದರಿಂದ ತನ್ನ ತಪ್ಪನ್ನು ತಿದ್ದಿಕೊಳ್ಳುವುದು ಅವಶ್ಯ. ಜನತಂತ್ರ ವ್ಯವಸ್ಥೆಯಲ್ಲಿ ಪಕ್ಷಪಾತಿ ನಿರ್ಧಾರ ಸಲ್ಲದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.